ಕಾದಂಬರಿ : ಕಾಲಗರ್ಭ – ಚರಣ 10
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮನೆಯೊಳಕ್ಕೆ ಬಂದವರೇ ”ನಾಳೆಯಿಂದಲೇ ಕೆಲಸ ಪ್ರಾರಂಭಿಸಿಬಿಡಬೇಕು. ನೆಂಟರಿಷ್ಟರು ಬರುವುದರೊಳಗೆ ಎಲ್ಲವನ್ನೂ ಸಿದ್ಧಪಡಿಸಿ ಇಟ್ಟುಕೊಂಡರೆ ನಿರಾಳ.ಸುಮ್ಮನೆ ಜನಗಳು ಹೆಚ್ಚಾದಷ್ಟು ಗಲಭೆ, ಗದ್ದಲ. ಕೆಲಸಗಳೇನು ಆಗಲ್ಲ” ಎಂದು ಹೇಳಿದ್ದನ್ನು ಕೇಳಿಸಿಕೊಂಡವಳೇ ಕುತೂಹಲ ತಡೆಯಲಾರದೆ ಅವರಿದ್ದ ಕಡೆಗೆ ಬಂದಳು ಮಾದೇವಿ. ”ಏನನ್ನು ಮಾಡಿಸಿಡುವುದು ಅಜ್ಜೀ?” ಎಂದು ಕೇಳಿದಳು.
”ಅದೇ ಪುಟ್ಟೀ ಮದುವೆಗೆ ತಿಂಡಿಗಳು, ಬೀಗರಿಗೆ ಬುಟ್ಟಿ ತುಂಬಿಸಿ ಕೊಡಬೇಕು, ಬಂದ ನೆಂಟರಿಷ್ಟರಿಗೂ ಕೊಡಬೇಕಲ್ಲಾ ಅವುಗಳು”
”ಅವುಗಳು ಎಂದರೆ?” ಮರುಪ್ರಶ್ನೆ ಹಾಕಿದಳು ದೇವಿ.
”ಅಯ್ಯೋ ಕೂಸೇ ಗೊತ್ತಾಗಲಿಲ್ಲವೇ ಚಕ್ಕುಲಿ, ಕರ್ಜೀಕಾಯಿ, ಕಜ್ಜಾಯ, ಬೂಂದಿ, ಮಾಲ್ದಿ, ಮುಂತಾದ ತಿನಿಸುಗಳು” ಎಂದರು ನೀಲಕಂಠಪ್ಪ.
”ಸರಿ ತಾತಾ ಅವುಗಳನ್ನು ಮಾಡುವುದು ಎಷ್ಟುಕಷ್ಟ, ತುಂಬ ರಗಳೆಕೆಲಸ, ಅದರಲ್ಲಂತೂ ಈಗ ಹೇಳಿದಿರಲ್ಲ ಮಾಲ್ದಿ ಅಂತ, ಅದೊಂದು ದೊಡ್ಡ ಕೆಲಸವೇ. ಅಲ್ಲದೆ ಈಗ ಅವುಗಳನ್ನೆಲ್ಲ ಯಾರು ಇಷ್ಟಪಟ್ಟು ತಿನ್ನುತ್ತಾರೆ. ಮದುವೆ ಬೇರೆ ಹತ್ತಿರವಾಗುತ್ತಿದೆ. ಬರುವವರು ಹೋಗುವವರು ಇದ್ದೇ ಇರುತ್ತಾರೆ. ಮನೆಗೆಲಸವನ್ನು ನಿಭಾಯಿಸಿಕೊಂಡು ಈ ಓಬೀರಾಯನ ಕಾಲದ ತಿಂಡಿಗಳನ್ನು ತಯಾರಿಸುವುದು. ಎಲ್ಲವನ್ನು ಮಾಡಿ ಮಲಗಿಬಿಟ್ಟರೆ ಏನುಮಾಡೋದು. ಮಾಡಲೇ ಬೇಕಿದ್ದರೆ ದುಡ್ಡುಕೊಟ್ಟು ಪೇಟೆಯಿಂದ ಕೊಂಡುಕೋಬಹುದು. ಎಲ್ಲಾ ಅನುಕೂಲಗಳಿದ್ದರೂ ಅದುಬಿಟ್ಟು ಈ ರೇಜಿಗೆ” ಎಂದಳು ಮಾದೇವಿ.
”ನನ್ನ ಮಗಳು ಇಷ್ಟೊಂದು ಬುದ್ಧೂ ಅಂತ ಗೊತ್ತಿರಲಿಲ್ಲ” ಎನ್ನುತ್ತಾ ಮೂರುಜನ ನಿಂತಲ್ಲಿಗೇ ಬಂದಳು ಮಾದೇವಿಯ ತಾಯಿ ಶಾರದೆ.
”ಏನಮ್ಮಾ ನೀನು ಹೇಳ್ತಾ ಇರೋದು, ನಾನು ಬುದ್ಧೂನೇ. ಸುಲಭವಾದ ಮಾರ್ಗ ಹೇಳಿದರೆ ನಿಮಗೆಲ್ಲ ತಮಾಷೆ. ನಿಮಗೆ ಏನೋ ಆಗಿದೆ” ಎಂದಳು ನಸುಮುನಿಸಿನಿಂದ.
”ಕೋಪಮಾಡಿಕೊಳ್ಳಬೇಡ ಮಗಳೇ, ನಾನು ನಿನ್ನನ್ನು ಬುದ್ಧೂ ಅಂದದ್ದು ಬೇರೆ ಕಾರಣಕ್ಕೆ. ಇವುಗಳನ್ನೆಲ್ಲ ಯಾವತ್ತಾದರೂ ಅಜ್ಜಿ, ನಾನು, ನಿಮ್ಮತ್ತೆ ಆಗುವ ಗೌರತ್ತೆ, ಮಂಗಳಕ್ಕ ಮಾಡಿದ್ದಿದೆಯಾ? ಮನೆಮಟ್ಟಿಗೆ ಮಾಡಬಹುದೇನೋ.ಆದರೆ ಸಮಾರಂಭಗಳಲ್ಲಿ, ಮರೆತು ಹೋಗಿದೆ ನಿನಗೆ ಅಷ್ಟೇ. ಮೈಸೂರಿನಿಂದ ಮುಕುಂದಪ್ಪ ಅವರ ಪರಿವಾರದವರು ಬಂದು ನಿಮ್ಮಜ್ಜಿಯ ನಿರ್ದೇಶನದಂತೆ ಮಾಡಿಕೊಡುತ್ತಾರೆ. ಈ ಸಾರಿ ಮಾಡುವುದು ಎರಡೂ ಮನೆಗಳಿಗಾಗಿ ಸೇರಿಸಿಕೊಂಡು ಗೊತ್ತಾಯಿತಾ” ಎಂದಳು ಶಾರದೆ. ಹಾಗೇ ಕೇಳು ಹೊಸ ಸಿಹಿತಿಂಡಿಗಳು ನಾಲಿಗೆಗಷ್ಟೇ ಹಿತ. ಹಳೆಯ ಸಿಹಿ ಪದಾರ್ಥಗಳು ಹೊಟ್ಟೆಗೆ ಹಿತ. ರ್‍ಯತಾಪಿ ಜನಗಳಿಗೆ ಪಾಯಸ ಮಾಡಿಸಿ ಅದರ ಮೇಲೆ ಬೂಂದೀನೋ, ಮಾಲ್ದೀನೋ ಬಡಿಸಿದರೆ ಅವರಿಗೆ ಮನಸ್ಸಿಗೆ ಸಂತೃಪ್ತಿ. ಯಾರು ಇಷ್ಟಪಟ್ಟು ತಿನ್ನುತ್ತಾರೊ ಅವರಿಗೆ ಬಡಿಸಿದರಾಯ್ತು. ವರಪೂಜೆ, ಧಾರೆಯ ಸಮಯದಲ್ಲಿ ಹೊಸದಕ್ಕೆ ಹೊಂದಿಕೊಳ್ಳುವ, ಹಳೆಯ ಕಾಲದಿಂದಲೂ ಬಂದಿರುವ ಚಿರೋಟಿ, ಫೇಣಿ, ಜಾಮೂನು, ಜಿಲೇಬಿಗಳು. ಅವುಗಳೂ ತಿಂಡಿ ಊಟಕ್ಕೆ ಸೆಟ್ಟಾಗುವಂತೆ ಮಾಡುತ್ತಾರೆ. ಈಗ ಸಮಧಾನವಾಯಿತೇ? ನಿನ್ನನ್ನೇನೂ ಇದಕ್ಕಾಗಿ ಓಡಾಡಿಸುವುದಿಲ್ಲ. ಟೆನ್ಷನ್ ಮಾಡಿಕೊಳ್ಳಬೇಡ. ನಾವುಗಳೂ ಅಷ್ಟೇ ಹೆಚ್ಚು ಆಯಾಸ ಮಾಡಿಕೊಳ್ಳುವುದಿಲ್ಲ. ಬರಿಯ ಮೆಹರುಬಾನಿಕೆಯಷ್ಟೇ. ಈಗ ಊಟದ ಹೊತ್ತಾಯಿತು ತಾತ ಅಜ್ಜಿಯನ್ನು ಕರೆದುಕೊಂಡು ಬಾ. ಊಟಮಾಡಿ ಸ್ವಲ್ಪ ರೆಸ್ಟ್‌ಮಾಡಿ ಮೈಸೂರಿಗೆ ಹೋಗಿಬರೋಣ. ಹೊಲಿಯಲು ಕೊಟ್ಟು ಬಂದಿರುವ ಬಟ್ಟೆಗಳನ್ನು ತರೋಣ” ಎನ್ನುತ್ತಾ ಒಳ ನಡೆದಳು ಶಾರದೆ.
”ಯಾವತ್ತೂ ಮನೆಯ ಹೆಣ್ಣುಮಕ್ಕಳಿಗೆಹೆಚ್ಚು ಹೊರೆಮಾಡಿಲ್ಲ ಕೂಸೆ, ಮಾಡುವುದೂ ಇಲ್ಲ. ಬಾ..ಬಾ..” ಎಂದು ಊಟಕ್ಕಾಗಿ ಹೊರಟರು.
”ಹೂಂ ಎಲ್ಲವನ್ನೂ ಮೊದಲೇ ನಿರ್ಧಾರ ಮಾಡಿಕೊಂಡುಬಿಟ್ಟಿದ್ದಾರೆ. ಬಡಪೆಟ್ಟಿಗೆಗೆ ಯಾವುದನ್ನೂ ಒಪ್ಪುವುದಿಲ್ಲ. ನಾನು ಬುದ್ದೂ ಅಂತೆ. ಈ ಪಾಟಿ ತಿಂಡಿಗಳನ್ನು ಅದ್ಯಾವ ಪುಣ್ಯಾತ್ಮರು ತಿನ್ನುತ್ತಾರೋ? ನನಗೇನಾಗಬೇಕು. ಹೇಳಿದಷ್ಟು ಮಾಡಿದರಾಯಿತು. ಕೈತೋರಿಸಿ ಅವಲಕ್ಷಣ ಅನ್ನಿಸಿಕೊಳ್ಳೋದೇಕೆ” ಎಂದಂದುಕೊಂಡು ಊಟದ ಮನೆಗೆ ಹಿರಿಯರನ್ನು ಹಿಂಬಾಲಿಸಿದಳು ದೇವಿ.
ತಮ್ಮ ಮನೆಯಲ್ಲಿ ದೇವತಾಕಾರ್ಯ ಮುಗಿಸಿದ ಜಗದೀಶಪ್ಪ ಮಾವನಿಗೆ ಮಾತುಕೊಟ್ಟಂತೆ ಕುಟುಂಬ ಪರಿವಾರ ಸಮೇತ ಮದುವೆ ನಡೆಯುವ ಸ್ಥಳಕ್ಕೆ ಆಗಮಿಸಿದರು. ನೀಲಕಂಠಪ್ಪ, ಗಂಗಾಧರಪ್ಪನವರ ಮನೆಗಳನ್ನು ಸೇರಿಸಿ ನಿಶ್ಚಿತಾರ್ಥದ ದಿನ ಹಾಕಿದಂತೆ ಹಸಿರುವಾಣಿ ಚಪ್ಪರ ಹಾಕಿಸಿ ಎಲ್ಲರಿಗೂ ಕಾಣುವಂತೆ ಮಧ್ಯದಲ್ಲಿ ವೇದಿಕೆಯೊಂದನ್ನು ಸಿದ್ಧಪಡಿಸಿದ್ದರು. ಜೊತೆಗೆ ಧಾರಾಮಂಟಪವೂ ಸಜ್ಜಾಗಿತ್ತು.
ಶಾಸ್ತ್ರ ಸಂಪ್ರದಾಯದಂತೆ ಎಲ್ಲಾ ಕಲಾಪಗಳೂ ನಡೆದವು. ಮೊದಲ ದಿನ ವರಪೂಜೆ, ಮಾರನೆಯ ದಿನ ಧಾರೆ, ಅದೇ ಸಂಜೆಗೆ ಆರತಕ್ಷತೆ ಅದ್ದೂರಿಯಾಗಿ ನಡೆದವು. ನೂರಾರು ಜನರು ಬಂದಿದ್ದರೂ ಯಾವುದೇ ಗೌಜುಗದ್ದಲ, ಗಲಾಟೆಗಳಿಲ್ಲದೆ ಮಹೇಶ-ಮಾದೇವಿ, ಸುಬ್ಬಣ್ಣ-ಚಂದ್ರಿಕಾರು ಸಪ್ತಪದಿ ತುಳಿದು ಸತಿಪತಿಗಳಾಗಿ ದಾಂಪತ್ಯಕ್ಕೆ ಕಾಲಿಟ್ಟರು. ಊರಿಗೆ ಊರೇ ಆ ಮೂರುದಿನ ತಮ್ಮ ಮನೆಗಳಲ್ಲಿನ ಕಾರ್ಯವೇನೋ ಎಂಬಂತೆ ಎರಡು ಕುಟುಂಬಗಳಲ್ಲಿ ನಡೆದ ಮದುವೆಯ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಅವರು ನೀಡಿದ ಆದರಾತಿಥ್ಯಗಳನ್ನು ಪ್ರೀತಿಯಿಂದ ಸ್ವೀಕರಿಸಿ ಎರಡೂ ಜೋಡಿಗಳನ್ನು ಬಾಯ್ತುಂಬ ಹರಸಿದರು. ತಮ್ಮತಮ್ಮ ನಿವಾಸಗಳಿಗೆ ಹಿಂತಿರುಗಿದರು.
ಇತ್ತ ಗಂಗಾಧರಪ್ಪನವರ ಮನೆಯಲ್ಲಿ ಆಗಮಿಸಿದ್ದ ಬಂಧುಬಳಗದಲ್ಲಿ ಊರಿಗೆ ಹೊರಟವರನ್ನು ಬೀಳ್ಕೊಟ್ಟು ಉಳಿದವರಿಗೆ ಊಟೋಪಚಾರ ನೀಡಿ ಅವರುಗಳಿಗೆ ತಂಗಲು ಸೂಕ್ತ ವ್ಯವಸ್ಥೆ ಮಾಡಿದ ಗೌರಮ್ಮನವರು ತಾವೂ ಮಲಗಲು ತಮ್ಮ ರೂಮಿಗೆ ಬಂದರು. ಹಲವು ದಿನಗಳಿಂದ ಕೆಲಸಕಾರ್ಯಗಳಿಗಾಗಿ ದಾವಂತ, ಆತಂಕದಿಂದ ಓಡಾಡಿ ದಣಿದಿದ್ದ ತಮ್ಮ ಪತಿ ಮಲಗಿ ನಿದ್ರೆ ಮಾಡಿರಬೇಕೆಂದು ಊಹಿಸಿದ್ದರು. ಆದರೆ ಅವರು ಯಾವುದೋ ಪುಸ್ತಕದಲ್ಲಿ ತಲೆ ಹುದುಗಿಸಿ ಏನನ್ನೋ ಬರೆಯುತ್ತಿದ್ದುದನ್ನು ಕಂಡರು.
”ಅರೇ ದಣಿವಾಗಿಲ್ಲವೇ ನಿಮಗೆ? ಈ ಸರಿಹೊತ್ತಿನಲ್ಲಿ ಏನು ಮಾಡುತ್ತಿದ್ದೀರಿ?” ಎಂದು ಕೇಳಿದರು ಗೌರಮ್ಮ.
