ಹೀಗೊಂದು ವಿಶಿಷ್ಟ ಪ್ರವಾಸದ ಅನುಭವದ ಮೆಲುಕು!.
ಏನೇನೋ ತಂತ್ರಜ್ಞಾನಗಳ ಭರಾಟೆಯಲ್ಲಿ ಪತ್ರ- ಮಿತ್ರ ಸ್ನೇಹಿತರ ವಿಶಿಷ್ಟ ಸಮ್ಮಿಲನ ಕಾರ್ಯಕ್ರಮ ಬಿ ಆರ್ ಪ್ರಾಜೆಕ್ಟ್ ನಲ್ಲಿ ಇತ್ತೀಚೆಗೆ ನಡೆಯಿತು. ಇಲ್ಲಿ ವರ್ಷ ವರ್ಷವೂ ಕೂಡ ಪತ್ರ ಮಿತ್ರರ ಸಮ್ಮಿಲನ ಕಾರ್ಯಕ್ರಮ ನಡೆಯುತ್ತದೆ. ಒಂದು ರೀತಿಯಲ್ಲಿ ಹಬ್ಬದ ವಾತಾವರಣ. ರಾಜ್ಯದ ವಿವಿಧ ಮೂಲಗಳಿಂದ ಬರುವ ಪತ್ರ ಮಿತ್ರರು. ಎಲ್ಲರೂ ಒಂದೆಡೆ ಕಾರ್ಯಕ್ರಮದಲ್ಲಿ ಸೇರುತ್ತಾರೆ.
ಹಿಂದೆಂದಿಗಿಂತ ಈ ಬಾರಿ ವಿಶೇಷ ಕಾರ್ಯಕ್ರಮ ಬಿಆರ್‌ಪಿಯಲ್ಲಿ ನಡೆಯಿತು. ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರ ರವರೆಗೂ ಕೂಡ ವೇದಿಕೆ ಕಾರ್ಯಕ್ರಮಗಳು ಸರಾಗವಾಗಿ ನಡೆದವು. ಭಕ್ತಿ ಗೀತೆ, ಭಾವಗೀತೆ, ಚಿತ್ರಗೀತೆ, ಜನಪದ ಗೀತೆ, ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಜೊತೆಗೆ ಮಧ್ಯಮಧ್ಯ ಭಾಷಣ ಕಾರ್ಯಕ್ರಮ, ಪುಸ್ತಕ ಬಿಡುಗಡೆ ಹೀಗೆ ಎಲ್ಲವೂ ಸಾಂಗವಾಗಿ ನಡೆದವು.
ಈ ಕಾರ್ಯಕ್ರಮಕ್ಕೆ ಎಲ್ಲಾ ಪತ್ರ ಮಿತ್ರ ಸ್ನೇಹಿತರು ಸಾಕ್ಷಿಭೂತರಾದರು. ಈ ಕಾರ್ಯಕ್ರಮ ಒಂದು ರೀತಿಯಲ್ಲಿ ಭಾವನಾತ್ಮಕ ಸಂಬಂಧವನ್ನು ಪ್ರಚುರಪಡಿಸಿತು. ಈ ಎಲ್ಲಾ ಕಾರ್ಯಕ್ರಮಗಳ ರೂವಾರಿ ಹೊಸಹಳ್ಳಿ ದಾಳೇ ಗೌಡರು. ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಈಗ ನಿವೃತ್ತರಾಗಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಪತ್ರ ಮಿತ್ರ ಹವ್ಯಾಸಕ್ಕೆ ಸಾಹಿತ್ಯದ ಕಾರ್ಯಕ್ರಮಗಳಿಗೆ ತಮ್ಮ ನಿವೃತ್ತಿ ಜೀವನವನ್ನು ಮೀಸಲಿಟ್ಟಿದ್ದಾರೆ. ತಮ್ಮ ವಿಶಾಲವಾದ ಮನೆಯಲ್ಲೇ ಪತ್ರ ಮಿತ್ರರು ಉಳಿದುಕೊಳ್ಳುವ ವ್ಯವಸ್ಥೆ, ಊಟದ ವ್ಯವಸ್ಥೆ ಎಲ್ಲವನ್ನು ಇವರೇ ಮಾಡುತ್ತಾರೆ. ಕೆಲವು ಸ್ನೇಹಿತರು ಕೂಡ ಇವರಿಗೆ ನೆರವಾಗುತ್ತಾರೆ. ದೂರ ದೂರದಿಂದ ಪತ್ರ ಮಿತ್ರರು ಈ ಕಾರ್ಯಕ್ರಮಕ್ಕೆ ಆಗಮಿಸಿದಾಗ ಅವರು ವ್ಯಕ್ತಪಡಿಸುವ ಭಾವನೆ ನಿಜಕ್ಕೂ ವರ್ಣಿಸಲಸದಳ ಅನುಭವ ನೀಡುತ್ತದೆ!. ಯಾವುದೇ ನಿರೀಕ್ಷೆಯಿಲ್ಲದೆ ಎಲ್ಲರನ್ನೂ ಕೂಡ ಆತ್ಮೀಯವಾಗಿ ಆಹ್ವಾನಿಸಿ ಪರಸ್ಪರ ಚರ್ಚೆಯ ಮೂಲಕ ನಮ್ಮನ್ನು ನೋಡುಕೊಳ್ಳುತ್ತಾರೆ.
