ಒಂದು ಓದಿನ ಖುಷಿಗೆ
ಓದು ಒಂದು ಅದ್ಭುತ ಭಾವ. ಅಕ್ಷರಗಳ ಜೊತೆ ಮನಸ್ಸಿನ ಸಂಗತಿ ಅರಿವಿನಾಳದಲ್ಲಿ ಕುಳಿತು ಮಾತನಾಡುವ ಸಹಜತೆ. ಒಂದು ಓದಿನ ಧನ್ಯತೆ ಸಿಗುವುದು ವಿಷಯದ ಅಂತರ್ಗತ ನಿಲುವುಗಳಲ್ಲಿ. ಓದಿನ ಸಾಲಿನ ಪೂರ್ಣತೆ ಇರುವುದು ವಿಷಯ ನಿರೂಪಣೆ ಮತ್ತು ಪ್ರಭುದ್ಧತೆಯ ಅಂತಃಕರಣದಲ್ಲಿ. ವಿಚಾರ ವಿಮರ್ಶೆಯ ಜೊತೆಗೆ ವಿನೀತ ಭಾವವನ್ನು ಇಟ್ಟುಕೊಳ್ಳುವುದು ಅದರೆ ಇನ್ನೊಂದು ಮುಖ. ಓದುವ ಆಸಕ್ತಿಯ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತಾ ವಿಶಿಷ್ಟವಾಗುತ್ತಾ ಸಾಗುತ್ತದೆ. ಒಂದು ಪುಸ್ತಕ ಅಥವಾ ಲೇಖನ ಒಂದು ಬೌದ್ಧಿಕ ಸಂಪತ್ತು ಮತ್ತು ಸೃಜನಶೀಲತೆಯ ಅಭಿವ್ಯಕ್ತಿ. ವೈಚಾರಿಕತೆಯ ಪ್ರಬುದ್ಧ ನಿಲುವು
ಅದರ ಸ್ವರೂಪವಾಗಿ ಬಿಂಬಿತವಾಗುತ್ತದೆ . ಓದು ತೋರಿಸುವ ದಾರಿ ಭಿನ್ನ ಮತ್ತು ವಿಶಿಷ್ಟ. ಓದುಗನೊಬ್ಬನ ಭಾವಗಳಲ್ಲಿ ಅದು ಹುಡುಕಿ ಕೊಡುವ ಭಾವವೂ ಬದುಕಿನದ್ದು. ಪ್ರತಿ ಓದನ್ನು ನಾವು ಇಷ್ಟೇ ಎಂದು ಗುರುತಿಸಲಾಗದು. ಅದರಾಚೆಯ ಯೋಚನೆಯೊಳಗೂ ಬಹುಮುಖದ ಅಭಿವ್ಯಕ್ತಿ ಅದರ ನಿಲುವಾಗಿರುತ್ತದೆ. ಓದು ಒಂದು ಗೆಲುವಿನ ಹೆಜ್ಜೆಯಾಗಬಲ್ಲ ಉಳಿವು. ಜ್ಞಾನಕ್ಕಾಗಿ ಓದುವುದು ಒಂದೆಡೆಯಾದರೆ ಅಂತಃಕರಣಕ್ಕಾಗಿ ಓದುವುದು ಮತ್ತೊಂದು ಕಡೆ. ಸದಾ ಅರಿವಾಗಿ ಉಳಿಯಬಲ್ಲ ನಿಲುವು ಅದರದ್ದು.
ಪ್ರತಿ ಬಾರಿಯ ಓದು ನಮಗೆ ಹೊಸದನ್ನು ಕೊಡುತ್ತಲೇ ಹೋಗುತ್ತದೆ. ವಿಷಯ ಪ್ರಬುದ್ಧತೆ ಜೊತೆಗೆ ಅರಿವನ್ನು ಬದುಕಲು ಬೇಕಾದ ಸಂಯಮ ಮತ್ತು ಘನವಂತಿಕೆಯನ್ನು ತಂದು ಕೊಡುತ್ತದೆ. ಓದಿದಷ್ಟು ಮನಸಿನ ಭಾವನೆಗಳು ಹಗುರ ಎನಿಸುತ್ತದೆ. ಓದುವ ಗುಣ ನಮ್ಮಲ್ಲಿ ಮೌನವನ್ನು ,ಅಂತಃಕರಣವನ್ನು ಪ್ರೀತಿಸುವಂತೆ ಮಾಡುತ್ತದೆ. ಒಂದು ವಿನಮ್ರ ಗುಣ ಓದಿನಿಂದ ರೂಢಿಯಾಗುತ್ತದೆ. ಮನಸ್ಸಿನ ತಾಕಲಾಟಗಳಿಗೆ ಉತ್ತರ ನೀಡುತ್ತಾ ಉಳಿವಾಗಿ ಉಳಿದು ಬಿಡುತ್ತದೆ. ನಾವು ಓದುವ ಓದಿಗೆ ಭಾವವಿದೆ.ಸಂವೇದನೆಗಳ ಸನ್ನಿವೇಶದಲ್ಲಿ ಚಿತ್ರವಾಗುವ ರೂಪಗಳಿವೆ. ಪ್ರಕೃತಿಯ ನಿರೂಪಣೆಗಳಲ್ಲಿ ಮಗುವಾಗುವ ಹಂಬಲವಿದೆ. ಮಣ್ಣ ಅಂತಃಸತ್ವದ ಮಾತಿನಲ್ಲಿ ಹಸಿರಾಗುವ ಕೌತುಕವಿದೆ. ಬೀಸುವ ಗಾಳಿಯ ಹಾಡಿನಲ್ಲಿ ನೆನಪಾಗುವ ಸಾಲುಗಳಿವೆ.ಕುಳಿತ ಸಾಲುಗಳ ಓದುವಿಕೆಯಲ್ಲಿ ನೂರು ಸಾವಿರ ಬದುಕಿನ ಚಿತ್ರಗಳಿವೆ. ಎಲ್ಲದಕ್ಕೂ ಒಂದು ನಿಲುವುಗಳು ಆಧಾರವಾಗುತ್ತಾ ಸಾಗುತ್ತದೆ. ಓದಿದಾಗ ಸಿಗುವ ನಗುವು ಹೂವಂತೆ ಭಾವ ಇರುವಂತಹ ಗುಣದ್ದು. ಅದು ಮನದಿ ರಂಜನೆಯಾಗಿ ನಿಲ್ಲಬಲ್ಲದು. ಯಾವುದೇ ಲೇಖನ ಇದ್ದರೂ ಅದಕ್ಕೆ ಹೊಸ ವಿಚಾರ ಭಾವಗಳ ಸಾರಥ್ಯ ಇರುತ್ತದೆ. ಆ ಓದನ್ನು ಪ್ರೀತಿಸಬೇಕು. ಪ್ರತಿ ಓದನ್ನು ಆರಾಧಿಸಬೇಕು. ಓದು ಒಂದು ಉಸಿರಿನ ತಪಸ್ಸು. ಅದು ನಾವು ಬದುಕುವ ಭರವಸೆಯೂ ಹೌದು………
-ನಾಗರಾಜ ಬಿ.ನಾಯ್ಕ, ಕುಮಟಾ
ಚೆನ್ನಾದ ಬರೆಹ…ಯಾರಿಗೂ ತೊಂದರೆ ಕೊಡದ ಹವ್ಯಾಸ ಸಾರ್..
ಓದಿನ ಬಗ್ಗೆ ಅದ್ಭುತವಾದ ಕವನ ರೂಪದಲ್ಲಿ ಲೇಖನ
ದುರದೃಷ್ಟವಶಾತ್ ಓದುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ
ಚೆನ್ನಾಗಿದೆ ಬರಹ
ಮೌನವಾದ ಓದಿನ ಸುಖ ಅಳತೆಗೆ ಮೀರಿದ್ದು. ಅದರೊಂದಿಗೆ ಒಂದಾಗಿ ಸೇರುವ ಭಾವ…ಅದುವೇ ತಲ್ಲೀನತೆ. ಅದಕ್ಕಾಗಿ ಬರೆದ ಲೇಖನದಲ್ಲಿ ಹೊಸತನವಿದೆ…ಧನ್ಯವಾದಗಳು.
ಓದುವುದರ ಮಹತ್ವವನ್ನು ಸಾರುವ ಸೊಗಸಾದ ಚಿತ್ರಣಕ್ಕಾಗಿ ಲೇಖಕರಿಗೆ ಅಭಿನಂದನೆಗಳು.