ಅಂಕೆಯಿಲ್ಲದ ಬದುಕು…
ಅರಳಿ ಬೆಳಗುವ ಸುಮವೇ ಕೇಳು ಎನ್ನ ಮಾತಾ…
ಸಭ್ಯತೆಯ ಸಂಸ್ಕೃತಿಯ ಚೌಕಟ್ಟಿನಲ್ಲಿರುವವರಗೆ ಮಾತ್ರ
ನಿನ್ನ ಈ ಅಪರಿಮಿತ ಅಂದ ಚೆಂದಕ್ಕೆ ಬೆಲೆ
ಕಣ್ಣ ತುಂಬಿಕೊಳ್ಳುವರು ಆಗ ನೋಡಿ ನಿನ್ನ ಜೀವ ಕಳೆ
ಹೊಳೆಯುವ ಹಳದಿ ದಳಗಳ ಮೋಡಿ ಮನವ ಸೆಳೆಯಬೇಕು
ಕಡು ಹಸಿರು ಬಣ್ಣದ ದಂಟು ಎಲೆಗಳೊಂದಿಗೆ ನಿನ್ನ ತೋರಬೇಕು
ಕಪ್ಪು ಕಂದು ಮಿಶ್ರಿತ ಎಣಿದ ಬೀಜಗಳ ಹಿನ್ನೆಲೆ ನಿನ್ನ ಚೆಲುವ ಲೋಕಕೆ ಸಾರಬೇಕು
ಕಾಯಕ ನಿಷ್ಠೆಯ ಸೂರ್ಯನ ಕಡೆ ನೀನು ಮುಖ ಮಾಡಿ ನಿಲ್ಲಬೇಕು
ನೀತಿ ನಿಯಮಗಳೆಂಬ ಮೇರೆಗಳು ನಿನ್ನ ಸೌಂದರ್ಯಕೆ ಮೆರಗು ನೀಡಬೇಕು
ಅಡ್ಡ ದಾರಿ ಅಕ್ರಮ ಬಯಕೆಗಳ ಹತ್ತಿಕ್ಕುವ ಕಟ್ಟಳೆಗಳು ನಿನ್ನ ಉಸಿರಾಗಬೇಕು
ನೈತಿಕ ಮೌಲ್ಯಗಳ ಮೀರಿದವರ ಬಾಳು ವರ್ಣವಿಲ್ಲದ ಕಪ್ಪು ಬಿಳುಪಿನಂತೆ
ಹಿರಿಯರ ಆದರ್ಶಗಳ ದಿಕ್ಕರಿಸುವವರ ಬದುಕು ಮೂಗುದಾರವಿಲ್ಲದ ಗೂಳಿಯಂತೆ
ಅಂಕೆ ತಪ್ಪಿದ ಮನ ಆಸೆಯ ಬಿರುಗಾಳಿಗೆ ಸಿಕ್ಕ ನಾವೆಯಂತೆ
ಶಂಕೆ ಅನುಮಾನಗಳ ಎದುರಿಸುವ ದಿನಚರಿ ಬದುಕಿದ್ದರೂ ಸತ್ತಂತೆ
ಸಭ್ಯ ನಾಗರೀಕ ಸಮಾಜದ ಕಟ್ಟುಪಾಡುಗಳ ಮೀರದಿರೋಣ
ಲಭ್ಯ ಅವಕಾಶಗಳಲಿ ಜೀವನ ಕಟ್ಟಿ ದೇವ ಕುಸುಮಗಳೆಂದು ಕರೆಸಿಕೊಳ್ಳೋಣ
(ಚಿತ್ರ ಕೃಪೆ :ಶರಭೇಶ ಕಣೆಕಲ್ ಮಠ 9ನೇ ತರಗತಿ ವಿದ್ಯಾರ್ಥಿ, ಜ್ಞಾನದೀಪ ಶಾಲೆ, ಶಿವಮೊಗ್ಗ)
-ಶರಣಬಸವೇಶ ಕೆ. ಎಂ
ತುಂಬ ಖುಷಿಯಾಯಿತು. ಬರೆಹದ ಬಾಲಕನಿಗೆ ಇದೋ ನಮಸ್ಕಾರ. ಅಭಿನಂದನೆ.
ಹೀಗೇ ಬರೆಯುತಿರು ಮಗು, ಭವಿಷ್ಯ ಉಜ್ವಲವಾಗಲಿ.
ಮಾಗಿದ ಮೇಲೆ ಬರೆವೆನೆನಬೇಡ; ಬರೆಯುತಲೇ ಮಾಗುವೆ ಎನುತಿರು!
ಮನಕ್ಕೆ ಮುದ ತರುವಂತೆ ಇರುವ..ಕವನ. ಬರೆಯುವ..ಮುಂದುವರೆಸು ಮಗು..ಶುಭವಾಗಲಿ..
Beautiful
ಅರ್ಥಪೂರ್ಣ ಕವನವು ಸುಂದರವಾದ ಪೂರಕ ಚಿತ್ರದೊಂದಿಗೆ ಶೋಭಿಸಿದೆ!
ಧನ್ಯವಾದಗಳು ಮಂಜುರಾಜ್ ಸರ್, ಬಿ.ಆರ್ ನಾಗರತ್ನ ಮೇಡಂ ಹಾಗೂ ನಯನ ಬಜಕೂಡ್ಲು ಮೇಡಂ ಅವರಿಗೆ. ಬರಹ ಪ್ರಕಟಿಸಿದ ಹೇಮಮಾಲ ಮೇಡಂ ಗೆ ವಿಶೇಷವಾದ ಧನ್ಯವಾದಗಳು
ಚಂದದ ಭಾವಪೂರ್ಣ ಕವಿತೆ.