ಹೊಸ ಸಖಿಯ ಆಗಮನ….
ಥೀಮ್ 14: ಕೈತೋಟದ ಸಖಿಯರು
ಹಳ್ಳಿಯ ಹಸಿರಿನ ನಡುವೆ ಹುಟ್ಟಿ ಬೆಳೆದ ನಾವು; ಪುಟ್ಟ ನಗರದ ಹೊರವಲಯದಲ್ಲಿ, ಕಲ್ಲುಕೋರೆಯ ಗುಡ್ಡೆಯ, ಒಂದೇ ಒಂದು ಗಿಡವೂ ಇಲ್ಲದ ಇಳಿಜಾರಿನಲ್ಲಿ ಹೊಸ ಜಾಗ ಖರೀದಿಸಿದಾಗ ಮನಸ್ಸಿಗೆ ಸ್ವಲ್ಪ ಪಿಚ್ಚೆನ್ನಿಸಿದ್ದು ನಿಜ. ಆದರೆ ಸಸ್ಯಪ್ರಿಯರಾದ ನಾವು ಪೈಪೋಟಿಯಲ್ಲಿ ಗಿಡಗಳನ್ನು ನೆಟ್ಟಿದ್ದೇ ನೆಟ್ಟಿದ್ದು. ನಮ್ಮೊಡನಿದ್ದ ಅತ್ತೆಯವರು ಇಡೀ ದಿನ ಅವುಗಳ ಆರೈಕೆ ಮಾಡಿದ್ದೇ ಮಾಡಿದ್ದು. ಮೂರ್ನಾಲ್ಕು ವರ್ಷಗಳಲ್ಲೇ ಮನೆ ಸುತ್ತಲೂ ಹಸಿರು ನಳನಳಿಸತೊಡಗಿತು. ಮೂರು ದಶಕಗಳ ಹಿಂದೆ ಮನೆ ಕಟ್ಟಿ ನೆಲೆಸಿದ ಸ್ಥಳದಲ್ಲಿ ಈಗ ದಟ್ಟವಾದ ಮರಗಿಡಗಳ ಕೋಟೆಯೊಳಗೆ ಮನೆ ಭದ್ರವಾಗಿದೆ. ಹೆಚ್ಚೇನೂ ಆರೈಕೆಗೆ ಹಂಬಲಿಸದ, ವರ್ಷವಿಡೀ ಹೂ ನೀಡುವ ಗಿಡಗಳು, ಆಗಸದೆತ್ತರ ಬೆಳೆದ ಮರಗಳು ಸಮೃದ್ಧ ಪ್ರಾಣವಾಯುವನ್ನು ನೀಡುತ್ತಿವೆ. ಮನೆ ಪಕ್ಕದ ಕೈತೋಟದಲ್ಲಿ ನಗುತ್ತಿರುವ ಪುಷ್ಪ ಸಖಿಯರು ಖುಷಿ ನೀಡುತ್ತಿದ್ದಾರೆ. ಒಂದಿಂಚೂ ಬಿಡದೆ ಸಸ್ಯಗಳಿದ್ದರೂ; ಭೂತಗನ್ನಡಿ ಹಿಡಿದು ಹುಡುಕಿದರೂ ನೆಡಲು ಸ್ಥಳವಿಲ್ಲದಿದ್ದರೂ, ಬೇರೆ ಮನೆಗಳಿಗೆ ಭೇಟಿ ನೀಡಿದಾಗ ಅವರ ತೋಟದಲ್ಲಿ ಅಪರೂಪದ ಗಿಡಗಳಿದ್ದರೆ ಕೇಳಿ ಪಡೆದು ತಂದು ನೆಟ್ಟು, ಅದರ ಹೂ ನೋಡಿ ಖುಷಿ ಪಡುವುದು ಮುಂದುವರಿದಿದೆ.
ಹೀಗಿರಲು ಒಮ್ಮೆ ಗೆಳತಿ ಮನೆಯಲ್ಲಿ ತಾವರೆ ತೊಟ್ಟಿಯಲ್ಲಿ ಅರಳಿದ ಹೂಗಳು ಗಮನ ಸೆಳೆದವು. ಇದೊಂದು ನಮ್ಮಲ್ಲಿ ಇಲ್ಲವಲ್ಲಾ ಎಂಬ ಯೋಚನೆ ತಲೆಯಲ್ಲಿ ಹೊಕ್ಕುಬಿಟ್ಟಿತು. ಹೇಗೂ ಇದಕ್ಕಾಗಿ ನೆಲವೇನೂ ಬೇಡವಲ್ಲ… ತೊಟ್ಟಿಯಲ್ಲಿ ನೀರು ತುಂಬಿಸಿ ಬೆಳೆಸಿದರಾಯ್ತು …ಸುಲಭದ ಕೆಲಸ ಎನ್ನುವ ಧೈರ್ಯ ಬೇರೆ! ಅದರ ಬಗೆಗೆ ಏನೂ ತಿಳಿಯದ ನಾನು; ಅವರಲ್ಲಿ ಅದನ್ನು ಬೆಳೆಸುವ ಬಗ್ಗೆ ಕೇಳಿದಾಗ ನಿಜವಾಗಿಯೂ ಆಶ್ಚರ್ಯವಾಯಿತು. ನಾನು ತಾವರೆಯ ಗಡ್ಡೆ ನೆಟ್ಟು ಬೆಳೆಸುವುದೆಂದು ತಿಳಿದಿದ್ದೆ. ಆದರೆ ಇದು ಬರೇ ಎಲೆಯಲ್ಲೇ ಬೆಳೆಸುವುದೆಂದು ಅರಿತಾಗ ನಿರಾಳದೊಂದಿಗೆ ಕುತೂಹಲವೂ ಸೇರಿತು.
ನನ್ನ ಈ ವ್ಯವಹಾರವನ್ನು ಕಂಡ ನಮ್ಮೊಡನಿದ್ದ ಇನ್ನೊಬ್ಬಳು ಗೆಳತಿಯು ಎರಡು ಎಲೆಗಳನ್ನು ಕೇಳಿ ಪಡೆದರೆ, ನಾನು ಒಂದು ಎಲೆಯನ್ನು ಹಿಡಿದು ತಂದೆ… ಪುಟ್ಟ ಪಾತ್ರೆಯಲ್ಲಿ ತೇಲಿಬಿಟ್ಟೆ. ದಿನವೂ ಅದರಲ್ಲಿ ಬೇರು ಬಂತೇ ಎಂದು ನಾನು ಪರಿಶೀಲಿಸುವುದನ್ನು ಕಂಡ ಮನೆಯವರ ಲೇವಡಿಯನ್ನೂ ಲೆಕ್ಕಿಸಲಿಲ್ಲವೆನ್ನಿ. ವಾರವಾದರೂ ಏನೂ ಬದಲಾವಣೆ ಕಾಣಲಿಲ್ಲ. ಗೆಳತಿಯಲ್ಲಿ ಈ ಬಗ್ಗೆ ಕೇಳಿದಾಗ, ‘ಇನ್ನೂ ಸ್ವಲ್ಪ ಕಾಯೇ ಮಾರಾಯ್ತಿ` ಎಂದು ತಮಾಷೆ ಮಾಡಿದಳು. ಎರಡು ವಾರಗಳಲ್ಲಿ ಎಲೆಯ ಮಧ್ಯಭಾಗದ ಮೊಗ್ಗಿನಂತಿರುವ ಜಾಗದಲ್ಲಿ ಸಣ್ಣ ಎಲೆಗಳು ಗೋಚರಿಸಿದವು. ಅದರ ಕೆಳಗಡೆ ಬಿಳಿಯ ಬೇರು ಇಣಿಕುತ್ತಿತ್ತು. ನನ್ನ ಸಂತೋಷಕ್ಕೆ ಪಾರವೇ ಇಲ್ಲ… ಆ ದಿನ ಕನಸಿನಲ್ಲಿ ತೊಟ್ಟಿ ತುಂಬಾ ತಾವರೆಗಳು ಮಾತನಾಡಿದವು!.
