ನೆನಪಿನ ಜೋಳಿಗೆಯಲಿ..
ಯೂರೋಪ್ ಪ್ರವಾಸಕ್ಕೆಂದು ಕತಾರ್ ವಿಮಾನದಲ್ಲಿ ಪಯಣಿಸುತ್ತಿರುವಾಗ ಗಗನಸಖಿಯೊಬ್ಬಳು ಲಿಪ್‌ಸ್ಟಿಕ್ ಹಚ್ಚಿದ್ದ ತುಟಿಗಳಲ್ಲಿ, ‘Have a chocolate mam’ ಎಂದು ಮಧುರವಾಗಿ ಉಲಿಯುತ್ತಾ ಒಂದು ಚೆಂದದ ಟ್ರೇಯನ್ನು ನನ್ನ ಮುಂದೆ ಹಿಡಿದಳು. ಅವು ಎಂದಿನಂತೆ ಕ್ಯಾಡ್‌ಬರೀಸ್ ಚಾಕೋಲೇಟ್ ಆಗಿರಲಿಲ್ಲ. ಬದಲಿಗೆ ಒಂದು ಪ್ಲಾಸ್ಟಿಕ್ ಪೇಪರ್‌ನಲ್ಲಿ ಸುತ್ತಿದ್ದ ಎರಡೆರಡು ಪುಟ್ಟ ಗೋಲಿಗಳಿಂತಿದ್ದ ಪೆಪ್ಪರ್‌ಮೆಂಟ್. ಅರೆ ಇದೇನಿದು ಎಂದು ಕುತೂಹಲದಿಂದ ಅದರ ಮೇಲಿದ್ದ ಒಕ್ಕಣೆಯನ್ನು ಓದಿದೆ, ‘Tamarind and Jaggery’ ಎಂದು ಬರೆಯಲಾಗಿತ್ತು. ಅದನ್ನು ಆತುರದಿಂದ ಬಿಡಿಸಿ ಬಾಯಿಗೆ ಹಾಕಿದಾಗ, ಬಾಲ್ಯದ ನೆನಪುಗಳು ಮರುಕಳಿಸಿದ್ದವು.
ಪ್ರತೀ ವರ್ಷ ಹೊಸ ಹುಣಿಸೆ ಹಣ್ಣು ಬಂದಾಗ, ಅಮ್ಮ ಸಂತೆಗೆ ಹೋಗಿ ವರುಷಕ್ಕಾಗುವಷ್ಟು ಹುಣಿಸೆ ಹಣ್ಣು ಖರೀದಿಸಿದಾಗ ಮನೆ ಮಂದಿಗೆಲ್ಲಾ ಕೆಲಸ. ಅದರ ಬೀಜವನ್ನೆಲ್ಲಾ ಬಿಡಿಸಿ ಒಣಗಲು ಹಾಕಿ, ನಂತರ ಉಪ್ಪು ಬೆರೆಸಿ ಡಬ್ಬಗಳಲ್ಲಿ ತುಂಬಿಸಿಡುತ್ತಿದ್ದೆವು. ಅದರೊಳಗಿನಿಂದ ಸ್ವಲ್ಪ ಹುಣಿಸೆ ಹಣ್ಣನ್ನು ಕದ್ದು, ಗಂಟು ಕಟ್ಟಿ ಸಂಜೆ ಆಟಕ್ಕೆಂದು ಪಾರ್ಕ್‌ಗೆ ಹೋದಾಗ ಒಯ್ಯುತ್ತಿದ್ದೆವು. ಜೊತೆಯವರು ಉಪ್ಪು, ಬೆಲ್ಲ, ಹಸಿಮೆಣಸು, ಜೀರಿಗೆ ತರುತ್ತಿದ್ದರು. ಪಾರ್ಕ್‌ನ ಮೂಲೆಯಲ್ಲಿದ್ದ ಕಲ್ಲಿನ ಚಪ್ಪಡಿಯನ್ನು ನಾವು ತೊಟ್ಟಿದ್ದ ಲಂಗದಿಂದಲೇ ಒರೆಸಿ, ಅದರ ಮೇಲೆ ನಾವು ತಂದ ಹುಣಿಸೆ ಹಣ್ಣು ಇತ್ಯಾದಿಗಳನ್ನೆಲ್ಲಾ ಸುರಿದು, ಇನ್ನೊಂದು ಗುಂಡಾದ ಕಲ್ಲಿನಿಂದ ಉರುಟು ಉರುಟಾಗಿ ಕುಟ್ಟುಂಡಿಯನ್ನು ಅರೆಯುತ್ತಿದ್ದೆವು. ಸುತ್ತ ಮುತ್ತ ಬಿದ್ದಿರುತ್ತಿದ್ದ ಕಡ್ಡಿಗಳನ್ನು ಹೆಕ್ಕಿ ತಂದು ನುಣ್ಣಗಾದ ಕುಟ್ಟುಂಡಿಯನ್ನು ಉಂಡೆ ಮಾಡಿ, ಬಾದಾಮಿ ಆಕಾರದಲ್ಲಿ ಸಿಕ್ಕಿಸಿ ಚೀಪುತ್ತಿದ್ದೆವು. ಹುಳಿ, ಖಾರ, ಸಿಹಿ ಮಿಶ್ರಿತವಾದ ಕುಟ್ಟುಂಡಿಯನ್ನು ಚೀಪುತ್ತಿದ್ದರೆ, ಅಮಲೇರಿದಂತಹ ಅನುಭವ. ಈ ಲೋಕದ ಅರಿವೇ ನಮಗಿರುತ್ತಿರಲಿಲ್ಲ. ಕಡ್ಡಿಗೆ ಅಂಟಿದ್ದನ್ನು ಚೂರೂ ಬಿಡದೆ ನೆಕ್ಕುತ್ತಿದ್ದವು. ಈಗಲೂ ಕುಟ್ಟುಂಡಿಯನ್ನು ನೆನಸಿಕೊಂಡರೆ ಬಾಯಲ್ಲಿ ನೀರೂರುವುದು. ಇದು ಅಂದಿನ ಕಥೆ, ಈಗ ಮಗನೋ, ಮೊಮ್ಮಗನೋ ಕೆಳಗೆ ಬಿದ್ದ ಚಾಕೋಲೇಟನ್ನೇನಾದರು ಎತ್ತಿಕೊಂಡರೆ ಸಾಕು, ಅದನ್ನು ಕೆಳಗೆಸೆ ಎಂದು ಗದರುವವರು ನಾವೇ.
ಕುಟ್ಟುಂಡಿ ಮೆದ್ದ ಮೇಲೆ, ಮರಕೋತಿ ಆಟವನ್ನು ನಿರ್ಭಿಡೆಯಿಂದ ಆಡುತ್ತಿದ್ದೆವು. ಉದ್ದನೆಯ ಲಂಗ ಜಾಕೀಟು ಧರಿಸಿದ್ದರೂ ಲೀಲಾಜಾಲವಾಗಿ ಮರ ಹತ್ತುತ್ತಿದ್ದೆವು. ಮರದ ಕೆಳಗೆ ಕುಳಿತು ಹರಟುತ್ತಿದ್ದ ಹಿರಿಯ ನಾಗರೀಕರೇನಾದರೂ ಗದರಿದರೆ, ನಾವು ಅವರನ್ನು, ‘ಡಂಗು ಡಬೋ’ (ಅಂದರೆ ತಲೆಕೆಳಗಾಗಿ ಮಾಡಿದ ‘ಬೋಡ ಗುಂಡ’ ಎಂಬ ಪದ) ಎಂದು ಅಣಕಿಸುತ್ತಾ ಕೋತಿಗಳ ಹಾಗೆ ಮರದಿಂದ ಮರಕ್ಕೆ ಜಿಗಿಯುತ್ತಿದ್ದೆವು. ಹುಲ್ಲಿನ ಮಧ್ಯೆ ಬೆಳೆಯುತ್ತಿದ್ದ ಅಡ್ಡಿಕೆ ಗಿಡದ ಹೂಗಳನ್ನು ಕಿತ್ತು, ‘ನೂರು ರೂಪಾಯಿ ಕೊಡ್ತೀಯೋ ಅಥವಾ ತಲೆ ಹಾರಿಸಲೋ’ ಎಂದು ಲೂಟಿಕೋರರಂತೆ ಗುಟುರು ಹಾಕುತ್ತಿದ್ದವು. ಎದುರು ಪಾರ್ಟಿಯವರು ಹಣ ಕೊಡಲ್ಲ ಎಂದಾಕ್ಷಣ ಆ ಹೂವಿನ ತಲೆ ಹಾರಿಸಿ ಗಹಗಹಿಸಿ ನಗುತ್ತಿದ್ದೆವು. ಪಾರ್ಕಿನಲ್ಲಿ ಬೆಳೆದಿದ್ದ ಉಚ್ಚೆಕಾಯಿ/ಪಿಚಕಾರಿ ಮರದಿಂದ ಉದುರಿದ ಗೋಡಂಬಿಯಾಕಾರದ ಮೊಗ್ಗುಗಳನ್ನು ಆರಿಸಿ, ಕುಂಟಪಿಲ್ಲೆ ಆಟದಲ್ಲಿ ಸೋತವರ ಮುಖಕ್ಕೆ ಪಿಚಕಾರಿಗಳಿಂದ ನೀರನ್ನು ಚಿಮ್ಮಿಸುತ್ತಿದ್ದೆವು. ಕೆಲವು ಬಾರಿ, ಆ ರಸ ಕಣ್ಣಿಗೆ ಬಿದ್ದು ಅವರು ಲಬೋ ಲಬೋ ಎಂದು ಕಿರುಚಾಡಿದಾಗ, ಅಲ್ಲಿಂದ ಮಿಂಚಿನ ವೇಗದಲ್ಲಿ ಓಡುತ್ತಿದ್ದೆವು.
ಮತ್ತೊಂದು ಮರದಡಿ (ಮಳೆ ಮರ) ಪುಟ್ಟ ಪುಟ್ಟ ಗುಲಾಬಿ ಎಸಳಿನ ಬ್ರಷ್ ಆಕಾರದ ಹೂಗಳು ಉದುರುತ್ತಿದ್ದವು. ನಮಗೂ ಅಪ್ಪನ ಹಾಗೆ ಶೇವ್ ಮಾಡಿಕೊಳ್ಳ್ಳುವ ಆಸೆ, ಆ ಹೂಗಳಿಂದ ನಮ್ಮ ಕೆನ್ನೆಗಳ ಮೇಲೆ ಶೇವ್ ಮಾಡಿಕೊಂಡಂತೆ ನಟಿಸುತ್ತಿದ್ದೆವು. ಅಪ್ಪನ ಹಾಗೆ ಉಳಿದವರ ಮೇಲೆ ಜೋರು ಮಾಡಿ ಗಡಸು ಧ್ವನಿಯಲ್ಲಿ ಮಾತನಾಡುತ್ತಾ ಎಲ್ಲರನ್ನೂ ನಕ್ಕು ನಗಿಸುತ್ತಿದ್ದೆವು. ಆ ಪಾರ್ಕಿನ ತುಂಬಾ ಆಕಾಶ ಮಲ್ಲಿಗೆ ಮರಗಳು, ಸಂಜೆ ಹೊತ್ತು ಪರಿಮಳ ಹೊತ್ತು ತರುತ್ತಿದ್ದ ಆ ಹೂಗಳನ್ನು ಆರಿಸಿ, ಆ ಹೂಗಳ ತೊಟ್ಟನ್ನೇ ಹೆಣೆದು ಮಾಲೆ ಮಾಡಿ ಮರದ ಕೆಳಗಿದ್ದ ಚೌಡಿಯ ವಿಗ್ರಹಕ್ಕೆ ಹಾಕಿ, ಪರೀಕ್ಷೆಯಲ್ಲಿ ಪಾಸು ಮಾಡಿಸು ಎಂದು ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದೆವು. ಕತ್ತಲಾಗುತ್ತಿದ್ದೆ, ಮನೆಗೆ ಹೋಗೋಣ ಎಂದು ನಿರ್ಮಲಕ್ಕ ಹೇಳಿದರೆ, ಮನಸ್ಸಿಲ್ಲದ ಮನಸ್ಸಿನಿಂದ ಮನೆ ಕಡೆ ಓಟ. ಮನೆಗೆ ಹೋಗುವ ಹಾದಿಯಲ್ಲಿ ಒಂದು ಕಿರಿಸ್ತಾನರ ಸ್ಮಶಾನವಿತ್ತು, ಅಲ್ಲಿದ್ದ ಮರಗಳಲ್ಲಿ ಸತ್ತವರು ದೆವ್ವಗಳಾಗಿ ಸೇರಿಕೊಂಡಿರುತ್ತಾರೆ ಎಂದು ಜೊತೆಯವರು ಹೇಳುತ್ತಿದ್ದರು. ಅಲ್ಲಲ್ಲಿ ಎತ್ತರವಾದ ಕಂಬಗಳ ಮೇಲೆ ನೆಟ್ಟಿದ್ದ ಕ್ರಾಸ್‌ಗಳು ನಸುಗತ್ತಲಲ್ಲಿ ಮಾನವಾಕೃತಿ ತಾಳಿದ ಹಾಗೆ ಕಾಣುತ್ತಿದ್ದವು. ಗೆಳೆಯನೊಬ್ಬ, ದೆವ್ವಗಳು ಚಪ್ಪಲಿಗೆ ಹೆದರುತ್ತವೆ ಎಂದು ಹೇಳಿದಾಗ, ನಾವು ಕಾಲಿನಲ್ಲಿದ್ದ ಚಪ್ಪಲಿಯನ್ನು ಕೈನಲ್ಲಿ ಹಿಡಿದು ಓ ಎಂದು ಕೂಗುತ್ತಾ ಮನೆ ಕಡೆ ಓಡುತ್ತಿದ್ದೆವು. ಆ ಬೀದಿಯಲ್ಲಿ ಮೊದಲು ಸಿಗುವ ಮನೆ ದೇವಿಯದು, ನಾವೆಲ್ಲಾ ಅವರ ಮನೆಯಲ್ಲಿ ನೀರು ಕುಡಿದು ಮುಂದೆ ಸಾಗುವುದು ರೂಢಿಯಾಗಿತ್ತು. ದೇವಿ ಅವರ ಮನೆ ಹಿತ್ತಿಲಲ್ಲಿದ್ದ ಭಾವಿಯಿಂದ ನೀರು ಸೇದಿ, ಒಂದು ಹಿತ್ತಾಳೆ ಚೊಂಬಿನಲ್ಲಿ ತಂದು ನಾವು ಒಡ್ಡಿದ ಬೊಗಸೆ ತುಂಬಾ ನೀರು ಹಾಕುತ್ತಿದ್ದಳು. ಗಂಟೆಗಳ ಕಾಲ ಆಟವಾಡಿ ದಣಿದ ನಮಗೆ, ಧಾರೆ ಧಾರೆಯಾಗಿ ಬೊಗಸೆಗೆ ಬೀಳುವ ನೀರು ಅಮೃತಕ್ಕಿಂತ ಸವಿಯಾಗಿರುತ್ತಿತ್ತು. ನೀರು ಕುಡಿಯುವಾಗ ಬಟ್ಟೆಯೆಲ್ಲಾ ಒದ್ದೆ, ಮನೆಗೆ ಬಂದರೆ, ಕತ್ತಲಾಯಿತು, ಇನ್ನೂ ಬರಲಿಲ್ಲ ಎಂದು ಅಪ್ಪ ಬೆತ್ತ ಹಿಡಿದು ನಿಂತಿರುವರೋ ಎಂದು ಹೆದರಿ ಮೆಲ್ಲಗೆ ಹಿತ್ತಿಲಿನಿಂದ ಮನೆಯೊಳಗೆ ನುಸುಳುತ್ತಿದ್ದೆವು.
ಆಗ ನಮ್ಮ ಮನೆಯಲ್ಲಿದ್ದ ಕಾನೂನು – ಬೀದಿ ದೀಪ ಹತ್ತಿದ್ದ ತಕ್ಷಣ, ಕೈಕಾಲು ತೊಳೆದು ವಿಭೂತಿ ಧರಿಸಿ ದೇವರಿಗೆ ಕೈ ಮುಗಿದು, ಪ್ರಾರ್ಥನೆ ಸಲ್ಲಿಸಿ, ಓದಲು ಕೂರಬೇಕಿತ್ತು. ಒಬ್ಬರಿಗಿಂತ ಒಬ್ಬರು ಗಟ್ಟಿಯಾಗಿ ಓದುತ್ತಿದ್ದೆವು, ಯಾರ ಪಾಠ ಯಾರ ಕಿವಿಯ ಮೇಲೆ ಬೀಳುತ್ತಿತ್ತೋ ಗೊತ್ತಿಲ್ಲ. ಇದೇ ರೂಢಿ ನಾವೆಲ್ಲಾ ಕಾಲೇಜಿನಲ್ಲಿ ಓದುವಾಗಲೂ ಮುಂದುವರೆದಿತ್ತು. ಹಾಗಾಗಿ ನಾವು ಹಾಸ್ಟೆಲ್ಲಿನಲ್ಲಿರುವಾಗ ರೂಮ್‌ಮೇಟ್‌ಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದೆವು. ನಾನು ಹೈಸ್ಕೂಲಿನಲ್ಲಿ ಓದುತ್ತಿರುವಾಗ, ನಿರ್ಮಲಕ್ಕ ಪದವಿ ತರಗತಿಯಲ್ಲಿ ಓದುತ್ತಿದ್ದಳು. ಅವಳು ಕಂಠಪಾಠ ಮಾಡುತ್ತಿದ್ದ ಕಿಂಗ್ ಲಿಯರ್‌ನ (ಶೇಕ್ಸ್‌ಪಿಯರ್ ಬರೆದ ನಾಟಕ) ಪ್ರಬಂಧಗಳು ನನ್ನೆದೆಯಲ್ಲಿ ಈಗಲೂ ಹಸಿರಾಗಿವೆ. ಕಿಂಗ್ ಲಿಯರ್, ತುಂಬಿದ ರಾಜಸಭೆಯಲ್ಲಿ ತನ್ನ ಮಕ್ಕಳಿಗೆ ಕೇಳುವ ಪ್ರಶ್ನೆ, ‘ನನ್ನನ್ನು ಎಷ್ಟು ಪ್ರೀತಿಸುತ್ತೀರಿ’. ಇಬ್ಬರು ಹೆಣ್ಣುಮಕ್ಕಳು ತಂದೆಯಿಂದ ಆಸ್ತಿಯನ್ನು ಪಡೆಯಲು ತಮ್ಮ ಪ್ರೀತಿಯನ್ನು ಉತ್ಪ್ರೇಕ್ಷೆ ಮಾಡಿ ಹೇಳಿದರೆ, ಕಿರಿಯ ಮಗಳು ಕಾರ್ಡೀಲಿಯಾ ಮಾತ್ರ, ‘ಒಬ್ಬ ಮಗಳು ತಂದೆಯನ್ನು ಪ್ರೀತಿಸುವಷ್ಟು ಮಾತ್ರ ನಿನ್ನನ್ನು ಪ್ರೀತಿಸುವೆ’ ಎನ್ನುವಳು. ಆಗ ಕೋಪಗೊಂಡ ರಾಜನು, ‘ಹಾಗಿದ್ದಲ್ಲಿ ನಿನಗೆ ನಾನು ಏನನ್ನೂ ಕೊಡುವುದಿಲ್ಲ’ (Nothing fetches you nothing) ಎನ್ನುವನು, ತನ್ನ ಇಬ್ಬರು ಮಕ್ಕಳ ನಾಟಕದ ಮಾತಿಗೆ ಮರುಳಾದ ರಾಜ. ಆದರೆ ಕಾಡು ಪಾಲಾದ ರಾಜನನ್ನು ಪೋಷಿಸುವವಳು ಕಿರಿಯ ಮಗಳು. ಅವಳು ತಂದೆಯ ಪರವಾಗಿ ನಿಂತು ತನ್ನ ಸಹೋದರಿಯರ ಜೊತೆ ಯುದ್ಧ ಮಾಡುವಾಗ ಹತಳಾಗುವಳು. ಆಗ ಮುಂದಿರುವ ಕಾರ್ಗತ್ತಲನ್ನೇ ನೋಡುವ ಕಿಂಗ್ ಲಿಯರ್, ಮುದ್ದಿನ ಮಗಳ ಶವವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಆಡುವ ಮಾತುಗಳು, ‘Nothing, nothing, nothing, nothing, nothing’. ಲಿಯರ್‌ನ ಮಾತುಗಳು ಈಗಲೂ ನನ್ನೆದೆಯಲ್ಲಿ ಮಾರ್ದನಿಗೊಳ್ಳುತ್ತಿವೆ.
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ನನ್ನ ನೆನಪಿನ ಜೋಳಿಗೆಗೆ ಸಿಹಿ ಕ್ಷಣಗಳ ಭಿಕ್ಷೆ!
ವಾವ್..ಮೇಡಂ ನಿಮ್ಮ ನೆನಪಿನ ಜೋಳಿಗೆಯ ಅನುಭವದ ಬುತ್ತಿಯ..ಅನಾವರಣಗೊಂಡ ಲೇಖನ ಸೂಪರ್..ಇದರಿಂದ ನಮ್ಮನ್ನು ಬಾಲ್ಯಕ್ಕೆ ಕೊಂಡೊಯ್ದರಿ…
ನೆನಪಿನ ಜೋಳಿಗೆ ಯೊಳಗಿನ ಹೂರಣ ಸವಿಯಾಗಿದೆ
Thanks for your response dear friends
ಚೆನ್ನಾಗಿದೆ ಮೇಡಂ
ನೆನಪಿನ ಜೋಳಿಗೆಯೊಳಗಿಂದ ನಮಗಿತ್ತ ಹುಣಿಸೆಹಣ್ಣು ಚಾಕಲೇಟ್, ಕಿಂಗ್ ಲಿಯರ್ ನಾಟಕ, ಮರಕೋತಿ ಆಟ ಇತ್ಯಾದಿಗಳು ಅದ್ಭುತ…ಧನ್ಯವಾದಗಳು ಗಾಯತ್ರಿ ಮೇಡಂ!
ವಂದನೆಗಳು ಗೆಳತಿಯರೇ