ಈ ಎಲ್ಲಾ ಅಂಶಗಳನ್ನು ನಾವು ನೋಡಿದಾಗ “ಯಾವ ಜನ್ಮದ ಮೈತ್ರಿ” ಎಂದೆನಿಸದೆ ಇರದು. ನಿಜಕ್ಕೂ ಈ “ಪತ್ರ ಮಿತ್ರ” ಸ್ನೇಹ ವಿಶಿಷ್ಟವಾದದ್ದು. ಇಂತಹ ಒಂದು ಕಾರ್ಯಕ್ರಮ ಈ ಬಾರಿ 22ನೇ ಸಮ್ಮಿಲನ. ಆದರೆ ಪತ್ರ ಮಿತ್ರ ಹವ್ಯಾಸಕ್ಕೆ ಚಾಲನೆ ದೊರಕಿ 24 ವಸಂತಗಳು ಸಂದಿವೆ!.
ಮುಂದಿನ ವರ್ಷ “ಬೆಳ್ಳಿ ಪತ್ರ ಮಿತ್ರ ಹವ್ಯಾಸ” ಕಾರ್ಯಕ್ರಮ ಬಿ ಆರ್ ಪಿ ಯಲ್ಲಿ ನಡೆಯಲಿದೆ ಎಂದು ದಾಳೇ ಗೌಡರು ತಿಳಿಸಿದ್ದಾರೆ. ನಾನು ಈ ಕಾರ್ಯಕ್ರಮಕ್ಕೆ 7ನೇ ವರ್ಷದಿಂದಲೂ ಕೂಡ ಭಾಗವಹಿಸುತ್ತಾ ಬರುತ್ತಿದ್ದೇನೆ. ಪ್ರಾರಂಭದ ವರ್ಷಗಳಲ್ಲಿ ಮೈಸೂರಿನಿಂದ ನಾನೊಬ್ಬನೇ ಹೋಗುತ್ತಿದ್ದೆ. ನಂತರ ನನ್ನ ನಂಜನಗೂಡಿನ ಸ್ನೇಹಿತರಾದ ಕಲ್ಪುರ ಲಿಂಗರಾಜು ರವರು ದಾಳೇ ಗೌಡರ ಸ್ನೇಹಕ್ಕೆ ಮನಸೋತು ಬರುತ್ತಿದ್ದಾರೆ. ಆದರೆ ಈ ಬಾರಿಯ “ಪತ್ರ ಮಿತ್ರ ಸಮ್ಮಿಲನ” ನಮಗೆ ವಿಶಿಷ್ಟ ರೀತಿಯಲ್ಲಿ ಮುದನೀಡಿತು. ಏಕೆಂದರೆ ನಮ್ಮಿಬ್ಬರ ಜೊತೆ ಲಿಂಗರಾಜುರವರ ಮೂರು ಸ್ನೇಹಿತರು, ನನ್ನ ಏಳು ಜನ ಸ್ನೇಹಿತರೊಂದಿಗೆ ಒಟ್ಟಾಗಿ ಹೋಗಿದ್ದೆವು.
