ಬಾಳ ಹಾ(ಪಾ)ಡು
ಏನು ಬರೆದಿಹುದೋ ವಿಧಿ ನನ್ನ ಹಣೆಬರಹದಲಿ…
ಕಾನು ಕರೆಯುವ ವರೆಗೂ ಹೋರಾಟ ನನ್ನದೇ..
ಬಾನು ಬುವಿ ಕಾಯುತಿರೆ ನನ್ನ ಅನುದಿನವೂ
ಮೇಣದರ ಬೇಕೇನು?? ಒಸರುವುದು ನನ್ನೆದೆ..
ಉಳಿವು ಅಳಿವುಗಳನೆಲ್ಲ ಬಳಿ ಸುಳಿಯ ಬಿಡೆನು
ಕಳಿತ ಹಣ್ಣಿನ ತೆರದ ಸ್ವಾದ ನಾನಾಗುತ
ಹುಳಿಹಿಂಡುವರ ಕಂಡು ಕೈಬಿಟ್ಟು ಬಿಡುವೆನು
ಮಿಳಿತಗೊಳ್ಳುತಲೇರೋ ನನ್ನ ಕಾಗುಣಿತ
ಗೊಣಗುವುದು, ಗುನುಗುವುದು ನಾನರಿತ ತೆರದಲ್ಲೇ
ಹಣೆಯ ಮೇಲಿನ ನೆರಿಗೆ ಸಂಕುಚಿತ, ವಿಕಸಿತ..
ಬಣದ ಬೆಂಬಲವಿರದೆ ಏಕಾಂಗಿ ಹೋರಾಟ
ಕ್ಷಣ ಕ್ಷಣವೂ ಕಣಕಣದ ಅರಳುವಿಕೆಗೆ ಕೇಂದ್ರಿತ
ಒಮ್ಮೊಮ್ಮೆ ಅಳುಕಿದರೂ ಉಳುಕಿ ಬೀಳದೆ ನಿಲುವೆ
ಗುಮ್ಮನಂತಿಹ ಹಲವು ಸನ್ನಿವೇಶದಲಿ
ಬೊಮ್ಮನಿರೆ ಬೆನ್ಹಿಂದೆ ಸುಮ್ಮನಿರೆ ನಾನೆಂದೂ
ಘಮ್ಮೆನುವೆ ಅನುದಿನವೂ ಭವ ಬಯಲಲಿ..
-ವಿದ್ಯಾಶ್ರೀ ಅಡೂರ್, ಮುಂಡಾಜೆ
ನೈಸ್…ಮೇಡಂ
ಚೆನ್ನಾಗಿದೆ ಕವನ
ಮನದಲ್ಲಿ ತುಂಬಿರುವ ಆತಂಕ ಭಯ ಪದ ರೂಪ ಪಡೆದಿದೆ. ಚೆನ್ನಾಗಿ ಮೂಡಿ ಬಂದಿದೆ ಕವನ ಮೇಡಂ
ಆದಿಪ್ರಾಸವನುಟ್ಟು ಹುಟ್ಟಿದ ಬಾಳ ಪಾಡು ಚಿಂತನಯೋಗ್ಯವಾಗಿದೆ.
ಆತ್ಮವಿಶ್ವಾಸನ್ನು ಸೂಸುವ ಪರಿಣಾಮಕಾರಿ ಕವಿತೆ
ಬದುಕೆಂಬ ರಂಗ ಮಂಚದಲ್ಲಿ ಹಾಡುತ್ತಾ, ಪಾಡುತ್ತಾ ಸಂಕಷ್ಟಗಳನ್ನು ಎದುರಿಸುತ್ತಾ ಸಾಗುವ ವಿವರಣೆ ಸೊಗಸಾಗಿದೆ