ಗಾಂಧೀಜಿ
ಭಾರತದ ಅಸ್ಮಿತೆಯ ಬಾಪೂಜಿಯ ಬಿಟ್ಟು ನೋಡಲಾದಿತೇ
ಈ ದೇಶದ ಇತಿಹಾಸವ ಆ ಸಂತನ ಹೆಜ್ಜೆ ಗುರುತಿಲ್ಲದೆ ಬರೆಯಲಾದಿತೇ
ಈ ನೆಲದ ಬಡವನಿಗೆ ಇಲ್ಲದ ಸೌಲಭ್ಯ ಎನಗೆ ಬೇಡವೆಂದ ಜನ ನಾಯಕ
ತಾನು ಸ್ವತಃ ಆಚರಿಸಿ ತತ್ವ ಆದರ್ಶಗಳ ಬೋಧಿಸಿದ ಆಧ್ಯಾತ್ಮದ ಹರಿಕಾರ
ಚಾರಿತ್ರ್ಯವಿಲ್ಲದ ಶಿಕ್ಷಣವ ಖಂಡಿಸಿದ ಭವ್ಯ ಪರಂಪರೆಯ ರಾಯಭಾರಿ
ದುಡಿಮೆಯಿಲ್ಲದ ಸಂಪತ್ತು ತೃಣಕ್ಕೆ ಸಮಾನ ಎಂದು ಸಾರಿದ ಚರಕ ಯೋಗಿ
ಆತ್ಮಸಾಕ್ಷಿಯ ತೊರೆದ ಸಂತೋಷ ಸುಖಗಳು ಕಾಡಿನ ಬೆಳದಿಂಗಳೆಂದು ತೋರಿದ ರಾಷ್ಟ್ರಪಿತ
ತತ್ವ ರಹಿತ ರಾಜಕಾರಣಕ್ಕೆ ಅಸಹಕಾರ ಚಳುವಳಿಯ ಮೂಲಕ ಉತ್ತರ ಕೊಟ್ಟ ಶಾಂತಿ ದೂತ
ನೀತಿಯಿಲ್ಲದ ವ್ಯಾಪಾರ ಸಮಾಜಕ್ಕೆ ಶಾಪವೆಂದು ತಿಳಿಸಿದ ಅಹಿಂಸೆಯ ಪ್ರತಿಪಾದಕ
ಮಾನವೀಯತೆ ಇಲ್ಲದ ಜ್ಞಾನ ವಿಜ್ಞಾನವು ಮನುಕುಲಕೆ ಮಾರಕವೆಂದ ಸತ್ಯಾಗ್ರಹದ ಜನಕ
ತ್ಯಾಗವಿಲ್ಲದ ಪೂಜೆ ಡಾಂಭಿಕ ಆಚರಣೆ ಎಂದು ಜರಿದ ನಿಜ ಭಕ್ತ
ಸಮಯ ನಿಷ್ಠೆಯಲಿ ಕಾಯಕ ಮಹತ್ವ ಅರಿತು ಮೂಲ ಕಸುಬಿಗೆ ಒತ್ತು ಕೊಟ್ಟ ಮಹಾ ಮಾನವತಾವಾದಿ
ಈ ಮಣ್ಣಿನ ಕಣ ಕಣವು ನುಡಿವ ಸಿದ್ದಾಂತವ ರೂಢಿಗೆ ತರಲು ಯತ್ನಿಸಿದ ಹೋರಾಟಗಾರ
ಅಸಮಾನತೆಯ ದೂರ ಮಾಡಲು ಶ್ರಮಿಸಿದ ಹರಿಜನ ಪತ್ರಿಕೆಯ ಸಂಪಾದಕ
ಬೊಳುತಲೆ ಬೊಚ್ಚು ಬಾಯಿಯ ಈ ಪಕೀರನ ಚಿತ್ರ ಚಿಕ್ಕಂದಿನಿಂದಲೂ ಮನದೀ ಅಚ್ಚೊತ್ತಿದೆ
ವೈರುಧ್ಯ ವಿಚಾರಗಳಿದ್ದರೂ ಇವರು ಗಳಿಸಿದ ಜನ ಮನ್ನಣೆಗೆ ಅಚ್ಚರಿ ಮೂಡಿದೆ
ಬೇರ್ಪಡಿಸಲು ಅಸಾಧ್ಯ ಈ ವಿಚಾರಧಾರೆಗಳ ಜನಮಾನಸದಿಂದ
