ಗಾಡಿ ಹೊರಟದ ಮೇಲೆ
ಆ ಸಮಯ ತೀರಿದ ಮೇಲೆ
ಪ್ಲಾಟ್ಫಾರ್ಮ್ ಬಿಟ್ಟು ರೈಲು ಹೊರಟ ಮೇಲೆ
ಒಮ್ಮೆ ಅಲ್ಲಿ ನೆರೆದಿದ್ದ ಜನಜಂಗುಳದ ಗದ್ದಲ
ಕ್ರಮೇಣವಾಗಿ ಶಾಂತವಾಗುತ್ತದೆ … …
ಬಾವುಟ ಬೀಸುವ ವನು,
ಗಂಟೆ ಬಾರಿಸುವವನು,
ಅಲ್ಲಿಯವರೆಗೆ ಅದರ ಬಗ್ಗೆ ಕುರಿತಾಗಿ ಹರಟೆ ಹೊಡೆಯುತ್ತಿದ್ದವನು
ಎಲ್ಲರೂ ಪಾರಾಗಿದ್ದಾರೆ.
ಈಗ ಅಲ್ಲಿ ಯಾರೂ ಕಾಣಿಸುತ್ತಿಲ್ಲ!
ಅದಕ್ಕಾಗಿ ಕಾಯುವವರೂ, ಅದರ ಬಗ್ಗೆ ವಿಚಾರಿಸುವವರು
ಇನ್ನು ಯಾರೂ ಉಳಿದಿಲ್ಲ.
ರೈಲಿನ ಜೊತೆ ಬಂದವರೂ.. ಅದಕ್ಕಾಗಿಯೇ ಬಂದವರೂ..
ಎಲ್ಲರೂ ಈಗಾಗಲೇ ಬೀಳ್ಕೊಡುತ್ತಿದ್ದಾರೆ.
ಅದರೊಂದಿಗೆ ಏನು ಹೋಗಬೇಕೋ ಅದರೊಂದಿಗೆ ಹೋಯಿತು.
ಅದಕ್ಕಾಗಿ ಇನ್ನು ಕಾಯುವ ಅಗತ್ಯವಿಲ್ಲ,
ಮುಂದೆ ಏನನ್ನು ತರಬಹುದು ಎಂಬ ನಿರೀಕ್ಷೆ ಇಲ್ಲ.
ಇನ್ನೊಮ್ಮೆ ಬಂದಾಗ ಏನನ್ನು ತರಬಹುದು ಎಂಬ ಮಾತೇ ಇಲ್ಲ!
ಅದು ಅಷ್ಟಿರಲಿ, ಇಷ್ಟಿರಲಿ ಎಷ್ಟೇಇರಲಿ
ಒಮ್ಮೆ ಅದು ಈ ಸ್ಥಳವನ್ನು ಬಿಟ್ಟ ಮೇಲೆ,
ಅದರ ಶಬ್ದವು ಕಿವಿಗೆ ಮುಟ್ಟದಷ್ಟು ದೂರವಾದ ಮೇಲೆ
ಅದರ ಬಗ್ಗೆ ಯೋಚನೆ ಮಾಡುವುದು ಇಲ್ಲ
ಆ ಅಪೇಕ್ಷೆ ಯಾರಲ್ಲೂ ಕಾಣುತ್ತಿಲ್ಲ..
ಅಷ್ಟೇ! ಇಲ್ಲಿ ಇದು ಸಾಮಾನ್ಯ ವಾದದ್ದೇ!
ಅದಕ್ಕೆ, ಇದು ಹೊಸದೇ ಇರಬಹುದು. ಆದರೆ ಈ ಭೂಮಿಗೆ ಇದು ಅಭ್ಯಾಸವೇ..
ನಿತ್ಯ ಹಾಡುತ್ತಿರುವ ಹಳೆಯ ಹಾಡು!
ಈಗ ಇಲ್ಲೆಲ್ಲವೂ ನಿಶ್ಶಬ್ದ, ನಿರ್ಮಾನುಷ್ಯ
ಇನ್ನೊಂದು ಬರುವವರೆಗೆ.. ಮತ್ತೊಂದು ಹೋಗುವವರೆಗೆ
ರೈಲು ಎಷ್ಟೇ ಪ್ರಕಾಶಮಾನವಾಗಿ ಬೆಳಗಿದರೂ,
ಈ ನೆಲ ಎಷ್ಟು ಬೆಳೆಯುತ್ತಿದ್ದರೂ…
ಅಂತಿಮ ಕ್ಷಣದಲ್ಲಿ,
ಅವನು ಬಾವುಟ ಬೀಸಿದಾಗ,
ಇವನು ಗಂಟೆ ಬಾರಿಸಿದಾಗ,
ಈ ಪ್ಲಾಟ್ಫಾರ್ಮ್ ಬಿಟ್ಟು ಹೋಗಲೇಬೇಕು…
ರೈಲು ಆಗಲಿ.. ಅದನ್ನು ಚಲಾಯಿಸುವವ ಮನುಷ್ಯನಾಗಲಿ!
ತೆಲುಗು ಮೂಲ : “ವಸುಧ”
ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀಮೋಹನ್
ಅರ್ಥ ಪೂರ್ಣ ಸಂದೇಶ ಹೊತ್ತ..ಅನುವಾದ ಕವನ ಚೆನ್ನಾಗಿದೆ.. ಸಾರ್
ಚೆನ್ನಾಗಿದೆ
ಉತ್ತಮ ಸಂದೇಶ ಹೊತ್ತ ಅನುವಾದಿತ ಕವನದ ಮನಮುಟ್ಟುವಂತಿದೆ….
ರೈಲು ಪ್ರಯಾಣವು ಜೀವನ ಪಯಣದ ಒಂದು ಮಾದರಿ ಎಂಬ ಭಾವವನ್ನು ಸೂಸುವ ಸುಂದರ ಅನುವಾದಿತ ಕವಿತೆ.
ಬಾಳೆಂಬ ಪಯಣವನ್ನು ಬಿಂಬಿಸುವ ರೈಲಿನ ಪಯಣ ಸುಂದರವಾಗಿ ಮೂಡಿಬಂದಿದೆ
ನಿತ್ಯ ಹಾಡುತ್ತಿರುವ ಹಳೆಯ ಹಾಡು ಹಿತವಾಗಿ ಮೆದುವಾಗಿ ಮನಕೆ ಮುಟ್ಟಿತು ಸರ……….
ನಮ್ಮ ಜೀವಯಾನಕೆ ರೈಲುಪ್ರಯಾಣ ಸೊಗಸಾದ ರೂಪಕ
ಕವನದ ನಡೆ ಚೆನ್ನಾಗಿದೆ