ಮುಂದೆ ಅದನ್ನು ದೊಡ್ಡ ತೊಟ್ಟಿಗೆ ವರ್ಗಾಯಿಸಬೇಕಿತ್ತು… ಅದಕ್ಕೆ ನಯವಾದ ಮಣ್ಣು ಬೇಕಿತ್ತು. ಬುಟ್ಟಿ ತುಂಬಾ ಹಿತ್ತಿಲ ಮಣ್ಣು ತಂದು, ಅದಕ್ಕೆ ನೀರು ತುಂಬಿ ಅದರಿಂದ ಕಲ್ಲು ಬೇರ್ಪಡಿಸುವ ಕೆಲಸ ಪ್ರಾರಂಭಿಸಿದೆ. ಅಂತೂ ಇಂತೂ ಸಿಕ್ಕಿದ ನಯವಾದ ಮಣ್ಣನ್ನು ತೊಟ್ಟಿಗೆ ಹಾಕಿ ನೀರು ತುಂಬಿಸಿ, ಬೇರು ಬಂದ ತಾವರೆ ಎಲೆಯನ್ನು ನೆಟ್ಟು ನಿಟ್ಟುಸಿರುಬಿಟ್ಟೆ.
ದಿನ ಕಳೆದಂತೆ ಪುಟ್ಟ ಬಿಲ್ಲೆ ಗಾತ್ರದ ಎಲೆಗಳು ತೊಟ್ಟಿಯ ನೀರಲ್ಲಿ ತೇಲತೊಡಗಿದವು. ತಿಂಗಳುಗಳು ಕಳೆದರೂ ಎಲೆಗಳ ಸಂಖ್ಯೆ ಮೂರರಿಂದ ಹೆಚ್ಚಾಗಲಿಲ್ಲ….ಗಾತ್ರವು ಬಿಲ್ಲೆಗಿಂತ ದೊಡ್ಡದಾಗಲಿಲ್ಲ…ನನ್ನ ಚಿಂತೆ ಮಾತ್ರ ಹೆಚ್ಚಾಯಿತು ನೋಡಿ. ಬೆಳಗ್ಗಿನ ವಾಕಿಂಗ್ ಗೆಳತಿ ಜೊತೆ ಈ ಬಗ್ಗೆ ಹೇಳಿದಾಗ ಚೀಲ ತುಂಬಾ ಅವಳ ಪುಕ್ಕಟೆ ಸಲಹೆಗಳು ಸಿಕ್ಕಿದವು. ಅವುಗಳನ್ನು ಕಾರ್ಯರೂಪಕ್ಕೆ ತರುವ ಸವಾಲು ಮಾತ್ರ ನನ್ನ ಮುಂದೆ ನಿಂತು ಬೆದರಿಸುತ್ತಿತ್ತು. ಮೊದಲಿಗೆ ತೊಟ್ಟಿಗೆ ಹಾಕಿದ ಮಣ್ಣಿನ ಪ್ರಮಾಣ. ತೊಟ್ಟಿಯ ಅರ್ಧದಷ್ಟಾದರೂ ಇರಬೇಕಾಗಿದ್ದ ಮಣ್ಣು ಬರೇ ಎರಡು ಮುಷ್ಟಿಯಷ್ಟಿತ್ತು! ತೊಟ್ಟಿಗೆ ಸಾದಾ ಮಣ್ಣನ್ನೇ ತಂದು ತುಂಬಿಸಿದೆ. ನಂತರ ಅದಕ್ಕೆ ಅಗತ್ಯವಾದ ಬಿಸಿಲಿನ ಕೊರತೆ ಬಗ್ಗೆ ತಿಳಿಯಿತು… ತೊಟ್ಟಿಯನ್ನು ಸ್ಥಳಾಂತರಿಸಿ ಇಟ್ಟಾಯಿತು. ಅದಕ್ಕೆ ನೀಡಬೇಕಾದ ಗೊಬ್ಬರ ಮತ್ತು ಅದನ್ನು ನೀಡುವ ಕ್ರಮ… ಇತ್ಯಾದಿ ಮುಖ್ಯವಾದ ಎಲ್ಲಾ ಪ್ರಕ್ರಿಯೆಗಳನ್ನು ಕ್ರಮಾಗತವಾಗಿ ನಿಯಮ ಪ್ರಕಾರ ಮಾಡಿ ಮುಗಿಸಿ ಯುದ್ಧ ಗೆದ್ದ ಯೋಧೆಯಂತೆ ವಿಜಯದ ನಗೆ ಬೀರಿ ಮುಂದಿನ ಬೆಳವಣಿಗೆಯನ್ನು ನಿರೀಕ್ಷಿಸತೊಡಗಿದೆ.
