ಹೀಗೆ
ನೋಡದಿದ್ದರೂ ದೇವರನ್ನು
ನೋಡಿರುವೆ ದೇವರಂಥ ಮನುಜರನ್ನು
ಸ್ವರ್ಗವ ಕಂಡು ಬಂದು ಹೇಳಿದವರಾರು ಇಲ್ಲ
ಭೂರಮೆಯ ಹಸಿರ ಸಿರಿಗೂ ಅದು ಮಿಗಿಲೇನಲ್ಲ
ಪಾಪಭೀತಿಯ ಹುಟ್ಟಿಸುವ ನರಕ ಗೊತ್ತಿಲ್ಲ
ದೀನ ಅನಾಥರ ಬದುಕು ಅದಕಿಂತ ಕಡೆಯಲ್ಲ !
*****
ಮರೆಸಬಹುದು
ಒಂದು ನೋವು
ನೂರು ಖುಷಿಯ ಸವಿ
ಮರೆಸಲಾಗದು
ನೂರು ಖುಷಿಯು
ಒಂದು ನೋವ
*******
ನೋಯಿಸುವುದು
ಪ್ರೀತಿಯ ಜಾಯಮಾನವಲ್ಲ
ನೋವುಣ್ಣುವುದು
ಅಪಾತ್ರರನ್ನು ಪ್ರೀತಿಸಿದಕ್ಕಷ್ಟೆ
******
ಪ್ರೀತಿಯೆಂದರೆ
ಬಿಸಿಲ ಬೇಗೆಯಲ್ಲಿ ಸುಳಿದ ತಂಗಾಳಿ
ಪ್ರೀತಿಯೆಂದರೆ
ಮಾಗಿಯ ಚಳಿಗೆ ಹಿತವಾದ ಎಳೆಬಿಸಿಲು
ಪ್ರೀತಿಯೆಂದರೆ
ಉತ್ಕಟ ಕ್ಷಣದಲಿ ನಾನಿರುವೆನೆಂಬ ಭರವಸೆ
ಪ್ರೀತಿಯೆಂದರೆ
ಬಿಕ್ಕುವ ತಬ್ಬಲಿ ಕೂಸಿಗೆ ಸಿಕ್ಕ ಸಾಂತ್ವನದಪ್ಪುಗೆ
–ಎಂ. ಆರ್. ಅನಸೂಯ
ಬಹಳ ಸುಂದರ ಸಾಲುಗಳು.
ಪ್ರೀತಿಯ ಹಲವು ಮಗ್ಗುಲುಗಳನ್ನು..ಕವನದಲ್ಲಿ
ಅನಾವರಣಗೊಳಿಸಿರು ರೀತಿ ಚೆನ್ನಾಗಿ ದೆ ಮೇಡಂ
ನೀವು ಹೇಳಿರುವ ಎಲ್ಲಾ ಭಾವಗಳನ್ನು ನಾನು ಅನುಭವಿಸಿರುವೆ,,
ಕವನಗಳು ಚೆನ್ನಾಗಿದೆ
ಭಾವಗಳನ್ನು ಚೆನ್ನಾಗಿ ಮೂಡಿ ಬಂದಿದೆ
ನನಗೆ ತುಂಬಾ ಇಷ್ಟ ವಾಯಿತು ಮೇಡಂ
ಪ್ರೀತಿಯ ವಿವಿಧ ಆಯಾಮಗಳು, ದೇವರ ಇರುವಿಕೆ, ನೋವು ನಲಿವುಗಳ ಹೊಂದಾಣಿಕೆ…. ಎಲ್ಲವನ್ನೂ ತುಂಬಿಕೊಂಡ ಪುಟ್ಟ ಕವನಗಳು ಅರ್ಥವತ್ತಾಗಿವೆ
ಪ್ರೀತಿಗೆ ಸುಂದರ ಬಾಷ್ಯ ಬರೆದ ಚಂದದ ಕವಿತೆ