ಕನ್ನಡ ಶಾಲೆ ಕದಗಳನ್ನು ಹೀಗೂ ತೆರೆಯಬಹುದು !
ನಮ್ಮೂರು ಧಾರಾಕಾರ ಮಳೆಗೆ ಸಿಗುವ ಸಹ್ಯಾದ್ರಿಯ ಸೆರಗಿನಲ್ಲಿದೆ. ಪ್ರತಿ ವರ್ಷ, ಆಷಾಢದ ಮಳೆಗೆ ನಮ್ಮೂರಲ್ಲಿ ಒಂದಿಷ್ಟು ಗುಡ್ಡ ಬೆಟ್ಟ ರಸ್ತೆಯಂಚು ಕುಸಿದು ಕೊರಕಲಾಗಿ, ಮನೆ ಮುಂದಿನ ಅಂಗಳವೂ ಇಷ್ಟಿಷ್ಟೇ ಹೊಳೆ ಹಳ್ಳಗಳ ಪಾಲಾಗಿ, ಇನ್ನೇನು ನಮ್ಮೂರು ಮನೆ ಮಳೆಯಂಬ ಮೊಸಳೆ ಬಾಯಿಗೆ ಬೀಳುತ್ತಿರೋ ಭಯಾನಕತೆಯನ್ನು ಆ ಸೀಸನ್ ನಲ್ಲಿ ಸೃಷ್ಟಿಸುವುದುಂಟು. ಆಗೆಲ್ಲ, ಊರುಕೇರಿಯ ಜನ ಸೇರಿ, ನಾಲ್ಕಾರು ದಿನ ಗುದ್ದಾಡಿ ಇಂಥ ಕಂದಕಗಳಿಗೆ ಒಂದು ತಾತ್ಪೂರ್ತಿಕ ತ್ಯಾಪೆ ಬಿಗಿದು ಮಳೆಗಾಲ ಮುಗಿಯುವುದನ್ನೇ ಕಾಯುತ್ತಾ, ಗ್ರಾಮ ಪಂಚಾಯಿತಿಯ ನೆರವನ್ನು ನಂತರದಲ್ಲಿ ಕಾಯುತ್ತಾ ಅವಘಡದ ಬಗ್ಗೆ ಮಾತಾಡಿಕೊಳ್ಳುತ್ತಾ ಆ ದುರಿತ ಕಾಲವನ್ನು ಒಂದು ನೈಸರ್ಗಿಕ ಸಮತೋಲನದಲ್ಲಿ ಜೀಕುತ್ತಿದ್ದರು. ಭೂಮಿ ಬಾಯಿ ಬಿಡುವಾಗಿನ ಭಯ ಅಂತದ್ದು. ಊರು ಬಿಟ್ಟು 20 ವರ್ಷ ಕಳೆದರೂ ಕನ್ನಡ ಶಾಲೆಗೆ ನಡೆದ ಹೋಗುವಾಗ ಹಾದಿಗುಂಟ ಕಂಡುಂಡ ಇಂಥ ಬದುಕಿನ್ನ ಚಿತ್ರಗಳು ಎಂದಿಗೂ ಅಚ್ಚಳಿಯದoತವು.
ಕಳೆದ ವರ್ಷದ ಕನ್ನಡ ರಾಜ್ಯೋತ್ಸವದಲ್ಲಿ ಚರ್ಚೆಗೆ ಎದ್ದಿದ್ದ ಶಾಲೆಗಳ ಶೂನ್ಯ ದಾಖಲೆಯ ಅಂಕಿ-ಅಂಶ ಆತಂಕಗಳ ಜ್ವಾಲೆಯು ನನ್ನ ಮನಸ್ಸಿನಲ್ಲಿ ಒಂದು ಆರು ಏಳು ತಿಂಗಳು ಉರಿಯುತ್ತಿತ್ತು.ಈಗ ಜೂನನಿಂದ ಮತ್ತೆ ಶಾಲೆ ಶುರುವಾಗೋದು ಹೊತ್ತಲ್ಲೇ ಮತ್ತೊಂದಿಷ್ಟು ಶಾಲೆಗಳು ನಮ್ಮೂರಲ್ಲೂ ಮುಚ್ಚುತ್ತಿರೋ ಸುದ್ದಿ ಕೇಳಿ ಈ ಕುರಿತು ಸಾಮುದಾಯಿಕ ಸಂವಾದ ಕೇಳಿಸುವ ಪ್ರಯತ್ನವಾಗಿ, ಏನು ಈ ಲೇಖನ. ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ, ಕೆಲಸ ಆಂದೋಲನವಾಗಲೇ ಬೇಕಿದೆ ಎಂಬ ಒತ್ತಡವೂ ಒತ್ತಾಸೆಯೂ ಇಲ್ಲಿದೆ.
