ಗೋಪುರಗಳ ನಾಡಿನಲ್ಲಿ…ಹೆಜ್ಜೆ 9: ರಾಮೇಶ್ವರಂ

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಮಧುರೈನಲ್ಲಿ ದೇವಾಲಯದ ದರ್ಶನ ಆದ ಮೇಲೆ ನಮ್ಮ ಚಪ್ಪಲಿ, ಮೊಬೈಲ್ ಇರಿಸಿದ್ದ ಅಂಗಡಿಗೆ ಬಂದೆವು. ಅದು ಸೀರೆಗಳ ಅಂಗಡಿ. ಮಧುರೈ ಹ್ಯಾಂಡ್ ಲೂಮ್ ಸಿಲ್ಕ್ ಅಂತ ಫಲಕ ಕಾಣಿಸಿತು. ಮಹಿಳೆಯರೇ ಜಾಸ್ತಿ ಇದ್ದ ನಮ್ಮ ತಂಡದ ಹಲವು ಮಂದಿ ಸೀರೆ ಖರೀದಿಸಲು ಆಸಕ್ತಿ ತೋರಿಸಿದೆವು. ಅಂಗಡಿಯಾತನಿಗೆ ಉತ್ತಮ ವ್ಯಾಪಾರವಾಯಿತು.

ಆಮೇಲೆ ಉದರ ಪೂಜೆಯೂ ಆಯಿತು. ಬಸ್ಸಿನಲ್ಲಿ ರಾಮೇಶ್ವರದ ಕಡೆಗೆ ಹೊರಟೇವು. ”ರಾಮೇಶ್ವರವು ಒಂದು ದ್ವೀಪ. ದೇವಾಲಯದಿಂದ 3 ಕಿ.ಮೀ ದೂರದ ವರೆಗೆ ಟೂರಿಸ್ಟ್ ಬಸ್ ಗಳು ಅವಕಾಶ ಇದೆ. ಆಮೇಲೆ ಸ್ಥಳೀಯ ಆಟೋ ಅಥವಾ ಕಾಲ್ನಡಿಗೆಯಲ್ಲಿ ನಾವು ಉಳಕೊಳ್ಳಲಿರುವ ಹೋಟೆಲ್ ಗೆ ಹೋಗಲಿರುವೆವು. ಹಾಗಾಗಿ ನಮ್ಮ ದೊಡ್ಡ ಲಗೇಜ್ ಅನ್ನು ಬಸ್ಸಿನಲ್ಲಿಯೇ ಬಿಟ್ಟು, ಒಂದು ದಿನಕ್ಕೆ ಬೇಕಾಗುವ ಅವಶ್ಯ ವಸ್ತುಗಳು ಹಾಗೂ ಹೆಚ್ಚುವರಿ ಬಟ್ಟೆಯನ್ನು ಪ್ರತ್ಯೇಕ ಕೈಚೀಲದಲ್ಲಿ ಇರಿಸಿಕೊಳ್ಳಿ” ಎಂದು ಮಾರ್ಗದರ್ಶಿ ಮುಂಚಿತವಾಗಿ ತಿಳಿಸಿದ್ದರು. ಹೀಗೆ, ಚಿಕ್ಕ ಬ್ಯಾಗ್ ನೊಂದಿಗೆ ಮಧುರೈ ನಿಂದ ಹೊರಟ ನಾವು ಅಂದಾಜು 170 ಕಿಮೀ ಪ್ರಯಾಣಿಸಿದೆವು. ದಾರಿಯಲ್ಲಿ ಕೆಲವೆಡೆ ಸ್ಥಳೀಯ ಜಾತ್ರೆಯ ಮೆರವಣಿಗೆ ಕಾಣಸಿಕ್ಕಿತು. ಸಾಸಿವೆ ಗಿಡಗಳನ್ನು ಮಣ್ಣಿನ ಕುಂಡಗಳಲ್ಲಿ ಬೆಳೆಸಿ, ತಲೆಯ ಮೇಲೆ ಕಲಶದಂತೆ ಹೊತ್ತೊಯ್ಯುತ್ತಿದ್ದ ಮಹಿಳೆಯರನ್ನು ಕಂಡೆವು. ಆ ಮೆರವಣಿಗೆಯಲ್ಲಿ, ತಮಟೆಯಂತಹ ಲಯವಾದ್ಯದ ಸದ್ದಿಗೆ ಕೆಲವರು ನೃತ್ಯ ಮಾಡುತ್ತಿದ್ದರು.

