ಕಾದಂಬರಿ : ಕಾಲಗರ್ಭ – ಚರಣ 21
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ತಿಂಗಳೊಪ್ಪತ್ತು ಮುಗಿಯುತ್ತಿದ್ದಂತೆ ಮನೆಗೆ ಹಾಜರಾದರು ಸಾಹುಕಾರ ರುದ್ರಪ್ಪನವರು. ಇಬ್ಬರು ಮನೆಯ ಹಿರಿಯರ ಮುಂದೆಯೇ ದೇವಿಯ ಕೈಗೆ ಲೈಸೆನ್ಸ್ ಹಾಗೂ ಜಾಹೀರಾತಿನ ಪತ್ರಿಕೆಯ ಕಟ್ಟುಗಳನ್ನು ಕೊಟ್ಟರು. “ನನಗೆ ತಿಳಿದ ಕಡೆಯಲ್ಲೆಲ್ಲಾ ಹಂಚಿದ್ದೇನೆ. ನೀವೂ ಕೊಟ್ಟು ಪ್ರಚಾರ ಮಾಡಿ.” ಎಂದರು. “ನೋಡಮ್ಮಾ ಮಹೇಶಪ್ಪಾ ನನಗೆ ನೀವು ವಹಿಸಿದ್ದ ಕೆಲಸ ಮುಗಿಸಿಕೊಟ್ಟಿದ್ದೇನೆ. ಮುಂದಿನದ್ದು ನಿಮ್ಮದು. ಹಾಗೇ ನಾನು ಹೇಳಿದ ಕೆಲಸ ಕೈಗೆತ್ತಿಕೊಳ್ಳಲು ಹೇಳಿ. ಒಂದು ಒಳ್ಳೆಯ ದಿನ ನೋಡಿ ಎರಡೂ ಕೆಲಸಕ್ಕೂ ಶುಭಾರಂಭ ಮಾಡಿಬಿಡಿ” ಎಂದು ಹಿರಿಯರಿಗೆ ಹೇಳಿ ಅವರಿತ್ತ ಆತಿಥ್ಯ ಸ್ವೀಕರಿಸಿ ತೆರಳಿದರು.
ಮಹೇಶ “ಇಷ್ಟು ಬೇಗ ಆಗುತ್ತದೆಂದು ಅಂದುಕೊಂಡಿರಲಿಲ್ಲ. ಅಪ್ಪಯ್ಯಾ ಭಲೇ..ಭಲೇ ನಾನು ತಿಳಿದುದಕ್ಕಿಂತಲೂ ಜೋರಾಗಿಯೇ ಇದೆ ಅವರ ಮಿತ್ರವಲಯ. ಇನ್ನು ತಡಮಾಡುವುದು ಸರಿಯಲ್ಲ. ನಾಳೆಯೇ ಅವರು ಹೇಳಿದ ಕೆಲಸಕ್ಕೆ ಒಪ್ಪಿದ್ದೇನೆಂದು ಫೋನ್ ಮಾಡಿ ತಿಳಿಸಿಬಿಡುತ್ತೇನೆ. ಅದರಿಂದ ನನ್ನ ಕೆಲಸ ಕಾರ್ಯಗಳಿಗೂ ತೊಂದರೆಯಾಗದು ಎಂಬುದನ್ನು ಮಾಡಿ ತೋರಿಸುತ್ತೇನೆ” ಎಂದು ಹೇಳಿದ.
ಒಂದು ದಿನದ ಅಂತರದಲ್ಲಿ ದೇವಿಯ “ನೀಲಗಂಗಾ ಹೋಂ ಪ್ರಾಡಕ್ಟ್ಸ್ ” ಮತ್ತು ಮಹೇಶನ ಕಾರ್ಯಾಗಾರ ಪ್ರಾತ್ಯಕ್ಷಿಕೆಗೆ ಎರಡು ಕುಟುಂಬಗಳ ಸದಸ್ಯರು, ಹಿತೈಷಿಗಳ ಶುಭ ಹಾರೈಕೆಗಳೊಡನೆ ಪ್ರಾರಂಭವಾದವು.
ನೀಲಕಂಠಪ್ಪನವರ ಕುಟುಂಬದವರೆಲ್ಲ ಒಕ್ಕೊರಲಿನಲ್ಲಿ ಸಂತಸ ವ್ಯಕ್ತಪಡಿಸಿದರು. ಇತ್ತ ಗಂಗಾಧರಪ್ಪನವರ ಕುಟುಂಬದವರೂ ಅದಕ್ಕೆ ದನಿಗೂಡಿಸಿದರು. ಮಹೇಶನ ಸೋದರಿಯರು ಮಾತ್ರ “ಏನು ಕಮ್ಮಿಯಾಗಿದೆ ಅಂತ ಈ ಅಂಗಡಿಮುಗ್ಗಟ್ಟು ತೆರೆಯುತ್ತಿದ್ದಾರೆ? ಏ ಚಂದ್ರಾ ಬರೆದಿಟ್ಟುಕೋ ನೀನು ಈಮನೆಯ ಕೆಲಸಕ್ಕೆ ಗಾಣದೆತ್ತಾಗುತ್ತೀ. ನಿಮ್ಮಕ್ಕ ಹೊರಗಡೆ ಪ್ರಸಿದ್ಧಿ ಪಡೆಯಲು ಹೊರಟಿದ್ದಾಳೆ. ಎಲ್ಲರಿಗೂ ಅದೇನು ಮೋಡಿ ಮಾಡಿದ್ದಾಳೋ ಕಾಣೆ. ಆಹಾ ! ನನ್ನ ತಮ್ಮನೂ ಅವಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾನೆ. ಮೆರೆಯಲಿ ಅದೆಷ್ಟು ದಿನ ಮೆರೆಯುತ್ತಾಳೋ ನಾವೂ ನೋಡುತ್ತೇವೆ. ನೀನು ಕೋಲೇಬಸವನ ಹಾಗಾದರೆ ದೇವರೇ ದಿಕ್ಕು. ಕಾಲೊರೆಸುವ ತಟ್ಟಿನಂತಾಗುತ್ತೀ” ಎಂದೆಲ್ಲ ಅಂದು ತಮ್ಮ ಮಾತಿನ ಚಪಲ ತೀರಿಸಿಕೊಂಡರು.
ಅವರ ಗುಣಾವಗುಣಗಳ ಬಗ್ಗೆ ಗಂಡ ಸುಬ್ಬುವಿನ ಬಾಯಿಂದ ಮೊದಲೆ ಕೇಳಿದ್ದ ಚಂದ್ರಾ ಯಾವ ಪ್ರತ್ಯುತ್ತರವನ್ನೂ ಕೊಡುವ ಗೋಜಿಗೆ ಹೋಗಲಿಲ್ಲ. ಅವರ ಮಾತುಗಳನ್ನು ಯಾರಿಗೂ ರವಾನೆ ಮಾಡಲಿಲ್ಲ.
ಎರಡೂ ಮನೆಯ ಹಿರಿಯರುಗಳು ದೇವಿಯ ಅಂಗಡಿಗೆ ಬೇಕಾದ ಕೆಲಸಗಾರ್ತಿಯರಿಗಾಗಿ ನಾವೂ ಮತ್ತು ಸಾಹುಕಾರ ರುದ್ರಪ್ಪನವರು ಪ್ರಚಾರ ಮಾಡಿದ್ದೇವೆ. ಆಸಕ್ತಿ ಇರುವವರು ತಾವಾಗಿಯೆ ಬರಲಿ ನೋಡಿಕೊಂಡರಾಯಿತು ಎಂದು ಹೇಳಿಕೊಂಡರು. ಹಾಗೇ ಒಂದು ಅಂದಾಜಿನ ಮೇಲೆ ಕೆಲಸ ಶುರುವಾಯಿತು. ಒಂದು ವಾರದನಂತರ ಸುತ್ತಮುತ್ತಲಿನ ಮಹಿಳೆಯರು ಬಂದು ಕೆಲಸಕ್ಕೆ ಸೇರಿಕೊಳ್ಳುವ ಆಸಕ್ತಿ ತೋರಿದರು. ಬಂದವರಲ್ಲಿ ದೈಹಿಕವಾಗಿ ಸಧೃಢರಿದ್ದು ಕೆಲಸಗಳ ಬಗ್ಗೆ ತಿಳಿವಳಿಕೆ ಉಳ್ಳವರೆಂದು ಕಂಡುಬಂದವರನ್ನು ಆಯ್ಕೆಮಾಡಿಕೊಂಡಳು ದೇವಿ. ಮಿಕ್ಕವರಿಗೆ ಅಂಗಡಿಯ ವಹಿವಾಟು ಹೇಗೆ ನಡೆಯುತ್ತದೆಂದು ನೋಡಿಕೊಂಡು ಹೆಚ್ಚಿನವರು ಬೇಕೆಂದೆನ್ನಿಸಿದರೆ ಹೇಳಿಕಳುಹಿಸುತ್ತೇನೆ. ನಿಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕೊಟ್ಟುಹೋಗಿರೆಂದು ಹೇಳಿದಳು.
ಹೊರಗಿನಿಂದ ಸಾಮಾನುಗಳನ್ನು ತಂದುಕೊಡಲು, ಸಿದ್ದಪಡಿಸಿದ ವಸ್ತುಗಳನ್ನು ಅಂಗಡಿಗಳಿಗೆ ಸರಬರಾಜು ಮಾಡಲು ತಲೆಕೆಡಿಸಿಕೊಳ್ಳಬೇಕಾಗಲಿಲ್ಲ. ಆ ಕೆಲಸಗಳಿಗೆ ಸಾಹುಕಾರ ರುದ್ರಪ್ಪನವರೇ ತಮ್ಮ ಕಡೆಯ ಒಂದಿಬ್ಬರು ನಂಬಿಗಸ್ಥ ಸಹಾಯಕರನ್ನು ನೇಮಿಸಿಕೊಟ್ಟರು. ಅವರು ತಮ್ಮಲ್ಲಿದ್ದ ಲಗೇಜ್ ಆಟೋಗಳಲ್ಲಿ ಕೆಲಸ ಮಾಡಿಕೊಡುತ್ತೇವೆಂದು ಭರವಸೆ ನೀಡಿದ್ದರು. ಈ ವ್ಯವಸ್ಥೆ ಎರಡೂ ಮನೆಯವರಿಗೆ ಇಷ್ಟವಾಯಿತು. ಇದರಿಂದ ಹೆಚ್ಚು ಸಂತೋಷವಾಗಿದ್ದು ಮಹೇಶ ಮತ್ತು ಸುಬ್ಬಣ್ಣನಿಗೆ. ಸದ್ಯ ಹುಡುಕುವುದು ತಪ್ಪಿತು ನಮ್ಮ ಹೆಗಲ ಮೇಲಿನ ಭಾರವೂ ಇಳಿಯಿತು ಅಂದುಕೊಂಡರು.
ಹೀಗೆ ವ್ಯವಸ್ಥಿತವಾಗಿ ಪ್ರಾರಂಭವಾದ ದೇವಿಯ ಹೋಂ ಪ್ರಾಡಕ್ಟ್ಗಳಿಗೆ ಬೇಡಿಕೆ ಹೆಚ್ಚಾಗತೊಡಗಿತು. ಅದರಲ್ಲೂ ಹತ್ತಿಯಿಂದ ತಯಾರಾಗುತ್ತಿದ್ದ ಗೆಜ್ಜೆವಸ್ತ್ರ, ದೀಪದ ಬತ್ತಿ, ತುಪ್ಪದಾರತಿ ಬತ್ತಿಗಳಿಗೆ ಬೇಡಿಕೆಯನ್ನು ಪೂರೈಸಲಾಗದಷ್ಟು ಮಟ್ಟ ಮುಟ್ಟಿದ್ದರಿಂದ ಸಹಾಯಕ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚು ಮಾಡಬೇಕಾಯಿತು. ಮಸಾಲೆ ಪುಡಿಗಳು, ಹಪ್ಪಳ. ಸಂಡಿಗೆ, ಉಪ್ಪಿನಕಾಯಿ ಇತ್ಯಾದಿಗಳನ್ನು ಹೊರಗೆ ಕಳುಹಿಸುವುದರೊಂದಿಗೆ ಕೆಲವು ಸಣ್ಣಪುಟ್ಟ ಅಂಗಡಿಯವರು ತಾವೇ ಬಂದು ತೆಗೆದುಕೊಂಡು ಹೋಗತೊಡಗಿದರು. ಎರಡೂ ಮನೆಯವರೊಡನೆ ಹೊಂದಾಣಿಕೆ ಇದ್ದುದರಿಂದ ಅಪಸ್ವರ ಸುಳಿಯದೆ ನಿರಾತಂಕವಾಗಿ ಅಂಗಡಿಯ ವ್ಯಪಾರ ವೃದ್ಧಿಯಾಗತೊಡಗಿತು. ಆಗಿಂಗಾಗ್ಗೆ ಹಿರಿಯರಾದ ನೀಲಕಂಠಪ್ಪ, ಗಂಗಾಧರಪ್ಪನವರು ಲೆಕ್ಕಪತ್ರದಲ್ಲಿ ಮನೆಯವರಿಗೆ ಸಹಾಯ ಮಾಡುವುದು, ತಾವೂ ಸ್ವಲ್ಪ ಹೊತ್ತು ಅವರೊಡನಿದ್ದು ಅವರಿಗೆ ಬಿಡುವನ್ನೊದಗಿಸುವ ಕೆಲಸ ಮಾಡುತ್ತಿದ್ದರು.
ಇತ್ತ ಮಹೇಶನು ಪ್ರಾರಂಭಿಸಿದ ಕೃಷಿ ಕಾರ್ಯಾಗಾರವಂತೂ ಹೆಚ್ಚೆಚ್ಚು ಜನಪ್ರಿಯವಾಗಿತ್ತು. ಇದರ ಸುದ್ಧಿ ಎಲ್ಲೆಡೆಗೆ ಹಬ್ಬತೊಡಗಿತು. ಪ್ರತಿದಿನವಲ್ಲದಿದ್ದರೂ ಸಾಹುಕಾರ ರುದ್ರಪ್ಪನವರು ಬಯಸಿದಂತೆ ನಿರ್ವಂಚನೆಯಿಂದ ಈ ಕೆಲಸ ಮಾಡುತ್ತಿದ್ದ ಮಹೇಶ. ಯಾವ ಗುಣದ ಮಣ್ಣಿಗೆ ಯಾವ ಬೆಳೆಯನ್ನು ಬೆಳೆದರೆ ಉತ್ತಮ, ಅದಕ್ಕೆ ಅಗತ್ಯವಾದ ಗೊಬ್ಬರದ ಪ್ರಮಾಣ, ಹಣ್ಣಿನ ಗಿಡದ ಸಸಿಗಳನ್ನಿ ಕಸಿಮಾಡುವ ವಿಧಾನ, ಜೇನು ಸಾಕಾಣಿಕೆ, ಎರೆಹುಳುವಿನ ಗೊಬ್ಬರ ತಯಾರಿಕೆ, ಎಲ್ಲ ತಿಳಿವಳಿಕೆಗಳನ್ನು ತನ್ನ ಹೊಲ, ಗದ್ದೆ, ತೋಟದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸುತ್ತಿದ್ದ. ತಮ್ಮ ಜಮೀನಿನ ಒಂದೆಡೆಯಲ್ಲಿ ಹೈನುಗಾರಿಕೆಯನ್ನೂ ಮಾಡುತ್ತಿದ್ದುದರಿಂದ ಅದರ ಬಗ್ಗೆ ಕೂಡ ಕೊಟ್ಟಿಗೆಯ ಸ್ವಚ್ಛತೆ, ಜಾನುವಾರುಗಳ ಆರೋಗ್ಯ ಕಾಳಜಿ, ಹೈನು ಉತ್ಪತ್ತಿಗಳಾದ ಹಾಲು, ಮೊಸರು, ಬೆಣ್ಣೆ, ತುಪ್ಪ ತಯಾರಿಕೆ, ಅವುಗಳ ವಿಲೇವಾರಿಗಾಗಿ ಗಮನಿಸಬೇಕಾದ ಅಂಶಗಳು, ಹೀಗೇ ಒಂದೇ ಎರಡೆ ಹಲವಾರು ವಿಷಯಗಳನ್ನು ಉದಾಹರಣೆಗಳ ಮೂಲಕ ವಿವರಿಸುತ್ತಿದ್ದ ರೀತಿ ಎಲ್ಲರಿಗೂ ಹಿಡಿಸಿತ್ತು. ಸಾಹುಕಾರ ರುದ್ರಪ್ಪನವರೇ ಈ ಕಾರ್ಯಕ್ರಮಗಳ ಹಿಂದಿರುವ ರೂವಾರಿಗಳೆಂದು ತಿಳಿದ ರೈತಾಪಿ ಜನರು ಅವರನ್ನು ಹಾಡಿ ಹೊಗಳುತ್ತಿದ್ದರು. ಇದರಿಂದ ತಮ್ಮ ಮುಂದಿನ ರಾಜಕೀಯ ಆಕಾಂಕ್ಷೆಗಳಿಗೆ ಪ್ಲಸ್ ಪಾಯಿಂಟ್ ಆಗುತ್ತದೆಂದು ಅವರೂ ಮನದಲ್ಲೆ ಹಿರಿಹಿರಿ ಹಿಗ್ಗುತ್ತಿದ್ದರು. ಇನ್ನೂ ಮುಂದಾಗಿ ಯೋಚಿಸಿ ಸರ್ಕಾರದಿಂದ ಸಣ್ಣಪುಟ್ಟ ರೈತರಿಗೆ ಧನಸಹಾಯ ಸಿಗುವ ಹಾಗೆ ಮಾಡುವುದು, ಕಡಿಮೆ ಬಡ್ಡಿಯಲ್ಲಿ ಸಾಲ ದೊರಕುವಂತೆ ಮಾಡುವುದು ಮುಂತಾದ ಕಾರ್ಯಗಳನ್ನು ಮಾಡುತ್ತ ಅವರೆಲ್ಲರ ಕಣ್ಣಿಗೆ ಭಗವಂತನಂತೆ ಕಾಣಿಸಿಕೊಳ್ಳುವ ಪ್ರಯತ್ನದಲ್ಲಿ ಮುನ್ನಡೆಯುತ್ತಿದ್ದರು.
ತನ್ನ ಗಂಡನ ಬಗ್ಗೆ, ಆತನ ಕೆಲಸಗಳ ಬಗ್ಗೆ ಹಲವಾರು ಜನರು ಬಾಯಿತುಂಬ ಹೊಗಳುತ್ತಿದ್ದುದನ್ನು ಕೇಳಿದ ದೇವಿ ..ಹೂಂ ಈತ ಎಲ್ಲವನ್ನೂ ಬಲ್ಲವನು, ಎಲ್ಲದಕ್ಕೂ ಪರಿಹಾರ ಒದಗಿಸುವ ಜ್ಞಾನಿ. ಆದರೆ ತನ್ನ ಕ್ಯಹಿಡಿದ ಹೆಂಡತಿಯ ಹತ್ತಿರ ಬಂದಾಗ ಮಾತ್ರ ಅಸಹಾಯಕನಾಗುತ್ತಾನೆ. ಏಕೆ ಹೀಗಾಗುತ್ತದೆಂಬುದರ ಕಡೆಗೆ ತಲೆಕೆಡಿಸಿಕೊಳ್ಳದ ಸರದಾರ ಎಂದುಕೊಳ್ಳುತ್ತಿದ್ದಳು.
ಹೀಗೆ ಇಬ್ಬರೂ ತಮ್ಮ ತಮ್ಮ ವಲಯದಲ್ಲಿ ಬಿಡುವಿಲ್ಲದಂತೆ ಕೆಲಸಕಾರ್ಯಗಳಲ್ಲಿ ತನ್ಮಯರಾಗಿದ್ದರು. ದಿವಸಗಳು, ತಿಂಗಳುಗಳು ಅವರಿಗರಿವಿಲ್ಲದಮತೆ ಉರುಳತೊಡಗಿದವು. ಹಾಗೇ ವಿವಾಹದ ವಾರ್ಷಿಕ ಸಂಭ್ರಮವನ್ನು ಮನೆದೇವರ ಸನ್ನಿಧಿಗೆ ಹೋಗಿಬರುವುದರ ಮೂಲಕ ಆಚರಣೆ ಮಾಡಿಕೊಂಡರು. ಮತ್ತೊಂದು ವರ್ಷವೂ ಕಳೆಯುವ ದಿನ ಹತ್ತಿರ ಬಂದಾಯಿತು. ಹಿರಿಯರೆಲ್ಲರ ಮನಸ್ಸುಗಳಲ್ಲಿ ಎರಡೂ ಜೋಡಿಗಳ ಕಡೆಯಿಂದ ಯಾವ ಶುಭ ಸಮಚಾರವೂ ಬರದೇ ಇದ್ದುದನ್ನು ಕಂಡು ಹೊಯ್ದಾಟ ಶುರುವಾಗಿ ಕೇಳಲೂ ಆಗದೆ ಸುಮ್ಮನಿರಲು ಆಗದೆ ಸಂದಿಗ್ಧಕ್ಕೆ ಸಿಲುಕಿದರು.
