ದೇಶೀ ಆಟಗಳ ಸೊಬಗು
ಮೈಸೂರಿನ ಕೃಷ್ಣಮೂರ್ತಿಪುರದಲ್ಲಿರುವ ಭಗಿನಿ ಸೇವಾ ಸಮಾಜ ಶಾಲೆಯಲ್ಲಿ 29.7.2014 ರಂದು ಬೆಳಗ್ಗೆ 10 ಗಂಟೆಗೆ ಹೆಂಗೆಳೆಯರ, ಮಕ್ಕಳ, ಗಂಡಸರ, ಪತ್ರಕರ್ತರ ದಂಡೇ ನೆರೆದಿತ್ತು. ಅಲ್ಲಿ ದೇಶೀ ಆಟಗಳ ಸ್ಪರ್ಧೆ ಏರ್ಪಡಿಸಿದ್ದರು.
‘
ಡಾ. ಧರಣೀದೇವಿ ಮಾಲಗತ್ತಿ, (ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು) ಕುಂಟಬಿಲ್ಲೆ ಆಟದ ಬಿಲ್ಲೆ ಹಾಕುವ ಮೂಲಕ ರಾಜ್ಯಮಟ್ಟದ ದೇಶೀಯ ಆಟಗಳ ಜಾತ್ರೆಗೆ ಚಾಲನೆ ನೀಡಿದರು. ಪತ್ರಿಕಾ ಛಾಯಾಗ್ರಾಹಕರು ‘ಮೇಡಂ ದಯವಿಟ್ಟು ಈ ಆಟ ಆಡಿ ತೋರಿಸಿ’ ಎಂದು ಒತ್ತಾಯ ಮಾಡಿದರೂ ಧರಣೀದೇವಿ ಒಲ್ಲೆನೆಂದರು. ಕೊನೆಗೆ ಅವರ ಒತ್ತಾಯ ತಡೆಯಲಾರದೆ ಒಲ್ಲದ ಮನದಿಂದಲೇ ಚೌಕದ ಒಳಗೆ ಒಂದು ಕಾಲಿಟ್ಟರು. ಅಷ್ಟಕ್ಕೆ ತೃಪ್ತಿ ಹೊಂದಿ ಕ್ಲಿಕ್ ಕ್ಲಿಕ್ಕಿಸಿದರು. ಧರಣೀದೇವಿ ಮಾತಾಡುತ್ತ ದೇಶೀ ಆಟಗಳಲ್ಲಿ ಮಹಿಳೆಯರ ಆಟ, ಗಂಡಸರ ಆಟ ಎಂಬ ವರ್ಗೀಕರಣ ಇರಬಾರದು. ಎಲ್ಲ ಆಟಗಳನ್ನು ಇಬ್ಬರೂ ಆಡಬೇಕು ಎಂದು ಅಭಿಪ್ರಾಯಪಟ್ಟರು. ಒಂದೊಂದು ಜನಪದ ಆಟವೂ ಕೌಶಲ್ಯ ಬೆಳೆಸುವ ಆಟವಾಗಿರುವುದು ವಿಶೇಷ ಎಂದರು.
ಮನ್ವಂತರ ಸಮೂಹ ಬಳಗ, ಮೈಸೂರು ಮಹಿಳಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ವೆಂಕಟರಾಮ ಕಶ್ಯಪ್ ಅವರ ಪರಿಕಲ್ಪನೆ, ಸಂಯೋಜನೆ- ನಿರ್ವಹಣೆಯಲ್ಲಿ ಪಗಡೆ, 7 ಮನೆ ಚೌಕಾಭಾರ, ಅಳಗುಳಿ(ಚೆನ್ನೆ)ಮಣೆ, ಕುಂಟೆಬಿಲ್ಲೆ, ಇತ್ಯಾದಿ ಆಟಗಳು ನಡೆದುವು.ಚೌಕಾಭಾರ ಆಟವಾಡಲು ಸುಮಾರು 24 ಕ್ಕೂ ಹೆಚ್ಚುಮಂದಿ ಕುಳಿತಿದ್ದರು.ಇನ್ನೊಂದೆಡೆ ಅಳಗುಳಿಮಣೆ ಆಟ, ಮತ್ತೊಂದೆಡೆ ಪಗಡೆ ಆಟಗಳಿಗೆ ಏಕಕಾಲದಲ್ಲಿ ಚಾಲನೆ ದೊರೆಯಿತು. ಹೆಂಗಸರು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.
ಪ್ರತಿಯೊಂದು ಆಟಕ್ಕೂ ರೂ. 20 ಪ್ರವೇಶಧನ ನಿಗದಿಗೊಳಿಸಿದ್ದರು. ಒಬ್ಬರು ಎರಡು ಬಗೆಯ ಆಟ ಮಾತ್ರ ಆಡಲು ಅವಕಾಶವಿತ್ತು. ಅವರೆಲ್ಲರ ಈ ಸಂಭ್ರಮ ಉಲ್ಲಾಸಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಸಂತೋಷಿಸಿದೆ. ಮುಖ್ಯದ್ವಾರದಲ್ಲಿ ದಂಪತಿಗಳೊಬ್ಬರು ಬಂದ ಹೆಂಗಳೆಯರಿಗೆಲ್ಲ ಕುಂಕುಮ ಬಳೆ ಕೊಟ್ಟು ಸಂಭ್ರಮದಿಂದ ಸ್ವಾಗತಿಸಿದ್ದರು.
– ರುಕ್ಮಿಣಿಮಾಲಾ, ಮೈಸೂರು
ಒಹ್… ಮರೆಯಾಗುತ್ತಿರುವ ಆಟಗಳು..ಉತ್ತಮ ಬರಹ.
ನಂಗೆ ಗೊತ್ತಾಗಿದ್ದರೆ ನಾನೂ ಬರುತ್ತಿದ್ದೆ. ಮುಂದಿನ ಬಾರಿ ಈ ರೀತಿಯ ಕಾರ್ಯಕ್ರಮದ ಬಗ್ಗೆ ನಿಮಗೆ ಗೊತ್ತಾದಾಗ..ಒಂದು ಮೆಸೇಜ್ ಹಾಕಿಬಿಡಿ. ಥ್ಯಾಂಕ್ಸ್.
ಧನ್ಯವಾದ. ಖಂಡಿತಾ ತಿಳಿಸುವೆ ಹೇಮಮಾಲಾ