ನಾವು ರಾಮೇಶ್ವರಂ ತಲಪಿದಾಗ ರಾತ್ರಿ 0740 ಗಂಟೆ ಆಗಿತ್ತು. ಅಲ್ಲಿಂದ ಚಿಕ್ಕ ಟೆಂಪೋದಂತಹ ವಾಹನಗಳಲ್ಲಿ ನಮ್ಮನ್ನು ದೇವಾಲಯದ ಪಕ್ಕ ಕರೆದೊಯ್ದರು. ಅಷ್ಟರಲ್ಲಿ ಟ್ರಾವೆಲ್4ಯು ತಂಡದವರು “ಈಗ ಯಾರೂ ತಡಮಾಡದೆ , ಮೊಬೈಲ್, ಚಪ್ಪಲಿ ಬ್ಯಾಗ್ ಇತ್ಯಾದಿ ಆಟೋದಲ್ಲಿಯೇ ಬಿಟ್ಟು ಲಗುಬಗೆಯಿಂದ ನಡೆದರೆ ರಾತ್ರಿ 8 ಗಂಟೆಯ ಪೂಜೆ ನೋಡಬಹುದು. ಚಪ್ಪಲಿ, ಬ್ಯಾಗ್ ತೆಕ್ಕೊಂಡು ಹೋದರೆ ಕೌಂಟರ್ ನಲ್ಲಿ ಕೊಡುವಷ್ಟರಲ್ಲಿ ದೇವಸ್ಥಾನದ ಬಾಗಿಲು ಹಾಕುವ ಸಮಯ ಆಗಿಬಿಡುತ್ತದೆ. ರಿಕ್ಷಾಗಳನ್ನು ಹೋಟೆಲ್ ಪಕ್ಕ ಕಳುಹಿಸುತ್ತೇವೆ. ನಿಮ್ಮ ಬ್ಯಾಗ್ ಅಲ್ಲಿ ಕಲೆಕ್ಟ್ ಮಾಡಿಕೊಳ್ಳಿ. ದೇವಸ್ಥಾನದ ಇನ್ನೊಂದು ದ್ವಾರದಿಂದ ಹೋಟೆಲ್ ಕಡೆಗೆ ನಡೆದುಕೊಂಡು ಹೋಗಲು ಹತ್ತಿರವಾಗುತ್ತದೆ ಅಂದರು”. ಎಷ್ಟೊಂದು ಮುಂದಾಲೋಚನೆ ಇವರದು ಅಂತ ಮೆಚ್ಚಿಗೆಯಾಯಿತು.