ಮೊದಲನೇ ಹಂತದಲ್ಲಿ ಮೂರು ಪರಿಕಲ್ಪನೆಗಳನ್ನು ಈ ನಿಟ್ಟಿನಲ್ಲಿ ಪ್ರಸ್ತುತಪಡಿಸುವೆ.
1. ಕನ್ನಡದ ಜೊತೆಗೆ, ಉಳಿದ ಹಲವು ಸ್ಥಾನಿಕ ಭಾಷಾ ಶಾಲೆಗಳು ಕಳೆದ ಮೂರು ವರ್ಷಗಳಲ್ಲಿ ಮುಚ್ಚಿವೆ. ಇವೆಲ್ಲವನ್ನೂ ಏಕರೂಪದಲ್ಲಿ ಕಾಣುವುದಾದಲ್ಲಿ ಈ ವಿದ್ಯಮಾನವನ್ನು ಆಯಾ ಹಳ್ಳಿಯ/ ಪ್ರದೇಶದ ಬಿಕ್ಕಟ್ಟುಗಳಿಗೆ ಪ್ರತಿಫಲನವಾಗಿ ನೋಡಬೇಕಿದೆ ಕನ್ನಡ ಮತ್ತಿತರ ಭಾಷಾಭಿವೃದ್ಧಿ ಪ್ರಾಧಿಕಾರಗಳು ಇಂತಲ್ಲಿ ಅಂದರೆ ಶೂನ್ಯ ದಾಖಲಾತಿಯಿಂದ ಈಗಾಗಲೇ ಮುಚ್ಚಿರುವ ಸುಮಾರು 287 ರಿಂದ 600 ಶಾಲೆಗಳ ಕಟ್ಟಡದಲ್ಲಿ, ಕನ್ನಡ ಮತ್ತುಳಿದ ಸ್ಥಾನಿಕ ಭಾಷೆಗಳ ಗ್ರಂಥ ಬಂಡಾರವನ್ನು ತಾತ್ಕಾಲಿಕವಾಗಿ ಅತ್ಯಂತ ಶೀಘ್ರವಾಗಿ ಸ್ಥಾಪಿಸುವುದು. ಅತೀ ತುರ್ತಾಗಿ ಆಗಬೇಕಿದೆ. ಪರಿಣಾಮವೇನೆಂದರೆ
ಅ. ಶಾಲೆಯ ಆವರಣದ ಸ್ವಚ್ಛತೆ, ಸುರಕ್ಷತೆ ಕಾಪಾಡಲ್ಪಡುವುದು.
ಆ. ಶಾಲೆಯ ಆವರಣವು ಊರಿನೆಲ್ಲ ಜನರಿಗೆ ಲಭ್ಯವಿರುವುದು.
ಇ. ಯಾವುದೇ ಒಂದು ವ್ಯಕ್ತಿಯ ಅತಿಕ್ರಮಣಕ್ಕೆ ಅಥವಾ ಸಮಾಜ ಬಾಹಿರ ಚಟುವಟಿಕೆಗಳಿಗೆ ಶಾಲೆಯ ಆವರಣ ಪಕ್ಕಾಗದಿರುವುದು.- ಉದಾ, ಶೂನ್ಯ ದಾಖಲಾತಿಯಿಂದ ಮುಚ್ಚಿರುವ ಶಾಲೆಗಳ ಅಂಗಳವು, ಆಡು ,ಕುರಿಗಳನ್ನ ಕಟ್ಟಲು ಬಳಕೆಯಾಗುತ್ತಿರೋದು ಪತ್ರಿಕೆಗಳಲ್ಲಿ ವರದಿಯಾಗಿವೆ.
ಈ. ಇಂಥ ಪುಟ್ಟ ಗ್ರಂಥಾಲಯಗಳು, ಊರಿನ ಮಾಹಿತಿ – ಜೀವನಾಡಿಯಾಗಬಲ್ಲವು. ಊರಿನ ಕನ್ನಡಿಗರ ಇಚ್ಛಾಶಕ್ತಿ ಬೇಕಷ್ಟೇ.ಆಯಾ ಊರಿನ ಕುರಿತ ಸಮಸ್ತ ವಿವರಗಳು, ಸರ್ಕಾರಿ, ಅರೆ ಸರ್ಕಾರಿ ಸಾಂಸ್ಕೃತಿಕ ಭೌಗೋಳಿಕ ವಿವರಗಳನ್ನು ಪ್ರತಿಕೃತಿ ಸಂಗ್ರಹಿಸಿ, ಎಲ್ಲರಿಗೂ ಕನ್ನಡದಲ್ಲಿ ಮಾಹಿತಿ ಎಟುಕುವಂತೆ ನೋಡಿಕೊಳ್ಳುವ ಮುಖಾಂತರ ಶಾಲೆಯನ್ನು ಕಲಿಕೆಯ ಪರಿಕಲ್ಪನೆಯ ಪ್ರಸ್ತುತಗೊಳಿಸುವುದು,
ಆಯಾ ಗ್ರಾಮ ಪಂಚಾಯಿತಿ ಇಂಥ ಗ್ರಂಥಾಲಯಗಳನ್ನು ಕಾಪಾಡುವ ಹೊಣೆನೀಡುವುದು ಉತ್ತಮ. ಇದರ ಜೊತೆಗೆ, ಈ ನಿಟ್ಟಿನಲ್ಲಿ, ನೆರವಾದವರಿಗೆ, ಸೇವೆ ಸಲ್ಲಿಸಿದವರಿಗೆ ಗ್ರಾಮ ಪಂಚಾಯಿತಿಯಿಂದ ಪ್ರಮಾಣ ಪತ್ರಗಳನ್ನು ಕೊಡುವ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಬಹುದು. ಇಲ್ಲಿ, ಊರ ನಾಗರಿಕರಿಗೆ, ಯುವ ಜನತೆಗೆ, ಗೃಹಿಣೀಯರಿಗೆ ಇಲ್ಲಿ ಅರೆಕಾಲಿಕ ಉದ್ಯೋಗಗಳು ಸೃಷ್ಟಿಯಾಗುವ ಅವಕಾಶವೂ ಇದೆ. ವಾರದಲ್ಲಿ ಕನಿಷ್ಟ ಮೂರುದಿನ ಇಡೀ ದಿನ ಇಂಥ ಗ್ರಂಥಾಲಯ ತೆರೆದಿದ್ದೆರೆ ಮುಚ್ಚಿದ ಕನ್ನಡ ಶಾಲೆಯ ಆಶಯಗಳು ಸ್ಮೃತಿಗಳು ಖಂಡಿತ ಜೀವಂತವಾಗಿರುತ್ತದೆ. ಮುಂದೊಂದು ದಿನ ಮತ್ತೆ ಶಾಲೆ ಆರಂಭವಾಗುವ ಭರವಸೆ ಕಾಣಿಸುತ್ತದೆ.
2. ಊರಿನಲ್ಲಿ ಈಗಾಗಲೇ ಗ್ರಂಥಾಲಯ ಇದ್ದರೆ ಊರಿನ ಸಾಂಸ್ಕೃತಿಕ ಐತಿಹಾಸಿಕ ನೆನಪುಗಳನ್ನು ಜೀವಂತವಾಗಿರಿ ಸುವ, ಒಂದು ಪುಟ್ಟ ಮ್ಯೂಸಿಯಂ ಹುಟ್ಟುಹಾಕಬಹುದು. ಇಂಥ ತಾಣವು ಸುತ್ತಲ ತಾಲೂಕುಗಳಿಗೆ ಖಂಡಿತವಾಗಿಯೂ ಒಂದು ದಿನದ ಪಿಕ್ನಿಕ್ ತಾಣವಾಗಲು ಸಾಕಷ್ಟು ಅವಕಾಶವಿದೆ. ಇಂಥ ಪುಟ್ಟ ಮ್ಯೂಸಿಯಂಗಳನ್ನು ಈ ಲೇಖಕಿ ಲಂಡನ್ ನಲ್ಲಿ ನೋಡಿ ಮನಸಾರೆ ಮೆಚ್ಚಿಕೊಂಡಿದ್ದು ,ಇದು ಆ ಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಒಂದು ವಿಶೇಷ ಪ್ರಜ್ಞಾಪೂರ್ಣತೆ ಮತ್ತು ಅರಿವಿನ ಖುಷಿ ನೀಡುತ್ತದೆ.
ಉದಾಹರಣೆಗೆ, ಸಿಂಗನಹಳ್ಳಿಯೂ, ಈಗ್ಗೆ 200 ವರ್ಷಗಳ ಹಿಂದೆ ಬಳಸುತ್ತಿದ್ದ ಒಂದು ಬಿಸ್ಕೆಟ್ ಡಬ್ಬ, ಬೀಡಿ ಕಟ್ಟಿನ ಪ್ಯಾಕೆಟ್, ಬಾವಿಯಿಂದ ನೀರು ಸೇದಲು ಬಳಸುತ್ತಿದ್ದ ಹಗ್ಗ, ದೇಗುಲದ ಹೊರಾಂಗಣದಲ್ಲಿ ಅಚ್ಚೆ ಇರದೆ ಬಿದ್ದಿದ್ದ, ಮೋಡಿ ಅಕ್ಷರಗಳ ವಿಚಿತ್ರ ಚಿತ್ತಾರಗಳ ಮಾಸ್ತಿಗಲ್ಲು ಅಥವಾ ವೀರಗಲ್ಲು, ಮಣ್ಣಿನ ಮಡಿಕೆ, ಕುಡಿಕೆಗಳು, ಲೋಹದ ಮರದ ಹೂಜಿ, ಕುಡಿಕೆ ಗಳು, ಇವುಗಳನ್ನು ಕೂಡಿಟ್ಟು ಪ್ರದರ್ಶನ ಮಾಡಿ, ಜನಕ್ಕೆ ಒಂಚೂರು ಜಾಗೃತಿ ಹುಟ್ಟಿಸಿದರೆ ಖಂಡಿತ ಊರನ್ನು ಇನ್ಮುಂದೆ ಬಗೆಯಲ್ಲಿ ಐತಿಹಾಸಿಕವಾಗಿ ಕಟ್ಟುವ ಕಾಣುವ ಒಂದು ಪ್ರಜ್ಞೆಯ ಸರಪಳಿ ಖಂಡಿತ ಮುಂದರಿಯುತ್ತದೆ ಎಂಬ ನಂಬಿಕೆ ಲೇಖಕಿಯದು.
ಇಂಥ ಸಾಂಸ್ಕೃತಿಕ ದಾಖಲೀಕರಣಕ್ಕೆ, ಇದೀಗ ಮುಚ್ಚಿರುವ ಶಾಲೆ ಖಂಡಿತವಾಗಿಯೂ ಒಂದು ಬಲವಾದ ಭೂಮಿಕೆ ಆಗಬಲ್ಲದು. ಈ ನಿಟ್ಟಿನಲ್ಲಿ ಊರ ಮುಖಂಡರು ಸ್ಥಾನಿಕ ನಿವೃತ್ತ ಸರ್ಕಾರಿ ಅಧಿಕಾರಿಗಳು ಮೇಷ್ಟ್ರುಗಳು ಮುಂದಾಗಿ ಜನರಲ್ಲಿ ಒಂದು ಸ್ಪೂರ್ತಿ ತುಂಬಬೇಕಿದೆ. ದೇಶ-ವಿದೇಶಗಳ ಮ್ಯೂಸಿಯಂಗಳನ್ನು ಪ್ರವಾಸ ಉದ್ಯಮಗಳನ್ನು ನೋಡಿ ಮನಗಂಡು ಪಳಗಿದ ಕಣ್ಣುಗಳನ್ನು, ನಮ್ಮ ಕನ್ನಡದ ಅಸ್ಮಿತೆ ಯನ್ನು ಪೊರೆಯಲಿಚ್ಚಿಸುವ ವಿದ್ವಾಂಸರನ್ನು ಇಂಥಲ್ಲಿ ಕರೆಸಿ, ಶಾಲೆಯನ್ನು ವೇದಿಕೆಯಾಗಿಸಿ ಕನ್ನಡದ ಮನಸುಗಳನ್ನು ಒಗ್ಗೂಡಿಸುವ ಕೆಲಸವಾಗಬೇಕಿದೆ.
3. ಇನ್ನು ಮೂರನೆಯ ವಿಧಾನ ಅಥವ ಮೊಡ್ಯೂಲ್ ಎಂದರೆ ಮುಚ್ಚಿದ ಕನ್ನಡ ಶಾಲೆಯನ್ನು, ಸ್ವತಂತ್ರ ಸೃಜನಶೀಲ ಕಲಿಕೆಯ ತಾಣವನ್ನಾಗಿಸುವುದು. ಸಾಮಾನ್ಯ ಅಥವಾ ನಾರ್ಮಲ್ ಅಕಾಡೆಮಿಕ್ ಕನ್ನಡ ಕಲಿಕೆಯನ್ನು, ಅಥವಾ ಶಾಲಾ ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸಿದ ಆದರೆ ಬಿಡುವಿನಲ್ಲಿ ಕಲಿಯಲಿಚ್ಚಿಸುವ ಮಕ್ಕಳಿಗೆ ಸ್ವತಂತ್ರವಾಗಿ ಹತ್ತನೇ, ಪಿಯುಸಿ ಪರೀಕ್ಷೆ ಬರೆಯಲಿಚ್ಚಿಸುವವರಿಗೆ ಬೆಂಬಲ ನೀಡುವ ಟ್ಯೂಷನ್ ಕೇಂದ್ರವಾಗಿ ಶೂನ್ಯ ದಾಖಲಾತಿಯ ಶಾಲೆಗಳನ್ನು ಪರಿವರ್ತಿಸಿ ಕಲಿಕೆಯ ಹಲವು ಹಾದಿಗಳನ್ನು ಅಗತ್ಯ ಉಳ್ಳವರಿಗೆ ತೆರೆದಿಡುವುದು. ಸ್ಥಳಾವಕಾಶಕ್ಕನುಗುಣವಾಗಿ ಮೇಲ್ಕಾಣಿಸಿದ ಮೂರು ಸಾಹಸಗಳು ಒಂದೇ ಶಾಲೆಯಲ್ಲಿ ನಡೆಸಲುಬಹುದು ಅಥವಾ ಒಂದೊಂದಾಗಿ ಪ್ರಯೋಗಿಸಿ ಸ್ಥಳೀಯರ ಆದ್ಯತೆಗಳ ಪ್ರಕಾರ ಮುಂದುವರೆಯುವುದು. ಜತೆಗೇ ಸಂಗೀತ, ನೃತ್ಯ ,ನಾಟಕ ತರಬೇತಿ, ಜಾನಪದ ಕಲೆ, ಅಧ್ಯಯನ, ಶಿಬಿರಗಳ ತರಬೇತಿ ಕೇಂದ್ರವಾಗಿಯೂ ಬಳಸಬಹುದು ಇವತ್ತಿನ ದಿನಮಾನದಲ್ಲಿ ನಮ್ಮ ದೇಶದ ಅಥ್ಲೆಟಿಕ್ ಸಾಹಸಗಳಿಗೆ ದೇಸಿ ಆಟೋಟಗಳ ತಾಲಿಮಿಗೆ ಶಾಲೆಯ ಸ್ಥಳಾವಕಾಶ ನೋಡಿಕೊಂಡು ಸುತ್ತ ಹತ್ತೂರಲ್ಲಿ ಪ್ರಸಿದ್ಧರಾಗಿರುವ ತರಬೇತುದಾರರನ್ನು ನಿಯೋಜಿಸಿದರೆ ಸಾಕಷ್ಟು ಪಾಲಕರು ಯುವ ಪೀಳಿಗೆ ಈ ನಿಟ್ಟಿನಲ್ಲಿ ಮುಂದರಿದು ಬರುವ ಸಾಧ್ಯತೆಗಳಿವೆ. ಮಕ್ಕಳನ್ನ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಕಲಿಸುವ ಪಾಲಕರಿಗೆ ಮಕ್ಕಳ ಪ್ರತಿಭಾ ಪೋಷಣೆಯ ಖಾಸಗಿ ಫೀ ವೆಚ್ಚವೇನೂ ಹೊರೆಯಲ್ಲ.
ಜನರು ಆಟೋಟಗಳ ತರಬೇತಿಗೆ ತಕ್ಕಮಟ್ಟಿಗೆ ಹಣ ಹೂಡಿ ವೃತ್ತಿಪರ ತರಬೇತಿಯನ್ನು ಪಡೆದುಕೊಳ್ಳಲು ಉಸ್ತುಕತೆಯನ್ನು ತೋರುತ್ತಿರುವ ಕಾಲವಿದು. ಜೊತೆಗೆ ಎಲ್ಲ ವಯೋಮಾನದವರಿಗೂ ಆಟೋಟಗಳಲ್ಲಿ, ಸ್ಪರ್ಧೆಗಳಲ್ಲಿ ವಿವಿಧ ಅವಕಾಶಗಳು ತೆರೆಯುತ್ತಿರುವ ಕಾಲವಿದು. ಈ ನಿಟ್ಟಿನಲ್ಲಿ ಮುಚ್ಚಿರುವ ಕನ್ನಡ ಶಾಲೆಗಳ ಕದಗಳು ತೆರೆದು ಕಲಿಕೆಯ ಹಲವು ಸಾಧ್ಯತೆಗಳಿಗೆ ಹೆಬ್ಬಾಗಿಲಾಗಲಿ. ಈ ಮೂಲಕ ಕನ್ನಡತನದ ವೈಶಾಲ್ಯತೆಯನ್ನು, ದೂರದೃಷ್ಟಿಯನ್ನು ಇನ್ನೊಂದು ಹಂತಕ್ಕೆ ಏರಿಸುವಿಕೆಯನ್ನ ಪ್ರತಿಪಾದಿಸಬೇಕಿದೆ.
ಮುಂದಿನ ಹಂತಗಳಲ್ಲಿ ,ಕಂತುಗಳಲ್ಲಿ ಈ ಪ್ರಾಥಮಿಕ ಮಾದರಿಗಳನ್ನು ಹೆಚ್ಚೆಚ್ಚು ಪ್ರಸ್ತುತಪಡಿಸುವತ್ತ, ವಿವಿಧ ಮಜಲುಗಳನ್ನು ಪ್ರಚುರಪಡಿಸುವ ಯೋಜನೆಯಿದೆ.
ಈ ನಿಟ್ಟಿನಲ್ಲಿ ತಮ್ಮೆಲ್ಲರ ಸಲಹೆ, ಸೂಚನೆ, ಪ್ರತಿಕ್ರಿಯೆಗಳಿಗೆ ಸದಾ ವಿನಮ್ರ ಕೋರಿಕೆ.
-ಡಾ|| ರಶ್ಮಿ ಹೆಗಡೆ, ಬೆಂಗಳೂರು
ಚಂದದ ಬರಹ… ನೀವು ಹಂಚಿಕೊಂಡ ಹಲವು ವಿಚಾರಗಳನ್ನು ಪಾಲಿಸಿದರೆ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು
ಬಹಳ ಕಾಳಜಿಯುಳ್ಳ ಬರಹ ಈ ನಿಟ್ಟಿನಲ್ಲಿ ಯೋಚಿಸಿದರೆ ಉತ್ತಮ… ಆದರೆ ಮಂದೆ ಬಂದು ಟೊಂಕಕಟ್ಟಿ ನಿಲ್ಲುವವರಾರು ಮೇಡಂ
ಚಿಂತನೆಗೆ ಹಚ್ಚುವ ಬರಹ. ಕಳಕಳಿಯಿಂದ ಕೂಡಿದೆ
ಅತ್ಯಂತ ಕಡಿಮೆ ಹಾಜರಾತಿಯಿಂದಾಗಿ ಮುಚ್ಚುತ್ತಿರುವ ಶಾಲೆಗಳನ್ನು ಇನ್ನಿತರ ಸೃಜನಶೀಲ ಕಾರ್ಯಗಳಿಗೆ ವಿನಿಯೋಗಿಸುವ ಸಲಹೆಯನ್ನು ನೀಡುವ ಕಾಳಜಿಯುಕ್ತ ಲೇಖನವು ಓದುಗರನ್ನು ಒಳ್ಳೆಯ ಚಿಂತನೆಗೆ ಹಚ್ಚುವಂತಹುದಾಗಿದೆ…ಧನ್ಯವಾದಗಳು ಮೇಡಂ.
ಉತ್ತಮ ಚಿಂತನೆಗಳುಳ್ಳ ಬರಹ
ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾವಂತ ಯುವಕರು ಮುಂದೆ ಬಂದರೆ ಇಂತಹ ಸತ್ಕಾರ್ಯ ಗಳಲ್ಲಿ ತೊಡಗಬಹುದು
ಅತ್ಯುತ್ತಮ ಪ್ರಯತ್ನ, ಪ್ರಾಮಾಣಿಕ ಕಾಳಜಿ, ಸ್ಪಷ್ಟ ನಿರ್ದಿಷ್ಟ ಚಿಂತನಾಬರೆಹ…….
ನನ್ನೆಲ್ಲ ಶಿಕ್ಷಕ ಸ್ನೇಹಿತರಿಗೆ ಶೇರಿಸಿರುವೆ.
ಅಭಿನಂದನೆ ಮತ್ತು ಧನ್ಯವಾದ ಮೇಡಂ