ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಸದಾಶಿವ ಬ್ರಹ್ಮೇಂದ್ರರು ಶಿವರಾಮಕೃಷ್ಣ ಎಂಬ ಹೆಸರಿನಲ್ಲಿ ಸೋಮಸುಂದರ ಅವಧಾನಿ ಹಾಗು ಪಾರ್ವತಿ ಎನ್ನುವ ದಂಪತಿಗಳಿಗೆ ಹುಟ್ಟಿದರು. ಅವರ ಹುಟ್ಟು, ನಂತರದ ಆಧ್ಯಾತ್ಮದ ಹಂಬಲ, ಇವೆಲ್ಲವೂ ನಿಮಗೂ ಗೂಗಲ್ಲಿನಲ್ಲಿ ಸಿಗುತ್ತದೆ. ವಿಶಿಷ್ಟವೆಂದರೆ, ಇವರು ಅದ್ವೈತ ತತ್ವವನ್ನೆ ಅವರ ಎಲ್ಲಾ ಬರಹಗಳಲ್ಲೂ ಪ್ರತಿಪಾದಿಸಿದ್ದಾರೆ. ಸದಾಶಿವ ಬ್ರಹ್ಮೇಂದ್ರರು ಯಾವಾಗಲೂ ಅರೆಬೆತ್ತಲೆಯಾಗಿಯೋ ಪೂರ್ಣನಗ್ನರಾಗಿಯೇ ಇದ್ದು ಸಮಾಧಿಸ್ಥಿತಿಯಲ್ಲೇ ನಡೆದಾಡುತ್ತಿದ್ದರಂತೆ. ನಮ್ಮ ಗುರುಗಳು ನಮ್ಮನ್ನು ಅಲ್ಲಿಗೆ ಕರೆದುಕೊಂಡ ಹೋಗಲು ಕಾರಣ, ಸದಾಶಿವ ಬ್ರಹ್ಮೇಂದ್ರರು ಸಂಗೀತ ವಿದ್ವಾಂಸರಾಗಿದ್ದರು! ಇತ್ತೀಚಿಗೆ ರಾಮಲಲ್ಲಾನ ಪ್ರತಿಷ್ಠಾಪನೆ ಆಗುವಾಗ ಎಲ್ಲಾ ಮಾಧ್ಯಮಗಳಲ್ಲೂ ಪಿಬರೇ ರಾಮ ರಸಂ ಎನ್ನುವ ಅತ್ಯಂತ ಮನಮೋಹಕವೂ, ಭಾವುಕವೂ ಆದ ಹಾಡು ಹರಿದಾಡುತ್ತಿತ್ತು. ಇದು ಅವರದ್ದೇ ರಚನೆ. ಅಂತೆಯೇ ತೆಲುಗಿನ ಖ್ಯಾತ ಸಿನಿಮಾ ಶಂಕರಾಭರಣಂ ಅಲ್ಲಿ ಬರುವ ಇಂಪಾದ ಮಾನಸ ಸಂಚರರೇ ಎನ್ನುವ ಕೃತಿಯ ಕರ್ತೃವೂ ಇವರೇ. ಇದೇ ರೀತಿಯಲ್ಲಿ ಅದ್ಭುತ ತತ್ವಗಳನ್ನು ತಿಳಿಹೇಳುವ ಕೃತಿಗಳನ್ನು ಇವರು ರಚಿಸಿದ್ದಾರೆ. ಆತ್ಮ ವಿದ್ಯಾ ವಿಲಾಸ ಮುಂತಾಗಿ ಬಹಳಷ್ಟು ಮಹತ್ವಪೂರ್ಣ ಗ್ರಂಥಗಳನ್ನು ರಚಿಸಿದ್ದಾರೆ. ಇವರ ಆಜ್ಞೆಯ ಮೇರೆಗೇ ತಂಜಾವೂರಿನಲ್ಲಿ ಸರಸ್ವತಿ ಮಹಲ್‌ ಗ್ರಂಥಾಲಯವನ್ನು ಕಟ್ಟಲಾಯಿತು ಎಂದೂ ಹೇಳುತ್ತಾರೆ. ಆ ಗ್ರಂಥಾಲಯವು ಇಂದಿಗೂ ತೆರೆದಿದೆ. ನೆರೂರಿನ ಅವರ ಸಮಾಧಿ ಸ್ಥಳದಲ್ಲಿ ಕಾಶಿವಿಶ್ವನಾಥನ ಹಾಗೆಯೇ ವಿಶಾಲಾಕ್ಷಿಯ ದೇವಾಲಯಗಳಿವೆ. ಅವರ ಸಮಾಧಿ ಸ್ಥಳದಲ್ಲಿ ಐನೂರು ವರ್ಷಗಳ ಹಳೆಯ ಬಿಲ್ವವೃಕ್ಷವಿದೆ. ಅಲ್ಲಿಯ ವಾತಾವರಣವೇ ಅದೆಷ್ಟು ಸಾತ್ವಿಕ! ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿಗಳು ನೆರೂರಿಗೆ ಬಂದಿದ್ದಾಗ ಅದೇ ಸ್ಥಳದಲ್ಲಿ ಕುಳಿತು ಸದಾಶಿವೇಂದ್ರ ಸ್ತವ ಹಾಗು ಸದಾಶಿವೇಂದ್ರ ಪಂಚರತ್ನ ಎಂಬ ಎರಡು ಸ್ತೋತ್ರಗಳನ್ನು ರಚಿಸಿದರು.

ನಾವೆಲ್ಲರೂ ಅಲ್ಲಿ ನಮಸ್ಕರಿಸಿ ಮಂಗಳಾರತಿಯನ್ನು ಕಣ್ಣಿಗೊತ್ತಿಕೊಂಡ ಮೇಲೆ ಕೈಗೆ ವಿಭೂತಿ ಕೊಟ್ಟರು. ಆಗ ಆರಂಭವಾಯಿತು ನಮ್ಮ ವಿಭೂತಿ ಯಾತ್ರೆ (ಕಾರಣ ಮುಂದೆ ವಿವರಿಸುತ್ತೇನೆ).

ನಂತರ ಅಲ್ಲೇ ಆಸೀನರಾಗಿ ಗುರುಗಳೊಂದಿಗೆ ಶ್ರೀನಾಥಾದಿ ಗುರುಗುಹೋ, ಶ್ರೀವಿಶ್ವನಾಥಂ ಭಜೇಹಂ ಮುಂತಾದ ಕೃತಿಗಳಿಗೆ ದನಿಗೂಡಿಸಿದೆವು. ತಾಯಿಗೆ ಅರ್ಪಣೆಯಾಗಿ ಸಾವೇರಿ ರಾಗದ ಶ್ರೀ ಕಾಮಕೋಟಿ ಪೀಠಸ್ಥಿತೆ ಕರುಣಾ ಕಟಾಕ್ಷಿ ಎಂಬ ಕೃತಿಯನ್ನು ಹಾಡಿದೆವು. ನಂತರ ಗುರುಗಳೊಬ್ಬರೇ ಸದಾಶಿವ ಬ್ರಹ್ಮೇಂದ್ರರ ಸರ್ವಂ ಬ್ರಹ್ಮಮಯಂ ಎಂಬ ಕೃತಿಯನ್ನು ಹಾಡಿದಾಗ ಎಲ್ಲರೂ ಸ್ತಬ್ಧರಾಗಿ ಕೇಳುತ್ತಿದ್ದೆವು. ಅದು ಗುರುಗಳ ದನಿಯ ಶಕ್ತಿ ಒಂದು, ಇನ್ನೊಂದು, ಸದಾಶಿವ ಬ್ರಹ್ಮೇಂದ್ರರು ಎಷ್ಟು ಸುಲಲಿತವಾಗಿ ಬ್ರಹ್ಮನನ್ನು ವಿವರಿಸಿಬಿಟ್ಟಿದ್ದಾರೆ, ಅದರಲ್ಲೂ ನಂತರ ಗುರುಗಳು ಹೇಳಿದಂತೆ ಕಿಮ್‌ ಅಭಜನೀಯಂ ಎನ್ನುವುದನ್ನು ಗುರುಗಳು ಅದೊಂದೇ ಕೃತಿಯಲ್ಲಿ ಕೇಳಿದ್ದಂತೆ. ಅದರಲ್ಲೂ ಕೊನೆಯಲ್ಲಿ ಬರುವ ಸರ್ವತ್ರ ಸದಾ ಹಂಸ ಧ್ಯಾನಂಎನ್ನುವ ವಾಕ್ಯವು ಬ್ರಹ್ಮ ತತ್ವದ ಏಕವಾಕ್ಯವಿವರಣೆ ಆಗಿಬಿಟ್ಟಿದೆ. ನಾವು ಉಸಿರಾಡುವಾಗಲೂ ಗಮನಿಸಿದರೆ ಸಿಗುವ ಶಬ್ಧ ಸೋ ಹಂ! ಹಾಗೆಯೇ ಸಂನ್ಯಾಸಿಗಳಿಗೂ ದೀಕ್ಷೆ ಕೊಡುವ ಹಂಸಗಾಯತ್ರಿ ಮಂತ್ರವೂ ಅದೆ ಎಂದು ಗುರುಗಳು ವಿವರಿಸಿದರು. ಗುರುಪಾದುಕಾ ಸ್ತೋತ್ರವನ್ನು ಕೊನೆಯದಾಗಿ ಹಾಡಿ ನೆರೂರಿನಲ್ಲಿಯೇ ಒಂದು ದೊಡ್ಡ ಹಳೇಯ ಕಾಲದ ಮನೆಗೆ ಭೋಜನಕ್ಕೆ ಹೋದೆವು. ಆ ಮನೆಯೋ ಅಪ್ಪಟ ಹಳ್ಳಿಯ ಅಗ್ರಹಾರದ ಬ್ರಾಹ್ಮಣರ ಮನೆ. ಮನೆಯ ಹೆಸರು ರಘುನಾಥನ್ ಇಲ್ಲಮ್‌ ಎಂದು. ಎರಡು ರಸ್ತೆಗಳಷ್ಟು ಉದ್ದ ಆ ಮನೆಯದ್ದು! ಅಲ್ಲಿ ಅಡುಗೆ ಮಾಡಿ ಬಡಿಸಿದವರು ಭಾನುಮತಿ ಎಂಬಾಕೆ. ಉಪ್ಪಿಟ್ಟು ಇಡ್ಲಿಗಳೊಂದಿಗೆ ಬಡಿಸಿದ ಚಟ್ನಿ ಉಪ್ಪಿನಕಾಯಿಗಳಂತೂ ಜಿಹ್ವೆಗೂ ಉದರಕ್ಕೂ ಬಹಳ ಆಹ್ಲಾದಕಾರಿಯಾಗಿತ್ತು. ಜೊತೆಗೆ ಒಂದಿಷ್ಟು ಮೋರ್‌ ಅಥವಾ ತೈರ್‌; ಮಜ್ಜಿಗೆ ಎಂದರ್ಥ. ಈ ಪದವನ್ನು ನಾವು ಮುಂದಿನ ಐದು ದಿನಗಳು ಹೇಳುತ್ತಲೇ ಇರಬೇಕಾಯಿತು.

ಮರುದಿನ ಮುಂಜಾನೆದ್ದು ಶ್ರೀರಂಗಂ ದೇವಸ್ಥಾನದ ಕಡೆಗೆ ಹೊರಟೆವು. ಶ್ರೀರಂಗಂ ದೇವಸ್ಥಾನದ ವೈಭವ ಈಗಲೇ ಅಷ್ಟು ಜೋರಾಗಿದೆ; ಹಾಗಿದ್ದರೆ ರಾಜರ ಕಾಲದಲ್ಲಿ ಹೇಗಿದ್ದಿರಬಹುದು? ನೆರೂರಿನಿಂದ ಸಾಗಿ ಶ್ರೀರಂಗಂ ನಗರದ ಹೃದಯಭಾಗವನ್ನು ತಲುಪಿದಾಗ ಗೋಚರಿಸಿದ್ದು ಬೃಹತ್‌ ಗೋಪುರ! ನಿಜವಾಗಲೂ ಅದನ್ನು ಒಮ್ಮೆಗೆ ನೋಡಲು ಸಾಧ್ಯವೇ ಇಲ್ಲ. ಕನಿಷ್ಠ ಐದಾರು ಬಾರಿ ಕೆಳಗಿನಿಂದ ಮೇಲಕ್ಕೆ ಕಣ್ಣು ಹಾಯಿಸಿದರೂ ಅದರಲ್ಲಿರುವ ಸೂಕ್ಷ್ಮ ಕೆತ್ತನೆಗಳನ್ನು ನಾವು ಸುಲಭವಾಗಿ ಗ್ರಹಿಸಲಾರೆವು. ನೋಡಿ ನೋಡಿ ಕಣ್ತುಂಬಿಕೊಂಡು ಆ ನೆನಪನ್ನೇ ಮತ್ತೇ ಮತ್ತೇ ಜೀವಿಸಬೇಕಿನ್ನಿಸುವಂತಹ ನೋಟ ಅದು. ಆ ಗೋಪುರದ ಹತ್ತಿರವೇ ಇದ್ದ ಅನ್ನಲಕ್ಷ್ಮಿ ಎನ್ನುವ ಒಂದು ಹೋಟೆಲಿನಲ್ಲಿ ತಿಂಡಿ ಮುಗಿಸಿ, ದರ್ಶನಕ್ಕೆಂದು ಆ ಗೋಪುರದ್ವಾರದ ಮೂಲಕ ಒಳಹೊಕ್ಕಿದೆವು. ಆಗ ತಿಳಿದ ವಿಷಯವೇನೆಂದರೆ ಪ್ರತಿಯೊಂದು ದಿಕ್ಕಿಗೂ ಇಂತಹುದೇ ರಾಜ ಗೋಪುರ! ನಿಜವಾಗಲೂ ಶ್ರೀರಂಗಂ ನಗರದೊಳಗೆ ದೇವಸ್ಥಾನದ್ದೇ ಒಂದು ನಗರ. ಗುರುಗಳ ಮಾತಿನಲ್ಲಿ ಹೇಳುವುದಾದರೆ, “ದೇವಸ್ಥಾನದ ಒಳಗೇ ಒಂದು ಮೆಟ್ರೋ ವ್ಯವಸ್ಥೆ ಮಾಡಿಬಿಡಬಹುದು ಕಣಯ್ಯ!”.


ಗುರುಗಳಿಗೆ ಗೊತ್ತಿರುವ ಓರ್ವ ಹಿರಿಯರು ನಮ್ಮನ್ನೆಲ್ಲಾ ಕರೆದುಕೊಂಡು ಯಾವ ಯಾವ ದೇವಸ್ಥಾನಕ್ಕೆ ಹೋಗಬೇಕೆಂದು ಹೇಳುತ್ತಾ ನಮ್ಮೊಂದಿಗೆ ಬಂದರು. ಮೊದಲು ಶ್ರೀರಂಗನ ವಾಹನವಾದ ಗರುಡನ ದರ್ಶನ. ಆ ಗರುಡನೇನು ಸಾಮಾನ್ಯನಲ್ಲವೇ ಅಲ್ಲ! ಅಷ್ಟು ಬೃಹತ್‌ ಗರುಡನನ್ನು ನೀವು ಎಲ್ಲಿಯೂ ನೋಡಿರಲು ಖಂಡಿತ ಸಾಧ್ಯವಿಲ್ಲ! ಎಷ್ಟು ಸುಂದರನು, ಬೃಹತ್‌ ಮೂರ್ತಿ ಅವನದು! ಸದಾ ಆ ಮಹಾವಿಷ್ಣುವಿನ ಕಡೆಗೇ ನೋಡುತ್ತಾ ಭಕ್ತಿಯಿಂದ ವಂದಿಸುತ್ತಿರುತ್ತಾನೆ. ಗುರುಗಳು ಹೇಳಿದಂತೆ, “ಗರುಡನಿಗೆ ಯಾರು ನಮಸ್ಕರಿಸುತ್ತಾರೋ, ಯಾರು ಗರುಡನ ಮುಂದೆ ರಂಗನನ್ನು ಸ್ತುತಿಸುತ್ತಾರೋ ಅವೆಲ್ಲವೂ ವಿಷ್ಣುವನ್ನೇ ತಲುಪುತ್ತದೆ. ಯಾಕೆ ಹೇಳಿ? ಶ್ರೀರಂಗ ಸದಾ ಗರುಡನನ್ನೇ ನೋಡುತ್ತಿರುತ್ತಾನೆ. ಗರುಡನ ಮುಂದೆ ನಾವು ಏನೇ ಮಾಡಿದರೂ ಅದು ಅವನಿಗೆ ಕಾಣುತ್ತಿರುತ್ತದೆ!”. ಎಂತಹ ಸುಂದರ ಪರಿಕಲ್ಪನೆ ನಮ್ಮ ಸನಾತನ ಧರ್ಮದ್ದು!

ಅವನಿಗೆ ನಮಸ್ಕರಿಸಿ ಶ್ರೀರಂಗನಾಥನನ್ನು ದರ್ಶಿಸುವ ಸಾಲಲ್ಲಿ ನಿಂತೆವು. ನಾರಾಯಣಾಯ ವಿದ್ಮಹೇ ಎಂದು ಮಹಾವಿಷ್ಣು ಗಾಯತ್ರೀ ಮಂತ್ರವನ್ನು ಹೇಳಿಕೊಳ್ಳುತ್ತಾ ಇರಲು, ಹರ್ಷ ಅಣ್ಣ ಹಾಗು ಕೌಸ್ತುಭ ಅಣ್ಣ ನಾರಾಯಣ ಸೂಕ್ತವನ್ನು ಪಠಿಸಲಾರಂಭಿಸಿದರು. ಆ ವಾತಾವರಣಕ್ಕೆ, ದೀಪಗಳ ಶಾಖಕ್ಕೆ, ಜನಗಳ ಮೌನಕ್ಕೆ, ಕ್ಷೇತ್ರದ ಶಕ್ತಿಗೆ ಹೊಂದಿಕೊಂಡಂತೆ ಇವರ ಪಠಣೆಯು ತುಂಬಾ ದಿವ್ಯವಾಗಿ ಕೇಳಿಸುತ್ತಿತ್ತು. ನಾರಾಯಣ ಪರೋ ಜ್ಯೋತಿರಾತ್ಮಾ ನಾರಾಯಣಃ ಪರಃ ಎನ್ನುವುದನ್ನು ಹೇಳುತ್ತಿರುವಾಗಲೆ, ಅಲ್ಲಿನ ಅರ್ಚಕರೊಬ್ಬರು ಬಂದು ತಮಿಳಿನಲ್ಲಿ “ಇದು ಮೂಲಸ್ಥಾನ. ಇಲ್ಲಿ ಹೇಳಬೇಡಿ, ಸುಮ್ಮನಿರಿ” ಎಂದು ಹೇಳಿ ಹೊರಟುಹೋದರು. ಅವರಿಬ್ಬರೂ ಗುರುಗಳ ಕಡೆಗೆ ನೋಡಿದರು. ಗುರುಗಳು ಮೆಲ್ಲಗೆ ನಕ್ಕು, “ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ..” ಹೇಳುತ್ತಾ ಮುನ್ನಡೆದರು. ಗರ್ಭಗುಡಿಯ ಬಳಿ ಬಂದಾಗ ನಮ್ಮೆಲ್ಲರಿಗೂ ಮೊದಲು ಪಾದ, ನಂತರ ಹಸ್ತ, ಕೊನೆಯಲ್ಲಿ ರಂಗನ ಮುಖವನ್ನು ನೋಡಬೇಕು ಎಂದು ಹೇಳಿದರು. ಅಂತೆಯೇ ನಾನು ಸಾಧ್ಯವಾಗುವಷ್ಟು ರಂಗನಾಥನ ಮುಖವನ್ನೆ ಮೊದಲು ನೋಡದಿರಲು ಪ್ರಯತ್ನಿಸಿದೆ. ಅಲ್ಲಿಗೂ ಅವನ ಕಣ್ಣುಗಳ ಹೊಳಪು ಕಣ್ಣಿಗೆ ಬಿದ್ದೇ ಬಿಟ್ಟವು. ರಂಗನಾಥನ ಆ ಶೇಷಶಯನ ವಿಗ್ರಹದ ಮುಂದೆಯೇ ಉತ್ಸವ ಮೂರ್ತಿಗಳನ್ನೂ ಇಟ್ಟು ಪೂಜಿಸಿದ್ದರು. ಆರತಿ ತೆಗೆದುಕೊಂಡು ಆ ದಿವ್ಯ ಮೂರ್ತಿಯನ್ನು ನೋಡಿದಾಗ ಅಲ್ಲಿಯ ಶೆಖೆ, ದೀಪಗಳ ಶಾಖ, ಜನ, ಎಲ್ಲವೂ ಮರೆಯಿತು, ಸುಂದರ ರಂಗನೇ ಕಾಣುತ್ತಿದ್ದ. ಗರ್ಭಗೃಹವು ವೃತ್ತಾಕಾರದಲ್ಲಿದ್ದು ಸಹಸ್ರದಳ ಕಮಲದ ಮೇಲಿರುವಂತೆ ಕುಲೋತ್ತಂಗ ರಾಜನು ನಿರ್ಮಿಸಿದ್ದಾನೆ. ಮುಂದೆ ಹೋದಂತೆ ಪ್ರಾಕಾರಕ್ಕೇ ಕಾಣುವಂತೆ ಮಲಗಿರುವ ರಂಗನಾಥನ ಪಾದದ ಗುರುತುಗಳನ್ನು ಬೆಳ್ಳಿಯಲ್ಲಿ ಉಬ್ಬುಚಿತ್ರದಂತೆ ಮಾಡಿದ್ದಾರೆ. ಕೇವಲ ಅವನ ಪಾದದರ್ಶನದಿಂದ ಅವನ ಸನ್ನಿಧಿಯೇ ಪ್ರಾಪ್ತವಾಗುತ್ತದೆಂದು ಹೇಳುತ್ತಾರೆ. ವಿಶಿಷ್ಟಾದ್ವೈತಿಗಳು ನಂಬುವಂತೆ ಆಂಡಾಳ್‌ ಅಮ್ಮನ ಕೃಪೆಗೆ ನಾವು ಪಾತ್ರರಾದರೆ ಅವಳ ಮೂಲಕವಾಗಿ ವಿಷ್ಣು ಸನ್ನಿಧಿಯನ್ನು ಹೊಂದಬಹುದು.

ನಾವು ನಂತರ ಮತ್ತೇ ಗರುಡ ಮಂಟಪಕ್ಕೇ ಬಂದು ಅಲ್ಲಿಯ ಒಂದು ಕಂಬಕ್ಕೆ ಒರಗಿ ಕುಳಿತು, ಒಂದಿಷ್ಟು ದಾಸರ ಪದಗಳನ್ನು ಹಾಡಿದೆವು. ಇಕೋ ನೋಡೆ ರಂಗನಾಥನ ಪುಟ್ಟ ಪಾದವ, ಬರಬೇಕೋ ರಂಗ ಬರಬೇಕೋ ಈ ರೀತಿಯಾಗಿ ಹರ್ಷ ಅಣ್ಣ ಹಾಡಿದ ನಂತರ ಗುರುಗಳು ಬರಬೇಕೋ ರಂಗ ಬರಬೇಕೋ ಹಾಡಿನ ಸೂಚ್ಯಾರ್ಥವನ್ನು ಹೇಳತೊಡಗಿದರು. ಕಂಠಕ್ಕೆ ಪ್ರಾಣ ಬಂದಾಗ, ನೆಂಟರಿಷ್ಟರು ಬಂದಳುವಾಗ, ಗಂಟು ಹುಬ್ಬಿನ ಕಾಲಭಟರು ಕವಿದೆನ್ನ ಗಂಟ್ಲೌಕುವಾಗ ವೈಕುಂಠ ನಾರಾಯಣ ಎನ್ನುವ ಸಾಲಿಗೆ, ಇನ್ನೇನು ಸಾವು ಬಂದಿದೆ ಎಂದಾಗ ಹೃದಯದಿಂದ ಮೆದುಳಿಗೆ ಹೋಗುವ ರಕ್ತದ ನಾಡಿಗಳಲ್ಲಿ ರಕ್ತದೊತ್ತಡ ಹೆಚ್ಚಾಗಿ ಗಂಟಲಿನಲ್ಲಿ ಅವು ಉಬ್ಬಿಕೊಳ್ಳುತ್ತದೆ; ಕೆಲುವೊಮ್ಮೆ ಒಳಗೇ ಅವು ಸ್ಫೋಟಗೊಂಡು ಸಾವಿಗೆ ಕಾರಣವಾಗುತ್ತದೆ. ಆ ಸಮಯಕ್ಕೆ ರಂಗ ಬಂದು ವೈಕುಂಠಕ್ಕೆ ಕರೆದೊಯ್ಯಬೇಕೆಂಬುದನ್ನು ಹೇಳುತ್ತದೆ ಎಂದು ವ್ಯಾಖ್ಯಾನಿಸಿದರು. ದಾಸರಿಗೆ ಕೇವಲ ಸಂಗೀತವಲ್ಲದೆ ದೇಹದ ಕುರಿತಾಗಿ ಎಷ್ಟು ಜ್ಞಾನವಿದೆ ಎಂದು ಇಲ್ಲಿ ತಿಳಿಯುತ್ತದೆ.

ನಂತರ ಭಗವತಿಯ ಸನ್ನಿಧಿಗೆ ಕರೆದೊಯ್ದರು. ಇಲ್ಲಿನ ವಿಶೇಷವೆಂದರೆ ಗರ್ಭಗುಡಿಯೊಳಗೆ ಒಂದರ ಮುಂದೆ ಒಂದರಂತೆ ಮೂರು ಮೂರ್ತಿಗಳಿವೆ. ಮೊದಲು ರಂಗನಾಯಕಿ, ನಂತರ ಶ್ರೀದೇವಿ, ಕೊನೆಯಲ್ಲಿ ಭೂದೇವಿ. ರಂಗನ ನಾಯಕಿ ಅವಳಲ್ಲವೇ? ತಮಿಳುನಾಡಿನ ಬಹುತೇಕ ದೇವಸ್ಥಾನಗಳಲ್ಲಿ ಮೂಲ ಸನ್ನಿಧಿ ಯಾವುದಿರುವುದೋ, ಆ ದೇವನ ಪತ್ನಿಯ ಹೆಸರು ಆಯಾ ಮೂಲಸನ್ನಿಧಿಯ ದೇವರ ಹೆಸರೊಂದಿಗೆ ನಾಯಕಿ ಪದವನ್ನು ಸೇರಿಸಿಕೊಳ್ಳುವುದಾಗಿರುತ್ತದೆ. ಉದಾಹರಣೆಗೆ, ಶ್ರೀರಂಗಂನಲ್ಲೆ ರಂಗನಾಥ, ಹಾಗೆ ರಂಗನಾಯಕಿ; ತಂಜಾವೂರಿನ ಬೃಹದೀಶ್ವರದಲ್ಲಿ ಬೃಹದೀಶ್ವರ ಹಾಗು ಬೃಹನ್ನಾಯಕಿ, ಇತ್ಯಾದಿ.

ಇನ್ನೊಂದು ವಿಶೇಷವೆಂದರೆ, ನಾವು ಕಂಡ ಎಲ್ಲಾ ಕ್ಷೇತ್ರಗಳಲ್ಲೂ ಗರ್ಭಗುಡಿಯಲ್ಲಿ ವಿದ್ಯುತ್‌ ದೀಪಗಳನ್ನು ಬಳಸುವುದೇ ಇಲ್ಲ. ದ್ವಾರಕ್ಕೆ ಹೊಂದಿಕೊಂಡಂತೆ ಹಿತ್ತಾಳೆ ದೀಪಗಳು, ಹಾಗೆಯೇ ಮೂರ್ತಿಯ ಬಳಿಯಲ್ಲಿ ಹಿತ್ತಾಳೆ ದೀಪ. ಆ ಸುಂದರ ಬೆಳಕಂತೂ ಮೂಲ ಮೂರ್ತಿಯ ಛವಿಯನ್ನು ಇನ್ನಷ್ಟು ಹೆಚ್ಚಿಸುವುದಲ್ಲದೆ ಇನ್ನೂ ಹೆಚ್ಚು ದಿವ್ಯಾನುಭವವನ್ನು ಕೊಡುತ್ತದೆ. ಅದರಿಂದ ಪಾಪ ಅರ್ಚಕರಿಗಷ್ಟೇ ಶಾಖ, ಶೆಖೆ, ಮೊದಲೇ ತಮಿಳುನಾಡಿನ ಬಿಸಿ! ಅಲ್ಲಿರುವಷ್ಟೂ ಹೊತ್ತು ಅವರು ಬೆವರುತ್ತಲೇ ಇರುತ್ತಾರೆ.

ಅದು ಹಾಗಿರಲಿ. ರಂಗನಾಯಕಿಯ ಸನ್ನಿಧಿಯ ವಿಷಯಕ್ಕೆ ಬರೋಣ. ತಾಯಿಯ ಬಲಗಡೆಗೆ ನಿಂತರಷ್ಟೇ ಒಳಗಿರುವ ರಂಗನಾಯಕಿಯು ಕಾಣುತ್ತಾಳೆ. ಎಡಗಡೆಯಿಂದ ಶ್ರೀದೇವಿಯ ಮೂರ್ತಿಯು ಹಾಗೆ ಭೂದೇವಿ-ಇವರಿಬ್ಬರೇ ಕಾಣುತ್ತಾರೆ. ವಿಶೇಷವಾಗಿ ಕಮಲಗಳಿಂದ ಅಲಂಕಾರ ಮಾಡಲ್ಪಡುವ ಇವರುಗಳ ತ್ರಯೀಲಕ್ಷ್ಮಿಯರು, ಅತ್ಯಂತ ಸುಂದರವಾಗಿ ಕಾಣುತ್ತಾರೆ. (ತ್ರಯೀಲಕ್ಷ್ಮಿ ಎನ್ನುವುದು ಗುರುಗಳ ಮನೆಯ ಹೆಸರೂ ಹೌದು).

