ವಾಟ್ಸಾಪ್ ಕಥೆ 45 : ಎಲ್ಲವನ್ನೂ ನೀಡುವ ದೇವರು.
ಒಬ್ಬ ಗೌರವಾನ್ವಿತ ಗೃಹಸ್ಥನ ಮನೆಯಲ್ಲಿ ಅವನಿಗಿದ್ದ ಒಬ್ಬಳೇ ಮಗಳ ಐದುವರ್ಷದ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆತ ತನ್ನ ಗೆಳೆಯರ ಬಳಗ, ಆಪ್ತೇಷ್ಟರೆಲ್ಲರನ್ನೂ ಆಹ್ವಾನಿಸಿದ್ದ. ಆ ಗುಂಪಿನಲ್ಲಿ ಒಬ್ಬ ನಾಸ್ತಿಕ ಗೆಳೆಯನೂ ಇದ್ದನು. ಆತ ಗೃಹಸ್ಥನ ಪುಟ್ಟ ಮಗಳಿಗೆ ಒಂದು ಸುಂದರವಾದ ಮರದ ಬೊಂಬೆಯನ್ನು ಉಡುಗೊರೆಯಾಗಿ ತಂದುಕೊಟ್ಟು ಶುಭಹಾರೈಸಿದನು. ಹುಡುಗಿ ತುಂಬ ಆನಂದದಿಂದ ಅದನ್ನು ಸ್ವೀಕರಿಸಿ ಅದರೊಡನೆ ಆಟವಾಡತೊಡಗಿದಳು. ಎಲ್ಲರೂ ಊಟಕ್ಕೆ ಹೊರಡುವ ಸಿದ್ಧತೆಯಲ್ಲಿದ್ದರು. ಆಗ ಮಗು ಬಿಕ್ಕಿ ಬಿಕ್ಕಿ ಅಳುತ್ತಿರುವ ಶಬ್ಧ ಕೇಳಿಬಂತು. ಗಾಭರಿಯಿಂದ ಎಲ್ಲರೂ ಬಂದು ನೋಡಿದಾಗ ಆ ಮಗು ಬೊಂಬೆಯನ್ನು ತೆಗೆದುಕೊಂಡು ದೇವರ ಕೋಣೆಯೊಳಗೆ ಕುಳಿತಿತ್ತು. ಅದು ದೇವರನ್ನು ಕುರಿತು ”ದೇವರೇ, ನೋಡು ಎಷ್ಟು ಚಂದದ ಬೊಂಬೆಯಿದು. ಅಂಕಲ್ ನನಗೆ ಪ್ರೀತಿಯಿಂದ ತಂದುಕೊಟ್ಟರು. ಆಟವಾಡುತ್ತಿದ್ದೆ. ಅಲಸ್ಮಾತ್ ಅದು ಕೈಜಾರಿ ಕೆಳಗೆ ಬಿದ್ದು ಮಧ್ಯದಲ್ಲಿ ಸೀಳಿಬಿಟ್ಟಿತು. ದಯವಿಟ್ಟು ನೀನು ಅದನ್ನು ಸರಿಪಡಿಸಿಕೊಡು ”ಎಂದು ಪ್ರಾರ್ಥಿಸುತ್ತಿತ್ತು.
ಇದನ್ನು ನೋಡಿ ಆ ನಾಸ್ತಿಕ ಅತಿಥಿ ”ಮಗೂ ಅದರ ಮುಂದೆ ಏನು ಕೇಳಿಕೊಳ್ಳುತ್ತೀಯೆ. ಅದೊಂದು ಕಲ್ಲಿನ ಮೂರ್ತಿ. ಅದೇನೂ ಮಾಡುವುದಿಲ್ಲ. ನಾನು ನಿನಗೆ ಇದಕ್ಕಿಂತಲೂ ಚೆಂದದ ಇನ್ನೊಂದು ಬೊಂಬೆಯನ್ನು ತಂದುಕೊಡುತ್ತೇನೆ” ಎಂದು ಹೇಳಿದನು. ಆದರೆ ಆ ಮಗು ”ಬೇರೆ ಬೊಂಬೆ ಬೇಡ. ನನಗೆ ಇದೇ ಬೊಂಬೆಯನ್ನು ಸರಿಪಡಿಸಿಕೊಡಬೇಕು” ಎಂದು ಹಠಮಾಡಿತು. ಆಗ ಅದರ ತಂದೆಯು ”ಮಗೂ ನಾವೆಲ್ಲರೂ ಇಲ್ಲಿದ್ದರೆ ಭಗವಂತನು ಬರುವುದಿಲ್ಲ. ನೀನು ಬೊಂಬೆಯನ್ನು ಅಲ್ಲಿಟ್ಟು ಬಾಗಿಲು ಮುಚ್ಚಿ ಊಟಕ್ಕೆ ಬಾ. ನಾಳೆಯೊಳಗೆ ದೇವರು ಅದನ್ನು ರಿಪೇರಿ ಮಾಡಿಟ್ಟಿರುತ್ತಾನೆ” ಎಂದು ಸಮಾಧಾನಪಡಿಸಿ ಊಟಕ್ಕೆ ಕರೆದುಕೊಂಡು ಹೋದರು.
