ಸರದಿ ಸಾಲು
ಜರುಗುವ ಪ್ರತಿಕ್ಷಣಕೊಬ್ಬರಂತೆ ಬಿಡುತಿಹರು ಈ ಜಗವನು
ಆಳಿದ ಅರಸನಿಲ್ಲ ಬೇಡಿದ ಬಿಕ್ಷುಕನಿಲ್ಲ
ಬೀಗಿದ ಸಿರಿವಂತನಿಲ್ಲ ಮಾಗಿದ ಬಡವನು ಬದುಕಿ ಉಳಿದಿಲ್ಲ
ಅರಿವಿಲ್ಲದೆ ನಿಂತಿರುವೆವು ನಾವೆಲ್ಲರೂ ಆ ಸಾಲಿನಲ್ಲೇ
ನಮ್ಮ ಮುಂದೆ ಎಷ್ಟು ಮಂದಿಯಿರುವರು ಎಂದು ಗೊತ್ತಿಲ್ಲದೇ
ಆ ಸಾಲಿನ ಕೊನೆಗೆ ನಿಲ್ಲೋಣವೆಂದರೆ ಸಾಧ್ಯವಿಲ್ಲ
ಸಾಲನು ತೊರೆದು ಹೋಗೋಣವೆಂದರೆ ಅನುಮತಿಯಿಲ್ಲ
ಸಾಲೇ ಬೇಡವೆನ್ನಲು ನಾವು ಅಳಿವಿಲ್ಲದ ದೇವರಲ್ಲ
ಕಾಯಬೇಕಿದೆ ನಮ್ಮ ಸರತಿಗಾಗಿ ಮುಗಿಯದ ಈ ಸಾಲಿನಲಿ
ಕಾಯುವಿಕೆಯ ಆ ದಿನಗಳಲಿ
ಮಾಡೋಣ ಅನುಗಾಲ ಅವಿಸ್ಮರಣೀಯ
ಆರಿಸೋಣ ನಮ್ಮ ಆದ್ಯತೆಯ ವಿಷಯಗಳ ಪಟ್ಟಿಯಿಂದ
ಅನುರಣಿಸಲಿ ಖುಷಿಯ ಅಲೆಗಳ ಮೇಳ ಜೀವನದ ಸಾಗರದಿಂದ
ನೀಡೋಣ ಅವಕ್ಕೆ ಅಮೂಲ್ಯ ಸಮಯವ ಕಾಳಜಿಯಿಂದ
ನಿರ್ಮಿಸೋಣ ಪುಟ್ಟ ಪುಟ್ಟ ಉಡುಗೊರೆಗಳ ಆಸ್ಥೆಯಿಂದ
ಯಾರವರು ಎನ್ನುವ ಭಾವನೆ ನಮ್ಮಲಿ ಮೂಡದಿರಲಿ
ನಮ್ಮವರೇ ನಮ್ಮ ಮನಮುಟ್ಟಿದವರೇ ಎನ್ನುವ ತಾಧ್ಯಾತ್ಮ ಹುಟ್ಟಿ ಬರಲಿ
ನಾವು ಉಲಿಯುವ ಮನದ ಪಿಸು ಮಾತೂ ಕೇಳುವಂತೆ ಗಟ್ಟಿಯಾಗಲಿ
ಸಣ್ಣ ಸಣ್ಣ ವಿಷಯಗಳು ನಮಗೆ ಪ್ರಾಮುಖ್ಯವೆನಿಸಲಿ
ನಮ್ಮಿಂದ ಇನ್ನೊಬ್ಬರ ಮೊಗದಲಿ ನಗೆ ಮೂಡಲಿ
ಯೋಗ್ಯ ಬದಲಾವಣೆ ನಮ್ಮಿಂದಲೇ ಪ್ರಾರಂಭವಾಗಲಿ
ನಿಜಪ್ರೇಮಕ್ಕೆ ನಾವೇ ಸಾಕ್ಷಿಯಾಗಲಿ
ಶಾಂತಿ ಸೌಹಾರ್ದತೆಯ ಮುನ್ನುಡಿ ನಮ್ಮಿಂದಾಗಲಿ
ಮನಸಾರೆ ಪ್ರೀತಿಸುವ ನಮ್ಮವರಿಗೆ ಆ ಸಂದೇಶ ಬೇಗ ಸಿಗುವಂತಾಗಲಿ
ಅಯ್ಯೋ ಅದು ಉಳಿದುಹೋಯಿತಲ್ಲ ಎನ್ನುವ ಅಪರಾಧಿ ಭಾವ ನಮ್ಮ ಕಾಡದಿರಲಿ
ಯಾರು ಬಲ್ಲವರು ನಮ್ಮ ಪಾಳಿ ಎಂದು ಬರುವುದೆಂದು
ಸಕಲ ಸಿದ್ದತೆಯೊಂದಿಗೆ ನಿಲ್ಲೋಣ ಬಂದಿದ್ದು ಬರಲೆಂದು
-ಕೆ.ಎಂ ಶರಣಬಸವೇಶ
ಚಂದದ ಕವಿತೆಸಾರ್…
ಧನ್ಯವಾದಗಳು ನಾಗರತ್ನ ಮೇಡಂ
Nice
ಧನ್ಯವಾದಗಳು ನಯನ ಬಜಕೂಡ್ಲು ಮೇಡಂ
ಹುಟ್ಟಿದ ಜೀವಿಗೆ ಸಾವು ನಿಶ್ಚಿತ! ಈ ನಿಟ್ಟಿನಲ್ಲಿ, ಸರತಿಯ ಸಾಲಿನಲ್ಲಿದ್ದುಕೊಂಡು, ನಮ್ಮ ಪಾಳಿ ಬರುವ ವರೆಗೆ ಪರಿಪೂರ್ಣ ಜೀವನ ನಡೆಸಲು ಕರೆ ನೀಡುವ ಕವನವು ಬಹಳ ಅರ್ಥಪೂರ್ಣವಾಗಿದೆ… ಧನ್ಯವಾದಗಳು..
ಧನ್ಯವಾದಗಳು ಶಂಕರಿ ಶರ್ಮ ಮೇಡಂ ಅವರಿಗೆ