ಕಾವ್ಯ ಭಾಗವತ : ಭಾಗವತ ತತ್ವ-2
11.ತೃತೀಯ ಸ್ಕಂದ
ಅಧ್ಯಾಯ – 2
ಭಾಗವತ ತತ್ವ -2
ದೀರ್ಘ ಯೋಗನಿದ್ರೆಯಿಂದೆದ್ದ
ಭಗವಂತನ ಸಂಕಲ್ಪರೂಪದಿ
ಜಗತ್ ಸೃಷ್ಟಿ ಕಾರ್ಯದಾರಂಭ
ಸೃಷ್ಟಿಕರ್ತ ಬ್ರಹ್ಮನ ಸೃಷ್ಟಿ
ಭಗವಂತನ ನಾಭಿಯಿಂದೆದ್ದು
ತಾವರೆ ಹೂವಿನಲಿ
ಚತುರ್ಮುಖ ಬ್ರಹ್ಮನುದ್ಭವ
ದೀರ್ಘ ತಪಸ್ಸಿನಿಂದುಂಟಾದ
ಅರಿವಿಂದ
ದೇವ, ಮನುಷ್ಯ, ಕ್ರಿಮಿ ಕೀಟ
ಗಳೆಲ್ಲದರ ಸೃಷ್ಟಿ
ಈ ಎಲ್ಲ ಸೃಷ್ಟಿಗೆ
ಶಬ್ಧ, ಸ್ಪರ್ಶ, ರೂಪ ಗಂಧಾದಿಗಳ
ಕಲ್ಪಿಸಿ
ಭೂಲೋಕ, ಸುರಲೋಕ, ಸ್ವರ್ಗಗಳ
ಸೃಜಿಸಿದ ಬ್ರಹ್ಮದೇವ
ಈ ಎಲ್ಲ ಬ್ರಹ್ಮ ಸೃಷ್ಟಿಯೂ
ಕಾಲನ ಅಧೀನ
ಎಲ್ಲ ಸೃಷ್ಟಿಗುಂಟು ಪ್ರಳಯ ಕಾಲ
ಸೃಷ್ಟಿ ವಿನಾಶ , ಮರುಸೃಷ್ಟಿ
ಇದೇ ಕಾಲನ ನಿಯಮ
ಎಲ್ಲಕೂ ನಿಯಂತ್ರಕ
ಆ ಕಾಲಾತೀತ ಭಗವಂತ
ಅವನ ಸಂಕಲ್ಪ ಮಾತ್ರದಿಂ
ಎಲ್ಲ ಸೃಷ್ಟಿ ಲಯ ಕಾರ್ಯ
ಚಲನೆಯಿಲ್ಲದ ಸ್ಥಾವರಗಳಾದ
ವನಸ್ಪತಿ ಔಷಧಿ ಲತೆಗಳು
ಹಸು ಎಮ್ಮೆ ಜಿಂಕೆ ಕುರಿಗಳ ತೆರದಿ
ಗೊರಸು ಕೊಂಬುಗಳುಳ್ಳ
ಪ್ರಾಣಿ ಸಂಕುಲ
ಪಾದಕ್ಕೆ ಐದು ಉಗುರುಗಳುಳ್ಳ
ಪಂಚನಖ
ನಾಯಿ ನರಿ ತೋಳ ಹುಲಿಗಳು
ಆಕಾಶದಲ್ಲಿ ಹಾರುವ ಕೇಚರ ವರ್ಗದ
ಪಕ್ಷಿ ಸಂಕುಲ
ಎಷ್ಟೆಲ್ಲ ಜೀವ ಸೃಷ್ಟಿಯ ನಂತರ
ಮನುಜ ಸೃಷ್ಟಿ,
ನಂತರದಿ ದೇವ ಸೃಷ್ಟಿ
ದೇವಾಸುರ, ಗಂಧರ್ವ, ಯಕ್ಷ ಸೃಷ್ಟಿ
ಈ ಎಲ್ಲ ಸೃಷ್ಟಿ ಕಾರ್ಯ
ಕಾಲ ನಿರ್ಮಿತ
ಕಾಲ ನಿಯಂತ್ರಿತ
ಈ ಎಲ್ಲ ಸೃಷ್ಟಿಗೆ
ಮುಕುಟ ಪ್ರಾಯ
ನಾಲ್ಕು ವೇದಗಳ ಸೃಷ್ಟಿ
ಮನುಕುಲದೆಲ್ಲ ಜೀವಿಗಳುದ್ಧಾರಕೆ
ಭಗವಂತನ
ಕೃಪಾವೃಷ್ಟಿ, ಕೃಪಾದೃಷ್ಟಿ
ಈ ಕವನ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41023
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಭಾಗವತದ ಕಾವ್ಯಾನುಸಂಧಾನ ಪ್ರಯತ್ನ ಬಹಳ ಚೆನ್ನಾಗಿ ಮೂಡಿಬರುತ್ತದೆ..ಸಾರ್…
Very nice
ಯೋಗನಿದ್ರೆಯಿಂದ ಎದ್ದ ಭಗವಂತನು ಹಂತ ಹಂತವಾಗಿ ಜೀವಜಾಲದ ಸೃಷ್ಟಿ ಕಾರ್ಯದಲ್ಲಿ ನಿರತನಾದ ಕುರಿತು ಈ ಬಾರಿಯ ಭಾಗವತ ತತ್ವದಲ್ಲಿ ವಿಶದವಾಗಿ, ಸರಳವಾಗಿ ವರ್ಣಿಸಲಾಗಿದೆ…ಧನ್ಯವಾದಗಳು.