ಜೀವ ಸೆಲೆ
ಈ ಅಮೂಲ್ಯ ಜೀವನವೊಂದೇ ನಮಗಾಗಿ
ಕೊಟ್ಟಿರುವ ಭಗವಂತ ತೂಗಿ ತೂಗಿ
ಅನುಭವಿಸೋಣ ಘಳಿಗೆ ಘಳಿಗೆ ಒಟ್ಟಾಗಿ
ಯಾರು ಏನನ್ನುವರು ಎಂದು ಕೊರಗಿ ಫಲವಿಲ್ಲ
ನಮ್ಮ ಬದುಕೇ ನಮಗೆ ಸವಿ ಬೆಲ್ಲ
ಅವರ ಅಭಿಪ್ರಾಯಗಳಿಗೇಕೆ ನಮ್ಮ ಭಾವನೆಗಳ ಬಲಿ ಕೊಡಬೇಕು
ಅಂತರಾತ್ಮಕೆ ಸರಿಯೆನಿಸಿದ ರೀತಿಯಲ್ಲೇ ಬದುಕಬೇಕು
ನಮ್ಮ ಸಾಧನೆಗೆ ಅವರ ಕೊಡುಗೆ ಏನಿಲ್ಲ
ಕಣ್ಣೀರ ಒರೆಸಲು ಅವರಿಗೆ ಸಮಯವಿಲ್ಲ
ಹೆದ್ದೊರೆಗಳ ಒಡೆತಕ್ಕೆ ಸಿಕ್ಕವರಿಗೆ ಗೊತ್ತು ಅದರ ನೋವು
ನಿಂತು ನೋಡುವವರಿಗೆ ಬರೀ ಕಾಲಕ್ಷೇಪದ ನಲಿವು
ಬೇರೆಯವರ ವಿಫಲತೆಗಳ ಕಿವಿಯರಳಿಸಿ ಕೇಳುವುರು
ಅನ್ಯವಾರ್ತೆಗಳ ವಿಷಯದಲಿ ಸದಾ ಮುಂದಿಹರು
ಬೆಂದು ಬೇಯುವುದ ಕಂಡು ನಲಿವರು
ಮನೆ ಮನೆಗೆ ಹೋಗಿ ಆಡಿಕೊಂಡು ನಗುವರು
ಇಂತಹ ಸಿನಿಕರ ಮೆಚ್ಚಿಸಲು ಸಾಧ್ಯವೇ
ಕ್ಷಣ ಕ್ಷಣಕೂ ವೇದನೆ ಪಡುವುದು ವೇದ್ಯವೇ
ಬೇಸರದ ತಡೆಗೋಡೆ ಒಡೆದು ಚೈತನ್ಯ ಹೊರಬರಲಿ
ನೇಸರನ ಕಿರಣಗಳು ಹೊಸ ಭರವಸೆಯ ಮೂಡಿಸಲಿ
ಒಂದು ಯೋಜನೆ ಜಾರಿ ಹೋದರೇನಂತೆ
ಮಾಡಲು ಇನ್ನೂ ನೂರಾ ಒಂದು ಉಳಿದಿಹವು
ಎಲ್ಲರಿಗೂ ಚೆಂದದ ಬಾಳುಂಟು ಇಲ್ಲಿ
ಸಕಲರಿಗೂ ಅವಕಾಶಗಳು ಕಾದಿಹವು ಚೆಲ್ಲಿ
ಕಣ್ಣಲ್ಲಿ ಇಳಿದಿರುವ ಕಂಬನಿಗಳ ಮೊದಲು ಒರೆಸು
ಗೋಚರಿಸುವುದು ಬದುಕ ಹರುಳಗಳ ಸೊಗಸು
ಹೀಗೆಯೇ ಇರಬೇಕೆಂಬ ನಿಯಮವಿಲ್ಲ
ಹುಸಿ ಪ್ರತಿಷ್ಠೆಯ ಬಿಟ್ಟು ನೋಡು ಎಲ್ಲಾ
ಯಾರನ್ನು ನಂಬಿ ನಾವಿಲ್ಲಿ ಬಂದಿಲ್ಲ
ಜೀವಿಸುವ ಛಲ ಮನದಲ್ಲಿ ತುಂಬಿದೆಯೆಲ್ಲಾ
ನಮ್ಮ ಸೋಲುಗಳಿಗೆ ಮತ್ತೊಬ್ಬರು ಹೊಣೆ ಹೇಗೆ?
ಮಾಡಿದ ಕರ್ಮಗಳ ಫಲ ಉಣ್ಣುವುದು ಈ ಬೇಗೆ
-ಕೆ.ಎಂ ಶರಣಬಸವೇಶ
ಅರ್ಥ ಪೂರ್ಣ ವಾದ ಕವಿತೆ..ಹೌದು..ನಾಮಾಡಿದಾ ಕರ್ಮ ಬೆನ್ನಬಿಡದು…ಸತ್ಯದ ಮಾತು.ಅದನ್ನು ಕವನದಲ್ಲಿ ಕಟ್ಟಿ ಕೊಟ್ಟಿರುವ ರೀತಿ ಚೆನ್ನಾಗಿದೆ.. ಸಾರ್ ಧನ್ಯವಾದಗಳು
ಸೊಗಸಾಗಿದೆ ಕವನ
ಕವಿತೆ ಜೀವನಸತ್ಯವನ್ನು ಕಾವ್ಯಾತ್ಮಕವಾಗಿ ಬಿಂಬಿಸಿದೆ.
ಧನ್ಯವಾದಗಳು ನಾಗರತ್ನ,ನಯನ ಬಜಕೂಡ್ಲು, ಪದ್ಮಾ ಆನಂದ್ ಮೇಡಂ ಗೆ
ಕವನ ಸೊಗಸಾಗಿದೆ.
ಆಶಾವಾದ, ನಂಬಿಕೆ,ಬದುಕಿನ ಬಗ್ಗೆ ಭರವಸೆಯನ್ನು ಕಲಾತ್ಮಕವಾಗಿ ಚಿತ್ರಿಸಿರುವ ಕವನ
ವಂದನೆಗಳು