ತಿಂಗಳಲ್ಲಿ, ಅಗಲವಾದ ಆರೋಗ್ಯಯುತ ಎಲೆಗಳು ತೊಟ್ಟಿಯಲ್ಲಿ ನಗತೊಡಗಿದವು. ಮತ್ತೆರಡು ತಿಂಗಳುಗಳಲ್ಲಿ ಮೊಗ್ಗು ಬಂದು ಹೂವು ಅರಳಿ ನಿಂತು, ಹೊಸ ಗೆಳತಿಯ ಆಗಮನದೊಂದಿಗೆ ನನ್ನ ಮುಖವೂ ಅರಳಿತೆಂದು ಬೇರೆ ಹೇಳಬೇಕಾಗಿಲ್ಲ. ಪರಿಮಳ ಬೀರುವ ತಾವರೆ ಹೂಗಳನ್ನು, ಮನೆಗೆ ಬಂದವರಿಗೆಲ್ಲಾ ತೋರಿಸಿ, ಬದುಕೇ ಸಾರ್ಥಕವಾದಂತೆ ಹಿಗ್ಗುತ್ತಿದ್ದೇನೆ! ಕೈತೋಟಕ್ಕೆ ಬಂದ ಹೊಸ ಗೆಳತಿ ತನ್ನ ಇತರ ಗೆಳತಿಯರೊಡನೆ ಪಟ್ಟಾಂಗ ಹೊಡೆಯುತ್ತಾ ಖುಷಿಯಾಗಿದ್ದಾಳೆ. ತಾವರೆ ಬೆಳೆಸಲು ತರಬೇತಿ ಬೇಕಿದ್ದಲ್ಲಿ ಉಚಿತ ಸಲಹೆಗಳನ್ನು ಚೀಲ ತುಂಬಾ ನೀಡಲು ನಾನೀಗ ಸಿದ್ಧ!
-ಶಂಕರಿ ಶರ್ಮ, ಪುತ್ತೂರು.
ನಮ್ಮ ಕೈಯಾರೆ ನೆಟ್ಟು ಪೋಷಿಸಿದ ಗಿಡಗಳಲ್ಲಿ ಹೂವರಳಿದಾಗ ನಮಗಾಗುವ ಸಂತಸವನ್ನು ಶಬ್ದಗಳಲ್ಲಿ ಹಿಡಿದಿಡುವುದು ಅಸಾಧ್ಯ…ಚಂದದ ಬರಹ
ಹೌದು …ಎಣೆ ಇಲ್ಲದ ಸಂಭ್ರಮ! ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು… ಕೃಷ್ಣಪ್ರಭ ಮೇಡಂ
ವಾವ್ ಶಂಕರಿ ಮೇಡಂ ಚಿಕ್ಕದಾದ ಚೊಕ್ಕ ಬರಹ..ಮುದಕೊಟ್ಟಿತು
ನಲ್ಮೆಯ ನುಡಿಗಳಿಗೆ ವಂದನೆಗಳು…ನಾಗರತ್ನ ಮೇಡಂ
ಬಹಳ ಚೆನ್ನಾಗಿದೆ
ಧನ್ಯವಾದಗಳು, ನಯನಾ ಮೇಡಂ.
ಚೆಂದದ ತಾವರೆಯಷ್ಷೇ ಅಂದದ ಬರಹ
ಮೆಚ್ಚುಗೆಯ ನುಡಿಗಳಿಗೆ ಧನ್ಯ ನಮನಗಳು ಮೇಡಂ.
ಈ ಬರಹ ಓದುತ್ತಿದ್ದರೆ ನಮಗೂ ತಾವರೆ ಹೂಗಳನ್ನು ನಮ್ಮ ತೊಟ್ಟಿಯಲ್ಲಿ ಅರಳಿಸಬೇಕು ಅನಿಸಿತು……ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ವಿವರಣೆ
ಖಂಡಿತಾ ಮಾಡಿ…ಪುಕ್ಕಟೆ ಸಲಹೆ ನೀಡಲು ನಾನು ಸದಾ ಸಿದ್ಧ! ಪ್ರೀತಿಯಿಂದ ಓದಿ ಮೆಚ್ಚಿದ ನಿಮಗೆ ನನ್ನ ನಮನಗಳು.
ಹೊಸ ಗೆಳತಿಯ ಆಗಮನದೊಂದಿಗೆ ನಿಮ್ಮ ಮುಖ ಅರಳಿದಂತೆ ನನ್ನ ಮುಖವೂ ಅರಳಿತೆಂದು ಬೇರೆ ಹೇಳಬೇಕಾಗಿಲ್ಲ.