ಭೌತಿಕವಾಗಿ ದೂರವಾದರೂ ಚಿಂತನೆಯ ಮೂಲಕ ಅಮರವಾಗಿಹರು ನಮ್ಮಲ್ಲಿ ಮುದದಿಂದ
-ಶರಣಬಸವೇಶ ಕೆ. ಎಂ
ಇತ್ತೀಚಿನ ದಿನಗಳಲ್ಲಿ ಗಾಂಧಿ ಎಂದರೆ ತಾತ್ಸಾರ, ಅಸಹನೆ, ಕುಹಕ ನುಡಿಗಳನ್ನು ಕೇಳಿ ಮನಸ್ಸು ರೋಸಿ ಹೋಗಿತ್ತು
ನಿಮ್ಮ ಕವನ ಗಾಂಧೀಜಿಯವರ ಇಡೀ ಬದುಕನ್ನು ಸುಂದರವಾಗಿ ಅನಾವರಣಗೊಳಿಸಿದೆ
ಧನ್ಯವಾದಗಳು ಶರಣ್ ಸರ್
ಯಾರು ಏನೇ ಹೇಳಿದರೂ…..ಈ ಭಾರತದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿರುತ್ತದೆ ಮೇಡಂ. ಓದಿ ಪ್ರತಿಕ್ರಿಯೆ ನೀಡಿದ ತಮಗೆ ವಂದನೆಗಳು
ಹೌದು ಅಂದಿಗಿಂತ ಇಂದು ಗಾಂಧಿ ಬೇಕು… ಎಷ್ಟೇ ಉದಾಸೀನ ಮಾಡಿದರೂ…ಮತ್ತೆ ಮತ್ತೆ …ಹಿಂತಿರುಗಿ ನೋಡುವಂತಿದೆ ಅವರ ಬದುಕು..ಅದರ ಅನಾವರಣ ಮಾಡಿ ನೆನಪಿಸಿದಕ್ಕೆ ಧನ್ಯವಾದಗಳು ಸಾರ್.
ಎಂದೆಂದಿಗೂ ಗಾಂಧಿ ಬೇಕು…..ಇಡೀ ವಿಶ್ವಕ್ಕೆ ಇವರ ಚಿಂತನೆಗಳು ಅಗತ್ಯವಾಗಿವೆ. ವಂದನೆಗಳು ಮೇಡಂ
Nice
ಧನ್ಯವಾದಗಳು ನಯನ ಬಜಕೂಡ್ಲು ಮೇಡಂ
ಗಾಂಧಿ ತತ್ವಗಳನ್ನು ಬಿಂಬಿಸುವ ಕವನ ಅವರ ಜೀವನ ಗಾಥೆಯೂ ಹೌದು…
ಚೆನ್ನಾಗಿದೆ.
ಗಾಂಧೀಜಿ ಮಾಡಬಾರದು ಎಂದು ಸಾರಿದ ಸಪ್ತ ಪಾತಕಗಳು ಈ ಜಗತ್ತಿಗೆ ಕೊಟ್ಟ ಅಪರೂಪದ ನೀತಿ ಸಾರ. ಈ ದೃಷ್ಟಿಯಿಂದ ನೋಡಿದರೆ ಅವರ ಬದುಕು ನಮಗೆ ಸಂದೇಶವಿದ್ದಂತೆ ಅನಿಸುತ್ತದೆ. ಧನ್ಯವಾದಗಳು ಶಂಕರಿ ಶರ್ಮ ಮೇಡಂ
ಗಾಂಧೀಜಿಯವರನ್ನು ಕುರಿತಾದ ಸುಂದರ ಕವಿತೆ.
ಧನ್ಯವಾದಗಳು ಪದ್ಮಾ ಆನಂದ್ ಮೇಡಂ
ಗಾಂಧಿಯ ಚಿತ್ರರೂಪಕ ಗಮನಾರ್ಹವಾಗಿದೆ