ನಾನು ಕಳೆದ 30 ವರ್ಷಗಳಿಂದಲೂ ಕೂಡ ಮೈಸೂರು ಆಕಾಶವಾಣಿಯನ್ನು ನಿರಂತರವಾಗಿ ಕೇಳಿದ್ದರ ಫಲವಾಗಿ ಅಲ್ಲಿ ಬರುವ ಚಲನಚಿತ್ರ ಗೀತೆಗಳ ಗಾನಸುಧೆ ಮನದಲ್ಲೇ ಅಚ್ಚಳಿಯದೆ ಉಳಿದುಬಿಟ್ಟಿತ್ತು. ಅದು ನೆನಪಿಗೆ ಬಂದಿತು ನಾನು ಕುತೂಹಲದಿಂದ ಒಂದು ದಿನ ನಾನು ಒಂದು ಹಾಡು ಹಾಡುತ್ತೇನೆ ಎಂದು ಕೇಳಿದಾಗ ನೀವು ಕೂಡ ಹಾಡಿ ಎಂದು ಆ ತಂಡದವರು ನನ್ನನ್ನು ಪ್ರಾರಂಭದಲ್ಲಿ ಪ್ರೋತ್ಸಾಹ ಮಾಡಿದರು.
ಅದೇ ಸ್ನೇಹಿತರು ಈಗ ಬಿ ಆರ್ ಪಿ ಗೂ ಕೂಡ ಪಯಣ ಬೆಳೆಸಿದ್ದು ಒಂದು ಅಚ್ಚರಿಯ ವಿಷಯ!!.. ಸ್ನೇಹ ಎನ್ನುವುದು ಎಲ್ಲಿಂದ ಎಲ್ಲಿಗೆ ಬೆಸೆಯುತ್ತದೆ ನೋಡಿ. ಇದೊಂದು ರೀತಿಯ ಬಿಡಿಸಲಾರದ ಬಂಧ. “ಹುಟ್ಟು ಉಚಿತ, ಸಾವು ಖಚಿತ”!. ಆ ನಡುವೆ ಬರುವ ಈ ಪ್ರೀತಿ ಸ್ನೇಹ ಗಾಢವಾದದ್ದು. ಅದು ಅಪರಿಮಿತ ಆನಂದವನ್ನುಂಟು ಮಾಡುತ್ತದೆ.ಆ ಸ್ನೇಹಿತರೆಲ್ಲ ಶಿವಮೊಗ್ಗ ಕಡೆಗೆ ಪಯಣ ಬೆಳೆಸಲು ನಿರ್ಧರಿಸಿದಾಗ ನನಗೆ ಮನಸ್ಸಿನಲ್ಲಿ ವಿಶಿಷ್ಟವಾದ ಆನಂದ ಉಂಟಾಯಿತು. ಸರಿ ನಮ್ಮ ಸ್ನೇಹಿತರೆಲ್ಲಾ ಸೇರಿ ಶಿವಮೊಗ್ಗವನ್ನು ಕಳೆದ ಭಾನುವಾರ ಬೆಳಿಗ್ಗೆ ತಲುಪಿದೆವು. ಎಲ್ಲರೂ ಚಹಾ ಕುಡಿದು ಬೆಳಗಿನ ಪತ್ರಿಕೆಗಳನ್ನು ಕೊಂಡು ಬಿ ಆರ್ ಪಿ ಗೆ ಹೊರಡಲು ತಯಾರಾಗಿದ್ದ ಮೊದಲ ಬಸ್ಸಿಗೆ ಕುಳಿತೆವು. ನನಗಂತೂ ಬಿ ಆರ್ ಪಿ ಅನುಭವ ಮೊದಲೇ ಆಗಿತ್ತು.
ನನ್ನ ಸ್ನೇಹಿತರಿಗೆ ಏನೋ ಒಂದು ರೀತಿಯಲ್ಲಿ ಕುತೂಹಲ!. ಅಲ್ಲಿ ಯಾವ ರೀತಿಯ ಸ್ನೇಹ ಇವರದ್ದು?!. ಏನು ವಿಶೇಷ? ಎಂಬ ಪ್ರಶ್ನೆಗಳು ಕುತೂಹದಿಂದ ಮೂಡುತ್ತಿದ್ದೆವು!. ಇನ್ನೇನು ಬಿ ಆರ್ ಪಿ ಹತ್ತಿರವಾಗುತ್ತಿದ್ದಂತೆ ನನಗೂ ಕೂಡ ಹೆಮ್ಮೆ!. ಏಕೆಂದರೆ ನನ್ನ ಜೊತೆಗೆ ಈಗ ಸ್ನೇಹಿತರು ಕೂಡ ಬಂದಿದ್ದಾರೆ.
ಈ ಮೊದಲೇ ನಾನು ದಾಳೇ ಗೌಡರಿಗೆ ನಾವು ಹತ್ತು ಜನ ಬರುವ ವಿಷಯ ತಿಳಿಸಿದಾಗ ಅವರು ತುಂಬಾ ಖುಷಿಪಟ್ಟರು. ಪರವಾಗಿಲ್ಲ ಬನ್ನಿ ಶಿವಕುಮಾರ್ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ಆಗಲೇ ನಮ್ಮ ಕುಶಲೊಪರಿಯನ್ನು ವಿಚಾರಿಸಿದರು. ಬನ್ನಿ ಬೆಳಿಗ್ಗೆ ಸ್ನಾನ, ತಿಂಡಿ ಎಲ್ಲಾ ರೆಡಿಯಾಗಿರುತ್ತದೆ ಎಂದು ನಮಗೆ ಶಿವಮೊಗ್ಗ ಬಸ್ ಬಿಟ್ಟಾಗ ಹೇಳಿದರು. ಅದರಂತೆ ನಾವು 7:45 ಕ್ಕೆ ಬಿ ಆರ್ ಪಿ ತಲುಪಿದೆವು. ಭಾನುವಾರದ ಸಮಯವದ್ದರಿಂದ ಬಿ ಆರ್ ಪಿ ಯಲ್ಲಿ ಸ್ವಲ್ಪ ಜನಜಂಗುಳಿ ಇತ್ತು. ಅದರಲ್ಲೂ ದಾಳೇ ಗೌಡರ ನಿವಾಸದ ಮುಂದೆ ಇರುವ ನಿಲ್ದಾಣದಲ್ಲಿ ಇಳಿದೆವು. ನಿಲ್ದಾಣ ಪಕ್ಕದಲ್ಲಿ ನಮ್ಮ ಸ್ನೇಹಿತರು ಸೇರಿ ಫೋಟೋ ತೆಗೆಸಿಕೊಂಡೆವು. ಆ ಫ್ಲೆಕ್ಸ್ ನಲ್ಲಿ ಪತ್ರ ಮಿತ್ರ ಮಿಲನದ ವಿಷಯ ಹಾಕಿದ್ದರು. ಜೊತೆಗೆ ಕಾರ್ಯಕ್ರಮದ ವಿವರ ಕೂಡ ಹಾಕಿದ್ದರು. ಐದು ನಿಮಿಷದಲ್ಲಿ ಅವರ ಮನೆ ತಲುಪಿದೆವು. “ಸಂಸ್ಕೃತಿ” ಎಂಬ ಹೆಸರಿನೊಂದಿಗೆ ಇದ್ದ ಅವರ ಚಿಕ್ಕ ಚೊಕ್ಕ ಮನೆ ಎದುರು ನಾವು ನಿಂತೆವು. ಸರ್ ನಮಸ್ಕಾರ ಎಂಬ ಧ್ವನಿಗೆ ಇತ್ತ ಕಡೆ ತಿರುಗಿದರು ಹೊಸಹಳ್ಳಿ ದಾಳೇ ಗೌಡರು.
ನನ್ನನ್ನು, ಲಿಂಗರಾಜು ಮತ್ತು ಇತರೆ ಸ್ನೇಹಿತರನ್ನು ನೋಡಿ ತುಂಬಾ ಖುಷಿಪಟ್ಟರು. ಎಲ್ಲರಿಗೂ ಸ್ವಾಗತಮಾಡಿ ಮೊದಲು ನೀವು ಈಗ ಟೀ ಕುಡಿಯುತ್ತಿರೋ? ಕಾಫಿ ಕುಡಿಯುತ್ತಿರೋ? ನಂತರ ಮಾತುಕತೆ. ಬಿಸಿ ನೀರು ಕಾದಿದೆ. ಎಲ್ಲರೂ ಒಬ್ಬೊಬ್ಬರಾಗಿ ರೆಡಿಯಾಗಿ ಎಂಬ ಉತ್ತರ! ನೋಡಿ ಪರಸ್ಪರ ಪರಿಚಯವಾಗಿರದ ನನ್ನ ಸ್ನೇಹಿತರಿಗೆ ಈ ಒಂದು ಆತ್ಮೀಯ ಮಾತುಕತೆ ತುಂಬಾ ಇಷ್ಟವಾಯಿತು. ಅದನ್ನೇ ನಂತರದಲ್ಲಿ ಹೇಳುತ್ತಿದ್ದರು. ಮೊದಲ ಬಾರಿಗೆ ಇಷ್ಟೊಂದು ಸ್ನೇಹಿ ಸಂಬಂಧ ಅವರಿಗೆ ಅಚ್ಚರಿ ಮೂಡಿಸಿತು ಎಂಬುದು ನನ್ನ ಭಾವನೆ. ಈ ಸ್ನೇಹವೇ ಅಂತದ್ದು. ಇಲ್ಲಿ ಪರಸ್ಪರ ಕೊಡು-ಕೊಳ್ಳುವಿಕೆ ಇರುತ್ತದೆ. ಯಾವುದೇ ರೀತಿಯ ಭಿನ್ನಾಭಿಪ್ರಾಯ ಇರುವುದಿಲ್ಲ. ಸರಿ, ನನ್ನ ಸ್ನೇಹಿತರೆಲ್ಲ ತಮ್ಮ ಲಗೇಜುಗಳನ್ನು ಇಟ್ಟು, ಮೊದಲು ಟೀ ಕುಡಿದು ನಂತರ ಒಬ್ಬೊಬ್ಬರಾಗಿ ಸ್ನಾನ ಮಾಡಿದರು. ನಂತರ ಬಿಸಿ ಬಿಸಿ ತಟ್ಟೆ ಇಡ್ಲಿ ಚಟ್ನಿ ರೆಡಿಯಾಗಿತ್ತು. ಎಲ್ಲರೂ ಬೇಗ ಬೇಗ ತಿಂದು ಕಾರ್ಯಕ್ರಮ ನಡೆಯುವ ಶಾಲೆಯ ಆವರಣಕ್ಕೆ ಹೊರಟೆವು.
ಅಲ್ಲಿ ದೊಡ್ಡದಾದ ಸಭಾಂಗಣದಲ್ಲಿ ಆಗಲೇ ಹಲವರು ಸೇರಿದ್ದರು. ಅಲ್ಲಿನ ಭಾವಗೀತೆ, ಚಿತ್ರಗೀತೆ, ಭಕ್ತಿಗೀತೆ ಜೊತೆಗೆ ಜಾನಪದ ಶೈಲಿಯ ಕಾರ್ಯಕ್ರಮ, ತಬಲಾ ಜುಗಲ್ ಬಂದಿ, ಸಂಗೀತ ಕಾರ್ಯಕ್ರಮಗಳು ಅಲ್ಲದೆ, ಶಾಲಾ ಮಕ್ಕಳಿಗೆ ಪತ್ರ ಬರೆಯುವ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಇವೆಲ್ಲವೂ ಕೂಡ ಸೂಜಿಗಲ್ಲಿನಂತೆ ಮನ ಸೆಳೆದವು. ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯೂ ಕೂಡ ನಡೆಯಿತು. ಅನೇಕ ಸಾಹಿತ್ಯ ಆಸಕ್ತರು ಕೂಡ ಇದರಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಯಶಸ್ವಿಯತ್ತ ಮುನ್ನಡೆಯುತಿತ್ತು. ಮಧ್ಯಾಹ್ನ ಸುಮಾರು 3:00 ವರೆಗೂ ಕೂಡ ಒಂದಲ್ಲ ಒಂದು ರೀತಿಯ ವಿಶಿಷ್ಟ ಕಾರ್ಯಕ್ರಮಗಳ ಸುಗ್ಗಿ ನಮಗೆ ದೊರೆಯಿತು.
ನಂತರ ಮಧ್ಯಾಹ್ನದ ಭೋಜನ ದಾವಣಗೆರೆಯ ರೊಟ್ಟಿ, ಪಲ್ಯ, ಅನ್ನ, ಸಾಂಬಾರ್, ಎರಡು ಮೂರು ತರಹದ ಸಿಹಿ ತಿಂಡಿಗಳು ಹೀಗೆ ಊಟ ಸವಿ ಸವಿಯಾಗಿ ರುಚಿಸಿತು. ಆ ವೇದಿಕೆಯ ಕಾರ್ಯಕ್ರಮದಲ್ಲಿ ನನ್ನ ಇಬ್ಬರು ಸ್ನೇಹಿತರಾದ ಪರಶಿವಮೂರ್ತಿ ಮತ್ತು ಮಹದೇವ ರವರು ಹಾಡುಗಳನ್ನು ಹಾಡಿದರು.ಕಾರ್ಯಕ್ರಮದಲ್ಲಿ ದಾಳೇ ಗೌಡರು ನಮ್ಮ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಸ್ನೇಹಿತರ ಬಗ್ಗೆ ಬಹಳ ಆತ್ಮೀಯವಾಗಿ ಮಾತನಾಡಿದರು. ನಾವು ಆ ಕಾರ್ಯಕ್ರಮದಲ್ಲಿ ಅಚ್ಚರಿ ಮೂಡಿಸಿದೆವು!. ಮತ್ತೆ ನಾವು ದಾಳೇಗೌಡರ ಜೊತೆಯಲ್ಲಿ ಫೋಟೋ ತೆಗೆಸಿಕೊಂಡು, ದಾಳೇಗೌಡ ದಂಪತಿಗಳನ್ನು ಚಿಕ್ಕದಾಗಿ ಸನ್ಮಾನ ಮಾಡಿದೆವು. ಅದನ್ನು ದಾಳೇಗೌಡರು ಬಹುವಾಗಿ ಮೆಚ್ಚಿಕೊಂಡರು. ಮುಂದೆ ಪತ್ರ ಮಿತ್ರ ಹವ್ಯಾಸ ಶುರುವಾಗಿ ಮುಂದಿನ ವರ್ಷಕ್ಕೆ 25 ವರ್ಷ ವಾಗುವುದರಿಂದ ನಿಮ್ಮ ಈ ತಂಡ ಬಂದು ಗಾಯನ ಕಾರ್ಯಕ್ರಮವನ್ನು ನಡೆಸಿ ಕೊಡಿ ಎಂದರು. ನಮ್ಮ ಈ ತಂಡಕ್ಕೆ ಶುಭಾಶಯ ಕೋರಿದರು. ಇದು ನನ್ನ ಎಲ್ಲಾ ಸ್ನೇಹಿತರಿಗೆ ಮರೆಯಲಾಗದ ಅನುಭವ ನೀಡಿತು.ಜೊತೆಗೆ ಅಲ್ಲಿ ಬಂದಿದ್ದ ಬೇರೆ ಬೇರೆ ಜಿಲ್ಲೆಗಳ ಸ್ನೇಹಿತರು ಕೂಡ ನಮ್ಮ ಬಳಗದ ಬಗ್ಗೆ ಮೆಚ್ಚುಗೆ ಮಾತನಾಡಿದರು. ಕೆಲವರು ಪರಿಚಯ ಮಾಡಿಕೊಂಡರು. ಹೀಗೆ ಒಂದಕ್ಕೊಂದು ಸ್ನೇಹದ ಸಂಬಂಧದ ಕೊಂಡಿ ಹೆಚ್ಚುತ್ತಲೇ ಹೋಯಿತು.
ಇನ್ನೇನು ಕಾರ್ಯಕ್ರಮದ ಕೊನೆಯ ಘಟ್ಟಕ್ಕೆ ಬಂದಾಗ ಕೆಲವರು ಅಂತಿಮ ಕಾರ್ಯಕ್ರಮದಲ್ಲಿದ್ದರು. ಕೆಲವರು ಭೋಜನ ಆಲಯದಲ್ಲಿದ್ದರು. ಎಲ್ಲರೂ ಕೂಡ ದೂರದ ಊರಿಗೆ ಹೋಗುವ ಆತುರ.ಮತ್ತೊಮ್ಮೆ ದಾಳೇ ಗೌಡರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಅವರ ಕುಟುಂಬಕ್ಕೆ ಧನ್ಯವಾದಗಳು ಅರ್ಪಿಸಿ, ಒಲ್ಲದ ಮನಸ್ಸಿನಿಂದ ಬಸ್ಟ್ಯಾಂಡ್ ಕಡೆಗೆ ಹೊರಟೆವು. ನಾವು ಅದೇ ಸಂಜೆ ಬರುವ ರೈಲಿಗೆ ಟಿಕೆಟ್ ಬುಕ್ ಮಾಡಿಸಿದ್ದೆವು. ಮೈಸೂರಿಗೆ ರಾತ್ರೀ 10 ಗಂಟೆಗೆ ತಲುಪುವ ರೈಲಿಗೆ ಆತುರಾತರವಾಗಿ ಬಿ ಆರ್ ಪಿ ಬಿಟ್ಟು ತರೀಕೆರೆಗೆ ಹೋದೆವು. ತರೀಕೆರೆಯಲ್ಲಿ ನನ್ನ ಮತ್ತೋರ್ವ ಪತ್ರಿಕೆಯ ಸುನಿಲ್ ತರೀಕೆರೆ ರವರು ಇದ್ದರು. ಅವರೊಟ್ಟಿಗೆ ಚಹ ಕುಡಿದು ರೈಲು ನಿಲ್ದಾಣ ತಲುಪಿದೆವು. ನಾವು ಮೈಸೂರಿನಿಂದ ಬರುವಾಗ ಚಿಕ್ಕ ಸೌಂಡ್ ಬಾಕ್ಸ್ ತೆಗೆದುಕೊಂಡು ಹೋಗಿದ್ದೆವು. ಆ ಮೂಲಕ ಮೈಸೂರಿನಿಂದ ಬರುವಾಗಲೂ ಕೂಡ ಬೆಂಗಳೂರು ತಲುಪುವವರೆಗೂ ಕೂಡ ರೈಲು ಭೋಗಿಯ ಜನರ ಅನುಮತಿ ಪಡೆದು ಕನ್ನಡ, ಹಿಂದಿ ಸುಮಧುರ ಗೀತೆಗಳನ್ನು ಹಾಡಿದೆವು.
