ಅವಿಸ್ಮರಣೀಯ ಅಮೆರಿಕ – ಎಳೆ 75
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಸುಂದರ ಡೆನಾಲಿ
ಆಂಕರೇಜ್ ನಲ್ಲಿ ಬೆಳಗ್ಗಿನ ತಿಂಡಿ ಮುಗಿಸಿ ಹೊರಟಿತದೊ ಸಾಲಾಗಿ.. ನಮ್ಮ ಆರು ಮನೆಗಳ ಕಾರವಾನ್! ಅಲ್ಲಿಂದ 438ಕಿ.ಮೀ.ದೂರದಲ್ಲಿರುವ ಡೆನಾಲಿ ನಮ್ಮ ಮುಂದಿನ ತಾಣವಾಗಿತ್ತು. ಒಮ್ಮೆಗೆ ಜಾಗ ಇಕ್ಕಟ್ಟು ಎನಿಸಿದರೂ, ನಿಂತಲ್ಲಿಯೇ, ಒಂದು ಇಂಚೂ ಸರಿಯದೆ ಅಡುಗೆ ಮಾಡುವ ಮಜವೇ ಬೇರೆ..ಏನಂತೀರಿ? ವಾಹನವನ್ನು ನಿಲ್ಲಿಸಿದಾಗ ಮಾತ್ರ ನಮ್ಮ ಅಡಿಗೆ ತಯಾರಿ…ಉಳಿದಂತೆ ಭದ್ರವಾಗಿ ಸೀಟ್ ಬೆಲ್ಟ್ ಬಿಗಿದು ಕುಳಿತು, ಪ್ರಕೃತಿ ವೀಕ್ಷಣೆ ಮಾಡುವುದು ನಮ್ಮ ಕೆಲಸ! ದಾರಿ ಮಧ್ಯೆ, ಕುಲಿಟಿನಾ(Kulitina) ಎಂಬಲ್ಲಿ ಸಿಕ್ಕಿದ, ಚಂದದ ನದಿಯ ತಣ್ಣನೆಯ ನೀರಲ್ಲಿ ಮಕ್ಕಳೆಲ್ಲಾ ಆಟವಾಡಿ, ಎಲ್ಲರೂ ಒಂದರ್ಧ ತಾಸು ಸುತ್ತಲಿನ ಸುಂದರ ನಿಸರ್ಗ ಸೌಂದರ್ಯವನ್ನು ವೀಕ್ಷಿಸಿ, ಬಿಸಿ ಬಿಸಿ ಟೀ ಮಾಡಿ ಕುಡಿದು ಮಜಾ ಮಾಡಿದ್ದು ಮಾತ್ರ ಮರೆಯುವಂತೆಯೇ ಇಲ್ಲ. ಹಾಲು, ಮೊಸರು, ಹಣ್ಣು ತರಕಾರಿಗಳು ಫ್ರಿಜ್ ನಲ್ಲಿ ಜೋಪಾನವಾಗಿದ್ದುದರಿಂದ, ಬೇಕೆಂದಾಗ ವಾಹನ ನಿಲ್ಲಿಸಿ, ಅಡುಗೆ ಮಾಡಿ ಊಟ ಮಾಡಲು ಬಹಳ ಅನುಕೂಲಕರವಾಗಿತ್ತು.
ಡೆನಾಲಿ ತಲಪಿದಾಗ 12:30ರ ಮಧ್ಯರಾತ್ರಿಯಾಗಿತ್ತು.. ಆದರೂ ನಿಚ್ಚಳ ಬೆಳಕು. ಇಲ್ಲಿ ನಿಗದಿತ ಶುಲ್ಕ ನೀಡಿ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆಯಿದೆ. ಅಲ್ಲಿರುವಷ್ಟು ಸಮಯವೂ ಪಾರ್ಕ್ ಸುತ್ತಲು ಬಳಸುವ ಡೆನಾಲಿಯ ವಾಹನಗಳಿಗೆ ಶುಲ್ಕ ತೆರಬೇಕಾಗಿಲ್ಲ. “ರಾತ್ರಿ 8ರಿಂದ ಬೆಳಿಗ್ಗೆ 6ರ ವರೆಗೆ ನಿಶ್ಶಬ್ದ!”…ಇದು ಪರಿಸರವನ್ನು ಕಾಪಾಡಲು ಅಲ್ಲಿದ್ದ ಎಚ್ಚರಿಕೆಯ ಫಲಕ. ನಾಡು ಪ್ರಾಣಿಗಳಿಂದ ಕಾಡು ಪ್ರಾಣಿಗಳಿಗೆ ತೊಂದರೆಯಾಗಬಾರದಲ್ಲವೇ? ನಿಶ್ಶಬ್ದವಾಗಿ ನಮ್ಮ ಹಾಸಿಗೆಗಳನ್ನು ಸಿದ್ಧಪಡಿಸಿ, ಕಿಟಿಕಿ, ಬಾಗಿಲುಗಳ ಪರದೆಗಳನ್ನು ಮೆಲ್ಲನೆ ಇಳಿಸಿ,(ಹೊರಗಡೆ ಇನ್ನೂ ಬೆಳಕೇ ಬೆಳಕು..!) ನಿದ್ದೆ ಮಾಡಲು ಪ್ರಯತ್ನಿಸಿ ಯಶಸ್ವಿಯಾದೆವು. ಆದರೂ ನಮ್ಮಲ್ಲಿಯ ಕೆಲವು ಮಕ್ಕಳ ಆಟ, ಗಲಾಟೆ ಎಗ್ಗಿಲ್ಲದೆ ನಡೆಯಿತೆನ್ನಿ. ಮೊದಲು ಈ ಡೆನಾಲಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ…..
ಡೆನಾಲಿಯು 1917ರಲ್ಲಿ ದೇಶದ ರಕ್ಷಿತಾರಣ್ಯವೆಂದು ಘೋಷಿಸಲ್ಪಟ್ಟಿತು. ಮುಖ್ಯವಾಗಿ, ಇಲ್ಲಿರುವ ಕಾಡುಪ್ರಾಣಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ರೂಪುಗೊಂಡು ಅವುಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಸುಮಾರು ಆರು ಮಿಲಿಯ ಎಕರೆಗಳಷ್ಟು ಜಾಗದಲ್ಲಿ ವ್ಯಾಪಿಸಿರುವ, ವೈವಿಧ್ಯಮಯ ಪ್ರಾಣಿ ಸಂಕುಲಗಳನ್ನೊಳಗೊಂಡ ಅಲಾಸ್ಕಾದ ಅತ್ಯಂತ ದೊಡ್ಡ ರಕ್ಷಿತ ಪ್ರದೇಶ ಇದಾಗಿದೆ. ಕಂದು ಕರಡಿ, ತೋಳ, ಚಂದದ ಅಗಲ ಕೊಂಬುಗಳುಳ್ಳ moose, ಕುರಿಗಳಂತಿರುವ dog sheep, ಇತ್ಯಾದಿಗಳನ್ನು ಕಾಡಿನ ರಸ್ತೆಯ ಅಂಚಿನಲ್ಲಿ ಕಾಣಬಹುದು . ಜೊತೆಗೆ ಇಲ್ಲಿ ಹಲವಾರು ಹಿಮನದಿಗಳನ್ನು ಹಾಗೂ ಉತ್ತರ ಅಮೆರಿಕದ ಅತ್ಯಂತ ಎತ್ತರವಾದ (20,310 ಅಡಿ) ಪರ್ವತ(Mount McKinley) ವನ್ನೂ ಕಾಣಬಹುದು.
ಮರುದಿನ (1.7.2019) ಪ್ರಾತಃಕಾಲ 6.30ಕ್ಕೆ, ಬೆಳಗ್ಗಿನ ಉಪಾಹಾರವನ್ನು ಬೇಗನೆ ಮುಗಿಸಿ, ಸ್ವಲ್ಪ ಮೊಸರನ್ನ, ಹಣ್ಣುಗಳನ್ನು ಕಟ್ಟಿಕೊಂಡು; ಪ್ರವಾಸಿಗರನ್ನು ಉಚಿತವಾಗಿ ಕೊಂಡೊಯ್ಯುವ ಅಲ್ಲಿಯದೇ ಬಸ್ಸಿನಲ್ಲಿ ಡೆನಾಲಿಯ ವಿಶೇಷ ಸ್ಥಳಗಳನ್ನು ವೀಕ್ಷಿಸಲು ಹೊರಟೆವು. ಮೂವತ್ತು ಆಸನಗಳ ಸಾದಾ ಬಸ್ಸು. ಅದರ ಚಾಲಕನೇ ನಮಗೆ ಗೈಡ್. ರಕ್ಷಿತ ಪ್ರದೇಶದ ಕಿರಿದಾದ ರಸ್ತೆಯಲ್ಲಿ ವಾಹನವು ಮುಂದೋಡುತ್ತಿದ್ದಂತೆಯೇ, ರಸ್ತೆ ಪಕ್ಕದ ಕಿರಿ ಪೊದರುಗಳೆಡೆಯಲ್ಲಿ ಮೇಯುತ್ತಿರುವ ಜಿಂಕೆಯಂತಹ ಪ್ರಾಣಿಗಳನ್ನು ಚಾಲಕನು ತೋರಿಸುತ್ತಾ, ತನ್ನ ಹಾಸ್ಯಭರಿತ ಮಾತುಗಳಿಂದ ನಗಿಸುತ್ತಾ ವಾಹನ ಚಲಾಯಿಸುತ್ತಿದ್ದ. ಕೆಲವು ಕಡೆಗಳಲ್ಲಿ ಅತ್ಯಂತ ಕಿರಿದಾದ, ನಾಜೂಕಾದ ಏರು ರಸ್ತೆಯಲ್ಲಿ ಹೋಗುತ್ತಿರುವಾಗ ಸುತ್ತಲೂ ನೋಡಲೂ ಭಯವಾಗುವಂತಿತ್ತು. ಸಡಿಲು ಮಣ್ಣಿನ ಬೆಟ್ಟದ ಮಧ್ಯಭಾಗದಲ್ಲಿ ವಾಹನ ಹೋಗುತ್ತಿದ್ದಂತೆ ಎಡಕ್ಕೆ ಆಳ ಪ್ರಪಾತ ಕಾಣುತ್ತಿತ್ತು…ಹಾಗೆಯೇ ವಾಹನದ ಚಕ್ರ ತಿರುಗಿದಲ್ಲಿ ಮಣ್ಣು ಕೆಳಗಡೆಗೆ ಜಾರುತ್ತಿತ್ತು! ಭಯದಿಂದ ಕಿರುಚುವುದೊಂದೇ ಬಾಕಿ! ಆದರೆ ಚಾಲಕನು ನಮಗೆ ಧೈರ್ಯ ತುಂಬುತ್ತಾ ಬಹಳ ಚಾಲಾಕಿನಿಂದ ಬಸ್ಸನ್ನು ನಡೆಸುತ್ತಿದ್ದ. ಆಗ ಬೆಳಗ್ಗಿನ ಜಾವ 9ಗಂಟೆ… ಬೆಟ್ಟದ ತುದಿ ತಲಪಿದೊಡನೆ ಅಲ್ಲಿಯ ಪ್ರಕೃತಿ ವೀಕ್ಷಣೆಗಾಗಿ ವಾಹನವನ್ನು ನಿಲ್ಲಿಸಲಾಯಿತು.
ಆಹಾ… ಈ ವರೆಗಿನ ಭಯವೆಲ್ಲವನ್ನೂ ಮರೆತು ನಾಲ್ಕೂ ಸುತ್ತಲು ಕಾಣುವ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳತೊಡಗಿದೆವು. ಬಹುದೂರ ದಿಗಂತದಂಚಿಗೆ ತಾಗಿದಂತಿರುವ ಪರ್ವತಗಳ ಸಾಲು..ಅವುಗಳಲ್ಲಿ ಬೆಳ್ಳಿ ರೇಖೆಯಂತೆ ಕಾಣುವ ಹಿಮನದಿಗಳು. ಆ ಎತ್ತರದ ಪ್ರದೇಶದಲ್ಲಿ ಬಹಳ ರಭಸದಿಂದ ಬೀಸುವ ಕುಳಿರ್ಗಾಳಿಗೆ ಸಮತೋಲನವನ್ನು ಕಾಪಾಡಿಕೊಳ್ಳುವುದೇ ನಮಗೆ ಕಷ್ಟವಾಯಿತು. ಒಂದರ್ಧ ತಾಸಿನ ಬಳಿಕ ಬಸ್ಸು ಮುಂದಕ್ಕೆ ಹೊರಟಿತು..ಹೆಚ್ಚು ಮರಗಳಿಲ್ಲದ; ಪೊದರು ಹಾಗೂ ಎತ್ತರಕ್ಕೆ ಬೆಳೆದ ಹುಲ್ಲು ಬಯಲು ಬೆಟ್ಟಗಳ ತುಂಬ ಹರಡಿತ್ತು. ಮೈಲುಗಟ್ಟಲೆ ಹೋದರೂ ನೋಡಲು ವಿಶೇಷವಾದ ಪ್ರಾಣಿಗಳೇನೂ ಸಿಗಲಿಲ್ಲ. ಮಧ್ಯಾಹ್ನ 11ಗಂಟೆಯ ಸಮಯ….ಸುತ್ತಲೂ ದಟ್ಟ ಮಂಜು ಕವಿದು ಪ್ರಾಣಿಗಳೇನು…ರಸ್ತೆ ಕಾಣುವುದೇ ಕಷ್ಟಸಾಧ್ಯವೆನಿಸಿದಾಗ ನಮ್ಮ ಅದೃಷ್ಟವನ್ನು ಹಳಿಯುತ್ತಾ ಸಾಗಿದೆವು. ಅರ್ಧ ಗಂಟೆಯಲ್ಲಿ ಐಲ್ಸನ್(Eielson) ಎಂಬ ತಾಣದಲ್ಲಿ ಬಸ್ಸನ್ನು ನಿಲ್ಲಿಸಿದಾಗ ಚಳಿಯಿಂದ ಥರಗುಟ್ಟುತ್ತಾ ಕೆಳಗಿಳಿದೆವು. ದಟ್ಟ ಮಂಜು ಇಬ್ಬನಿಯ ರೂಪದಲ್ಲಿ ನಮ್ಮನ್ನು ಒದ್ದೆ ಮಾಡುತ್ತಿತ್ತು. ಅಲ್ಲೇ ಇಳಿಜಾರಿನಲ್ಲಿ ಒಂದೆರಡು ಸಾದಾ ಕಟ್ಟಡಗಳು ಕಣ್ಣಿಗೆ ಬಿದ್ದವು. ಕಷ್ಟಪಟ್ಟು ನಡೆದು ಅದರೊಳಗೆ ಸೇರಿಕೊಂಡೆವು. ಅದು ಒಂದು ಪುಟ್ಟ ವಸ್ತುಪ್ರದರ್ಶನಾಲಯವಾಗಿತ್ತು. ಅಲ್ಲಿಯ ಕಾಡಿನಲ್ಲಿ ವಾಸಿಸುವ ವಿಶೇಷ ಪ್ರಾಣಿಗಳ ಬಗ್ಗೆ ವಿವರವಾದ ಮಾಹಿತಿಗಳ ಜೊತೆಗೆ, ಕಂದು ಕರಡಿಯ ನಯವಾದ ದಪ್ಪನೆಯ ತುಪ್ಪಳವನ್ನು ಎದುರು ಭಾಗದಲ್ಲಿ ಇರಿಸಲಾಗಿತ್ತು, ಅದನ್ನು ಕೈಯಲ್ಲಿ ಸವರಿದಾಗ ಅದರ ಮೃದುತ್ವದ ಅನುಭವವು ವಿಶೇಷವೆನಿಸಿತು. ಪೂರ್ತಿ ಡೆನಾಲಿಯಲ್ಲಿರುವ ಪ್ರಸಿದ್ಧ ಹಿಮಪ್ರವಾಹಗಳು ಹಾಗೂ ಪರ್ವತಗಳ ಪ್ರತಿಕೃತಿಯನ್ನು ಬೆಳಕಿನ ವ್ಯವಸ್ಥೆಯೊಂದಿಗೆ ರೂಪಿಸಿ, ಅವುಗಳ ಆಕಾರ, ಎತ್ತರ, ಅದರ ಬಳಿ ಹೋಗುವ ಮಾರ್ಗದ ನಕ್ಷೆ ಇತ್ಯಾದಿಗಳ ಕುರಿತು ಚಿತ್ರ ಸಹಿತ ಮಾಹಿತಿಗಳು ಲಭ್ಯವಿದ್ದವು. ಅವುಗಳನ್ನೆಲ್ಲಾ ನೋಡುತ್ತಾ ಸಮಯ ಸರಿದುದೇ ತಿಳಿಯಲಿಲ್ಲ. ಮಧ್ಯಾಹ್ನ 12:30 ಗಂಟೆಯಾಗುತ್ತಿದ್ದಂತೆ, ತಂದಿದ್ದ ಮೊಸರನ್ನವನ್ನು ಹೊಟ್ಟೆಗಿಳಿಸಿದಾಗ ಸ್ವಲ್ಪ ನೆಮ್ಮದಿಯೆನಿಸಿತು. ಮುಂದಕ್ಕೆ ಒಂದು ವಿಶೇಷವಾದ ಜಾಗಕ್ಕೆ ನಮ್ಮ ತಂಡವನ್ನು ಕರೆದೊಯ್ಯಲಾಯಿತು…
(ಮುಂದುವರಿಯುವುದು…..)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: https://www.surahonne.com/?p=39163
-ಶಂಕರಿ ಶರ್ಮ, ಪುತ್ತೂರು
ಎಂದಿನಂತೆ ಪ್ರವಾಸಕಥನ ಓದಿಸಿಕೊಂಡು ಹೋಯಿತು.. ಶಂಕರಿ ಮೇಡಂ
ಧನ್ಯವಾದಗಳು… ನಾಗರತ್ನ ಮೇಡಂ.
Very nice
ಧನ್ಯವಾದಗಳು ಮೇಡಂ
ಸೊಗಸಾದ ಪ್ರಕೃತಿ, ಅದರ ಸುಂದರ ವರ್ಣನೆ. ಲೇಖನ ಮುದ ನೀಡಿತು.
ಧನ್ಯವಾದಗಳು ಮೇಡಂ
ಚಂದದ ಪ್ರವಾಸ ಕಥನ ವಂದನೆಗಳು
ಸೊಗಸಾಗಿದೆ ಅಕ್ಕೋ …ಚಂದ ಇದ್ದು