ಅದರೆ ಹೊರಗಡೆಯವರ ಬಾಯಿ ಮುಚ್ಚಿಸಲು ಸಾಧ್ಯವೇ? ಮೊದಲೇ ಲಕ್ಷ್ಮಿ ಕಾಲ್ಮುರಿದುಕೊಂಡು ಮನೆಗಳಲ್ಲಿ ಬಿದ್ದವಳೆ ಇದರ ಮೇಲೆ ಮನೆಯ ಮಗ ಸೊಸೆ ಪೈಪೋಟಿಗೆ ಬಿದ್ದವರಂತೆ ತಮ್ಮ ಕೆಲಸಗಳಲ್ಲಿ ನಾಗಾಲೋಟದಲ್ಲಿ ಓಡುತ್ತಿದ್ದಾರೆ. ಇಬ್ಬರೂ ಖಂಡುಗ ಓದವರೆ ನಿಜ, ಅವೆಲ್ಲ ಮಾಡ್ಲಿ ಯಾರು ಬೇಡಾಂದ್ರು. ಮನೆತನ ಮುಂದುವರೆಸುವ ಕಡೆಗೂ ಗಮನ ಕೊಡಬೇಕಲ್ಲವಾ? ಏನಂತೀರಾ? ಗಂಗಾಧರಪ್ಪ , ನೀಲಕಂಠಪ್ಪನವರೇ ಎಂದು ವಯಸ್ಸಿನಲ್ಲಿ ಇವರಿಗಿಂತಲು ಹಿರಿಯರಾದವರು ಕೇಳಿದ್ದಕ್ಕೆ ಈಗಿನ ಕಾಲದ ಹುಡುಗರು ಏನೇನು ತಲೇಲಿಟ್ಟುಕೊಂಡಿದ್ದಾರೋ, ಯಾವ್ಯಾವ ವಯಸ್ಸಿನಲ್ಲಿ ಏನೇನು ಆಗಬೇಕೋ ಅದು ಆದರೇ ಚೆಂದ. ಮೊಮ್ಮಕ್ಕಳನ್ನು ಕಾಣೋ ವಯಸ್ಸಿನಲ್ಲಿ ಮಕ್ಕಳನ್ನು ಹಡೀತಾರೇನೋ ಎಂದು ಮುಸಿಮುಸಿ ನಗಾಡ್ತಿದ್ದರು ಮನೆಯ ಯಜಮಾನ್ತಿಯರ ಹತ್ತಿರ ಸಲಿಗೆ ಹೊಂದಿದ್ದ ಹೆಂಗಸರು.
‘ಬಿಸಿ ತುಪ್ಪ ನಿಂಗಲೂ ಆಗದು, ಉಗುಳಲೂ ಆಗದು’ ಎಂಬ ಪರಿಸ್ಥಿತಿ ಎರಡು ಮನೆಯವರದ್ದು. ಎರಡೂ ಮನೆಯ ಹಿರಿತಲೆಗಳು ಗೆಳೆಯರು ತಾವಿಬ್ಬರೇ ಇದ್ದಾಗ ಈ ವಿಷಯವಾಗಿ ಮಾತನಾಡಿಕೊಳ್ಳುತ್ತಿದ್ದರು.
“ಅಲ್ಲಾ ಗಂಗೂ ನಮ್ಮ ಮನೆಯೂ ನಂದಗೋಕುಲ, ನಿಮ್ಮ ಮನೆಯಲ್ಲಿಯೂ ಸಂತಾನ ಹೀಗಿರಲಿಲ್ಲ. ಈ ಎರಡೂ ಕುಟುಂಬಗಳ ಹಿನ್ನೆಲೆಯಿಂದ ಬಂದ ಇವರುಗಳಲ್ಲೇಕೆ ತಡವಾಗಿದೆ?” ಎಂದು ಪೇಚಾಡಿದರು ನೀಲಕಂಠಪ್ಪ.
“ಹೂ..ಏನೆಂದು ಹೇಳೋದು ಗೆಳೆಯಾ, ಸುಬ್ಬು ಚಂದ್ರಿಕಾ ಇಬ್ಬರೂ ಚಿಕ್ಕವರು, ಆದರೆ ನಮ್ಮ ಹೈದ ಮದುವೆ ಮಾಡಿಕೊಂಡಾಗಲೇ ಮೂವತ್ತುವರ್ಷ ದಾಟಿತ್ತು. ಗುರುಗಳು ಮದುವೆಗೆ ಮೊದಲು ಅವನ ಜಾತಕ ನೋಡುವಾಗಲೇ ಅದೇನೋ ದೋಷ ಪರಿಹಾರದ ಪೂಜೆಗಳನ್ನು ಮಾಡಿಸಿದ್ದರು. ಮತ್ತೇನಾದರೂ ಕಾರಣವಿದೆಯಾ ಗುರುಗಳು ಸಿಕ್ಕಾಗ ಕೇಳಬೇಕು. ಇನ್ನೇನಾದರೂ ವಿಶೇಷ ಪೂಜೆಗಳನ್ನು ಮಾಡಿಸಬೇಕಾ ಅಂತ. ಪಾಪ ನನ್ನಾಕೆಯಂತೂ ಪೇಚಾಡಿಕೊಳ್ಳುತ್ತಾ ಇರುತ್ತಾಳೆ. ಭಗವಂತ ನಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಇದರ ಕಡೆ ಯಾವಾಗ ಕೃಪೆ ಮಾಡುತ್ತಾನೋ ನೋಡಬೇಕು. ನಡಿ ಸಂಜೆ ಬಹಳ ಹೊತ್ತಾಗಿದೆ. ತೀರಾ ಕತ್ತಲು ಮಾಡಿಕೊಂಡು ಹೋದರೆ ಮನೆಯಲ್ಲಿ ಆಗುತ್ತೆ ಮಂಗಳಾರತಿ.” ಎಂದು ಗೆಳೆಯನನ್ನೆಬ್ಬಿಸಿಕೊಂಡು ಮನೆಯ ಕಡೆ ನಡೆದರು ಗಂಗಾಧರಪ್ಪ.