”ಲೆಕ್ಕಪತ್ರ ಸರಿಯಿರಬೇಕಲ್ಲಾ ಗೌರಾ, ನಾನು ನನ್ನಗೆಳೆಯ ಮದುವೆಗೆ ಮುಂಚೆಯೇ ಖರ್ಚುವೆಚ್ಚಗಳ ಬಗ್ಗೆ ಬರೆದಿಡಬೇಕೆಂದು ನಿರ್ಧರಿಸಿದ್ದೆವು. ಆನಂತರ ಅವುಗಳಲ್ಲೇನಾದರೂ ತಾಳೆಯಾಗದಿದ್ದರೆ ವೈಮನಸ್ಸಿಗೆ ಕಾರಣವಾಗಬಹುದು. ಗಾದೇನೇ ಇದೆಯಲ್ಲಾ ‘ತಾಮ್ರದ ಕಾಸು ತಾಯಿ ಮಕ್ಕಳನ್ನು ಕೆಡಿಸಿತ್ತು’ ಎಂದು, ಅದಕ್ಕೆ ಒಂದೆರಡು ಖರ್ಚಿನ ಬಾಬತ್ತಿನ ಬಗ್ಗೆ ಬರೆಯುವುದನ್ನು ಮರೆತುಬಿಟ್ಟಿದ್ದೆ. ಅದನ್ನೀಗ ಬರೆಯುತ್ತಿದ್ದೇನೆ” ಎಂದರು.
”ಹೌದೂರೀ, ಈ ದುಡ್ಡನ್ನೋದು ಎಂತೆಂಥಹ ಸಂಬಂಧಗಳನ್ನು ಕೆಡಿಸಿಬಿಡುತ್ತೆ. ಅಂತೂ ನಾವಂದುಕೊಂಡದ್ದಕ್ಕಿಂತಲೂ ಚೆನ್ನಾಗಿ ಮದುವೆ ಕಾರ್ಯ ನಡೆಯಿತು. ಒಳ್ಳೆಯ ಗೆಟ್‌ಟುಗೆದರ್ ತರಹ ಇತ್ತು” ಎಂದರು ಗೌರಮ್ಮ.
”ಓಹೋ ಇತ್ತೀಚೆಗೆ ಇಂಗ್ಲಿಷ್ ಪದಗಳ ಬಳಕೆ ಮಾಡುತ್ತಿರುವಂತಿದೆ. ಮೊಬೈಲ್, ಮೊಮ್ಮಕ್ಕಳ ಸಹವಾಸ ಬಹಳ ಪರಿಣಾಮ ಮಾಡಿದಂತಿದೆ” ಎಂದರು ಗಮಗಾಧರಪ್ಪ.
”ಹೂಂ ಹಾಗೇ ಅಂದುಕೊಳ್ಳಿ, ಬೇಗನೆ ಬರೆದು ಮುಗಿಸಿ ಮಲಗಿಕೊಳ್ಳಿ. ನಾಳೆ ಬೆಳಗ್ಗೆ ಇನ್ನೂ ಕೆಲಸಗಳಿವೆ” ಎಂದರು ಗೌರಮ್ಮ.
”ಅದು ಹಾಗಿರಲಿ ನಮ್ಮ ಮಕ್ಕಳು, ಅದೇ ತ್ರಿಮಾತೆಯರು ಸುಬ್ಬುವನ್ನು ಪೀಡಿಸದೆ, ಮಂಗಳಾಳನ್ನು ಹಂಗಿಸದೆ ನಗುನಗುತ್ತಾ ಎಲ್ಲರೊಡನೆ ಬೆರೆತು ಚೆನ್ನಾಗಿದ್ದರು. ಎಲ್ಲ ಶಾಸ್ತ್ರಗಳಲ್ಲೂ ಭಾಗಿಯಾದರು. ಅಂತೂ ಭಗವಂತ ಅವರಿಗೆ ಒಳ್ಳೆಯ ಬುದ್ಧಿ ಕರುಣಿಸಿದ ಹಾಗೆ ಕಾಣಿಸುತ್ತೆ. ಹಾಗೆಯೇ ಅವರು ಮುಂದುವರೆದರೆ ಒಳ್ಳೆಯದು. ಚೆಲುವಿಕೆಯಲ್ಲಿ ಅವರು ಒಬ್ಬರಿನ್ನೊಬ್ಬರನ್ನು ಮೀರಿಸುತ್ತಾರೆ. ಆದರೆ ಅದೇನೊ ಕೊಂಕುಬುದ್ದಿ, ಏನಾದರೂ ಕೊಂಕನ್ನು ತೆಗೆಯುತ್ತಲೇ ಇರುತ್ತಾರೆ” ಎಂದರು ಗಂಗಾಧರಪ್ಪ.
”ಹೂಂ..ಆ ಕೊಂಕು ತೆಗೆಯದೆ ಇರುವುದಕ್ಕೆ ಅದರ ಹಿಂದೆ ನನ್ನ ತಲೆಯಿದೆ” ಎಂದರು ಗೌರಮ್ಮ.
”ಅಂದರೆ ಗೌರಾ ! ನನಗರ್ಥವಾಗಲಿಲ್ಲ. ಏನು ಮಾಡಿದೆ? ಇನ್ನೊಂದೆರಡು ದಿನವಿದ್ದು ಸುಧಾರಿಸಿಕೊಂಡು ಹೋಗಿರೆಂದು ಹೇಳಿದರೂ ಕೇಳದೆ ತಮ್ಮವರ ಜೊತೆಯಲ್ಲಿ ಹೊರಟೇ ಬಿಟ್ಟರಲ್ಲಾ ” ಎಂದು ಕೇಳಿದರು ಗಂಗಾಧರಪ್ಪನವರು.
‘ಏನಿಲ್ಲ, ನಾವು ಅವರನ್ನು ಮದುವೆಗೆ ಆಹ್ವಾನಿಸಲು ಹೋದಾಗ ಅವರಿಗೆ ನಿಶ್ಚಿತಾರ್ಥಕ್ಕೆ ಬಂದಾಗ ತಾವೇ ಯಜಮಾನರಂತೆ ಏನು ಹೇಳಿದಿರೋ ನನಗೆ ಬೇಕಾಗಿಲ್ಲ. ಆದರೆ ಮದುವೆಗೆ ಬಂದಾಗ ನಿಮ್ಮ ಬಾಲ ಬಿಚ್ಚಿದಿರೋ ಗ್ರಹಚಾರ ನೆಟ್ಟಗಾಗೊಲ್ಲ. ಮಕ್ಕಳು ಎನ್ನುವುದನ್ನೂ ನೋಡದೆ ಅದು ನಿಮ್ಮ ಗಂಡಂದಿರ ಎದುರಿನಲ್ಲಿ ಛೀಮಾರಿ ಹಾಕಿ ಅಟ್ಟುತ್ತೇನೆ. ಮುಂದೆ ಎಂದೆಂದಿಗೂ ಈ ಮನೆಯ ಹೊಸ್ತಿಲು ತುಳಿಯಬಾರದು ಹಾಗೆ ಮಾಡುತ್ತೇನೆ ಯೋಚಿಸಿ, ತೀರ್ಮಾನ ನಿಮ್ಮದೇ. ನನ್ನ ಅಳಿಯಂದಿರು ಎಂತಹವರೆಂದು ನನಗೆ ಗೊತ್ತಿದೆ. ನಿಮ್ಮನ್ನವರು ಅಂಗೈನಲ್ಲಿ ಅರಗಿಣಿಗಳಂತೆ ನೋಡಿಕೊಳ್ಳುತ್ತಿದ್ದಾರೆ. ಇಲ್ಲದ ಸುದ್ಧಿಗೊಂದು ಗುದ್ದು ಕೊಡುತ್ತೀರೆಂದು ಅವರಿಗೆ ತಿಳಿದರೆ ಪರಿಣಾಮ ನೆಟ್ಟಗಾಗದು. ನನ್ನ ಸ್ವಭಾವ ನಿಮಗೆ ಗೊತ್ತು ತಾನೇ ಎಂದು ತಾಕೀತು ಮಾಡಿ ಬಂದಿದ್ದೆ. ಅವರೇನಾದರು ಬಾಲಬಿಚ್ಚಿದರೆ ಎರಡೂ ಕಣಕಾದು ದಾಸಯ್ಯ ಕೆಟ್ಟ ಎಂಬಂತಾಗುತ್ತದೆ ಎಂದುಕೊಂಡು ತೆಪ್ಪಗಿದ್ದು ಹೋಗಿದ್ದಾರೆ” ಎಂದರು ಗೌರಮ್ಮ.
”ಹೋ.. ಹಾಗೇನು? ಇವರಿಗೇಕೆ ಇಂತಹ ಸಣ್ಣ ಬುದ್ಧಿ. ಹುಟ್ಟಿದ ಮನೆಯಲ್ಲಿ ಯಾವ ಕೊರತೆಯು ಇಲ್ಲದಂತೆ ಬೆಳೆಸಿದೆವು. ಒಳ್ಳೆಯ ಗಂಡಂದಿರ ಮನೆಗಳೂ ದೊರೆತವು. ಅಲ್ಲಿ ಅವರುಗಳದ್ದೇ ದರ್ಬಾರು, ಹೆಣ್ಣುಮಕ್ಕಳೆಂದು ಸ್ವಲ್ಪ ಹೆಚ್ಚೇ ಮಮಕಾರ ತೋರಿಸಿದ್ದು ಮುಳುವಾಯಿತೇ? ಅದೇ ವಾತಾವರಣದಲ್ಲಿ ಬೆಳೆದ ನಮ್ಮ ಮಗ ಹೇಗಿದ್ದಾನೆ. ಅವನನ್ನು ನೋಡಿಯಾದರೂ ಕಲಿಯಬಾರದೇ. ಇನ್ಯಾವಾಗ ಕಲಿಯುತ್ತಾರೆ. ತಮ್ಮ ಮಕ್ಕಳಿಗೆ ಮದುವೆ ಮಾಡುವ ಹಂತದಲ್ಲಿದ್ದಾರೆ. ಛೇ..” ಎಂದು ನೊಂದು ನುಡಿದರು ಗಂಗಾಧರಪ್ಪ.
”ಎಲ್ಲರ ಹತ್ತಿರ ಚೆನ್ನಾಗಿಯೆ ಇದ್ದಾರೆ. ಪಾಪ ಬಡಪಾಯಿ ತಾಯಿ ಮಗನ ಮೇಲೆ ಇವರುಗಳ ಚಿತಾವಣಿ. ಅವರುಗಳು ಬಾಣಂತನಕ್ಕೆಂದು ಬಂದಾಗ ಅವರನ್ನಿವರು ಎಷ್ಟು ಚೆನ್ನಾಗಿ ನೊಡಿಕೊಂಡಿದ್ದಾರೆ. ಸ್ವಲ್ಪವೂ ಕೃತಜ್ಞತೆಯಿಲ್ಲ. ಸಾಲದ್ದಕ್ಕೆ ಈಗ ಮಾದೇವಿಯ ಮೇಲೂ ಸವಾರಿ ಮಾಡಲು ಹೊರಟಹಾಗಿದೆ” ಎಂದರು ಗೌರಮ್ಮ.
”ಇದೇನು ಗೌರಾ, ದೇವಿಯ ಮೇಲೂ ! ಅವಳೇನು ಇವರಿಗೆ ಹೊಸಬಳಾ, ಚಿಕ್ಕಂದಿನಿಂದಲು ನೋಡಿದ ಹುಡುಗಿ. ಮಿಗಿಲಾಗಿ ಅವರಿಗೆಲ್ಲ ಆಪ್ತಳೇ. ಮಾತಿನಲ್ಲಿ ಅಕ್ಕರೆಯನ್ನೇ ಸುರಿಸುತ್ತಾರೆ. ಇದು ಹೊಸಸುದ್ಧಿ ಹೇಳುತ್ತಿದ್ದಿ” ಎಂದು ಕೇಳಿದರು ಗಂಗಾಧರಪ್ಪ.
”ಹೌದು ರೀ, ನಿಶ್ಚಿತಾರ್ಥವಾದ ಮೇಲೆ ದೇವಿಯ ನಡೆಯಲ್ಲಿ ಗಂಭೀರತೆ, ಅಗತ್ಯಕ್ಕಿಂತ ಹೆಚ್ಚು ಮೌನ ಕಂಡು ನಾನೇ ಶಾರದೆಯನ್ನು ಒತ್ತಾಯಿಸಿ ಕೇಳಿದಾಗ ಆಕೆ ನೇರವಾಗಿ ಹೇಳದಿದ್ದರೂ, ಮೊದಲಿನ ಹಾಗೆ ಹುಡುಗಾಟಿಕೆ ಮಾಡಕ್ಕಾಗುತ್ತಾ ಗೌರಕ್ಕಾ, ಮದುವೆಯಾಗುವ ಹುಡುಗಿ, ನೋಡಿದವರು ಏನಂದಾರು” ಎಂದು ಹೇಳಿದಳು. ಅಷ್ಟರಲ್ಲೆ ನಾನು ಊಹಿಸಿದೆ ನಮ್ಮ ಪುತ್ರಿಯರು ಅಲ್ಲಿ ತಲೆ ಹಾಕಿದ್ದಾರೆಂದು. ಅವರ ಮನೆಯ ಮತ್ತೊಂದು ಕೂಸೇ ಚಂದ್ರಿಕಾ ನಮ್ಮ ಮನೆಯ ಸಾಕುಮಗ ಸುಬ್ಬುವಿಗೆ ಜೊತೆಗಾತಿ. ಅದಕ್ಕೇ ಶುರುವಿನಲ್ಲೇ ಚಿವುಟಿ ಹಾಕಬೇಕೆಂದು ಇವರ ಪ್ರಯತ್ನ. ಆಗಲೇ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡೆ” ಎಂದರು ಗೌರಮ್ಮ.
ಹೆಂಡತಿಯ ಮಾತಿನ ಹಿಂದೆ ಇದ್ದ ಕಾಳಜಿಯನ್ನು ಕಂಡು ಗಂಗಾಧರಪ್ಪ ”ಹೌದು ನೀನು ಹೇಳುವುದು ಸತ್ಯ. ‘ಸ್ಪಾರ್ಕ್ ನೆಗ್ಲೆಕ್ಟೆಡ್ ಬರ್ನ್ಸ್ ದಿ ಹೌಸ್’ ಎಂಬ ಒಂದು ಪಾಠವನ್ನು ನಾನು ಓದಿದ್ದೇನೆ. ಅಂದರೆ ಸಣ್ಣಕಿಡಿಯೆಂದು ಉದಾಸೀನ ಮಾಡಿದರೆ ಅದು ದೊಡ್ಡದಾಗಿ ಮನೆಯನ್ನೇ ಸುಡಬಹುದು ಎಂದು. ಒಳ್ಳೆಯ ಕೆಲಸ ಮಾಡಿದೆ ಗೌರಾ. ಸಮಯ ನೋಡಿ ದೇವಿಗೆ ಮತ್ತು ಚಂದ್ರಿಕಳಿಗೆ ಸೂಕ್ಷ್ಮವಾಗಿ ಎಚ್ಚರಿಸು” ಎಂದರು.
”ಹಾ..ಎಲ್ಲ ಸರಿಯಾಗಿದ್ದುಬಿಟ್ಟರೆ ನಮ್ಮನ್ನು ಹಿಡಿಯುವರ್‍ಯಾರು. ಅದಕ್ಕೇ ಭಗವಂತ ಏನಾದರೊಂದು ಕೊರತೆ ಇಟ್ಟೇ ಇರುತ್ತಾನೆ. ಬನ್ನಿ ಗುರುಗಳು ನಾಳೆಗೆ ಒಳ್ಳೆಯ ಮುಹೂರ್ತವಿದೆ ಸಜ್ಜೆಮನೆ ಶಾಸ್ತ್ರ ಮುಗಿಸಿಬಿಡಿ ಎಂದಿದ್ದಾರೆ. ಅವರವರ ಮನೆಯಲ್ಲೆ ಇದನ್ನು ಮಾಡಬೇಕಂತೆ. ಶಾರದೆಗೂ ಕಾತ್ಯಾಯಿನಿಗೂ ಹೇಳಿದ್ದಾರೆ” ಎಂದರು ಗೌರಮ್ಮ.
”ಈ ಗುರುಗಳು ಎಲ್ಲಾ ಸರಿ ಆದರೆ ವಿಪರೀತ ಶಾಸ್ತ್ರ, ಸಂಪ್ರದಾಯ, ಪೂಜೆ, ಆಚರಣೆ ಎಂದು ಮದುಮಕ್ಕಳನ್ನು ಹಿಂಡಿ ಹಿಪ್ಪೇಕಾಯಿ ಮಾಡಿಬಿಟ್ಟರು. ನಮಗೋ ಬೇರೆ ಯಾರೂ ಅಷ್ಟು ಇಷ್ಟವಾಗುವುದಿಲ್ಲ. ಹೇಗೋ ನಮ್ಮ ಆಸೆಯಂತೆ ಎಲ್ಲವೂ ಮಂಗಳಕರವಾಗಿ ಪೂರ್ತಿಯಾಯಿತು. ಸಂತೋಷವಾಗಿ ಮುಂದಕ್ಕೆ ಮಕ್ಕಳು ಬಾಳು ನಡೆಸಿದರೆ ಅಷ್ಟೆ ಸಾಕು” ಎನ್ನುತ್ತಾ ಪುಸ್ತಕ ಮುಚ್ಚಿಟ್ಟು ಆಗಲೇ ಮಂಚದ ಮೇಲೆ ಮಲಗಿದ್ದ ಮಡದಿಯ ಪಕ್ಕದಲ್ಲಿ ಲೈಟಾರಿಸಿ ಮಲಗಿಕೊಂಡರು ಗಂಗಾಧರಪ್ಪ.
ಮಾರನೆಯ ದಿನ ಗುರುಗಳ ಆಣತಿಯಂತೆ ಪೂಜಾಚರಣೆಗಳನ್ನು ಮುಗಿಸಿದರು. ಊರಿಗೆ ಹೊರಟ ಕೆಲವು ಬಂಧುಗಳೊಡನೆ ಜಗದೀಶಪ್ಪನು ತನ್ನ ಕುಟುಂಬದವರೊಡಗೂಡಿ ಅಳಿಯ ಮಗಳನ್ನು ಕರೆದುಕೊಂಡು ತಮ್ಮ ನಿವಾಸಕ್ಕೆ ತೆರಳಿದನು.
ಇತ್ತ ನೀಲಕಂಠಪ್ಪನ ಮನೆಯಲ್ಲಿ ರಾತ್ರಿಯ ಉಟೋಪಚಾರಗಳನ್ನು ಮುಗಿಸಿದರು. ”ಈಗಾಗಲೇ ಅತಿಯಾದ ಶಾಸ್ತ್ರಗಳಿಂದ ಮಕ್ಕಳು ಬೇಸತ್ತಿವೆ. ಮತ್ಯಾವ ಪುರಾಣವೂ ಬೇಡ. ಮಹಡಿಯಲ್ಲಿನ ರೂಮಿನಲ್ಲಿ ಎಲ್ಲವನ್ನೂ ಅಣಿಮಾಡಿದೆ. ಮಹೇಶಪ್ಪನನ್ನು ಆಗಲೆ ನಿಮ್ಮ ತಾತ ಅವರ ಮನೆಗೆ ಕಳುಹಿಸಿದ್ದಾರೆ. ಪುಟ್ಟೀ ಇಕಾ ಈ ಹಾಲಿನ ಲೋಟ ಹಿಡಿದುಕೊಂಡು ನೀನೂ ಹೋಗೆಂದು” ತಮ್ಮ ಮೊಮ್ಮಗಳಿಗೆ ಹೇಳಿ ಅವಳ ಕೈಗಿತ್ತು ಶುಭಹಾರೈಸಿ ಕಳುಹಿಸಿಕೊಟ್ಟರು ಬಸಮ್ಮನವರು.
ತನ್ನಂತರಂಗದ ಗೆಳೆಯನೊಡನೆ ಪತ್ನಿಯಾಗಿ ಬದುಕನ್ನು ಹಂಚಿಕೊಳ್ಳುವ ದಿನ, ತಾನು ಆತನಿಗೆ ಸಮರ್ಪಿಸಿಕೊಳ್ಳುವ ದಿನ, ಮೈಯೆಲ್ಲ ಪುಳಕಗೊಂಡಿತ್ತು. ಹೂಂ.. ಬಾಳಸಂಗಾತಿ ! ಅಬ್ಬಾ ನನಗೀಗಲೂ ನಂಬಲಾಗುತ್ತಿಲ್ಲ. ದೇವರೇ ನೀನೆಷ್ಟು ಕರುಣಾಮಯಿ. ನಾನು ಬಯಸಿದ್ದನ್ನು ನಿಧಾನವಾದರೂ ಬಾಚಿತಬ್ಬಿಕೊಳ್ಳುವಂತೆ ಕೊಟ್ಟೆ. ಈ ಪ್ರೀತಿ, ವಿಶ್ವಾಸ, ನಂಬಿಕೆ ಉಸಿರಿರುವವರೆಗೂ ಹುಸಿಯಾಗದಂತೆ ಇರಿಸಯ್ಯಾ ಎಂದು ಆರಾಧನಾಭಾವದಿಂದ ಕೈಯಲ್ಲಿ ಹಾಲಿನ ಲೋಟ ಹಿಡಿದು ತಮಗಾಗಿ ಸಿದ್ಧಪಡಿಸಿದ್ದ ರೂಮಿನೊಳಗೆ ಪ್ರವೇಶಿಸಿ ಬಾಗಿಲಿನ ಚಿಲಕವನ್ನು ಹಾಕಿದಳು ಮಾದೇವಿ. ಹಾಸಿಗೆಯ ಮೇಲೆ ಅಂಗಾತನಾಗಿ ಮಲಗಿದ್ದ ಮಹೇಶನನ್ನು ಕಿರುಗಣ್ಣಿನಿಂದ ನೋಡಿದಳು. ಕೈಯನ್ನು ತನ್ನ ಕಣ್ಣಿಗೆ ಅಡ್ಡಲಾಗಿಟ್ಟುಕೊಂಡದ್ದರಿಂದ ಎದ್ದಿದ್ದಾರೋ ಇಲ್ಲವೋ ತಿಳಿಯಲಿಲ್ಲ. ತಾನು ಬಂದದ್ದು ಚಿಲಕದ ಸದ್ದು ಯಾವುದೂ ಇವರಿಗೆ ಕೇಳಿಸಲಿಲ್ಲವೇ? ಅಥವಾ ಕೇಳಿಸಿದರೂ ಸುಮ್ಮನೆ.. ಅಷ್ಟರಲ್ಲಿ ”ದೇವೀ ಹಾಲಿನ ಲೋಟವನ್ನು ಅಲ್ಲಿಯೆ ಟೀಪಾಯಿಯ ಮೇಲಿಟ್ಟು ಇಲ್ಲಿ ಬಾ” ಎಂಬ ಕರೆ ಅವಳ ಊಹೆಗಳಿಗೆ ವಿರಾಮ ಹಾಕಿತು. ಅವನು ನಿರ್ದೇಶಿಸಿದಂತೆ ಹಾಲಿನ ಲೋಟವನ್ನು ಇರಿಸಿ ನಾಚಿಕೆಯಿಂದಲೇ ಅವನೆಡೆಗೆ ಹೋದಳು ಮಾದೇವಿ. ತನ್ನ ಸನಿಹಕ್ಕೆ ಬಂದು ಕುಳಿತ ಅವಳ ಕೈಯನ್ನು ಹಿಡಿದ ಮಹೇಶ. ಒಂದುಕ್ಷಣ ಅವಳಿಗೆ ಬೆಚ್ಚಿಬೀಳುವಂತಾಯಿತು. ತಕ್ಷಣ ಅವನ ಹಣೆ, ಕತ್ತು ಮುಟ್ಟಿ ನೋಡಿದಳು. ”ಇದೇನು ಮಹೀ ನಿನ್ನಮೈ ಹೀಗೆ ಕೆಂಡದಂತೆ ಸುಡುತ್ತಿದೆ. ಜ್ವರದ ಮಾತ್ರೆಯೇನಾದರು ಮನೆಯಲ್ಲಿದೆಯ ನೋಡುತ್ತೇನೆ” ಎಂದು ಎದ್ದಳು ದೇವಿ.
ಹಾಗೆ ಎದ್ದವಳ ಕೈಯನ್ನು ಜಗ್ಗಿಹಿಡಿದು ”ಬೇಡ ಈದಿನ ಕೊಠಡಿಯ ಒಳಗೆ ಬಂದಮೇಲೆ ಬಾಗಿಲು ತೆರೆದು ಹೊರಗಡೆ ಹೋಗಬಾರದು. ನಾನಾಗಲೇ ಜ್ವರದ ಮಾತ್ರೆ ತೆಗೆದುಕೊಂಡಿದ್ದೇನೆ. ಒಂದು ವಾರದಿಂದ ಶಾಸ್ತ್ರದ ಸಂಬಂಧ ಮೇಲಿಂದಮೇಲೆ ಸ್ನಾನಗಳು, ಇವುಗಳಿಂದ ಆಲಸ್ಯವಾದಂತಿದೆ. ಮಧ್ಯಾನ್ಹವೇ ಸ್ವಲ್ಪ ಇರುಸುಮುರುಸು ಆಗುತ್ತಿತ್ತು. ಆಗಲೇ ಮಾತ್ರೆ ತೆಗೆದುಕೊಂಡಿದ್ದರೆ ಭೇಷಿತ್ತು. ನಾನೇ ಉದಾಸೀನ ಮಾಡಿದೆ. ಆದರೆ ಈಗ ಹೆಚ್ಚಾಗಿದೆ ” ಎಂದು ಪೇಚಾಡಿಕೊಂಡ.
ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40646
(ಮುಂದುವರಿಯುವುದು)
–ಬಿ.ಆರ್.ನಾಗರತ್ನ, ಮೈಸೂರು
ಓದಿಸಿಗೊಂಡು ಹೋಗುವ ಕಥಾನಕ.
ಸಾಹಿತ್ಯ ಸಹೃದಯರಿಗೆ..ಧನ್ಯವಾದಗಳು..
ಎಂದಿನಂತೆ ಮತ್ತೊಮ್ಮೆ ಕಣ್ಣಾಡಿಸಿದೆ ಮೇಡಂ, ಚೆನಾಗಿ ಮೂಡಿ ಬರುತಿದೆ.
ಹೃತ್ಪೂರ್ವಕವಾದ ಧನ್ಯವಾದಗಳು ಮಂಜು ಸಾರ್
ಸುಂದರ ಕಥಾನಕ
ದೇವಿ ಮಹೇಶರ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿ ಪಾಯಸದೂಟ ಹೊಡೆಯುವ ಆಸೆಯಿತ್ತು…ನೀವಂತೂ ನಾಲ್ಕೇ ಸಾಲಿನಲ್ಲಿ ಮದುವೆ ಮುಗಿಸಿಬಿಟ್ಟು, ಮಹೇಶನಿಗೆ ಮೊದಲ ದಿನವೇ ಜ್ವರ ಬರಿಸಿ ಆರಾಮವಾಗಿ ಕೂತಿದ್ದೀರಪ್ಪಾ..!
ಎಂದಿನಂತೆ ಸುಂದರ, ಆತ್ಮೀಯ ಕಥಾನಿರೂಪಣೆ ಖುಷಿಕೊಟ್ಟಿತು ನಾಗರತ್ನ ಮೇಡಂ…
ಪಾಯಿಸದೂಟವಿರಲಿ ಮುಂದೆ ನೋಡಿ… ಪಾಯಿಸವೋ ಪರದಾಟವೋ ನಿಮ್ಮ ಪ್ರತಿಕ್ರಿಯಗೆ.. ಧನ್ಯವಾದಗಳು ಶಂಕರಿ ಮೇಡಂ.
ಧನ್ಯವಾದಗಳು ನಯನಮೇಡಂ
ಎಲ್ಲಾ ಚಂದದಿಂದ ಮೂಡಿ ಬರುತ್ತಿರುವಾಗ ಮಹೀಗೆ ಜ್ವರ ಬಂದುದು ಯಾಕೋ ಸರಿಯೆನಿಸಲಿಲ್ಲ.
ಧನ್ಯವಾದಗಳು ಪದ್ಮಾ ಮೇಡಂ