ಆದರೆ ಬರುವಾಗ ಭಾನುವಾರ ಈ ಅವಕಾಶ ಸಿಗುತ್ತದೋ ಇಲ್ಲವೋ ಎನ್ನುವ ಗೊಂದಲದಲ್ಲಿದ್ದೆವು. ಆದರೆ ನಮ್ಮ ನಿರೀಕ್ಷೆಗೂ ಮೀರಿ ನಾವು ರೈಲು ಹೊತ್ತಿದ 6 ಗಂಟೆಯಿಂದ ರಾತ್ರಿ 9: 30 ರವರೆಗೂ ಕೂಡ ಒಳ್ಳೊಳ್ಳೆಯ ಗೀತೆಗಳನ್ನು ಹಾಡಿದೆವು. ಆಗಲು ಕೂಡ ನಮಗೆ ರೈಲಿನ ಎರಡು-ಮೂರು ಭೋಗಿಯ ಜನರು ಬಹಳ ಪ್ರೋತ್ಸಾಹ ಮಾಡಿದರು. ಅವರು ಕೂಡ ಚಪ್ಪಾಳೆಗಳ ಸುರಿಮಳೆಗೈದರು. ಜೊತೆಗೆ ಅಲ್ಲಿದ್ದ ನಾಲ್ಕೈದು ಪ್ರಯಾಣಿಕರು ಕೂಡ ನಾವು ಕೂಡ ಹಾಡುತ್ತೇವೆ ಎಂದು ನಮ್ಮೊಟ್ಟಿಗೆ ಹಾಡಿದರು.
ಈ ಸಮಯದಲ್ಲಿ ನಮಗೆ ಬಿ ಆರ್ ಪಿ ಗೆ ಹೋಗುವಾಗ ಮತ್ತು ಬರುವಾಗ ರೈಲ್ವೆ ಟಿಕೆಟ್ ಬುಕ್ ಮಾಡಿಕೊಟ್ಟಿದ್ದ ನನ್ನ ಡಯಟ್ ನ ಸ್ನೇಹಿತರಾದ ಭರತ್ ನೆನಪಾದರು. ಅವರು ರಿಸರ್ವೇಶನ್ ಮಾಡಿಸದಿದ್ದರೆ ನಮಗೆ ಹಾಡುವುದಿಲ್ಲ ಕುಳಿತುಕೊಳ್ಳುವುದಕ್ಕೆ ಜಾಗ ಸಿಗುತ್ತಿರಲಿಲ್ಲ. ಈ ಒಂದು ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟರು. ಅವರಿಗೂ ಕೂಡ ಮನದಲ್ಲಿ ಧನ್ಯವಾದ ಅರ್ಪಿಸಿದೆ. ಬಿ ಆರ್ ಪಿ ಗೆ ಹೋಗುವ ಪಯಣ ಮಧ್ಯದಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರದ ಸಂಜೆಯಿಂದ ರಾತ್ರಿವರೆಗೆ ಆ ಸವಿ ಸವಿ ನೆನಪು ಇವತ್ತಿಗೂ ಕೂಡ ಮನದಲ್ಲಿ ಮೂಡುತ್ತದೆ. ಅದರಲ್ಲೂ ಬಿ ಆರ್ ಪಿ ಯಲ್ಲಿ ದಾಳೇಗೌಡರು ನಮಗೆ ಕಲ್ಪಿಸಿಕೊಟ್ಟ ಸೌಕರ್ಯ, ಅವರ ವಿಶಿಷ್ಟ ಮೆಚ್ಚುಗೆಯ ಮಾತುಗಳು ನಮ್ಮನ್ನು ಭಾವನಾಲೋಕಕ್ಕೆ ಕೊಂಡೊಯ್ದವು.ನಮ್ಮ ಸ್ನೇಹಿತರು ಕೂಡ ನಾವು ಮುಂದಿನ ವರ್ಷವೂ ಕೂಡ ಬರುತ್ತೇವೆ ಎನ್ನುವ ತಮ್ಮ ಮನದ ಬಯಕೆಯನ್ನು ವ್ಯಕ್ತಪಡಿಸಿದರು.
ನಿಜಕ್ಕೂ ಈ ಒಂದು ದಿನದ ಶಿವಮೊಗ್ಗ ಜಿಲ್ಲೆಯ ಪಯಣ ನಮ್ಮ ಸ್ನೇಹಿತರೊಟ್ಟಿಗೆ ಸ್ವರ್ಗದ ಅನುಭವ ತಂದಿತು. “ಭದ್ರಾ” ನದಿಯ ತಾಣದಲ್ಲಿ “ಪತ್ರ ಮಿತ್ರ ಸಮ್ಮಿಲನದ ಪಿಸುಮಾತು” ಮನಸ್ಸಿನಲ್ಲಿ ಒಳಗೊಳಗೆ ಕಚಗುಳಿ ನೀಡಿತು!. ಮತ್ತೆ ಮುಂದಿನ ವರ್ಷಕ್ಕೆ ಒಂದು ದಿನ ಮುಂಚೆ ಬಿ ಆರ್ ಪಿ ಗೆ ಹೋಗುವ ಯೋಜನೆಯನ್ನು ಈಗಾಗಲೇ ಹಾಕಿಕೊಂಡಿದ್ದೇವೆ.
ಮತ್ತೊಮ್ಮೆ ಇದಕ್ಕೆಲ್ಲಾ ಪ್ರಮುಖ ಕಾರಣವಾದ ಸ್ನೇಹಜೀವಿ, ಸರಳ ಸಜ್ಜನಿಕೆಯ ಸಹಕಾರ ಮೂರ್ತಿ, ಹೊಸಹಳ್ಳಿ ದಾಳೇ ಗೌಡರ ವ್ಯಕ್ತಿತ್ವಕ್ಕೆ ದೊಡ್ಡ ಸಲಾಂ!. ಅವರ ಕುಟುಂಬಕ್ಕೆ ಭಗವಂತ ಮತ್ತಷ್ಟು ಉತ್ಸಾಹವನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
–ಕಾಳಿಹುಂಡಿ ಶಿವಕುಮಾರ್ ಮೈಸೂರು.
ಪತ್ರ ಮಿತ್ತ ಸಂಸೃತಿ..ಸ್ನೇಹ..ಪ್ರವಾಸ…ಅಲ್ಲಿ ನ ಕಾರ್ಯಕ್ರಮದ..ಅನುಭವದ ಅಭಿವ್ಯಕ್ತಿಯ ನಿರೂಪಣೆ ಚೆನ್ನಾಗಿ ಬಂದಿದೆ..ಸಾರ್.. ಒಳ್ಳೆಯ.. ಹವ್ಯಾಸಗಳನ್ನು ಇಟ್ಟು ಕೊಂಡಿದ್ದು ಕೇಳಿ ಸಂತಸವಾಯಿತು.. ಅವುಗಳನ್ನು ನಿಭಾಯಿಸಿಕೊಂಡು ಹೋಗುವಂತಾಗಲಿ ಎಂದು ಹಾರೈಸುತ್ತೇನೆ..
Nice
ಹೊಸ ಅನುಭವ ನೀಡಿದ ಪತ್ರಮಿತ್ರ ಸಮ್ಮೇಳನದ ವಿವರಣೆಗಳು ಸಂತಸ ನೀಡಿದವು.
ಉತ್ತಮ ಹವ್ಯಾಸವೆನಿಸುವ ಪತ್ರ ಮಿತ್ರ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮಕ್ಕೆ ಸ್ನೇಹಿತರೊಡನೆ ತಮ್ಮ ಪ್ರವಾಸ ಹಾಗೂ ಅದರ ಲೇಖನ ಚೆನ್ನಾಗಿ ಮೂಡಿಬಂದಿದೆ.