ಅಲ್ಲಿಂದ ಹೊರಟು ಮತ್ತೆ ಸುತ್ತಾಡಿಕೊಂಡು ದೇವಾಲಯವನ್ನೆಲ್ಲಾ ನೋಡುತ್ತಾ ಚೋದ್ಯಗೊಳ್ಳುತ್ತಾ ಮುನ್ನಡೆದೆವು. ಶ್ರೀರಂಗಂ ದೇವಾಲಯವು ಎಷ್ಟೊಂದು ಕಂಬಗಳನ್ನು ಹೊಂದಿದೆ. ಪ್ರತಿಯೊಂದು ಕಂಬದ ಮೇಲೂ ಯಾವುದೋ ಒಂದು ದೇವರ ಕೆತ್ತನೆ; ಇಲ್ಲವೇ ಏನನ್ನೋ ಸೂಚಿಸುವಂತಹ ಚಿಹ್ನೆ! ಕೆಲವು ಕಂಬಗಳಿಗಂತೂ ಡೊಳ್ಳೊಟ್ಟೆಯುಳ್ಳ, ಪೂಜೆ ಮಾಡುವ ಐಯಂಗಾರರನ್ನೇ ಕೆತ್ತಿದ್ದಾರೆ! ಅದು ಯಾವುದೇ ರೀತಿಯಲ್ಲಿ ಅವರಿಗೆ ಅವಮಾನ ಆಗುವಂತೆ ಅಲ್ಲ; ಆಗಿನ ಸಮಾಜದಲ್ಲಿ ಅವರು ಹೇಗಿದ್ದರು, ಪೂಜಿಸುತ್ತಿದ್ದವರು ಯಾರು, ಇವೆಲ್ಲವನ್ನೂ ತೋರಿಸುವ ಒಂದು ಪುಸ್ತಕದಂತೆ! ಇಷ್ಟೊಂದು ಕಂಬಗಳಿಗೆ ಕಲ್ಲು ಒದಗಿದ್ದು ಹೇಗೆ? ಎಷ್ಟೆಲ್ಲಾ ವರ್ಷಗಳು ಸ್ಥಪತಿಗಳು ಕೆಲಸ ಮಾಡಿರಬೇಡ? ಇವೆಲ್ಲವನ್ನೂ ಯೋಚಿಸುತ್ತಾ ಗುರುಗಳ ಬಳಿ ಹಂಚಿಕೊಂಡಾಗ ಅವರು ತಮಾಷೆಯಾಗಿ, “ನೋಡಯ್ಯಾ ಇರೋ ಬರೋ ಎಲ್ಲಾ ಬೆಟ್ಟಗಳನ್ನೂ ಕಡಿದು ಇವರು ದೇವಾಲಯಗಳಿಗೆ ಉಪಯೋಗಿಸಿಕೊಂಡುಬಿಟ್ಟಿದ್ದಾರೆ; ಅದಿಕ್ಕೆಯೋ ಏನೋ ತಮಿಳುನಾಡಿನ ಎತ್ತರವೇ ಕಡಿಮೆಯಾಗಿ ಇಷ್ಟು ಶೆಖೆ!” ಎಂದರು. ಶ್ರೀರಂಗಂನಲ್ಲಿ ದೇವವೈದ್ಯ ಧನ್ವಂತರಿಗೆಂದೇ ಒಂದು ನಿರ್ದಿಷ್ಟ ಜಾಗವನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿಯ ವಿಶಾಲ ಪ್ರಾಂಗಣಗಳಲ್ಲಿ, ಕಂಬಗಳಲ್ಲಿ ಅಲ್ಲಲ್ಲಿ ಮೂಡಿಸಿದ್ದಾರೆ. ಹರಿದಾಸರು ಅವನನ್ನೂ ಸ್ತುತಿಸಿ ದೇವರನಾಮವನ್ನು ರಚಿಸಿದ್ದಾರೆ. ಮಧುವಂತಿ ರಾಗದಲ್ಲಿ ಅದನ್ನು ಗುರುಗಳೇ ಹೇಳಿಕೊಟ್ಟಿದ್ದಾರೆ; ಆವ ರೋಗವೊ ಎನಗೆ ದೇವ ಧನ್ವಂತರಿ!? ಸಾವಧಾನದಿ ಕೈಯ ಪಿಡಿದು ನೀ ನೋಡಯ್ಯ! ಎಂದು ದಾಸರು ಅವನಲ್ಲಿ ಕೇಳುತ್ತಾರೆ. ಹರಿ ಮೂರ್ತಿ ನನಗೆ ಕಾಣುತ್ತಲೇ ಇಲ್ಲ, ಹರಿ ಕೀರ್ತನೆಯೂ ಕೇಳಿಸುತ್ತಲೇ ಇಲ್ಲ; ಹರಿ ಮಂತ್ರ, ಸ್ತೋತ್ರ ಬಾರದು ಎನ್ನ ನಾಲಿಗೆಗೆ; ಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ! ಎನ್ನುತ್ತಾ ದೈಹಿಕವಲ್ಲದೇ ಮಾನಸಿಕವಾಗಿ ಮೂಡದ ಹರಿಭಕ್ತಿಯನ್ನು ಮೂಡಿಸಲು ನೀನೆ ವೈದ್ಯ; ಇದೊಂದನ್ನು ನೀನು ಮಾಡಿದರೆ ನಾನು ನಿನ್ನ ಉಪಕಾರವನ್ನು ಮರೆಯುವುದಿಲ್ಲ ಎಂದು ಗೋಪಾಲದಾಸರು ಹೇಳಿದ್ದಾರೆ. ಇದನ್ನು ಧನ್ವಂತರಿಯ ಮುಂದೆ ಐದು ನಿಮಿಷದಲ್ಲಿ ನಿಂತು ಹಾಡುವ ಅವಕಾಶವಾಯಿತು. ಅದೇ ರಾಗವನ್ನು ಗುನುಗುತ್ತಾ ನರಸಿಂಹ ಸ್ವಾಮಿಯ ದೇವಾಲಯಕ್ಕೆ ಹೋದೆವು. ಈ ನರಸಿಂಹನಿಗೆ ಪಾನಕ ನರಸಿಂಹ ಎಂದು ಹೆಸರು; ತೀರ್ಥವೂ ಪಾನಕವೇ! ಅಲ್ಲೇ ನರಸಿಂಹ ದೇವಾಲಯದ ಪ್ರಾಂಗಣದಲ್ಲಿ ಕುಳಿತು ಭಗವತಿಗೆ ಅರ್ಪಿಸುವಂತೆ ಕೆಲವು ಕೃತಿಗಳನ್ನು ಹಾಡಿದೆವು.

ನಂತರ ನಡೆಯುತ್ತಾ ಇರಲು ಗುರುಗಳು ಪ್ರಹ್ಲಾದನಿಗೆ ಸಂಬಂಧಿಸಿದಂತೆ ಒಂದು ಸ್ವಾರಸ್ಯಕರವಾದ ವಿಷಯವನ್ನು ಹರ್ಷ ಅಣ್ಣನ ಕೋರಿಕೆಯ ಮೇರೆಗೆ ತಿಳಿಸಿದರು. ನರಸಿಂಹಾವತಾರ ತಾಳಿದ ವಿಷ್ಣುವನ್ನು ಶಾಂತನನ್ನಾಗಿಸಲು ಯಾವ ದೇವತೆಯ ಕೈಲೂ ಆಗದಿದ್ದಾಗ ಬ್ರಹ್ಮನು ಲಕ್ಷ್ಮಿಯ ಬಳಿಗೆ ಓಢಿದನಂತೆ. ಲಕ್ಷ್ಮಿಯೂ ಹೆದರಿಕೊಂಡು “ಈ ರೂಪವನ್ನು ನಾನು ಕೇಳಿಲ್ಲ ನೋಡಿಲ್ಲ, ಗೊತ್ತೇ ಇಲ್ಲ” ಎನ್ನುತ್ತಾ ಗೆಜ್ಜೆಯ ಸಪ್ಪಳವೂ ಆಗದಂತೆ ಹೋಗಿ ಬಚ್ಚಿಟ್ಟುಕೊಂಡಳಂತೆ. ಆಗ ಬ್ರಹ್ಮನಿಗೆ ಬೇರೆ ದಾರಿಯಿಲ್ಲದೆ ಪ್ರಹ್ಲಾದನ ಬಳಿಗೇ ಹೋಗಿ, “ನಿಮ್ಮಪ್ಪನನ್ನು ಕೊಲ್ಲಲು ನಮ್ಮಪ್ಪ ಕುಪಿತನಾಗಿಬಿಟ್ಟಿದ್ದಾನೆ, ನೀನೇ ಅವನನ್ನು ಸಂತೈಸಬೇಕು” ಎಂದು ಹೇಳಲು ಪ್ರಹ್ಲಾದನು ಹೋಗಿ ನರಸಿಂಹನ ಪಾದವನ್ನು ಮುಟ್ಟಿ ನಮಸ್ಕರಿಸಿಬಿಟ್ಟನಂತೆ. ಶ್ರೀಪಾದರಾಜರು ಅದನ್ನು ಪ್ರಹ್ಲಾದನು ಆಹ್ಲಾದವನ್ನುಂಟುಮಾಡಿದ ಎಂದು ಗುರುಗಳು ವಿವರಿಸಿದರು. ಗುರುಗಳ ಡಿ.ಲಿಟ್‌ ವಿಷಯವೇ ಶ್ರೀಪಾದರಾಜರು. ಶ್ರೀಪಾದರಾಜರು ಸನ್ಯಾಸ ಸ್ವೀಕರಿಸಿದ ಬಳಿಕ ಅದರ ಶಿಕ್ಷಣವನ್ನು ಪಡೆಯಲು ಶ್ರೀರಂಗಂಗೇ ಬಂದಿದ್ದರಂತೆ. ಅಲ್ಲಿ ಎರಡು ಮೂರು ವರ್ಷಗಳ ಕಾಲ ಇದ್ದು, ಎಷ್ಟೋ ದೇವರನಾಮಗಳನ್ನು ರಂಗನ ಕುರಿತಾಗಿಯೇ ರಚಿಸಿದ್ದಾರೆ ಎಂದು ಗುರುಗಳು ಹೇಳಿದರು.

ಶ್ರೀರಂಗಂ ಇರುವುದು ಕಾವೇರಿ ತೀರದಲ್ಲಿ. ಆದರೆ ನಾವು ಹೋದ ಸಮಯವೆಂಥದ್ದು ಎಂದರೆ ಕಾವೇರಿ ಸಂಪೂರ್ಣವಾಗಿ ಒಣಗಿಬಿಟ್ಟಿದ್ದಳು. ಎಷ್ಟು ಮಟ್ಟಕ್ಕೆಂದರೆ ನಡೆದು ಹೋಗಿ ನದಿಯ ಮಧ್ಯಭಾಗದಿಂದ ಮರಳು ತರುವಷ್ಟು! ಇನ್ನು ಶ್ರೀರಂಗಂನಲ್ಲಿರುವ ಚಂದ್ರ ಪುಷ್ಕರಣಿಯಲ್ಲಿ ಸ್ವಲ್ವವೇ ನೀರು ಉಳಿದಿತ್ತು. ಆ ಪುಷ್ಕರಣಿಯ ಪಕ್ಕದಲ್ಲಿಯೇ ಕೋದಂಡರಾಮನ ದೇವಸ್ಥಾನವಿದೆ. ಮೂರ್ತಿಯು ಬೃಹತ್ತಾದದ್ದೇ, ಅರ್ಥಾತ್ ನಿಜ ಗಾತ್ರದಷ್ಟು (ಆಂಗ್ಲದಲ್ಲಿ ಲೈಫ್‌ ಸೈಜ಼್ ಎನ್ನುತ್ತಾರೆ). ಇಲ್ಲಿ ಸೀತಾಮಾತೆಯು ರಾಮನ ಬಲಗಡೆಗಿದ್ದಾಳೆ.  ಇದು ಸೀತಾರಾಮ ಕಲ್ಯಾಣದ ರೀತಿ. ಎಡಗಡೆಯಲ್ಲಿ ಲಕ್ಷ್ಮಣನ ವಿಗ್ರಹವಿದೆ. ರಾಮನಿಗೆ ನೂರೆಂಟು ಸಾಲಿಗ್ರಾಮಗಳ ಹಾರವನ್ನು ಹಾಕಿದ್ದಾರೆ; ಅಲ್ಲ ಅವನೇ ಧರಿಸಿದ್ದಾನೆ! ಅಲ್ಲಿ ಅದ್ಭುತವಾದ ಚಿತ್ರಾನ್ನವನ್ನು ಪ್ರಸಾದವಾಗಿ ಕೊಟ್ಟರು. ಅದೂ ನಾವು ಎರಡೂ ಕೈಗಳನ್ನು ಬೊಗಸೆ ಮಾಡಿ ಹಿಡಿಯಬೇಕು. ಅದರ ತುಂಬಾ ತುಂಬುವಂತೆ ಮೂರು ಸಟ್ಟುಗಗಳನ್ನು ಹಾಕುತ್ತಾರೆ. ಅದನ್ನು ಕಷ್ಟಪಟ್ಟು ಚೆಲ್ಲದೆ ಆಸ್ವಾದಿಸುತ್ತಾ ತಿಂದು ನಂತರ ಕೈ ತೊಳೆಯುವುದೆಲ್ಲಿ ಎಂದು ಯೋಚಿಸಬೇಕಾದರೇ ನಮ್ಮೊಂದಿಗಿದ್ದ ವಿಜಯಸಾರಥಿ ಅಂಕಲ್‌ (ಅವರು ತಮಿಳುನಾಡಿನವರೇ) ಅವರು ಹೇಳಿದರು “ತಮಿಳುನಾಡಿನಲ್ಲಿ ರಂಗನೇ ದೈವಂ, ಪೊಂಗಲೇ ಪ್ರಸಾದಂ, ಕಂಬಮೇ ತಣ್ಣಿ”. ಇದರರ್ಥ ರಂಗನೇ ದೇವ, ಪೊಂಗಲ್ಲೇ ಪ್ರಸಾದ, ಕಂಬವೇ ನೀರು ಎಂದು! ಅಲ್ಲಿದ್ದ ಸಾವಿರಾರು ಕಂಬಗಳ ಮೇಲೆ ಅಲ್ಲಲ್ಲಿ ಜಿಡ್ಡಿನ ರೀತಿಯಲ್ಲಿ ಕಪ್ಪುಕಲೆಗಳಾಗಿದ್ದವು. ಅದರ ರಹಸ್ಯ ನಮಗೆ ಈಗ ಅರಿವಾಯಿತು. ಕೈ ತೊಳೆಯುವುದೆಲ್ಲಿ ಎನ್ನುವ ಬದಲು ಕಂಬಕ್ಕೇ ಕೈಯನ್ನು ಒರೆಸಿಕೊಂಡು ಬಿಡುತ್ತಾರೆ ಜನ! ಆದರೆ ನಾವು ಹಾಗೆ ಮಾಡಲಿಲ್ಲ. ಕೈತೊಳೆಯುವ ಸ್ಥಳವನ್ನು ಹುಡುಕಿಕೊಂಡು ಹೋಗಿ ಕೈತೊಳೆದುಕೊಂಡೆವು. ಸಮಾಧಾನವಾಯಿತು.

ನಂತರ ವಿಶಿಷ್ಟಾದ್ವೈತದ ಪ್ರತಿಪಾದಕರಾಗಿದ್ದ ಶ್ರೀರಾಮಾನುಜಾಚಾರ್ಯರ ಸನ್ನಿಧಿಗೆ ಹೋದೆವು. ಅಲ್ಲಿ ಒಬ್ಬ ಹುಡುಗನು ನಿಂತು ಶ್ರೀರಾಮಾನುಜರ್‌ ಕರ ಪೂಜಿತ ಕಾಂಚೀಪುರಂ ವರದರಾಜ ಪೆರುಮಾಳ್‌ ಸಹಿತ ಶ್ರೀದೇವಿ ಭೂದೇವಿ ತಾಯರ್‌ ಎಂದು ಒಂದೇ ಸ್ವರದಲ್ಲಿ ಕೂಗುತ್ತಿದ್ದ. ಅದು ನನಗೆ ಈಗಲೂ ನೆನಪಿದೆಯೆಂದರೆ ಅವನು ಎಷ್ಟು ಬಾರಿ ಅದನ್ನು ನಮ್ಮ ಮುಂದೆಯೇ ಕೂಗಿರಬಹುದೋ ಯೋಚಿಸಿ! ಇಲ್ಲಿ ಒಂದು ಆಶ್ಚರ್ಯಕರ ಸಂಗತಿಯಿದೆ. ರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ಅವರ ದೇಹವನ್ನೇ ಸಂರಕ್ಷಿಸಿಟ್ಟಿದ್ದಾರೆ! ಅದಕ್ಕೇ ಈಗಲೂ ಶ್ರೀಗಂಧ, ಕೇಸರಿ, ಇತ್ಯಾದಿಯಾಗಿ ದೇಹವನ್ನು ಹಾಳುಗೆಡವಲು ಬಿಡದ ಕೆಲವು ರಾಸಾಯನಿಕಗಳನ್ನೂ ಬಳಸಿ ಇಟ್ಟಿದ್ದಾರೆ! ಇದನ್ನು ನೋಡುವ ಉತ್ಸಾಹ ನಮಗೆ! ಆದರೆ ಅಲ್ಲಿನ ಅರ್ಚಕರು ಯಾರನ್ನೂ ಒಂದು ನಿಮಿಷಕ್ಕಿಂತ ಹೆಚ್ಚಾಗಿ ನಿಲ್ಲಲು ಬಿಡುತ್ತಿರಲಿಲ್ಲ. ಬಹುಶಃ ನಮ್ಮ ಉಸಿರಿನಲ್ಲಿರುವ ತೇವಾಂಶ ಅದಕ್ಕೆ ಪರಿಣಾಮ ಬೀರಬಹುದೆಂಬ ಕಾರಣದಿಂದಾಗಿರಬಹುದು.

ಎಲ್ಲಕ್ಕಿಂತಲೂ ಶ್ರೀದೇವಿ ಭೂದೇವಿ ತಾಯರ್! ಎನ್ನುವ ಕೂಗನ್ನು ನಾವು ಈಗಲೂ ನೆನೆದು ನೆನೆದು ನಗುವುದುಂಟು! ಹಾಗೆಯೇ ಹೊರಗೆ ಬರುವಾಗ ಓರ್ವರು ಅವರ ವೃದ್ಧ ತಾಯಿಯನ್ನು ಕೈಹಿಡಿದು ನಡೆಸಿಕೊಂಡು ದರ್ಶನಕ್ಕೆ ಕರೆದೊಯ್ಯುತ್ತಿರುವದನ್ನು ಗುರುಗಳು ಕಂಡರು. ಆಗ ಅವರು “ವಯಸ್ಸಾದ ತಾಯಿಯನ್ನು ದೈವದರ್ಶನಕ್ಕೆ ಪ್ರೀತಿಯಿಂದ ಕರೆದುಕೊಂಡು ಬಂದು ತಾಳ್ಮೆಯಿಂದ ಎಲ್ಲವನ್ನೂ ತೋರಿಸುವುದಕ್ಕಿಂತಲೂ ಹೆಚ್ಚಿನ ಪುಣ್ಯ ಬೇರಾವುದೂ ಇಲ್ಲ! ತಂದೆ ತಾಯಿಯರೇ ಪ್ರತ್ಯಕ್ಷ ದೈವ ಕಣಯ್ಯ. ಅವರ ಸೌಖ್ಯವನ್ನು ನೋಡಿಕೊಳ್ಳುವುದೇ ಒಂದು ಸತ್ಕಾರ್ಯ” ಎಂದು ಹೇಳಿದರು.

ಈ ಪ್ರವಾಸ ಕಥನದ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=40654

(ಮುಂದುವರಿಯುವುದು)

ತೇಜಸ್‌ ಎಚ್‌ ಬಾಡಾಲಮೈಸೂರು

9 Responses

  1. MANJURAJ H N says:

    ಈ ಪ್ರವಾಸ ಕಥನದ ಮುಂದಿನ ಭಾಗದ ನಿರೀಕ್ಷೆಯಲಿದ್ದೆ. ಖುಷಿಯಾಯಿತು.
    ಈಗ ಯುವ ಮನಸುಗಳಿಂದ ಇಂಥ ಬರೆಹವನು ನಿರೀಕ್ಷಿಸುವುದೇ ದುಸ್ಸಾಧ್ಯ.
    ಬರೆಹದ ಬೇಸಾಯ ಮುಂದುವರಿಸಿ, ನಮ್ಮಂಥ ಓದುಗರಿಗೆ ಇವೆಲ್ಲ ಗೊತ್ತಾಗಬೇಕು. ಧನ್ಯವಾದ

    • ತೇಜಸ್ says:

      ಅತ್ಯಂತ ಧನ್ಯವಾದಗಳು ಸರ್‌, ನಿಮ್ಮಂತಹವರ ಪ್ರೋತ್ಸಾಹವೇ ನನಗೆ ಇಂಧನ!

  2. ಪ್ರವಾಸ..ಕಥನ…ಚೆನ್ನಾಗಿ ಮುಂದುವರೆದಿದೆ.. ತೇಜಸ್.. ಅಭಿನಂದನೆಗಳು..

  3. ನಯನ ಬಜಕೂಡ್ಲು says:

    Nice

  4. ಶಂಕರಿ ಶರ್ಮ says:

    ಶ್ರೀರಂಗಂನ ರಂಗನಾಥ ಮಂದಿರದ ಅಗಾಧತೆಯ ವಿವರಣೆ, ‘ಶ್ರೀದೇವಿ ಭೂದೇವಿ ತಾಯರ್` ಮನದಲ್ಲಿ ಉಳಿದ ಪರಿ, ಕಂಬಮೇ ತಣ್ಣಿಯಾದ ರೀತಿ…ಎಲ್ಲವೂ ಪ್ರವಾಸ ಕಥನದ ಅಂದವನ್ನು ಹೆಚ್ಚಿಸಿವೆ…ಧನ್ಯವಾದಗಳು.

    • ತೇಜಸ್ says:

      ನಿಮ್ಮಂತಹ ಓದುಗರನ್ನು ತಲುಪಲು ಅವಕಾಶ ಮಾಡಿಕೊಟ್ಟ ಹೇಮಮಾಲಾ ಮೇಡಮ್‌ ಅವರಿಗೆ ಕೋಟಿ ನಮನಗಳು.

      ಶಂಕರಿ ಮೇಡಮ್‌, ನಿಮ್ಮ ಅನಿಸಿಕೆ ನನಗೆ ತುಂಬಾ ಸಂತೋಷವನ್ನು ಮೂಡಿಸಿತು, ಧನ್ಯವಾದಗಳು

  5. Padma Anand says:

    ಎಷ್ಟೊಂದು ಮಾಹಿತಿಗಳನ್ನೊಳಗೊಂಡ ಲೇಖನ ಮುದ ನೀಡಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: