ಏಕಾಂಗಿ ಬದುಕು – 3: ಕೈಕೊಟ್ಟ ನೆನಪುಗಳು ಚಿಕಿತ್ಸೆಯಾಗಬಲ್ಲದೆ..?
ನಾವು ಅನುಭವಿಸುವ ಯಾವುದೇ ಸಂದರ್ಭಗಳನ್ನು ಅನುಭಾವಿಸಬೇಕೆಂದರೆ ಮನಸ್ಸಿನ ಅಭಿಮತ ಬಹಳವೇ ಮುಖ್ಯ. ಆಲೋಚನೆಗಳು, ಮನದ ಚಲನೆಗಳು ನಿಯಂತ್ರಣ ತಪ್ಪಿತೆಂದರೆ ಸಾಮಾನ್ಯ ಆಸೆಗಳೂ ಅನುಭವಕ್ಕೆ ಬಾರದಂತೆ ನಿಯಂತ್ರಣ ಕಳೆದುಕೊಳ್ಳುತ್ತವೆ. ನೋಟ ಮಾತಾಗುವ,ಮಾತು ಹಾಡಾಗುವ,ಹಾಡು ಅನುರಾಗವಾಗುವ ಸಮಯದಲ್ಲಿ ಸುಪ್ತಮನಸ್ಸಿನ ಚೇತನವು ನಿಯಂತ್ರಣ ತಪ್ಪುವುದು ಸಹಜ. ಆ ಕ್ಷಣದ ಯೋಚನೆಗಳು, ಯೋಜನೆಗಳು ಎಲ್ಲಾ ಶಕ್ತಿಯ ಹಿಡಿತವನ್ನು ಕಳೆದುಕೊಂಡು, ಯಾವುದೋ ಪ್ರಭಾವಕ್ಕೆ ಒಳಗಾಗಿ, ಅಧಮ್ಯ ಚೇತನದ ಕಾಂತೀಯ ಶಕ್ತಿಯ ಸೆಳೆತಕ್ಕೆ ಸಿಕ್ಕಿಬಿಡುತ್ತದೆ.
ಎಲ್ಲವನ್ನೂ ಕಳೆದುಕೊಂಡ ಬದುಕು ನಿಸ್ಸಾರದಿಂದ ಕೂಡಿದಂತೆ ಬುದ್ಧಿ ಸ್ಥಿಮಿತ ಕಳೆದುಕೊಂಡು ಭಾವಾನಾತ್ಮಕತೆಯಲ್ಲಿ ಮುಳುಗಿ ಬಿಡುತ್ತದೆ. ಯಾವ ಬದುಕು,ಯಾವ ಘಟನೆ ಜೀವನದಲ್ಲಿ ಎಡವಿ ಬೀಳದಂತೆ ಮುನ್ನೆಚ್ಚರಿಕೆ ನೀಡುವುದೋ ಅಂತಹ ನೆನಪು ನಮ್ಮ ಜೀವನಕ್ಕೆ ಬೇಕೇಬೇಕು. ಅದು ನಮಗೆ ಧೈರ್ಯವನ್ನೂ ತಂದುಕೊಡಬಲ್ಲದು. ಒಳ್ಳೆಯ ಹಾಗೂ ಕೆಟ್ಟ ನೆನಪುಗಳು ನಮಗೆ ನೆನಪಿಗೆ ಬರಲೇ ಬೇಕು. ಹಾಗೆ ಬಂದರೆ ಮಾತ್ರ ನಾವು ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ. ಉದಾಹರಣೆಗೆ….. ಯಾರಾದರೂ ನಮಗೆ ಅವಮಾನಿಸಿದ್ದರೆ, ನೋವು ಕೊಟ್ಟಿದ್ದರೆ, ಹೀಯಾಳಿಸಿದ್ದರೆ ನಾವು ಅದನ್ನು ಪದೇಪದೇ ನೆನಪಿಸಿಕೊಳ್ಳಲೇ ಬೇಕು. ಅದು ವಯಸ್ಸು ಮಾಗಿದರೂ ನಮ್ಮ ವಯಸ್ಸು ಇರುವವರೆಗೂ ಆ ಘಟನೆಗಳು ಹಸಿರಾಗಿದ್ದು, ಜೀವನದಲ್ಲಿ ನಾವು ಬದಲಾವಣೆ ತಂದುಕೊಳ್ಳಲು , ಬುದ್ಧಿ ಕಲಿಯಲು ಹಾಗೂ ಏನಾದರೂ ಸಾಧಿಸಲು ಮೊದಲ ಮೆಟ್ಟಿಲಾಗಿರುತ್ತವೆ. ಹಾಗಾಗಿ ಏಕಾಂಗಿಯಾದ ಸಮಯದಲ್ಲಂತೂ ನಾವು ನೆನಪುಗಳನ್ನು ಉಳಿಸಿಕೊಳ್ಳಲೇಬೇಕು.
ಯಾವ ಏಕಾಂಗಿಯ ಬದುಕಿನಲ್ಲಿ ನೆನಪುಗಳು ಸಾಯುತ್ತವೆಯೋ ಅಂದೇ ಅರ್ಧ ಸತ್ತಂತೆ. ಹಾಗಾಗಿ ಜೀವನದ ಪ್ರತೀ ಮಜಲುಗಳನ್ನು ಸಾರುವ ನೆನಪುಗಳು ಅತೀ ಅವಶ್ಯವಾಗಿ ನೆನಪಿರಲೇಬೇಕು. ಹಾಗಾಗಿ ನೆನಪುಗಳನ್ನು ನಾವು ಪದೇಪದೇ ಯಾರಿಗಾದರೂ ಹೇಳಲೇ ಬೇಕು. ಒಳ್ಳೆಯದು ಕೆಟ್ಟದ್ದು ಎಲ್ಲಾ ನೆನಪುಗಳು ಏಕಾಂಗಿಯ ಬದುಕಿನಲ್ಲಿ ಗೆಲುವಿನ ಸೋಪಾನವಾಗುತ್ತವೆ.
ಕಷ್ಟಕಾಲದಲ್ಲಿ ಜೀವನದಲ್ಲಿ ಏನು ಸಂಪಾದಿಸುವನೋ ಇಲ್ಲವೋ ತಿಳಿಯದು. ಆದರೆ ನೆನಪುಗಳ ಬುತ್ತಿ ಬಿಚ್ಚಿದಾಗ ಅವನ ಸಂಪಾದನೆ ತನಗೇ ತಿಳಿಯದಂತೆ ದುಪ್ಪಟ್ಟಾಗುತ್ತಾ ಹೋಗುತ್ತದೆ. ಜಗತ್ತು ನಮಗೆ ಏನೆಲ್ಲಾ ಕಲಿಸುತ್ತದೆ…ಏನೆಲ್ಲಾ ಕೊಡುತ್ತದೆ. ಆದರೆ ನೆನಪನ್ನು ಸಾಯಿಸುತ್ತದೆ. ನೆನಪು ಸಾಯಬಾರದೆಂದರೆ ಪ್ರತೀ ಕ್ಷಣ ನೆನಪಿನ ಬುತ್ತಿಯನ್ನು ತೆಗೆದು ಗೆಲುವಿನ ರಹಸ್ಯದತ್ತ ಮುಖಮಾಡಬೇಕು.
ನಮ್ಮಲ್ಲಿ ಅಂತರ್ಗತವಾಗಿರುವ ಒಂದು ಪ್ರತಿಭೆಯನ್ನಾಗಲಿ, ಸಾಧನೆಯನ್ನಾಗಲಿ ಹೊರಗಿನಿಂದ ಎಳೆತರುವುದಕ್ಕಿಂತ ನಮ್ಮೊಳಗಿನಿಂದ ಎಳೆತರುವಲ್ಲಿ ನೆನಪು ಸಹಾಯ ಮಾಡುತ್ತದೆ. ನಾವು ನಿಷ್ಪ್ರಯೋಜಕರು ಎಂಬ ಖಿನ್ನತೆಯನ್ನು ಮೆಟ್ಟಿ ನಿಲ್ಲುವ ಮೂಲಕ ನಮ್ಮೊಳಗಿನ ಆತ್ಮ ವಿಶ್ವಾಸವನ್ನು ಬಡಿದೆಬ್ಬಿಸುತ್ತದೆ. ಮತ್ತು ನಾವು ಹೇಗೆ ಜಾಗೃತರಾಗಬೇಕೆನ್ನುವುದನ್ನು ಕಲಿಸುತ್ತದೆ. ನಮಗೆ ಹಠ ಛಲವನ್ನು ಯಾರೂ ಕಲಿಸುವುದಿಲ್ಲ. ಅದು ನಮ್ಮೊಳಗೇ ಇರುತ್ತದೆ. ಕಳೆದ ಘಟನೆಗಳು ನೆನಪಿನ ಮೂಲಕ ಮರುಕಳಿಸಿ ಬೇಕಾಗಿರುವುದನ್ನು ಸಂಪಾದಿಸಲು ಸಹಾಯ ಮಾಡುತ್ತದೆ. ಯಾವ ನೆನಪುಗಳು ಸತ್ತು ನಮ್ಮನ್ನೂ ನಿಷ್ಕ್ರಿಯರನ್ನಾಗಿ ಮಾಡುತ್ತವೆಯೋ ಅಂದೇ ಪೂರಾ ಸತ್ತಂತೆ. ಮತ್ತಷ್ಟು ನಮ್ಮನ್ನು ಒಂಟಿತನದತ್ತ ನೂಕಿಬಿಡುತ್ತದೆ. ದುಃಖದ ಆಳದ ಕಡಲಲ್ಲಿ ಮುಳುಗಿದ ನಮ್ಮನ್ನು ತೀರದತ್ತ ಎಳೆತರಲು ಬದುಕಲ್ಲಿ ಛಲ ಬೇಕು. ಆ ಛಲವನ್ನು ತಂದುಕೊಡುವುದು ನಮ್ಮ ಜೀವನದಲ್ಲಿ ಘಟಿಸುವ ಘಟನೆಗಳು. ಹಾಗಾಗಿ ಕಳೆದ ನೆನಪುಗಳನ್ನು ಸ್ಮರಿಸುವುದು ಅತೀ ಅವಶ್ಯಕ.
ಏಕಾಂಗಿಯ ಬದುಕನ್ನು ಯಾರಾದರೂ ಅನುಸರಿಸಿದ್ದರೆ ಗೆಲುವಿನ ಮೆಟ್ಟಿಲಾಗುವ ನೆನಪುಗಳೊಡನೆ ಬದುಕಿನೋಡಿ. ನನ್ನ ಮಾತಿನ ಸತ್ಯ ಎದ್ದು ಕಾಣುತ್ತದೆ. ನಿಮ್ಮ ನಿಷ್ಕ್ರಿಯಗೊಂಡ ಬದುಕಿನ ಸತ್ವಗಳನ್ನು ಮತ್ತೆ ಮರುಕಳಿಸುವಂತೆ ಮಾಡುತ್ತದೆ. ಕನಸು ನನಸಾಗುವ ಮುನ್ನ ಮೊದಲ ಮೆಟ್ಟಿಲಾಗುವ ನೆನಪುಗಳೇ ಅತ್ಯಂತ ರೋಚಕವಾಗಿರುತ್ತದೆ . ನೆನಪೇ ಹೀಗೇ… ಅದೊಂದು ಮಾನಸಿಕ ಚಿಕಿತ್ಸೆಯಾದಾಗ ಮಾತ್ರ ಅದರ ಮಹತ್ವವು ಬೆಳಕಿಗೆ ಬರುತ್ತದೆ. ನೆನಪುಗಳೆಂದರೆ ಅದೊಂದು ಜೀವಂತ ಶವವನ್ನು ಚೇತರಿಕೆಯತ್ತ ಕೊಂಡೊಯ್ಯುವ ಚೇತೋಹಾರಿ ಗುಣವನ್ನು ರೂಢಿಸಿಕೊಂಡ ಶಕ್ತಿ ಇರುವಂತಹದ್ದು.
ನೆನಪುಗಳೊಟ್ಟಿಗೆ ಬದುಕಿನೋಡಿ ಎಂದೇ ನನ್ನ ವಿನಂತಿ.
-ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ
ಧನ್ಯವಾದಗಳು ಮೇಡಂ
ನೆನಪುಗಳ ಬಗ್ಗೆ ಸುಂದರವಾದ ಮೌಲ್ಯಾಧಾರಿತವಾದ ಬರಹ
ಲೇಖನ ಚೆನ್ನಾಗಿದೆ
ಚಂದದ ಲೇಖನ ಸೋದರಿ..
ಸುಂದರ ನೆನಪುಗಳ ಬುತ್ತಿಯೇ ಒಳ್ಳೆಯದು
ಏಕಾಂಗಿ ಬದುಕಿನಲ್ಲಿ ನೋವಿನ ನೆನಪುಗಳು ಮಾಸಿದರೂ ತೊಂದರೆಯಿಲ್ಲ…. ಆದರೆ ನಲಿವಿನ ಕ್ಷಣಗಳಂತೂ ಜೀವನಕ್ಕೆ ಬಲವನ್ನು ನೀಡುವುದಂತೂ ನಿಜ…
ನೆನಪಿನ ಬುತ್ತಿಯ ಅಗತ್ಯತೆಯನ್ನು ನೆನಪಿಸಿದ ಸುಂದರ ಲೇಖನ.
ಲೇಖನ ಸರಣಿ ಚೆನ್ನಾಗಿ ಮೂಡಿ ಬರುತ್ತಿದೆ.