ಮನೆಯ ಮುಂಬಾಗಿಲಲ್ಲೇ ಹೆಂಡತಿಯೊಡನೆ ನಿಂತಿದ್ದ ಚಂದ್ರಿಕಾಳನ್ನು ನೋಡಿದವರೇ “ಅರೇ ಪುಟ್ಟಿ ಅಪ್ಪನ ಮನೆಯಿಂದ ಯಾವಾಗ ಬಂದೆ? ಅಜ್ಜಿ ಹುಷಾರಾಗಿದ್ದಾರಾ?” ಎಂದು ಕೇಳಿದರು.
“ಹೂಂ ಮಾವಾ” ಎಂದುತ್ತರಿಸಿ ಒಳನಡೆದಳು ಚಂದ್ರಿಕಾ. ಅಜ್ಜಿಗೆ ಆರೋಗ್ಯ ಸರಿಯಿಲ್ಲವೆಂದು ಅವರನ್ನು ನೋಡಿಕೊಂಡು ಬರಲು ಹೋಗಿದ್ದವಳು ಹಿಂತಿರುಗಿ ಬಂದಿದ್ದಳು. ರಾತ್ರಿ ಊಟವಾದಮೇಲೆ ಹೊರ ಅಂಗಳದಲ್ಲಿ ಕುಳಿತು ಮಾತನಾಡುತ್ತೀರಲ್ಲಾ ಆವಾಗಲೇ ವಿಷಯ ತಿಳಿಸಿಬಿಡು ಮಗಳೇ, ಇವೆಲ್ಲ ಮುಚ್ಚಿಡುವ ಸಮಾಚಾರವಲ್ಲ ಎಂದು ಹೇಳಿದ್ದ ಅಮ್ಮನ ಎಚ್ಚರಿಕೆಯ ಮಾತುಗಳ ನೆನಪಾಯಿತು. ಆದರೂ ಮೊದಲು ಸುಬ್ಬುವಿಗೆ ಹೇಳಿ ಅವನ ಅಭಿಪ್ರಾಯ ತಿಳಿದು ಮುಂದುವರೆಯಬೇಕು ಎಂದುಕೊಂಡಳು.
ಅಂದು ರಾತ್ರಿ ಮಲಗಲು ತಮ್ಮ ರೂಮಿಗೆ ಬಂದ ಚಂದ್ರಿಕಾ ವಿಷಯವನ್ನು ಹೇಗೆ ಪ್ರಸ್ತಾಪಿಸಬೇಕು ಎಂದು ತಿಳಿಯದೆ ಹಾಗೆ ನಿಂತಳು. “ ಇದೇನು ಚಂದ್ರಾ ಕೈಯಲ್ಲಿ ಹೊದೆಯುವ ಬೆಡ್ಷೀಟು ಹಿಡಿದು ಏನನ್ನೋ ಯೋಚಿಸುತ್ತಾ ನಿಂತಿದ್ದೀ? ಹದಿನೈದು ದಿನ ಅಲ್ಲಿದ್ದು ಬಂದರೂ ಅಮ್ಮನ ಮನೆಯ ನೆನಪಲ್ಲೇ ಇದ್ದಹಾಗೆ ಕಾಣಿಸುತ್ತೆ.” ಎಂದು ಅವಳ ಹತ್ತಿರ ಬಂದು ಅಲುಗಾಡಿಸಿದ ಸುಬ್ಬು.
ಎಚ್ಚೆತ್ತು ಚಂದ್ರಾ “ಹಾಗೇನಿಲ್ಲ ಸುಬ್ಬು” ಎಂದು ಅವನ ಕಿವಿಯ ಹತ್ತಿರ ಬಾಯಿ ತಂದು “ನೀವು ತಂದೆಯಾಗುತ್ತಿದ್ದೀರಿ” ಎಂದಳು.
“ಅರೇ ! ಇಂತಹ ಸಿಹಿ ಸುದ್ಧಿಯನ್ನು ಇಷ್ಟೊಂದು ಯೋಚಿಸಿ ಹೇಳಬೇಕೇ? ಏಕೆ ನಿನಗೆ ಬೇಡವಾಗಿತ್ತೇ?” ಎಂದ ಸುಬ್ಬು.
“ಛೇ ಬಿಡ್ತು ಅನ್ನಿ, ಯಾವ ಹೆಣ್ಣೂ ಇದನ್ನು ನಿರಾಕರಿಸಳು. ನನಗೆ ಅದರ ಬಗ್ಗೆ ಚಿಂತೆಯಿಲ್ಲ. ಅದರೆ ಇದೇ ಮನೆಯಲ್ಲಿ ನಮಗಿಂತ ಹಿರಿಯರಾಗಿರುವ ದೇವಿಯಕ್ಕ, ಮಹೇಶಣ್ಣನವರಿಂದ ಇಂತಹ ಸಿಹಿಸುದ್ಧಿ ಬಂದಿದ್ದರೆ ಚೆಂದಿತ್ತು. ಅದ್ದರಿಂದ ನಮ್ಮ ಸುದ್ಧಿಯನ್ನು ಎರಡೂ ಮನೆಯವರು ಹೇಗೆ ಸ್ವೀಕರಿಸುತ್ತಾರೋ ಎಂಬ ಆತಂಕವಾಗಿದೆ” ಎಂದಳು.
“ ಮನೆಯವರು ಅಷ್ಟೊಂದು ಸಂಕುಚಿತ ಮನೋಭಾವದವರಲ್ಲ. ಇಲ್ಲದಸಲ್ಲದ ಕಲ್ಪನೆ ಮಾಡಿಕೊಂಡು ಆತಂಕಪಡಬೇಡ. ಅಂತೂ ಹೊರಗಿನವರ ಬಾಯಿ ಚಪಲಕ್ಕೆ ಒಂದು ಬೀಗ ಹಾಕಿದಂತಾಯಿತು. ಆದಷ್ಟು ಬೇಗ ಇನ್ನೊಂದು ಬೀಗವೂ ಬಿಳುವಂತಾಗಲಿ. ನೀನು ಮುಂದಾಲೋಚನೆಯಿಂದ ಫೋನಿನಲ್ಲಿ ವಿಷಯ ತಿಳಿಸದೆ ಇಲ್ಲಿಗೆ ಬಂದು ಖುದ್ದಾಗಿ ನನಗೆ ಹೇಳಿದ್ದು ತುಂಬ ಸಂತೋಷವಾಯಿತು. ಸಮಯ ನೋಡಿ ಮನೆಯವರಿಗೆ ಸುದ್ಧಿ ತಿಳಿಸೋಣ” ಎಂದು ಪತ್ನಿಯನ್ನು ಬಿಗಿದಪ್ಪಿಕೊಂಡು ತನ್ನ ಸಂತಸವನ್ನು ಹಂಚಿಕೊಂಡ ಸುಬ್ಬು.
ಸಮಯಕ್ಕಾಗಿ ಕಾಯಬೇಡಿ ಎಂಬಂತೆ ಪ್ರಕೃತಿ ಚಂದ್ರಾಳ ಮೇಲೆ ತನ್ನ ಪ್ರಭಾವ ಬೀರಿ ಮನೆಯವರಿಗೆಲ್ಲ ವಿಷಯ ಖಾತರಿಯಾಗಿ ಆನಂದವೋ ಆನಂದವಾಯಿತು. ಹೆಚ್ಚು ಸಂಭ್ರಮಪಟ್ಟವಳು ದೇವಿ. ಚಂದ್ರಿಕಾಳನ್ನು ಪ್ರೀತಿಯಿಂದ ಅಪ್ಪಿಕೊಂಡು ಶುಭ ಹಾರೈಸಿದಳು. ಹೇಗೆ ಖಚಿತಪಡಿಸಿಕೊಂಡೆ? ಯಾವ ಡಾಕ್ಟರ್ ಬಳಿ ಹೋಗಿದ್ದೆ? ಎಷ್ಟು ತಿಂಗಳು? ಎಂದೆಲ್ಲ ವಿಚಾರಿಸಿಕೊಂಡಳು. ಇದೇ ಸಮಯವೆಂದುಕೊಂಡು ಬಂದ ಗೌರಮ್ಮನವರು “ಪುಟ್ಟೀ ನಿಮ್ಮ ಕಡೆಯಿಂದಲೂ ಒಂದು ಶುಭ ಸಮಾಚಾರ ಬರಲಿ, ಏನು ಕೇಳಿಸಿತಾ?” ಎಂದು ಮಹೇಶನನ್ನೂ ಸೇರಿಸಿ ಹೇಳಿದರು.
ಅಲ್ಲಿದ್ದ ಮಂಗಳಮ್ಮ “ ಬಿಡಿ ಗೌರಕ್ಕಾ, ಅವರೇನು ಮುದುಕರಾಗಿಬಿಟ್ಟರಾ ಸಮಯ ಬಂದಾಗ ಆಗುತ್ತೆ. ಕೆಲವರಿಗೆ ನಿಧಾನದ ಫಲ. ಈ ಮಾತನ್ನು ನೀವೇ ಎಷ್ಟೋ ಸಾರಿ ಹೇಳಿದ್ದಿರಿ ನಿಮಗೆ ಮಕ್ಕಳಾದ ಸಂಗತಿ ತಿಳಿಸುವಾಗ.” ಎಂದು ವಾತಾವರಣವನ್ನು ತಿಳಿಯಾಗುವಂತೆ ಮಾಡಿದರು.
ವಿಷಯ ತಿಳಿದ ನೀಲಕಂಠಪ್ಪನವರ ಮನೆಯಲ್ಲಿ ಮೊದಲಿಗೆ ಪಿಚ್ಚೆನ್ನಿಸಿದರೂ ಛೆ ನಾವೇಕೆ ಸಣ್ಣಮನಸ್ಸಿನವರಂತೆ ಯೋಚಿಸುತ್ತಿದ್ದೇವೆ. ಆ ಮಗುವೂ ನಮ್ಮ ಮನೆಯದ್ದೇ ಅಲ್ಲವೇ? ಈ ಸುದ್ದಿಯಿಂದಲಾದರೂ ಅವರಿಗೂ ಮನಸ್ಸು ಬರಬಹುದು ಎಂದುಕೊಂಡು ಚಂದ್ರಿಕಾಳಿಗೆ ಶುಭ ಹಾರೈಸಿದರು.
ಗಂಗಾಧರಪ್ಪನವರಂತೂ “ನೋಡು ಗೌರಾ ನಮ್ಮ ಮಗ ಸೊಸೆಯಿಂದ ಸಿಹಿಸುದ್ಧಿ ಬರಲಿಲ್ಲವೆಂದು ಆ ಮಗುವನ್ನು ಕಡೆಗಣಿಸಬೇಡ. ಡಾಕ್ಟರ್ ಹತ್ತಿರ ತಪಾಸಣೆ ಮಾಡಿಸುತ್ತಿರು. ಅವರು ಏನು ಹೇಳುತ್ತಾರೋ ಅದನ್ನು ಪಾಲಿಸು. ಅಕೆಯ ಬಯಕೆಗಳೇನಿದ್ದರೂ ತೀರಿಸು. ರ‍್ಯಕೆಯಲ್ಲಿ ಕೊರತೆಯಾಗದಿರಲಿ” ಎಂದು ಆದೇಶಿದರು.
“ಏನು ಮಾತಾಡ್ತಿದ್ದೀರಿ, ಸುಬ್ಬಣ್ಣ ನನಗೆ ಮಗನಿಗಿಂತ ಹೆಚ್ಚೇ, ನನ್ನ ತವರಿನ ಬಳ್ಳಿ ಕೂಡ. ಅಂತಹ ಕೆಟ್ಟಬುದ್ಧಿ ನನ್ನಲ್ಲಿಲ್ಲ. ನಿಮಗೆ ತಿಳಿದಂತೆ ಮಗನಿಂದ ಇಂತಹ ಸುದ್ಧಿ ಮೊದಲು ಬಂದಿದ್ದರೆ ಎಂದನ್ನಿಸಿದ್ದು ನಿಜ. ಕಾರಣ ಗೊತ್ತಲ್ಲವಾ? ದೈವೇಚ್ಛೆ ಏನಿದೆಯೋ. ಮನೆಗೆ ಆಧಾರಸ್ಥಂಭದಂತಿರುವ ಈ ಎಳೆಯ ಜೋಡಿಗಳಿಂದ ಬಂದಿರುವ ಸುದ್ಧಿಯಿಂದ ನನ್ನಲ್ಲಿ ಹೊಸ ಚೈತನ್ಯ ಉಂಟಾಗಿದೆ. ನೀವ್ಯಾವ ಚಿಂತೆಯನ್ನು ಮಾಡದೆ ನಿಶ್ಚಿಂತೆಯಿಂದಿರಿ.” ಎಂದರು ಗೌರಮ್ಮ.
ಹೀಗೆ ಎರಡೂ ಮನೆಯವರೂ ತಮ್ಮತಮ್ಮಲ್ಲಿ ಮಾತನಾಡಿಕೊಂಡರೂ ಮಕ್ಕಳು ತಂದ ಸಿಹಿಸುದ್ಧಿಯನ್ನು ಸ್ವೀಕರಿಸಿ ಶುಭ ಕೋರಿದರು.
ಆದರೆ ಈ ಸುದ್ಧಿಯಿಂದ ಹೆಚ್ಚು ಉದ್ವಿಗ್ನನಾಗಿದ್ದು ಮಹೇಶ. ಎಲ್ಲರಂತೆ ಶುಭ ಕೋರಿದರೂ ತನ್ನವಳಿಂದ ಯಾವ ಪ್ರಶ್ನೆಗಳನ್ನು ಎದುರಿಸಬೇಕೋ ಕಾಣೆ ಎಂದು ಮನದಲ್ಲೇ ಅಂದುಕೊಂಡನು.
ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40851
(ಮುಂದುವರಿಯುವುದು)
–ಬಿ.ಆರ್.ನಾಗರತ್ನ, ಮೈಸೂರು
ಮನೆಯಲ್ಲಿ ಸಂಬಂಧಗಳನ್ನು ನಿಭಾಯಿಸುವ ಪರಿಯನ್ನು ಸೂಕ್ಷ್ಮವಾಗಿ ವಿವರಿಸಲಾಗಿದೆ. ಆಡುವ ಮಾತು ಹಾಗೂ ಕೇಳಿದ ಮಾತುಗಳನ್ನು ದೊಡ್ಡದು ಮಾಡದೆ ಅಲ್ಲಲ್ಲೇ ಬಿಟ್ಟು ಸಾಗುವುದನ್ನು ಅಭ್ಯಾಸ ಮಾಡಿಕೊಂಡಾಗ ಸಂಸಾರದಲ್ಲಿ ನೆಮ್ಮದಿ ತನ್ನಿಂದ ತಾನೇ ನೆಲೆಸುತ್ತದೆ.
ಧನ್ಯವಾದಗಳು ನಯನಮೇಡಂ
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ
ಒಟ್ಟು ಕುಟುಂಬದಲ್ಲಿ ಬಾಳಲು ಬೇಕಾದ ಹೊಂದಾಣಿಕೆ, ತಾಳ್ಮೆ, ತೂಕದ ಮಾತು ಇತ್ಯಾದಿಗಳ ಅಗತ್ಯತೆಯನ್ನು ಕಥೆಯ ಮೂಲಕ ಸೂಕ್ಷ್ಮವಾಗಿ ಓದುಗರಿಗೆ ತಿಳಿಸುವ ಪ್ರಯತ್ನ ಅಭಿನಂದನೀಯ. ಸುಂದರ ಕಥಾಹಂದರ ಕುತೂಹಲವನ್ನು ಕಾಯ್ದುಕೊಳ್ಳುತ್ತಾ ಬೆಳೆಯುತ್ತಿದೆ. ಧನ್ಯವಾದಗಳು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಕಾದಂಬರಿಯ ಓಘ ಚೆನ್ನಾಗಿದೆ.
ವಾರೆವಾ ಪದ್ಮಿನಿ ಮೇಡಂ ಕಾದಂಬರಿ ಕಡೆ ನಿಮ್ಮ ಗಮನ…ಸಂತೋಷ..ತುಂಬಾ ತುಂಬಾ ಧನ್ಯವಾದಗಳು..