ಕಿಮೊ!
ಕನ್ನಡಿಗೂ ನನಗೂ ಈಗ ಸಂಬಂಧವಿಲ್ಲ
ಕೂದಲಿನ ಸಿಕ್ಕಿಲ್ಲ, ಬಾಚಣಿಕೆಯ ಹಂಗಿಲ್ಲ
ನುಣ್ಣನೆಯ ತಲೆಯ ಮೇಲೊಂದು ಸದಾ ಮುಸುಕು
ಕೂದಲು ಇದ್ದಾವೇನಕ್ಕಾ!!! ಎನ್ನುವ ಕೂಗಿಗೆ
ನಗೆಯುಕ್ಕುತ್ತದೆ
ಕ್ಯಾಲೆಂಡರ್‌ನಲ್ಲಿ ಕಿಮೊ ದಿನಾಂಕದ ಅಣಕು
ನಾನ್ಯಾಕೆ ಕೊರಗಬೇಕು! ಛಲದಿಂದ ಗೆಲ್ಲಬೇಕು.
ಹಠ ಹಿಡಿಯುತ್ತಿದ್ದ ಮಗ ಈಗ ಗಂಭೀರ, ಶಾಂತ
ಮಗಳಂತೂ ತಾಯಿಯಾಗಿ ನಿಂತಿರುವ ಹಂತ
ನನಗೆ ನೀನು ಬೇಕು ಎನ್ನುವ ಪತಿಯ ನೋಟದಲ್ಲಿನ ಆತಂಕ
ಅನಿವಾರ್ಯದ ಬದಲಾವಣೆ ಕತ್ತು ಹಿಸುಕುತಿದೆ
ಮುನಿಸು, ನಿರ್ಲಕ್ಷ್ಯ, ಅಸಡ್ಡೆಗಳಿಗಾಗಿ ಮನ ಹಾತೊರೆಯುತಿದೆ
ನಾನ್ಯಾಕೆ ಸೋಲಬೇಕು! ಆ ಕ್ಷಣಕೆ ಕಾಯಬೇಕು.
ಅಂದು ಮೊಳ ಹೂವಿಗೆ ಕೈಯ್ಯಾಡಿಸಿದ್ದ ದೊರೆ
ಈಗ ಘಳಿಗೆಗೊಮ್ಮೆ ನಿನಗೇನು ಬೇಕು ಎನ್ನುವ ಗೋಗರೆತ
ಆಸೆಗಳೆಲ್ಲ ಸಮಾಧಿಯಾಗಿದ್ದು ತಿಳಿಯದೇ ಹೋದ
ಗೋರಿಯ ಮೇಲೆ ನೆನಪಿನ ಗಿಡ ನೆಡಬಹುದು
ಹೂವಿಗೆ ಯಾರ ಮುಡಿಯೇರುವ ಭಾಗ್ಯವೂ ಇಲ್ಲ
ನಾನ್ಯಾಕೆ ನರಳಬೇಕು! ನಾ ಮತ್ತೆ ಅರಳಬೇಕು.
ಅಪ್ಪಿ ಬಿಕ್ಕಿದ ಅಮ್ಮ ಅಪ್ಪನ ಕರುಳಿನ ಸಂಕಟಕೆ
ನೆನಪಾಗಿದ್ದು ಮಕ್ಕಳ ತಬ್ಬಲಿತನದ ಭವಿಷ್ಯ
ಉಸಿರಿರುವ ತನಕ ಮಾತ್ರ ಈ ತೊಗಲುಗೊಂಬೆಯಾಟ
ನಿರ್ಜೀವ ನಗೆಯಿಂದಲೇ ಎಲ್ಲವನು ಎದುರುಗೊಳ್ಳಬೇಕು
ಕಣ್ಣೀರಿನಲೇ ನಗು ತೊಳೆಯುತಿರಬೇಕು
ನಾನ್ಯಾಕೆ ಅಳಬೇಕು! ನಾನಿನ್ನೂ ಬಾಳಬೇಕು.
ಅಕ್ಕಾ ನೀವು ಸ್ಮಶಾನಕೆ ಯಾವಾಗ ಬರುತ್ತೀರಿ
ನಾವಿಲ್ಲಿ ಕಾಯುತ್ತಿದ್ದೇವೆ ಉಡಿ ತುಂಬಲು
ಎಂದು ಕನಸಲಿ ಕರೆ ಮಾಡಿ ಕೇಳಿದ ಅತ್ತಿಗೆಗೆ
ಗಾಬರಿಯಿಂದೆದ್ದು ಕಿರುಚುತ್ತಲೇ ಹೇಳಿದ್ದೆ
ಸಾವಿಗೆ ಅರ್ಜಿ ಹಾಕಿದವರಲಿ ನಾನಿಲ್ಲ
ನಾನ್ಯಾಕೆ ಬರಬೇಕು! ನಾನಿನ್ನೂ ಬದುಕಬೇಕು.
-ನಳಿನಿ ಭೀಮಪ್ಪ, ಧಾರವಾಡ
ದುರ್ದೈವದಿಂದ ಅನೇಕರ ಕವಿತೆಯಾಗಿದೆಯಿದು..
ಆದರೆ ಕೊನೆಯ ಸಾಲು ಕವನಕ್ಕೂ ವಾಸ್ತವಕ್ಕೂ ಕೂಡಿಯೇ ಪರಿಹಾರ ಸೂಚಿಸುತ್ತದೆ..
ಧನ್ಯವಾದ ಸರ್
ಅದಿರಲಿ..
ಈ ಕವನ ಬರೆಯಬೇಕೆಂದೆನಿಸಿದ್ದು ಯಾರನ್ನು ನೋಡಿ?
ಎರಡು ಬಾರಿ ಓದಿದೆ. ಅರ್ಥವಾಗದ್ದಕ್ಕಲ್ಲವೇ ಅಲ್ಲ.
ಎಂಥ ವಿಷಾದ. ಶೋಕ ಸ್ಥಾಯೀ ; ನೈರಾಶ್ಯ ಆಗಿಲ್ಲ ಅದರ ತಾಯಿ!
ಜೀವನ್ಮುಖಿಯ ಸೆಳೆತವನು ದಾಖಲಿಸಿದ ಕೊನೆಯ ಸಾಲುಗಳಲಿ
ಅಡಗಿದ ನೋವಿನ ನಗೆಯ ಅಂತರಾಳ ಅರಿವಾಯಿತು. ಕೈ ಮುಗಿವೆ ಮೇಡಂ.
ಕಳೆದ ವಾರ ಇನ್ನಿಲ್ಲವಾದ ಅಪರ್ಣಾ ನೆನಪಾದರು.
ದುಗುಡವ ತಡೆಯಬಾರದು; ಅದು ಎದೆಭಾರ
ಬರೆದು, ಬರೆಯುತ ಅತ್ತು ಬಿಡಬೇಕು; ಅದೇ ಕರುಳ ತಾಗುವ ಅಕ್ಷರ
ಧನ್ಯವಾದ ಸರ್
ಮನ ಮೌನವಾಯಿತು ಮೇಡಂ,
ಯಾರಿಗೂ ಬರದಿರಲಿ ಈ ಸಂದರ್ಭ,,,
ದೇವರು ಎಲ್ಲರಿಗೂ ಆರೋಗ್ಯ ಭಾಗ್ಯ ಕೊಡಲಿ
ಧನ್ಯವಾದ ಮೇಡಂ. ಕೆಲ ಆತ್ಮೀಯರು ಅನುಭವಿಸುತ್ರಿರುವ ಈ ಕಿಮೋ ನೋವು ಕವಿತೆಯ ಸಾಲುಗಳಾಗಿ ರೂಪುಗೊಂಡವು
ಕವನ ಓದಿದೆ ಓದುತ್ತಾ… ಹೋದೆ ಮುಗಿಸಿದಾಗ ..ಮನ ನನಗೆರಿವಾಗದೆ ಆರ್ದವಾಯಿತು..ಹೌದು..ಅರ್ಜಿಹಾಕದೆ ಬರುವವ..ಕಾಲನೇ..ನಮ್ಮ ಬೆನ್ನ ಹಿಂದೆಯೇ ಇರುತ್ತಾನೆ…ಅಭಿವ್ಯಕ್ತಿಸುವಲ್ಲೇ ಏನೋ ನಿರಾಳ ಭಾವ..ಮೇಡಂ
ಧನ್ಯವಾದ ಮೇಡಂ
ಬಹಳಷ್ಟು ದುಃಖ ಆದರೂ ಧೈರ್ಯ ಹೇಳುತಿದೆ ಕವಿತೆ. ನನಸಾಗಲಿ ಬದುಕುವ ಆಸೆ.
ತುಂಬ ಆಪ್ತರಾದವರೊಬ್ಬರ ನೋವು ಮನಸ್ಸಿಗೆ ತಾಗಿ ಕವಿತೆಯಾಗಿ ಹೊಮ್ಮಿದೆ. ಈಗ ಅವರು ಹುಷಾರಾಗಿದಾರೆ. ಧನ್ಯವಾದ ಮೇಡಂ
ಹೃದಯಸ್ಪರ್ಶಿ ಸಾಲುಗಳು
ಧನ್ಯವಾದ ನಯನಾ
ನೋವು ತುಂಬಿದ ಸಾಲುಗಳು ಬದುಕುವ ಧೈರ್ಯವನ್ನೂ ತುಂಬುತ್ತಾ ಸಾಗಿದ ಪರಿ ಅದ್ಭುತ!..ಧನ್ಯವಾದಗಳು ಮೇಡಂ.
ಧನ್ಯವಾದ ಮೇಡಂ
ಮನಸ್ಸು ತಟ್ಟಿದ ಕವಿತೆ..ತುಂಬಾ ಚೆನ್ನಾಗಿದೆ
ಧನ್ಯವಾದ ಮೇಡಂ
ಮನ ಮುಟ್ಟಿದ ಆಪ್ತ ಕವಿತೆ ಸಕಾರಾತ್ಮ ನಿಲುವನ್ನು ಹೊಂದಿದ್ದು ಇಷ್ಟವಾಯಿತು.
ಧನ್ಯವಾದ ಮೇಡಂ