ಕೆಲವು ವರ್ಷಗಳು ಕಳೆದವು. ಗ್ರಹಸ್ಥನ ಮಗಳು ಹತ್ತನೆಯ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಳು. ಅದೇ ಖುಷಿಯಲ್ಲಿ ಗೃಹಸ್ಥನು ಒಂದು ಸಮಾರಂಭವನ್ನು ಏರ್ಪಡಿಸಿದ್ದನು. ಮಿತ್ರರೆಲ್ಲರನ್ನೂ ಕರೆದು ಸಂತೋಷವನ್ನು ಹಂಚಿಕೊಳ್ಳಲು ಬಯಸಿದನು. ಅವನ ನಾಸ್ತಿಕ ಮಿತ್ರನೂ ಆಗಮಿಸಿದ್ದನು. ಅವನು ಹುಡುಗಿಗೆ ಶುಭಾಶಯ ಹೇಳುತ್ತಾ ಒಂದು ಪ್ರಶ್ನೆ ಕೇಳಿದ ” ಮಗೂ ನಿನ್ನ ಐದನೆಯ ವರ್ಷದ ಹುಟ್ಟುಹಬ್ಬದ ದಿನ ನೀನು ಅಳುತ್ತಾ ದೇವರನ್ನು ನಿನ್ನ ಬಿರುಕು ಬಿಟ್ಟ ಬೊಂಬೆಯನ್ನು ಸರಿಪಡಿಸಿಕೊಡೆಂದು ಬೇಡುತ್ತಿದ್ದೆ. ಅವನು ಬಂದು ಅದನ್ನು ಸರಿಪಡಿಸಿಕೊಟ್ಟನೇ?”
ಇಲ್ಲವೆಂದು ಹುಡುಗಿ ಹೇಳಿದಳು. ಆಗ ಆ ನಾಸ್ತಿಕನು ”ಅದು ನನಗೆ ಗೊತ್ತಿತ್ತು. ಅವನು ಏನೂ ಮಾಡಲಾರ. ಏಕೆಂದರೆ ದೇವರೆಂಬುವ ಕಲ್ಪನೆಯೇ ಸುಳ್ಳು” ಎಂದು ಹೇಳಿ ತನ್ನ ಕೈಯಲ್ಲಿದ್ದ ಇನ್ನೊಂದು ಸುಂದರವಾದ ಬೊಂಬೆಯನ್ನು ಆಕೆಗೆ ನೀಡುತ್ತಾ ”ನೋಡು ಅದಕ್ಕಿಂತಲೂ ಚೆನ್ನಾಗಿದೆ ಬೊಂಬೆ” ಎಂದು ಶುಭಾಶಯ ಹೇಳಿದ.
ಆಕೆಯು ”ಅಂಕಲ್ ನಾನು ಬೊಂಬೆಯೊಡನೆ ಆಡುವ ವಯಸ್ಸನ್ನು ಮೀರಿದ್ದೇನೆ. ನಾನವತ್ತು ನಡೆದುಕೊಂಡ ರೀತಿಯನ್ನು ಈಗ ನೆನೆಸಿಕೊಂಡರೆ ತಮಾಷೆಯೆಂದೆನಿಸುತ್ತದೆ. ಭಗವಂತ ಬರಲಿಲ್ಲ ನಿಜ. ಆದರೆ ಇಷ್ಟು ವರ್ಷಗಳಲ್ಲಿ ಅವನು ನನ್ನಲ್ಲಿ ಎಷ್ಟೋ ಬೌಧ್ಧಿಕ ಪ್ರಭುದ್ದತೆಯನ್ನು ಬೆಳೆಸಿದ್ದಾನೆ. ಅದರಿಂದಾಗಿಯೇ ನಾನು ಹತ್ತನೆಯ ತರಗತಿಯಲ್ಲಿ ಉನ್ನತ ಶ್ರೇಣಿ ಗಳಿಸಲು ಸಾಧ್ಯವಾಯಿತು. ನನ್ನ ನಂಬಿಕೆಯಿಂದ ನಾನು ಇಷ್ಟೆಲ್ಲಾ ಬೆಳೆದಿದ್ದೇನೆ. ಆದರೆ ನೀವು ನಿಮ್ಮ ನಾಸ್ತಿಕತೆಯ ಜಾಡಿನಲ್ಲಿ ಬೆಳೆಯದೆ ಇದ್ದಲ್ಲಿಯೇ ಇದ್ದುಬಿಟ್ಟಿರಿ. ಅದಕ್ಕೇ ನೀವಿನ್ನೂ ಬೊಂಬೆಯನ್ನು ಉಡುಗೊರೆಯಾಗಿ ತಂದಿದ್ದೀರಿ. ನಾನು ಬೇಡಿದ ಸಣ್ಣ ವಸ್ತುವಿಗಿಂತಲೂ ಎಷ್ಟೋ ದೊಡ್ಡದಾದ ಕೊಡುಗೆಯನ್ನು ಭಗವಂತನು ನನಗೆ ಕರುಣಿಸಿದ್ದಾನೆ. ದೇವರಲ್ಲಿರುವ ನನ್ನ ನಂಬಿಕೆ ಮೊದಲಿಗಿಂತಲೂ ಬಲವಾಗಿದೆ. ನಾವು ಬೇಡುವ ವಸ್ತುವಿಗಿಂತ ನಮ್ಮನ್ನೇ ಬೌದ್ಧಿಕವಾಗಿ ಉತ್ತಮರನ್ನಾಗಿ ಮಾಡುವ ದೇವರಿಗಿಂತಲೂ ಬೇರೆ ದೊಡ್ಡವರು ಯಾರಿರಲು ಸಾಧ್ಯ” ಎಂದಳು. ಅವಳ ಮಾತುಗಳನ್ನು ಕೇಳಿ ನಾಸ್ತಿಕ ವ್ಯಕ್ತಿಯ ಮಾತು ಮೂಕವಾಯಿತು.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಚಂದದ ಕಥೆ
ಧನ್ಯವಾದಗಳು ಸಾಹಿತ್ಯ ಸಹೃದಯರಿಗೆ
ಆಧ್ಯಾತ್ಮಿಕತನಕ್ಕೆ ಹೊಸ ಆಯಾಮ ನೀಡಿರುವ ಕಥೆ ಚೆನ್ನಾಗಿದೆ
ಧನ್ಯವಾದಗಳು ಗಾಯತ್ರಿ ಮೇಡಂ
ಒಳ್ಳೆಯ ಒಳನೋಟ
ಧನ್ಯವಾದಗಳು ಪದ್ಮಿನಿ ಮೇಡಂ
ಬೌದ್ಧಿಕವಾಗಿ ಬೆಳೆದ ಬಾಲೆ ನಾಸ್ತಿಕನನ್ನು ಆಸ್ತಿಕತೆಯತ್ತ ಕೊಂಡೊಯ್ದ ಸುಂದರ ಕಥೆಯು, ಎಂದಿನಂತೆ ತಮ್ಮ ಚಂದದ ಚಿತ್ರದೊಂದಿಗೆ ಇಷ್ಟವಾಯಿತು ನಾಗರತ್ನ ಮೇಡಂ
ಧನ್ಯವಾದಗಳು ಶಂಕರಿ ಮೇಡಂ
ಸೊಗಸಾಗಿದೆ ಕಥೆ. ನೀತಿಯುಕ್ತ.
ಧನ್ಯವಾದಗಳು ನಯನ ಮೇಡಂ
ಮುಗ್ಧತೆಯಿಂದ ಪ್ರಬುದ್ಧತೆಗೆ ಪುಟ್ಟ ಕತೆಯ ಸಂಚಲನ, ಜೊತೆಗೆ ರೇಖಾಚಿತ್ರ ಸೊಗಸಾಗಿದೆ
ಧನ್ಯವಾದಗಳು ಗೆಳತಿ ಹೇಮಾ