ಬೆಳಕು-ಬಳ್ಳಿ

“ಸಾಯುರಿ”

Share Button


(ಈ ಕೆಳಗಿನ ಬರಹದಲ್ಲಿನ ಮೊದಲ ಐದು ಪ್ಯಾರಗಳಲ್ಲಿ ಬರುವ ಪ್ರತಿ ಸಾಲಿನ ಮೊದಲಕ್ಷರ ತೆಗೆದುಕೊಂಡರೆ “ಸಯುರಿ” ಅಥವಾ “ಸಾಯುರಿ” ಎಂದಾಗುತ್ತದೆ. ಜಪಾನ್ ಭಾಷೆಯಲ್ಲಿ ಸಾಯುರಿ ಅಂದರೆ ಲಿಲಿ ಹೂ ಅಥವಾ ನೆಲ ಇಲ್ಲ ಜಲ ನೈದಿಲೆ. ಆ ಹೂವಿನ ಅಕ್ಷರಗಳನ್ನು ಬಳಸಿ ಇದನ್ನು ರಚಿಸುವ ಪ್ರಯತ್ನ ಮಾಡಿದೆ. ಆ ಹೂವಿನ ಪರಿಮಳ ನಿಜವಾದ ಭಾವಜೀವಿಗಳಿಗೆ ತಲುಪಲಿ)


“ಸಾಯುರಿ”

ಸರಿ ತಪ್ಪು ತಿಳಿಯದೆ ಒದ್ದಾಡಿದೆ ಈ ಜೀವ
ಯುಗ ಯುಗಗಳಿಂದ ನಡೆಯುತಿದೆ ಈ ಹೋರಾಟ
ರಿಕಾಪುವಿನ ರೀತಿಯಲಿ ಚುಚ್ಚಿ ಓಡಿಸಿದೆ ಮನೋ ಕುದುರೆಯ

ಸವಿದು ಉಣ್ಣುವ ಸಮಯದಲಿ ಬಿಡದೆ ಕಾಡುವುದು ಭವಿಷ್ಯದ ಚಿಂತೆ
ಯುದ್ಧ ಕಾಲದಲಿ ತಳೆಯುವ ವೈರಾಗ್ಯದ ಹಾಗೇ
ರಿವಾಜುಗಳ ಅರುಹಿದ ಹಿರಿಯರು ಮಾರ್ಗ ತೋರಿಹರು

ಸಂಸಾರದ ಜಂಜಾಟದಲಿ ಅನುದಿನದ ಗಡಿಬಿಡಿಯಲಿ
ಯುಕ್ತ ಮುಖಿಯಾಗಿ ತೋರುವುದು ಮುದ್ದು ಮಗುವಿನ ವದನವು
ರೀತಿಯ ನೀತಿಯ ಕಲಿಸುವುದು ಗೊಂಬೆಯ ಲೀಲೆಯು

ಸಾಗುತಿದೆ ಜೀವನ ದೋಣಿ ಸುಖ ದುಃಖದ ಅಲೆಗಳಿಗೆ
ಯುವರಾಜರಂತೆ ಮೈ ಮರೆತು ಆಡುವ ಮಕ್ಕಳಾಟ ಮುದ ತಂದಿದೆ
ರಿಯಾಯಿತಿ ಬಯಸದ ಮನವು ಲಾಭ ನಷ್ಟ ಲೆಕ್ಕದಲಿ ತೊಡಗಿದೆ

ಸಂತುಷ್ಟ ಭಾವಕ್ಕೆ ತರ್ಕವ ಬಲಿ‌ಕೊಡಬೇಕೇ?
ಯುವಕ ಬುದ್ದಿಗೆ ಪ್ರಬುದ್ದತೆ ಪೋಷಾಕು ತೊಡಿಸಬೇಕೇ?
ರಿಷಿ ಕಥಾ ಸಂಕಲನಗಳಲ್ಲಿ ಮನ ಕಳೆದು ಹೋಗಬೇಕೇ?

ಒಳಹೋಗಿ ಹೊರಬರುವ ಬಿಸಿ ಉಸಿರು ಸಾವಿರ ಪಾಠ ಹೇಳಿದೇ
ಕೇಳದ ಮರ್ಕಟ ಬುದ್ದಿ ಒತ್ತಡದಲಿ ಲಾಗಹಾಕಿದೆ

ಎಲ್ಲರೂ ನಿರತರು ತಮ್ಮ ಮನೋವ್ಯಾಪಾರದಲಿ
ದೂರುವರು ಸರಸೀಜಾಕ್ಷನ ಕ್ಷಣ ಕ್ಷಣದೀ
ನಮ್ಮ ತಿಳಿಗೇಡಿತನಕೆ ದೈವವ ನಿಂದಿಸುವುದೆಂತು
ಅರಿತು ನೋಡು ಕಾಣುವುನು ದೇವ ದೇಹದಲೇ
ಕಾಯಕದಲಿ ಬೆರೆತು ನೋಡು ನೀಗುವುದು ಕತ್ತಲು ಬೇಗನೇ

ಕೆ.ಎಂ‌ ಶರಣಬಸವೇಶ

8 Comments on ““ಸಾಯುರಿ”

  1. ಆ ನೈದಿಲೆ ಹೂವಿನಂತೆ ಘಮ ಘಮಿಸುವ ಸಂದೇಶ ತಂದಿದೆ. ಮಗುವಿನ ‌ಮನಸು ನಸು ನಗು ‌ಮುಖ್ಯ ಅನ್ನುವುದನ್ನು ಈ ಕವನ‌ ಸಾರುತ್ತಿದೆ.‌

  2. ವಿಶೇಷ ಪ್ರಯತ್ನದೊಂದಿಗೆ ರಚಿಸಿದ ಅರ್ಥವತ್ತಾದ ಕವನ ಚೆನ್ನಾಗಿದೆ.

  3. ಧನ್ಯವಾದಗಳು ನಮ್ಮ ಸುರಹೊನ್ನೆಯ ನಿಯಮಿತ ಹಾಗೂ ಪ್ರತಿಭಾವಂತ ಬರಹಗಾರರಾದ ನಾಗರತ್ನ ಮೇಡಂ, ಶಂಕರಿ ಶರ್ಮ ಅವರಿಗೆ.
    ನಮ್ಮಂತಹ ಉದಯೋನ್ಮುಖ ಬರಹಗಾರರಿಗೆ ವೇದಿಕೆ ಒದಗಿಸಿ. ಈ ವಿನೂತನ ಇ ಪತ್ರಿಕೆ ಮುನ್ನಡೆಸುತ್ತಿರುವ ಸ್ವತಃ ತಾವು ಸೃಜನಶೀಲ ಬರಹಗಾರರು ಆಗಿರುವ ಹೇಮಾ ಮೇಡಂಗೆ ಅನಂತಾನಂತ ವಂದನೆಗಳು

  4. ನಮ್ಮ ಬದುಕನ್ನು ರೂಪಿಸುವ ಹೊಣೆ ಯಾರಿಗೆ
    ಎಲ್ಲವನ್ನು ಆ ದೇವರ ಮೇಲೆ ಹಾಕಿ ಗೊಣಗುತ್ತಾ ಸಾಗುವ ಮಂದಿ
    ಕಾಯಕದ ಮಹಿಮೆಯನ್ನು ಸಾರುವ ಕವನ ಚಂದವಾಗಿದೆ

  5. ಭಾವಕೋಶಕ್ಕೆ ನೈದಿಲೆಯ ಘಮಲು ಮುದ ನೀಡಿದೆ. ಸೊಗಸಾದ ಪ್ರಯತ್ನ, ಸೊಗಸಾದ ಕವನ. ಎಂದಿನಂತೆ ಜೀವನ ಸತ್ಯಗಳೂ ತೆರದಿಟ್ಟಂತಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *