ಹರಿಹರ ಕವಿಯ ಬಸವರಾಜದೇವರ ರಗಳೆ: ಬಸವಣ್ಣನ ಅಂತರಂಗ ವಿಕಸನ ಪ್ರತಿಮಾತ್ಮಕ ಚಿತ್ರಣ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಜಂಗಮಸಮಾಧಿ: ಬಸವಣ್ಣ ಪ್ರಾಸಂಗಿಕವಾಗಿ ತನ್ನ ಭಕ್ತಿಯ ನೆಲೆಯನ್ನು ವಿಸ್ತರಿಸುತ್ತಾ ಎಚ್ಚರ, ಕನಸು, ನಿದ್ರೆಗಳಲ್ಲೂ ಲಿಂಗ, ಶಿವ, ಜಂಗಮರ ಅಬೇಧವನ್ನು ಭಾವಿಸುವ ಸ್ಥಿತಿಯನ್ನು ತಲುಪುತ್ತಾನೆ. ಆತನಿಗೆ ಒಮ್ಮೆ ನಿದ್ರೆ ಬಂದಿದೆ. ಆದರೆ ಅದು ಅವನ “ಅಂಗುಲಿ ಕರಂ ನೆಚ್ಚಿ, ಉಸಿರಲಿ ಶರಣಾರ್ಥಿ ಎನುತಿರೆ ಅಸುವಿನೊಳು ಸಂಗನುಂ ಶರಣರುಂ ನೆಲೆಸಿರೆ” ಜಂಗಮಸಮಾಧಿಸ್ಥಿತಿಯಲ್ಲಿ ಕಣ್ಮುಚ್ಚಿ ಮಲಗಿದ್ದ ಸ್ಥಿತಿ ಆಗಿತ್ತು.

ದೂರದಿಂದ ದೇಶಾಂತರ ಪ್ರವಾಸ ಮಾಡುತ್ತಾ ಬಂದ ಶರಣರು ಬಸವಣ್ಣನನ್ನು ಕಾಣಲು ಬಂದು ಬಾಗಿಲಲ್ಲಿ ಇದ್ದವರನ್ನು ವಿಚಾರಿಸುತ್ತಾರೆ. “ಸಮಯವಿಲ್ಲೆನಲು ಅಮ್ಮೆವು. ಸಮಯಮಂ ಬಸವನಂ ನೀವೆ ಬಲ್ಲಿರಿ ದೇವ, ಕರುಣಿಸುವುದು” ಎಂದು ಬಾಗಿಲು ಕಾಯುವವರು ಬಸವಣ್ಣ ನಿದ್ರಿಸುತ್ತಿರುವ ವಿಷಯ ತಿಳಿಸುತ್ತಾರೆ. ಶರಣರು ತಿರುಗಿ ಹೋಗುತ್ತಾರೆ. ಬಸವಣ್ಣನ ಶರಣಾರ್ಥಿಯೆಂಬ ನುಡಿ ಶರಣರೊಳು ಸೇರಿತ್ತು. ಅದರಿಂದಾಗಿ ಬಸವಣ್ಣನ ಜೀವವೂ ಅವರೊಂದಿಗೆ ಅವರು ಹೋದಲ್ಲೆಲ್ಲ “ಬಳಿ ಬಳಿ ನಡೆ” ಯುತ್ತದೆ.

ಶಿವಪೂಜೆಯ ಸಮಯಕ್ಕೆ ಸತಿಯರು ಬಂದು ನೋಡಲು ಬಸವಣ್ಣನ ದೇಹದಲ್ಲಿ ಉಸಿರು ಕಂಡಿಲ್ಲ. ಅವರು ಶಿವನಿಷ್ಠೈಕ ಭಕ್ತರಿಗೆ ಒಂದು ಮಾತೂ ಹೇಳದೆ ಸಂಗನೊಳಗೆ ಬಸವಣ್ಣ ಸಂದ ಎಂದು ಚಿಂತಾಕ್ರಾಂತರಾದರು. ಅರಮನೆಯಲ್ಲಿದ್ದ ಶಿವಭಕ್ತರೂ ಬಸವಣ್ಣನ ದೇಹವನ್ನು ಮುಟ್ಟಿ ಮುಟ್ಟಿ ನೋಡಿದರು. ಬಸವಣ್ಣನ ದೇಹದಲ್ಲಿ ಪ್ರಾಣ ಸಂಚಾರದ ಚಿಹ್ನೆ ಕಾಣಲಿಲ್ಲ. ಕೊನೆಗೆ ಶಶಿಧರನ ಸೂಚನೆಯಿಂದ ಶಿವಭಕ್ತರೆಲ್ಲ ಕೂಡಿ ಯೋಚಿಸಿ ನಡೆದ ಸಂಗತಿಯನ್ನು ಬಾಗಿಲು ಕಾಯುವವರಿಂದ ಅರಿತು “ಶರಣರೇ ಪ್ರಾಣ ಆಗಿದ್ದ ಬಸವಣ್ಣನನ್ನು ಅರಸಿ ಹಾಗೆಯೇ ಹಿಂತಿರುಗಿದ ಶರಣರು” ಯಾರು ಎಂದು ಹುಡುಕಾಡಿದರು. ಪುರಕ್ಕೆ ಬಂದ ಹೊಸ ಭಕ್ತರನ್ನು ಕಂಡರು. ಆಗ “ಅಲ್ಲಿ ಕಾಣುತ್ತೆ ಬರಲು ಇಲ್ಲಿ ಚೇತನವಾಯ್ತು, ಅಲ್ಲಿ ನಡೆತರುಮಿರೆ ಇಲ್ಲಿ ಉಸಿರುಂಟಾಯಿತ್ತು”; “ಜಂಗಮಪ್ರಾಣಿ ಶಿವಭಕ್ತಿ ಕಣ್ದೆರೆವಂತೆ, ಸಂಗಮೇಶ್ವರನ ಕಡುನಿಷ್ಠೆ ಕಣ್ದೆರೆವಂತೆ” ಮೈಮುರಿದೆದ್ದು ಬಸವಣ್ಣ ಬಂದವರನ್ನು ಆರಾಧಿಸುತ್ತಾನೆ. ಹಾಡುತ್ತಾ “ಆ ಭಕ್ತರಂ ಬಿಗಿದಪ್ಪಿ ನಿಂದು ನೆರೆ ತನ್ನ ಹರಣಂಗಳಂ ಬಿಗಿಯಪ್ಪಿ” ತನ್ನ ಮತ್ತು ಭಕ್ತರ ನಡುವಿನ ಅಬೇಧವನ್ನು ಭಾವಿಸುತ್ತಾನೆ.

ಈ ಪಾರಲೌಕಿಕ ಅಭೇದ ಭಾವವು ಲೌಕಿಕ ಭೇದಭಾವವನ್ನು ಮೀರುವಿಕೆಯ ಭಾವ ಆದದ್ದು ಜಾತಿಭೇದವನ್ನು ಮೀರಿ ಬಸವಣ್ಣ ಕಂಬಳಿ ನಾಗಿದೇವನೊಡನೆ ಪ್ರಸಾದ ಸ್ವೀಕರಿಸಿದ ಸಂಗತಿಯಿಂದ. ಒಂದು ದಿನ ಭಕ್ತರು ಬರುತ್ತಿದ್ದಾರೆ ಎಂಬ ಅನ್ನಿಸಿಕೆ ಬಸವಣ್ಣನಲ್ಲಿ ದಟ್ಟವಾಗುತ್ತದೆ. ಅವರನ್ನು ತಾನೇ ಮುಂದಾಗಿ ಸ್ವಾಗತಿಸಲು ಪುರದ ಮುಂಭಾಗಕ್ಕೆ ಹೋಗುತ್ತಿರುತ್ತಾನೆ. ದಾರಿಯಲ್ಲಿ “ಓಹಿಲಯ್ಯಂಗೆ ಹಿತಾರ್ಥ, ಉದ್ಭಟಂಗೆ ಹಿತಾರ್ಥ, ಬಸವರಾಜಂಗೆ ಹಿತಾರ್ಥ, ಆರೋಗಿಸು” ಎನ್ನುವ ನಿವೇದನೆ ಘಂಟಾನಾದದೊಂದಿಗೆ ಮನೆಯೊಂದರಿಂದ ಕೇಳಿಬರುತ್ತದೆ. ತಕ್ಷಣ ಬಸವಣ್ಣ ಸಂಗನ ಪ್ರಸಾದವನ್ನು ಸ್ವೀಕರಿಸಲು ಆ ಮನೆಗೆ ಹೋಗುತ್ತಾನೆ. ಅದು ಹಿರಿಯ ಮಾಹೇಶ್ವರ ಕಂಬಳಿ ನಾಗಿದೇವನ ಮನೆಯಾಗಿರುತ್ತದೆ. ಎರಡನೇ ಆಲೋಚನೆಯನ್ನು ಮಾಡದೆ ಬಸವಣ್ಣ ಕಂಬಳಿ ನಾಗಿದೇವನ ಮನೆಯಲ್ಲಿ ಪ್ರಸಾದವನ್ನು ಸ್ವೀಕರಿಸುತ್ತಾನೆ. ಇದನ್ನು ನೋಡಿದ ವೈಷ್ಣವರ ಬೇಹಿನವನು ವೈಷ್ಣವ ಮುಖಂಡರಿಗೆ ವರದಿ ಮಾಡುತ್ತಾನೆ.

