ದಿಲೀಪನ ನಿಸ್ವಾರ್ಥ ಸೇವೆ
ಪರೋಪಕಾರಾಯ ಫಲಂತಿ ವೃಕ್ಷಾ!! ಪರೋಪಕಾರಾಯ ವಹಂತಿ ನದ್ಯಃ।
ಪರೋಪಕಾರಾಯ ದುವಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಂ॥
ಅನ್ಯರಿಗೆ ಅಸಂತೋಷ, ದುಃಖ, ಕಷ್ಟ ಕೊಡುವುದು ಸರ್ವಥಾ ಸಲ್ಲದು. ಅನ್ಯರಿಗೆ ನಮ್ಮಿಂದಾದಷ್ಟು ಉಪಕಾರಗಳನ್ನು ಮಾಡಬೇಕು. ಒಂದು ವೇಳೆ ಅದು ಕೈಲಾಗದಿದ್ದರೆ ಉಪದ್ರವಾದಿಗಳನ್ನು ಮಾಡದೆ ತಮ್ಮಷ್ಟಕ್ಕೆ ತಾವಿರಬೇಕೇ ವಿನಹ ಅಪಕಾರ ಬಯಸಬಾರದು. ನಮ್ಮೆಲ್ಲ ಶರೀರವು ಪರಮಾತೃ ಸೃಷ್ಟಿಯಾಗಿರುವುದು ಪರೋಪಕಾರ ಮಾಡುವುದಕ್ಕಾಗಿ ಎಂಬುದು ನಮಗೆ ಋಷಿ ಮುನಿಗಳಿಂದ ಬಂದ ಸಂದೇಶ, ಹೀಗೆ ಎಷ್ಟೋ ಸಹಸ್ರ ಸಹಸ್ರ ವರ್ಷಗಳಿಂದ ನಾವೆಲ್ಲ ಒಪ್ಪಿಕೊಂಡು ಬರುವಂತಹ ಸನಾತನ ಉಪದೇಶವಿದ್ದರೂ ಅದನ್ನು ಅಪ್ಪಿಕೊಂಡು ಪಾಲಿಸುವವರು ಎಷ್ಟು ಮಂದಿ ಇದ್ದಾರೆ ಎಂಬುದು ಯೋಚಿಸಬೇಕಾದ ಅಂಶ.
ಕೆಲವು ವೇಳೆ ನಾವು ತಿಳಿದು ಮಾಡುವ ತಪ್ಪು, ಇನ್ನು ಕೆಲವು ವೇಳೆ ತಿಳಿಯದೇ ಆಗಿಬಿಡುವ ತಪ್ಪು. ಒಂದೊಮ್ಮೆ ತಿಳಿದು ಮಾಡಿದ ಮೇಲೆ ಮತ್ತೆ ಚಿಂತಿಸಿ ಪಶ್ಚಾತ್ತಾಪ, ಹೀಗೆ ನಾನಾ ತರದ ಮನುಜರಿರುತ್ತಾರೆ. ಆದರೆ ಪಶ್ಚಾತ್ತಾಪ ಎಂಬುದು ಪಾಪವನ್ನು ದಹಿಸುತ್ತದೆಯಂತೆ. ಇಂತಹ ಒಂದು ಉದಾಹರಣೆ ಪುರಾಣ ಪುರುಷ ದಿಲೀಪನ ಕತೆಯಿಂದ ನಾವು ತಿಳಿಯಬಹುದು.
ತ್ರೇತಾಯುಗದ ಸೂರ್ಯವಂಶದಲ್ಲಿ ‘ಸಗರ’ ಭೂಪತಿಯು ಪ್ರಸಿದ್ಧನಾಗಿದ್ದನು . ಸಗರ ವಂಶದ ಭಗೀರಥನು ತನ್ನ ಅರವತ್ತು ಸಾವಿರ ಪಿತೃಗಳಿಗೆ ಸದ್ಧತಿ ಒದಗಿಸುವುದಕ್ಕಾಗಿ ದೇವಗಂಗೆಯನ್ನು ಭೂಲೋಕಕ್ಕೆ ಇಳಿಸಿದ ಕತೆ ನಮಗೆ ತಿಳಿದಿದೆ. ದೇವಗಂಗೆಯನ್ನು ಭೂಲೋಕಕ್ಕೆ ಇಳಿಸುವುದೆಂದರೆ ಅದು ಸಾಮಾನ್ಯ ಕೆಲಸವೇ? ಹಲವು ಪ್ರಯತ್ನಪಟ್ಟು ಕಠಿಣತಮ ಅಡ್ಡಿ ಆತಂಕಗಳನ್ನು ಎದುರಿಸಿ ತನ್ನ ಗುರಿಯನ್ನು ಸಾಧಿಸಿ ಜಯಶೀಲನಾದ ಭಗೀರಥ, ಪ್ರಯತ್ನಶೀಲತೆಗೆ ಪ್ರಥಮ ಉದಾಹರಣೆ. ಈತನ ಕತೆಯನ್ನು ಇದೇ ಅಂಕಣದಲ್ಲಿ ತಿಳಿದಿದ್ದೇವೆ. ಇವನ ತಂದೆಯೇ ಧರ್ಮಾತ್ಮನಾದ ದಿಲೀಪ, ಇವನು ‘ಖಟ್ವಾಂಗ’ ಎಂಬ ನಾಮದಿಂದಲೂ ಕರೆಯಲ್ಪಡುತ್ತಾನೆ. ದಿಲೀಪನು ಇಕ್ಷಾಕುವಂಶದ ನಲವತ್ತನೆಯವನು. ಇವನು ಒಮ್ಮೆ ದೇವಾದಿದೇವತೆಗಳ ಸಂತುಷ್ಟಿಗಾಗಿ ಮಹಾಯಾಗವನ್ನು ಮಾಡಿ ಅವರ ಅನುಗ್ರಹ ಪಡೆದನು. ಹೀಗಿರಲು ಒಮ್ಮೆ ದೈತ್ಯರು ದೇವತೆಗಳೊಡನೆ ಕಾದಾಡಲು ಬಂದಾಗ ದೇವತೆಗಳು ದಿಲೀಪನನ್ನು ಕರೆಸಿದರು. ಮಹಾ ಪರಾಕ್ರಮಿಯಾದ ದಿಲೀಪನು ದೇವತೆಗಳಿಗೆ ಜಯವನ್ನೊದಗಿಸಿ ಹಿಂತಿರುಗುವಾಗ ಕಲ್ಪವೃಕ್ಷದಡಿಯಲ್ಲಿ ವಿಶ್ರಾಂತಿ ಪಡೆದ ಕಾಮಧೇನುವನ್ನು ತಿರಸ್ಕರಿಸಿ ಬಂದನು.
ಸನ್ಮಾನ್ಯರನ್ನು ನಿರ್ಲಕ್ಷಿಸಿ ಬಂದರೆ ಅವರಿಗೆ ಅಸಂತೋಷವಾಗುವುದು ಸಹಜವಲ್ಲವೇ? ಹಾಗೆಯೇ ಆಯ್ತು. ಕಾಮಧೇನು ದಿಲೀಪನ ಬಗ್ಗೆ ಕುಪಿತಳಾದಳು. ಮಾತ್ರವಲ್ಲ; ಕುಪಿತಳಾದ ಆಕೆ ‘ಅರಸನಾದ ನೀನು ಎಲ್ಲರಲ್ಲೂ ನಯ-ವಿನಯದಿಂದ ಆದರಿಸಬೇಕಾದವನು ಅದರಲ್ಲೂ ನನ್ನನ್ನು ಹೀಗೆ ನಿರ್ಲಕ್ಷಿಸಿ ಹೋದೆಯಲ್ಲ! ಈ ಬಗ್ಗೆ ನೀನೂ ಸ್ವಲ್ಪ ಅನುಭವಿಸು, ದೀರ್ಘಕಾಲ ನಿನಗೆ ಸಂತಾನವಾಗದೆ ಹೋಗಲಿ’ ಎಂದು ಶಾಪವಿತ್ತಳು.
ಶಾಪ ಫಲಿಸದೆ ಹೋದೀತೇ? ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ದೇವತಾ ರೂಪಿಗಳು, ಮಾತಾ-ಪಿತರು, ಗುರು-ಹಿರಿಯರು ಇವರೆಲ್ಲ ಸಂತೋಷಗೊಂಡರೆ ಅದಕ್ಕೆ ತಕ್ಕಂತೆ ಒಳ್ಳೆಯ ಫಲ. ಅವರಿಗೆ ಅಸಂತೋಷವಾದರೆ ಅದಕ್ಕನುಸರಿಸಿ ಸಂಬಂಧಪಟ್ಟವರಿಗೆ ಕೆಟ್ಟದಾಗುತ್ತದೆ ಎಂಬುದು ಇಲ್ಲಿಯ ಸೂಕ್ಷ್ಮ ಸಂದೇಶ, ಅದಕ್ಕಾಗಿಯೇ ಗುರು-ಹಿರಿಯರಲ್ಲಿ ವಿಧೇಯತೆಯಿಂದ ನಡೆದುಕೋ ಎಂದಿದ್ದಾರೆ.
ದಿಲೀಪನಿಗೆ ಹಲವು ಕಾಲ ಮಕ್ಕಳಾಗಲಿಲ್ಲ. ರಾಜ ಚಿಂತಿತನಾದ. ಕುಲಪುರೋಹಿತರಾದ ವಸಿಷ್ಠರನ್ನು ಕರೆಸಿ ಸಮಸ್ಯೆ ಪರಿಹಾರಕ್ಕೆ ಉದ್ಯುಕ್ತನಾದ. ವಸಿಷ್ಠರೆಂದರೆ ತ್ರಿಕಾಲಜ್ಞಾನಿಗಳು. ಭೂತ, ವರ್ತಮಾನ, ಭವಿಷ್ಯತ್ ಕಾಲಗಳನ್ನು ಚಿಂತಿಸಿ ಹೇಳಬಲ್ಲವರು, ಒಂದಷ್ಟು ಯೋಚಿಸಿದರು. ಕಾಮಧೇನುವಿನ ಕೋಪದ ಪರಿಣಾಮವೆಂದು ತಿಳಿಯಿತು. ಅದಕ್ಕಾಗಿ ಕಾಮಧೇನುವಿನ ಮಗಳಾದ ನಂದಿನಿಯ ಸೇವೆ ಮಾಡಲು ಸೂಚಿಸಿದರು. ಮಾತ್ರವಲ್ಲ; ಮಾರ್ಗದರ್ಶನವನ್ನೂ ಮಾಡಿದರು.
ರಾಜನು, ಕುಲ ಗುರುಗಳು ಹೇಳಿದಂತೆ ನಂದಿನಿಗೆ 21 ದಿನಗಳ ಸತತ ಸಂಪೂರ್ಣ ಸೇವೆಯನ್ನು ಮಾಡುತ್ತಾ ಬಂದನು. ತನ್ನ ಹಸಿವು, ಬಾಯಾರಿಕೆಗಳನ್ನು ಬದಿಗೊತ್ತಿ ದಿನದ 24 ಗಂಟೆಯೂ ನಂದಿನಿಯ ಪಕ್ಕವೇ ಕಾಲ ಕಳೆಯುತ್ತಿರುವ ದಿಲೀಪನ ಬಗ್ಗೆ ದೇವೇಂದ್ರನಿಗೆ ಅಭಿಮಾನ ಮೂಡಿತು. ಆತನನ್ನು ಪರೀಕ್ಷಿಸಲು ಬಯಸಿದನು. 21ನೇ ದಿವಸ ನಂದಿನಿಯೊಡನೆ ಹುಲ್ಲುಗಾವಲಿಗೆ ಹೊರಟ ದಿಲೀಪ. ಇದ್ದಕ್ಕಿದ್ದಂತೆ ಒಂದು ಹೆಬ್ಬುಲಿ ಬಂದು ನಂದಿನಿಯನ್ನು ತಿನ್ನಲು ಸನ್ನದ್ಧವಾಯಿತು. ಹುಲಿಯೊಡನೆ ಹೋರಾಡಿ ನಂದಿನಿಯನ್ನು ರಕ್ಷಿಸಬೇಕೆಂದು ದಿಲೀಪನಿಗೆ ಮನದಲ್ಲಿ ಮೂಡಿದರೂ ಕಾಳಗ ಮಾಡದೆ ಹಸಿದ ಹುಲಿಯ ಆಹಾರಕ್ಕಾಗಿ ತನ್ನನ್ನೇ ಅರ್ಪಿಸಿಕೊಂಡು ನಂದಿನಿಗೆ ರಕ್ಷಣೆ ಕೊಡುವುದು ಒಳಿತೆಂದು ನಿರ್ಧರಿಸಿ ಹುಲಿಯೊಡನೆ ‘ಹೆಬ್ಬುಲಿಯೇ ಹಸಿದ ನಿನ್ನ ಊಟಕ್ಕಾಗಿ ನನ್ನನ್ನೇ ತಿಂದು ಹೊಟ್ಟೆ ತುಂಬಿಸಿಕೋ. ಆದರೆ ಈ ನಂದಿನಿಗೆ ಏನೂ ಮಾಡಬೇಡ. ನಿನ್ನನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ’ ಎಂದನು.
ಹುಲಿಯೆಂದರೆ ಅದು ಸಾಮಾನ್ಯವೇ? ದೇವೇಂದ್ರನಲ್ಲವೇ? ಹುಲಿ ಮಾಯವಾಗಿ ಅಲ್ಲಿ ದೇವೇಂದ್ರ ಪ್ರತ್ಯಕ್ಷನಾದನು. ‘ರಾಜಾ ದಿಲೀಪ, ನಿನ್ನ ಭಕ್ತಿ, ಶ್ರದ್ಧೆ, ಸೇವೆಗೆ ಮೆಚ್ಚಿಕೊಂಡಿದ್ದೇನೆ. ನೀನು ಸಂತತಿಗಾಗಿ ನಂದಿನಿಯ ಸೇವೆ ಮಾಡುತ್ತಾ ಇದ್ದಿಯೇ! ನಿನ್ನನ್ನೇ ಹುಲಿಗೆ ಅರ್ಪಿಸಿಕೊಂಡರೆ ಮತ್ತೆ ಸಂತಾನವೆಲ್ಲಿಯದು? ಆದರೂ ಅದನ್ನೊಂದು ಲೆಕ್ಕಿಸದೆ ನಂದಿನಿಯ ರಕ್ಷಣೆಗೆ ಸನ್ನದ್ಧನಾಗಿದ್ದೀಯೇ, ನಿನ್ನ ಈ ನಿಸ್ವಾರ್ಥ ಸೇವೆಗೆ ಎಣೆಯಿಲ್ಲ. ಶೀಘ್ರದಲ್ಲಿಯೇ ನಿನಗೆ ಓರ್ವ ಸುಕುಮಾರ ಜನಿಸುತ್ತಾನೆ. ಆತನು ನಿನ್ನ ವಂಶಕ್ಕೆ ಅಂಟಿದ ಕಳಂಕವನ್ನು ನಿವಾರಿಸುತ್ತಾನೆ. ಹೋಗು, ಪ್ರಜಾಪರಿಪಾಲನೆ ಮಾಡು’ ಎಂದು ದೇವೇಂದ್ರನು ಮಾಯವಾದನು. ಕಾಲಕ್ರಮದಲ್ಲಿ ದಿಲೀಪನಿಗೆ ಭಗೀರಥ ಜನಿಸುತ್ತಾನೆ. ಆತನ ಅಸಾಮಾನ್ಯ ಯತ್ನದಿಂದ ದೇವಲೋಕದ ಗಂಗೆ ಭೂಲೋಕಕ್ಕೆ ಇಳಿದ ಕತೆ ನಾವು ತಿಳಿದಿದ್ದೇವೆ.
ಸೇವೆ ಎಂದರೆ ದಿಲೀಪನ ಸೇವೆ! ಪುರಾಣದ ಮಹಾ ಪುರುಷರು ಒಬ್ಬೊಬ್ಬರು ಒಂದೊಂದು ವಿಧದಲ್ಲಿ ನಮಗೆ ಶ್ರೇಷ್ಠರಾಗಿ ಕಾಣಿಸುತ್ತಾರಲ್ಲವೇ? ಒಟ್ಟಿನಲ್ಲಿ ತಮ್ಮ ತಮ್ಮ ಪಾಲಿಗೆ ಬಂದ ಕರ್ತವ್ಯಗಳನ್ನು ನಿಸ್ವಾರ್ಥ, ನಿರ್ವಂಚನೆಯಿಂದ ಮಾಡಬೇಕೆಂಬುದೇ ದಿಲೀಪನ ಸಂದೇಶ.
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಪ್ರಕಟಿಸಿದ ಹೇಮಮಾಲಾ ಹಾಗೂ ಓದುಗರಿಗೆ ವಂದನೆಗಳು.
ಚೆನ್ನಾಗಿದೆ ಮೇಡಂ
ದಿಲೀಪ ಚಕ್ರವರ್ತಿಯು ತನ್ನ ಜೀವವನ್ನೇ ಪಣಕ್ಕಿಟ್ಟು ಮಾಡಿದ ಸೇವೆಯು ಅತ್ಯಂತ ಉನ್ನತಮಟ್ಟದ್ದಾಗಿದೆ.. ಚಂದದ ಕಥೆಗಾಗಿ ವಂದನೆಗಳು ಅಕ್ಕ.
ಎಂದಿನಂತೆ ಪುರಾಣ ಕಥೆ ಓದಿಸಿಕೊಂಡು ಹೋಯಿತು..
ಧನ್ಯವಾದಗಳು ವಿಜಯಾ ಮೇಡಂ
ಪುರಾಣದ ಕತೆಯನು ಪರಿಚಯಿಸಿದ್ದಕೆ ಧನ್ಯವಾದ ಮೇಡಂ……