ನಾಳೆ ದರ್ಶನ ಹೇಗೂ ಇದೆಯಾದರೂ, ಈಗಲೂ ದರ್ಶನವಾದರೆ ಒಳಿತೇ ಆಯಿತೆಂದುಕೊಂಡು ನಾವು ಚಪ್ಪಲಿ. ಬ್ಯಾಗ್ , ಮೊಬೈಲ್ ಗಳನ್ನು ನಾವು ಕುಳಿತಿದ್ದ ರಿಕ್ಷಾಗಳಲ್ಲಿಯೇ ಬಿಟ್ಟು, ದೇವಾಲಯದ ಪ್ರಾಕಾರಗಳಲ್ಲಿ ಬಹುತೇಕ ಓಡಿಕೊಂಡು ಸರದಿ ಸಾಲಿನಲ್ಲಿ ನಿಂತೆವು. ರಾಮೇಶ್ವರಂ ದೇವಾಲಯದ ಸಂಕೀರ್ಣ ಅದೆಷ್ಟು ವಿಶಾಲವಾಗಿದೆ ಅಂದರೆ ನಮಗೆ ಯಾವು ದ್ವಾರದಲ್ಲಿ ಹೋದೆವು, ಹೇಗೆ ಹೊರ ಬರಬೇಕು ಅಂತ ಗೊತ್ತಾಗುತ್ತಿರಲಿಲ್ಲ. ಸರಿಯಾದ ಮಾರ್ಗದರ್ಶನ ಮಾಡಿವವರಿಲ್ಲದಿದ್ದರೆ, ‘ಸಂತೆಯಲ್ಲಿ ಕಳೆದು ಹೋದ ಮಗುವಿನಂತೆ’ ತಬ್ಬಿಬ್ಬಾಗುವ ಪರಿಸ್ಥಿತಿ ನಮ್ಮದು. ಆದರೆ ನಮ್ಮ ಮುಂದೆ ಟ್ರಾವೆಲ್4ಯು ತಂಡದ ‘ಬಾಲಕೃಷ್ಣ’ ಇದ್ದರು…ನಾವು ಕುರಿಮಂದೆಯಂತೆ ಹಿಂಬಾಲಿಸಿದೆವು…ಓಡಿ..ಓಡಿ..ಓಡಿ..ಸರದಿ ಸಾಲಿನಲ್ಲಿ ದೇವರ ಮುಂದೆ ನಿಂತು ಧನ್ಯರಾದೆವು. ಆಗ ಅಷ್ಟಾಗಿ ಜನಸಂದಣಿ ಇರಲಿಲ್ಲ. ಹಾಗಾಗಿ, ದೇವರ ದರ್ಶನ ಚೆನ್ನಾಗಿ ಆಯಿತು. ಪೂಜೆ, ಆರತಿ ನೋಡಲು ಸಿಕ್ಕಿದುದು ಖುಷಿಯಾಯಿತು. ಅಲ್ಲಿಂದ ಹೊರಟು ಹೋಟೇಲ್ ನಲ್ಲಿ ಉದರಪೂಜೆ ಮುಗಿಸಿ, ಅಲ್ಲಿಂದ ನಡೆಯುತ್ತಾ ನಾವು ಉಳಕೊಳ್ಳಲಿರುವ ಹೋಟೇಲ್ ಗೆ ಹೋದೆವು.

ಮರುದಿನ ಮುಂಜಾನೆ, ಸೂರ್ಯೋದಯದ ಮೊದಲು ಮಾತ್ರ ದರ್ಶನ ಮಾಡಲು ಅವಕಾಶ ಸಿಗುವ ‘ಸ್ಪಟಿಕ ಲಿಂಗವನ್ನು’ ನೋಡಲು ಬೇಗನೇ ಬರಬೇಕಿತ್ತು. ಹಾಗೆಯೆ ಸಮುದ್ರ ಸ್ನಾನ, 22 ತೀರ್ಥಗಳ ಸ್ನಾನ ಮಾಡುವುದಿತ್ತು.

ಈ ಪ್ರವಾಸಕಥನದ ಹಿಂದಿನ ಬರಹ ಇಲ್ಲಿದೆ: https://www.surahonne.com/?p=39426

(ಮುಂದುವರಿಯುವುದು)
-ಹೇಮಮಾಲಾ.ಬಿ, ಮೈಸೂರು

6 Responses

  1. Padmini Hegde says:

    ರಾಮೇಶ್ವರಂನ ದೈವ ದರ್ಶನದ ಚಿತ್ರ ಆಪ್ತವಾಗಿದೆ

  2. ಪ್ರವಾಸ ಕಥನ ಅದರಲ್ಲಿರಾಮೇಶ್ವರಂ ದರ್ಶನ..ಪೂರಕ ಚಿತ್ರ ..ಎಲ್ಲವೂ ಚೆನ್ನಾಗಿ ಮೂಡಿಬಂದಿದೆ… ಗೆಳತಿ ಹೇಮಾ

  3. ನಯನ ಬಜಕೂಡ್ಲು says:

    Beautiful

  4. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

    ವಿವರಣೆ ತುಂಬಾ ಚೆನ್ನಾಗಿದೆ.

  5. ಶಂಕರಿ ಶರ್ಮ says:

    ರಾಮೇಶ್ವರದ ದರ್ಶನ ಗಡಿಬಿಡಿಯಲ್ಲಿ ಆದರೂ ಖುಶಿಯಾಯಿತು. ನಿರೂಪಣೆ ಎಂದಿನಂತೆ ಆಪ್ತ…ಧನ್ಯವಾದಗಳು ಮಾಲಾ ಅವರಿಗೆ.

  6. Hema Mala says:

    ಬರಹವನ್ನು ಮೆಚ್ಚಿ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: