ಕಲ್ಲು ಮಾತಾಡಿತು
ಜೋಗಿಮಟ್ಟಿಯಾಗ ಜ್ವಾಳದ ರೊಟ್ಟಿಯುಂಡು
ಕಲ್ಲಿಕೋಟೆಯಾಗ ಕಾಲಮೆಟ್ಟಿ
ಜಲಾಶಯಾದಾಗ ಜಲಕುಡಿದು
ಚಂದ್ರವಳ್ಳಿ ತೋಟದಾಗ ಚಂದ ತಿರಗಾಡ್ಕೊಂಡು
ಚಿತ್ರದಾಗ ನೋಡಿದ ಏಳುಸುತ್ತಿನ ಕೋಟೆನ
ನೋಡೋಣಾಂತ ಸುತ್ತಿ ಸುತ್ತಿ ಬಂದ್ರೆ
ಅಬ್ಬಬ್ಬಾ! ಏನ್ ಕಲ್ಲಿನ ಕೋಟೆ ಅದ
ಕಲ್ಲು ಮಾತಾಡೋ ಸಮಯ….
ಒಂದೊಂದು ದಿಕ್ಕಿಗೂ
ಶಿಲೆಗಳು ಹಾಡಿದವು
ಕಲ್ಲು ನೂರು ಕಥೆ ಹೇಳಿತು
ಹಿಡಿಂಬೇಶ್ವರ, ಸಂಪಿಗೆ ಸಿದ್ದೇಶ್ವರ,
ಹನುಮಂತನ ಜಪಿಸೆಂದಿತು
ಪಾಂಡವರ ಪುರಾಣ ತಿಳಿಸಿತು,
ರಾಷ್ಟ್ರಕೂಟ, ಚಾಲುಕ್ಯರ
ವೀರಪರಂಪರೆಯ ನೆನಪಿಸಿತು
ಕಲ್ಲಲ್ಲ ನಾನು…ಬರೀ ಕಲ್ಲಲ್ಲ ನಾನು
ಜೀವಂತಿಕೆಯ ಕುರುಹನುಳಿಸಿದ
ಬೆಂದು ಅಳಿದುಳಿದ ಭರವಸೆಯು ನಾನು
ಇತಿಹಾಸ ಸೃಷ್ಟಿಸಿದ ಅಚಲವು ನಾನು
ವೀರಮದಕರಿ, ವೀರನಾರಿ ಓಬವ್ವ
ಪಾಳೇಗಾರರು
ಕಲಿಗಳಾಗಿ ಮೆರೆದ ಇತಿಹಾಸ ನಾನು
ಹೈದರಾಲಿ ಟಿಪ್ಪು ಕೂಡಾ
ಧರ್ಮಗಳ ಬಾಂಧವ್ಯ ಬೆಸೆದ
ಇತಿಹಾಸ ನಾನು
ಯುದ್ಧತಂತ್ರ ಸಂಶೋಧನೆಯ
ಶೌರ್ಯ ಪರಾಕ್ರಮಗಳ ಸಂಕೇತದ
ಸಿಡಿಲು ಗುಡುಗಿಗೂ ಜಗ್ಗದ ಬಂಡೆ ನಾನು
ಕೌಟಿಲ್ಯನ ಅರ್ಥಶಾಸ್ತ್ರದ ದುರ್ಗಗಳ
ವಿಸ್ಮಯಕಾರಿ ಸಂಕೇತ ನಾನು
ಅಗಸೆ ಬಾಗಿಲು, ದಿಡ್ಡಿ ಬಾಗಿಲು,
ಕಳ್ಳಗಿಂಡಿಯ ಗುಪ್ತದ್ವಾರಗಳ
ಜಾಣ್ಮೆ ನಾನು
ಒನಕೆ ಕಿಂಡಿ……ಮದ್ದುಬೀಸುವ ಕಲ್ಲಗಳ
ದಾಳಿಗೆ ತುತ್ತಾದ ಅರಮನೆಯ
ಅವಶೇಷಗಳ ಪ್ರತಿಮೆ ನಾನು
ಖಂಡಕಾವ್ಯ, ಕಥನಕಾವ್ಯ,
ಜುಂಜಪ್ಪನ ಮಹಾಕಾವ್ಯ
ಸಿರಿಯಜ್ಜಿ,ತೋಪಮ್ಮ , ಜಯಮ್ಮ, ಲಾಳಸಿಂಗಿ
ಸೋಮಣ್ಣರ ಕಥೆಹೇಳುವ ಪುಟಗಳು ನಾನು
ಉರುಮೆ , ತಮಟೆ, ಖಾಸಾ ಬೇಡರ ಪಡೆ
ಮೂಡಲಪಾಯ, ವೀರಗಾಸೆ
ಸೋಬಾನೆ, ಲಾವಣಿಗಳ ಸೃಷ್ಟಿಸಿದ ಕಲ್ಲು ನಾನು
ಶಾಮರಾಯ, ಸುಬ್ಬರಾವ್, ವೆಂಕಣ್ಣಯ್ಯ ,
ಶಾಸ್ತ್ರಿಗಳು ಸಾಹಿತಿಗಳ ನೆನಪ ತರುವ
ಕಲ್ಲು ನಾನು
ತಾಯಿ ತುಂಗೆ ತಡಿಯಲೆದ್ದ
ವಿವೇಕದ ಮುರುಗಾಮಠದ
ಜ್ಞಾನ ದೀವಿಗೆ ನಾನು
ನಾನು ಬರಿ ಕಲ್ಲಲ್ಲ ನಿಮ್ಮೆಲ್ಲರ
ಎದೆಯಲ್ಲಿ ಕಿಚ್ಚನೆಬ್ಬಿಸಿದ ಸೊಲ್ಲು ನಾನು…
ಸೊಲ್ಲು ನಾನು.
-ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ
ಅತ್ಯತ್ತಮ ಕವನ.ಚಿತ್ರದುರ್ಗದ ಹಿರಿಮೆ ಎತ್ತಿ ತೋರಿಸುವ ಕವನ
ಧನ್ಯವಾದಗಳು
ಚಿತ್ರದುರ್ಗದ ಇತಿಹಾಸ ಬಿಂಬಿಸುವ ಅರ್ಥಪೂರ್ಣ ಕವನ
ಸೂಪರ್ ರೀ…
ಧನ್ಯವಾದಗಳು
ಚಿತ್ರ ದುರ್ಗವನ್ನು ಒಂದು ಇಂದು ಸುತ್ತು ಹಾಕಿಬಂದಂತಾಯಿತು ಸೋದರಿ ಚೆನ್ನಾದ ಕವಿತೆ..
ಅನುಮೋದನೆಗೆ ಧನ್ಯವಾದಗಳು
ತುಂಬಾ ಸೊಗಸಾಗಿದೆ
ನಮ್ಮೂರು ಚಿತ್ರದುರ್ಗದ ವರ್ಣನೆ ಓದಿ ತುಂಬಾ ಸಂತೋಷವಾಯಿತು
ವಂದನೆಗಳು ಗೆಳತಿ
Thumbha channagedy
ಚಿತ್ರದುರ್ಗದ ಕಲ್ಲಿನ ಕೋಟೆ ಬರೇ ಕಲ್ಲಲ್ಲ….ಅಲ್ಲಲ್ಲಿ ಕಥೆ ಹೇಳುವ ಕಲ್ಲು! ಕವನ ಬಹಳ ಚೆನ್ನಾಗಿದೆ.