ಅವರೆಲ್ಲ ಅರಮನೆಗೆ ಬಂದು ಹೊಲೆಯ ಎನ್ನಬಾರದು, ಅವರಿಗೆ ಕೋಪ ಬರುತ್ತದೆ, ಅವರನ್ನು ಹಿರಿಯ ಮಾಹೇಶ್ವರರು ಎನ್ನಬೇಕು; ಅಂಥವರ ಮನೆಯಲ್ಲಿ ಬಸವಣ್ಣ ಉಂಡು ನಿನ್ನ ಓಲಗವನ್ನೂ ಹೊಲೆಮಾಡಲು ಬರುತ್ತಿದ್ದಾನೆ, ಅದನ್ನು ಸೈರಿಸಲು ನಮಗೆ ಆಗದು, ನಮಗೆ ಇಲ್ಲಿರಲು ಸಾಧ್ಯವಿಲ್ಲ, ಅಪ್ಪಣೆ ಕೊಡು” ಎಂದು ಬಸವಣ್ಣನ ಮೇಲೆ ದೂರು ಹೇಳಿದರು. ಇದರ ವಿಚಾರಣೆಗೆ, ಓಲಗದ ಮಡಿಯನ್ನು ಕಾಪಾಡುವುದಕ್ಕೆ, ಬಿಜ್ಜಳ ರಾಜಾಂಗಣದ ಬಯಲಲ್ಲಿ ಓಲಗಗೊಡುತ್ತಾನೆ. ತಲೆಗೇರಿದ ಅತಿಭಕ್ತಿಯಿಂದ ಹೊಲೆಯರೊಡನೆ ಅವರು ಹಿರಿಯ ಮಾಹೇಶ್ವರರು ಎಂದು ಬೆರೆತು, ಅವರೊಡನೆ ಊಟಮಾಡಿ ಸಾಮಾಜಿಕ ವ್ಯವಸ್ಥೆಯನ್ನು ಹೊಲೆ ಮಾಡಿದ್ದೀಯ, ಇದು ಸರಿಯಾದ ಮಾರ್ಗವಲ್ಲ ಎಂದು ಬಿಜ್ಜಳ ಬಸವಣ್ಣನನ್ನು ಆಕ್ಷೇಪಿಸುತ್ತಾನೆ. “ಹರನ ಅರಿಯದ ಹೊಲೆಯರ ಮನೆಯಂ ಪೊಕ್ಕು ಉಂಡುದಿಲ್ಲ” ಎಂದು ಆಕ್ಷೇಪಣೆಗೆ ಉತ್ತರಿಸಿದ ಬಸವಣ್ಣ ನಾನೇನು “ಮುಕುಂದ ಭಟ್ಟರ ಮನೆಯಲುಂಡೆನೆ …. ನಾರಣ ಕ್ರಮಿತರ ಕೇರಿಯಂ ಪೊಕ್ಕೆನೆ … ದಾಮೋದರ ಭಟ್ಟರಂ ಪ್ರೇಮದಿಂ ಸೋಂಕಿದೆನೆ” ಎಂದೆಲ್ಲ ಪ್ರಶ್ನಿಸುತ್ತಾನೆ. ಹಾರುವ, ಹೊಲೆಯ ಎನ್ನುವುದಕ್ಕಿದ್ದ ರೂಢಿಗತ ಅರ್ಥವನ್ನು ಅಲ್ಲಗಳೆಯುತ್ತಾನೆ. ಶಿವಭಕ್ತರೆಲ್ಲ ಒಂದೇ ಮತ್ತು ಅವರು ಪರಿಶುದ್ಧರು ಎಂದು ಸಾರುತ್ತಾನೆ. ಅರಸ “ಈ ಅತಿರೇಕದ ಮಾತಾಡಬೇಡ, ಶರಣರು ಶುದ್ಧರು, ವಿಪ್ರರು ಅಶುದ್ಧರು ಎನ್ನುವುದಕ್ಕೆ ಪ್ರಮಾಣವೇನು? ಭಕ್ತರ ಮೈಯಲ್ಲಿ ಹಾಲೇ? ವಿಪ್ರರ ಮೈಯಲ್ಲಿ ನೆತ್ತರೇ” ಎಂದು ಕೋಪದಿಂದ ಬಸವಣ್ಣನನ್ನು ಪ್ರಶ್ನಿಸಿದಾಗ ಬಸವಣ್ಣ ಅರಸ, ನೀನು ತಪ್ಪಿ ನುಡಿಯುವವನು ಅಲ್ಲ, ನೀನು ಹೇಳುತ್ತಿರುವುದು ಸರಿಯಾಗಿದೆ ಎಂದು ಅರಸನನ್ನು ಗೌರವಿಸಿ ಅಲ್ಲಿದ್ದ ವಿಪ್ರರ ಮೈ ಸೀಳಲು ರಕ್ತವೂ ಹುಳುವೂ ಸುರಿಯುತ್ತದೆ. ಅರಸ ಹೇಸುತ್ತಾನೆ. ಸುರಧೇನುವಿನಂತಿದ್ದ ಭಕ್ತನ ಅಂಗುಟವನ್ನು ಸೀಳಲು ಹಾಲು-ಹಳ್ಳ ಓಲಗದ ನಡುವೆ ಮಡುಗಟ್ಟುತ್ತದೆ.

ಶರಣನೊಡನೆ ಅಭೇದವನ್ನು ಭಾವಿಸುವ ಬಸವಣ್ಣ ತನ್ನದೆಲ್ಲವನ್ನೂ ಶರಣರಿಗೆ ಕೊಡಲು ಸಿದ್ಧನಿದ್ದ. ಅವರು ಉಂಡುದನ್ನು ಉಣ್ಣಲೂ, ಅವರು ಭೋಗಿಸಿದುದನ್ನು ಭೋಗಿಸಲೂ ಸಿದ್ಧನಿದ್ದ. ಇದನ್ನು ವೈಯಕ್ತಿಕ ಸತ್ಯವಾಗಿ ಮರ್ಯಾದಿಸಿದ್ದ. ಕಂಬಳಿ ನಾಗಿದೇವನ ಮನೆಯಲ್ಲಿ ತಾನು ಉಂಡಂತೆ ಎಲ್ಲರೂ ಉಣ್ಣಬೇಕು ಎಂದು ಯಾರಿಗೂ ಹೇಳಲಿಲ್ಲ. ಶರಣರು ಪರಿಶುದ್ಧರು ಎಂಬುದನ್ನು ಪವಾಡದಿಂದ ಸಾಬೀತುಪಡಿಸಿದ್ದ. ಪರಿಶುದ್ಧತೆ, ಏಕತೆಗಳ ಭಾವ ಆಂತರಂಗಿಕವಾದದ್ದು, ಪಾರಲೌಕಿಕ ನೆಲೆಯುಳ್ಳದ್ದು ಎಂದು ಸೂಚಿಸಿದ್ದ. ಇದಕ್ಕೆ ಲೌಕಿಕ ಆಯಾಮವನ್ನು ಕೊಡುವ ಪ್ರಸಂಗ ಕಿನ್ನರಬೊಮ್ಮಯ್ಯನ ಉಳ್ಳಿಯ ಆದ್ಯತೆಯನ್ನು ಮರ್ಯಾದಿಸಿದುದು.

ಕಿನ್ನರಬೊಮ್ಮಯ್ಯ ಬಸವಣ್ಣನ ಮನೆಗೆ ಬಂದು ಅಲ್ಲೇ ಕೆಲ ಕಾಲ ಇದ್ದು ಶಿವಪೂಜಾ ನಿರತನಾಗಿರುತ್ತಾನೆ. ಒಂದು ದಿನ “ಚೆನ್ನವಪ್ಪ ಉಳ್ಳಿಗಳ ಮೇಲೋರಗಕ್ಕೆಂದು” ತಂದು ಹಸನು ಮಾಡುತ್ತಿರುತ್ತಾರೆ. ಅದರ ಕಂಪು ಬಸವಣ್ಣನ ನಾಸಿಕಕ್ಕೆ ತಾಗಿ ಅವನು “ತಂದರಾರು ಈ ಅಭೋಜ್ಯವ” ಎಂದು ಕೇಳಿ ರಾಜಕಾರ್ಯಕ್ಕೆ ಹೋಗುತ್ತಾನೆ. ಇದನ್ನು ತಿಳಿದ ಕಿನ್ನರಬೊಮ್ಮಯ್ಯ “ಬರಲಾಗದಿಲ್ಲಿಗಾಂ ಬಂದಲ್ಲಿ ಸೈರಿಪುದು” ಎಂದುಕೊಂಡು ಕಡುಕೋಪದಿಂದ ಪೊರಮಟ್ಟು ಹೋಗುತ್ತಾನೆ. ಸಂಗತಿ ತಿಳಿದ ಬಸವಣ್ಣ ಭಯದಿಂದ ಮರವಟ್ಟು ಹಂಬಲಿಸಿ ಹಲುಬುತ್ತಾನೆ. ಬಂದ ಸುಕೃತ ತಿರುಗಿ ಹೋಯ್ತು ಎಂದು ಗಣವೃಂದದಲ್ಲಿ ನಿವಾರಣೋಪಾಯವನ್ನು ಬೇಡುತ್ತಾನೆ. ಅವರು “ಉಳ್ಳಿಯಂ, ಕಿನ್ನರಯ್ಯಂಗೆ ಆದ ಮುಳಿಸುವಂ ಉಳ್ಳಿಯಿಂದವೆ ತೀರ್ಚಿ ಕಳೆವುದು” ಎನ್ನುತ್ತಾರೆ.

ಬಸವಣ್ಣ ಅದರಂತೆ ರಸ್ತೆಗಳ ಉದ್ದಕ್ಕೂ ಉಳ್ಳಿಯ ಚಪ್ಪರ ಹಾಕಿಸಿ ಉಳ್ಳಿಯ ತೋರಣ ಕಟ್ಟಿಸಿ ಕುದುರೆ, ಆನೆ ಮೊದಲಾದವುಗಳನ್ನೆಲ್ಲ ಉಳ್ಳಿಯಿಂದಲೇ ಅಲಂಕರಿಸಿ ಅವುಗಳೊಂದಿಗೆ ಕಿನ್ನರಬೊಮ್ಮಯ್ಯನನ್ನು ನೋಡಲು ಅವನಿದ್ದಲ್ಲಿಗೆ ಹೋಗುತ್ತಾನೆ. ಅವರ ಸಮಾಗಮ ಹಾಲೊಳಗೆ ಹಾಲು ಕೂಡಿದಂತೆ, ಬೆಳಕು ಥಳಥಳಿಪ ಬೆಳಗಂ ಕೂಡಿದಂತಾಗಿ ಇಬ್ವರೂ ಒಂದಾಗುತ್ತಾರೆ. ಇಲ್ಲಿ ಬಸವಣ್ಣ ತಾನೊಲ್ಲದ ಆಹಾರವನ್ನು ಶರಣಪ್ರೀತಿಗಾಗಿ ಸ್ವೀಕರಿಸುವುದೊಂದೇ ಅಲ್ಲ, ಅದರಿಂದಲೇ ಚಪ್ಪರವಿಕ್ಕಿ ಅಲಂಕರಿಸಿ ಅದನ್ನು ಮೆರವಣಿಗೆ ಮಾಡಿ ಜಗತ್ತಿಗೆಲ್ಲ ಸಾರುತ್ತಾನೆ. ಆತನ ಹೃದಯ ಒಪ್ಪಿದ್ದು ಕೃತಿಯಲ್ಲಿಯೂ ರೂಪುಗೊಂಡು ಅದು ಸಾರ್ವತ್ರಿಕ ಸತ್ಯ ಎಂದಾಗುತ್ತದೆ.

ಶರಣಸತಿ ಬಸವಣ್ಣ: ಬಸವಣ್ಣ ಬ್ರಾಹ್ಮಣ ಕುಲ ಜಾತಿಗಳ ಹೆಮ್ಮೆಯನ್ನು ಬಿಟ್ಟು ಕಂಬಳಿ ನಾಗಿದೇವನಲ್ಲಿ ಉಂಡ. ಇದರಿಂದ ಅವನು ಶರಣಶ್ರೇಷ್ಠನಾಗುತ್ತಾನೆ; ಶರಣನೆ ಕುಲಜ, ಇತರರು ಅಲ್ಲ ಎಂಬುದು ಸಿದ್ಧವಾಗುತ್ತದೆ. ಶರಣರೆಲ್ಲರ ಏಕತೆಯ ಭಾವ ಮಾತು ಕೃತಿಗಳೆರಡರಿಂದಲೂ ಸಾಧಿತವಾಗುತ್ತದೆ. ಎಲ್ಲರೂ ಶರಣರಾಗಿ ಸಾಮಾಜಿಕ ಏಕತೆಯನ್ನು, ಅಭೇದತೆಯನ್ನು ಸಾಧಿಸಬೇಕು ಎಂಬುದು ಅಘೋಷಿತ ಸೂಚನೆ, ಆದೇಶ, ಆದರ್ಶವಾಗಿ ಹೊರಹೊಮ್ಮುತ್ತದೆ. ಇದಕ್ಕೆ ಪೂರಕವಾದದ್ದು “ಶರಣ ಸತಿ ಲಿಂಗ ಪತಿ” ಎನ್ನುವ ನಿಲುವು. ಇದನ್ನು ಸಾಧ್ಯವಾಗಿಸುವ ಮೊದಲ ಮೆಟ್ಟಿಲು ತನ್ನ ಅಂತರಂಗದ ಸತಿಯನ್ನು ಬಸವಣ್ಣ ಶರಣನಿಗೆ ನೀಡುವುದು.

ಶರಣರೆಲ್ಲರೂ ಒಂದು ಎನ್ನುವ ಭಾವದ ವಿಸ್ತರಣೆಯಾಗಿ ಬಸವಣ್ಣ ತನ್ನ ಸತಿಯು ಶರಣರ ಸತಿಯೂ ಹೌದು ಎಂದು ಭಾವಿಸಲು ಸಿದ್ಧನಾದನೇ? ಇಂಥ ಒಂದು ಸಂದರ್ಭದಲ್ಲಿ ಆತನ ಆಂತರಂಗಿಕ ಸೂಕ್ಷ್ಮ ಅನ್ನಿಸಿಕೆಗಳು ಹೇಗೆ ಶರಣರಲ್ಲಿ ಒಪ್ಪಿತವಾದವು? ಇದನ್ನು ಅರಿಯುವ ಸಂಗತಿಯನ್ನು ಕವಿ ಪ್ರಸ್ತಾಪಿಸಿದ್ದಾನೆ. ಅದು ಶಿವನು ರಾತ್ರಿ ಬಸವಣ್ಣನಲ್ಲಿ ಶಯನಭೋಗ ಬಯಸುವ ಪ್ರಸಂಗ.

ಶರಣರೂಪಿಯಾಗಿ ಶಿವ ಬಸವಣ್ಣನಲ್ಲಿಗೆ ರಾತ್ರಿ ಬಂದು ಮಲಗುವ ಮುನ್ನ “ಹೆಂಗೂಸಿಲ್ಲದೆ ಇರ್ದುದಿಲ್ಲ ಬಸವಾ” ಎನ್ನಲು ಬಸವಣ್ಣ ಪಟ್ಟಣದ ಪಣ್ಯಾಂಗನೆಯರಿಗೆ ಹೇಳಿ ಕಳುಹಿಸುತ್ತಾನೆ. ಅವರು ಸಿಗದೇ ಹೋದಾಗ ʼಸಿರಿ ಸರಸ್ವತಿಯರಂ ಕೀಳ್ಮಾಡುವʼ ತನ್ನ ಸತಿ ಮಾಯಿದೇವಿಯನ್ನು ಒಪ್ಪಿಸುವ ನಿರ್ಧಾರಕ್ಕೆ ಬರುತ್ತಾನೆ. ಆಕೆ ಇದನ್ನು ಒಪ್ಪದಿದ್ದರೆ ಏನು ಮಾಡುವುದು? ತಾನೇ ಸತಿಯಾಗಿ ರೂಪಾಂತರಗೊಂಡು ಲಿಂಗಪತಿಗೆ ತನ್ನನ್ನು ತಾನೇ ಒಪ್ಪಿಸಿಕೊಳ್ಳುವುದು ಎಂದು ತೀರ್ಮಾನಿಸುತ್ತಾನೆ. ಬಸವಣ್ಣನಂತೆ ಮಾಯಿದೇವಿಯೂ ಶರಣನಲ್ಲಿ ಲಿಂಗಪತಿಯನ್ನು ಭಾವಿಸಿದಾಗ ಆಕೆಯನ್ನು ಶರಣನ ಶಯ್ಯೆಗೆ ಬಿಟ್ಟು ತಾನು ಪೊರವಾಗಿಲೊಳು ಕಾದಿರುತ್ತಾನೆ. ಶಯ್ಯೆಯಲ್ಲಿ ಶಿವ ಅಂತರ್ಧಾನವಾಗುತ್ತಾನೆ. ಈ ಸಂಗತಿಯನ್ನು ಮಾಯಿದೇವಿಯಿಂದ ತಿಳಿದ ಬಸವಣ್ಣ ಅನುತಾಪದಿಂದ “ಎಲೆಲೆ ಕಾಡಿ ಕಾಡಲಮ್ಮದ ತಂದೆ, ಬೇಡಿ ಬೇಡಲಮ್ಮದ ಹಂದೆ, ಕೂಡಿ ಕೂಡಲಮ್ಮದ ಜಾತಿಯೋ ನೀಂ” ಎಂದು ಮರುಗುತ್ತಾನೆ.

ಸರ್ವವೂ ಶರಣಾರ್ಪಿತ ಎಂಬ ಭಾವ ತನ್ನ ಹೆಂಡತಿಯನ್ನು ಅರ್ಪಿಸುವಲ್ಲಿಯೂ ಪ್ರಾಮಾಣಿಕವಾಗಿ ಇದ್ದದ್ದು ಹರಿಹರನ ಈ ಚಿತ್ರದಲ್ಲಿ ಮನ ಮುಟ್ಟುತ್ತದೆ. ಸ್ಥಾವರ ಲಿಂಗದಲ್ಲಿ ಕಂಡ ಶಿವನನ್ನು ಜಂಗಮರ ಇಷ್ಟಲಿಂಗದಲ್ಲಿ ಮೊದಲು, ಅನಂತರ ಜಂಗಮ ಶಿವಭಕ್ತರಲ್ಲಿಯೂ, ಆನಂತರ ಬಾಹ್ಯ-ಅಂತರ, ಕುಲಜ-ಹೀನಜ ಇತ್ಯಾದಿ ಭೇದವಿಲ್ಲದೆ ಸರ್ವರಲ್ಲಿಯೂ ಶಿವನನ್ನು ಸಾಕ್ಷಾತ್ಕರಿಸಿಕೊಂಡ ಬಸವಣ್ಣ ಶಿವಗೋಷ್ಠಿಯಲ್ಲಿ ತಲ್ಲೀನನಾಗಿದ್ದಾನೆ. ಶಿವ ಪ್ರತ್ಯಕ್ಷನಾಗಿ “ನಡೆ ಬಸವ ಕೈಲಾಸಗಿರಿಗೆ ಪುಷ್ಪಕದೊಳಗೆ” ಎನ್ನುತ್ತಾನೆ. “ಶರಣರು ಒಕ್ಕುದರ ಸವಿ ಕೈಲಾಸದೊಳಗುಂಟೆ?” ಎಂದು ಪ್ರಶ್ನಿಸಿ ಶರಣರಿರುವ ಜಾಗವೇ ಕೈಲಾಸ, ಅದಕ್ಕೂ ಹೆಚ್ಚು “ಇಲ್ಲಿಯ ಸುಖಂ ದೇವ ಅಲ್ಲಿಯು ಉಳ್ಳೊಡೆ ಲೇಸು”, ಇದ್ದರೆ ತನ್ನನ್ನು ಈಗಲೇ ಕೊಂಡುಹೋಗು ಎಂದುಬಿಡುತ್ತಾನೆ. ಶಿವ ಬಸವಣ್ಣ ಬಾರನೆಂದು ನಿಜನಿವಾಸಕ್ಕೆ ಹಿಂತಿರುಗುತ್ತಾನೆ.

ಕೈಲಾಸವನ್ನೂ ಭೂಮಿಯನ್ನೂ ತೂಗುವ ಬಸವಣ್ಣ ಶರಣರುಳ್ಳ ಭೂಮಿಯೇ ಮಿಗಿಲೆಂದು ಶಿವನೇ ಒಪ್ಪಿಕೊಳ್ಳುವಂತೆ ಮಾಡುತ್ತಾನೆ. ವಿರೋಧಿಗಳಿಂದ ಮೊದಲು, ಅನಂತರ ತನ್ನವರಿಂದ, ಆನಂತರ ಕೊನೆಗೆ ತನ್ನಂತರಂಗದ ದೈವದಿಂದ ಪರೀಕ್ಷೆಗೆ ಒಳಪಡುವ ಬಸವಣ್ಣನ ವ್ಯಕ್ತಿತ್ವ ಹಂತ ಹಂತವಾಗಿ ಬೆಳೆದುದನ್ನು ಈ ಪರೀಕ್ಷೆಗಳು ಸ್ಪಷ್ಟಪಡಿಸುತ್ತವೆ. ಹೀಗೆ ಬಸವಣ್ಣ ಮುಟ್ಟಿದ್ದು ಶಿವಲಿಂಗ,
ನಡೆದದ್ದು ಶಿವಪಥವಾಗಿ ತನ್ನೊಂದಿಗೆ ಎಲ್ಲರನ್ನೂ ಶಿವಪಾರಮ್ಯಕ್ಕೆ ಏರಿಸಿ ಶಿವರೂಪಿ ಶರಣರಿದ್ದದ್ದೇ ಕೈಲಾಸವೆಂಬುದನ್ನು ಬಸವಣ್ಣ ಬದುಕಿ ಬದುಕಿಸಿ ತೋರಿಸುತ್ತಾನೆ. ಬಸವಣ್ಣ ತನ್ನ ಜೀವಿತದುದ್ದಕ್ಕೂ ತಾನು ನಂಬಿದ್ದನ್ನು ಒಮ್ಮೆಯೂ ಶಂಕಿಸದೆ ಅಚಲವಾಗಿ ಮೆರೆಸುವುದನ್ನು ಹರಿಹರ ಎಲ್ಲೂ ವಾಚ್ಯವಾಗಿಸದೆ ಸಂದರ್ಭಗಳ ಮೂಲಕವೇ ಪ್ರತಿಮಾತ್ಮಕವಾಗಿ ಸೂಚಿಸುತ್ತಾನೆ. ತನ್ನ ಬಸವರಾಜದೇವರ ರಗಳೆಯನ್ನು ಬಸವಣ್ಣನ ಆತ್ಮ ತನ್ನ ನೆಲೆಯನ್ನು ಕಂಡ ಮಾರ್ಗದ ಚಿತ್ರಶಾಲೆಯನ್ನಾಗಿಸಿದ್ದಾನೆ.

ಈ ಲೇಖನದ ಹಿಂದಿನ ಭಾಗ ಇಲ್ಲಿದೆ: https://www.surahonne.com/?p=40580

(ಮುಗಿಯಿತು)

ಗಜಾನನ ಈಶ್ವರ ಹೆಗಡೆ

4 Responses

  1. MANJURAJ H N says:

    ಗುರುಗಳೇ ನಮಸ್ಕಾರ, ಓದಿದೆ. ಹರಿಹರ ಕವಿ ನನಗೆ ಬಲು ಇಷ್ಟ.

  2. ಮಾಹಿತಿ ಪೂರ್ಣ ವಾದ ಲೇಖನ…ಉತ್ತಮ.ನಿರೂಪಣೆಯೊಂದಿಗೆ..ಅನಾವರಣ ಗೊಳಿಸುದ..ನಿಮಗೆ ಧನ್ಯವಾದಗಳು ಸಾರ್

  3. ನಯನ ಬಜಕೂಡ್ಲು says:

    ಸಾಕಷ್ಟು ಮಾಹಿತಿಗಳಿವೆ

  4. ಶಂಕರಿ ಶರ್ಮ says:

    ಬಸವಣ್ಣನವರ ಕುರಿತ ಪ್ರಬುದ್ಧ, ಸಂಗ್ರಹಯೋಗ್ಯ, ಬಹಳಷ್ಟು ಮಾಹಿತಿಗಳನ್ನು ಒಳಗೊಂಡ ಲೇಖನಕ್ಕಾಗಿ ಧನ್ಯವಾದಗಳು ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: