ಗೋಪುರಗಳ ನಾಡಿನಲ್ಲಿ…ಹೆಜ್ಜೆ 2 :ತಿರುವನಂತಪುರಂ

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

2023 ಅಕ್ಟೋಬರ್ 02 ಗಾಂಧಿ ಜಯಂತಿಯ ದಿನದಂದು, ಮುಂಜಾನೆ ಕೇರಳದ ರಾಜಧಾನಿಯಾದ ತಿರುವನಂತಪುರಂನಲ್ಲಿದ್ದ ನಮಗೆ ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯವೆಂದು ಪರಿಗಣಿಸಲಾದ  ಅನಂತ ಪದ್ಮನಾಭನ ದರ್ಶನಕ್ಕೆ ಉತ್ಸುಕರಾಗಿದ್ದೆವು. 5000 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯವು ಇದು ವಿಷ್ಣುವಿನ ಪ್ರಮುಖ 108 ದೇವಾಲಯಗಳಲ್ಲಿ ಒಂದು. ಕಾಸರಗೋಡು ಜಿಲ್ಲೆಯ ಕುಂಬಳೆಯ ಸಮೀಪದ ‘ಅನಂತಪುರ’ದಲ್ಲಿರುವ ದೇವಸ್ಥಾನಕ್ಕೂ ಇಲ್ಲಿಗೂ ನಂಟು ಇದೆ. ಅಲ್ಲಿ ವಾಸವಾಗಿದ್ದ ಬಿಲ್ಲಮಂಗಲ ಸ್ವಾಮಿಯವರ ಮುಂದೆ ಸಾಕ್ಷಾತ್ ವಿಷ್ಣುವೇ ಪುಟ್ಟ ಬಾಲಕನಾಗಿ ಕಾಣಿಸಿಕೊಂಡನಂತೆ. ತನ್ನೊಡನಿದ್ದ ಬಾಲಕನನ್ನು  ಸ್ವಾಮಿ ಪೋಷಿಸಿದರು. ಅದೊಂದು ದಿನ ಏನೋ ತುಂಟತನ ಮಾಡಿದಾಗ ಗದರಿಸಿದರಂತೆ. ಆಗ ಸುರಂಗ ಮಾರ್ಗದ ಮೂಲಕ ಓಡಿದ ಬಾಲಕನ್ನು ಹಿಂಬಾಲಿಸಿದಾಗ ಈತನೇ ವಿಷ್ಣು ಎಂದು ಅವರಿಗೆ ಮನವರಿಕೆಯಾಯಿತು. ಅಲ್ಲಿಂದ ಓಡಿ ಬಂದ ವಿಷ್ಣು ತಿರುವನಂತಪುರದಲ್ಲಿ ನೆಲೆಯಾದ . ಇಲ್ಲಿಗೂ ಬಿಲ್ಲಮಂಗಲ ಸ್ವಾಮಿ ಬಂದಾಗ ಬೃಹದ್ ರೂಪಿಯಾಗಿ ಕಾಣಿಸಿಕೊಂಡ. ಇಷ್ಟು ದೊಡ್ಡ ಆಕಾರವನ್ನು ತನಗೆ ನೋಡಲು ಸಾಧ್ಯವಾಗುವುದಿಲ್ಲ, ದಯವಿಟ್ಟು ಚಿಕ್ಕ ರೂಪದಲ್ಲಿ ಕಾಣಿಸು ಎಂದು ಸ್ವಾಮಿ ಬೇಡಿಕೊಂಡಾಗ ಕಿರಿದಾಗಿ ಕಾಣಿಸಿಕೊಂಡನಂತೆ. ಆದರೂ, ಶೇಷಶಯನರೂಪದಲ್ಲಿ ಕಾಣಿಸಿಕೊಂಡ ಮೂರ್ತಿಯನ್ನು ಸಂಪೂರ್ಣವಾಗಿ ನೋಡಲು ಸಾಧ್ಯವಾಗದೆ, ಮೊದಲಭಾಗದಲ್ಲಿ ಶಿರಭಾಗ, ಎರಡನೆಯ ಭಾಗದಲ್ಲಿ ಶರೀರದ ಮಧ್ಯಭಾಗ ಹಾಗೂ ಮೂರನೆಯ ಭಾಗಗಲ್ಲಿ ವಿಷ್ಣುವಿನ  ಪಾದಗಳನ್ನು ನೋಡಲು ಸಾಧ್ಯವಾಯಿತಂತೆ.  ಕುಂಬಳೆಯ ಸಮೀಪದ ಅನಂತಪುರ ಕ್ಷೇತ್ರದ ಸ್ಥಳಪುರಾಣದಲ್ಲಿಯೂ ಹೀಗೆಯೇ ಇದೆ.

ಈ  ಕತೆಗೆ ಪೂರಕವಾಗಿ, ಈಗ ನಾವು ನೋಡುವ 18 ಅಡಿ ಉದ್ದದ ಅನಂತಶಯನ ಮೂರ್ತಿಯನ್ನು   ಶಿರೋಭಾಗ, ನಾಭಿಕಮಲ ಹಾಗೂ ಪಾದಗಳು ಎಂದು ಮೂರು ಬಾಗಿಲುಗಳ ಮೂಲಕ ನೋಡುವಂತೆ ಗರ್ಭಗುಡಿಯನ್ನು ರಚಿಸಿದ್ದಾರೆ. ಕಡು ಶರ್ಕರ ಪಿಷ್ಟವನ್ನೊಳಗೊಂಡ ಈ ಮೂರ್ತಿಯಲ್ಲಿ  12008 ಸಾಲಿಗ್ರಾಮಗಳಿವೆಯಂತೆ.   ದ್ರಾವಿಡ ಹಾಗೂ ಕೇರಳ   ರಾಜರ ಆಡಳಿತಾವಧಿಯಲ್ಲಿ ದೇವಾಲಯವು  ಹಂತಹಂತವಾಗಿ ಅಭಿವೃದ್ಧಿ ಹೊಂದಿತು. , 17  ನೇ ಶತಮಾನದಲ್ಲಿ ತಿರುವಾಂಕೂರು ರಾಜವಂಶದ ಮಾರ್ತಾಂಡವರ್ಮ ತನ್ನ ರಾಜ್ಯವನ್ನು ಪದ್ಮನಾಭನಿಗೆ ಅರ್ಪಿಸಿ , ತಾನು ‘ಪದ್ಮನಾಭದಾಸ’ ಎಂಬ ಹೆಸರಿನಿಂದ ರಾಜ್ಯವಾಳಿದ. ಅಂದಿನಿಂದ ಎಲ್ಲಾ  ತಿರುವಾಂಕೂರು ರಾಜರುಗಳು ತಮ್ಮ ಹೆಸರಿಗೆ ‘ಪದ್ಮನಾಭದಾಸ’ ಎಂದು ಕರೆಸಿಕೊಂಡರು. 

ಟ್ರಾವೆಲ್ 4 ಯು ಸಂಸ್ಥೆಯವರು ಆಗಲೇ   ಈ ದೇವಾಲಯದ  ಚರಿತ್ರೆ , ನಿಯಮಾವಳಿಗಳನ್ನು ತಿಳಿಸಿದ್ದರು. ಇಲ್ಲಿ ಪುರುಷರು ಕಡ್ಡಾಯವಾಗಿ  ಧೋತಿ/ಮುಂಡು ಉಡಬೇಕು. ಶರ್ಟ್ ಧರಿಸುವಂತಿಲ್ಲ. ಪುಟ್ಟ ಪರ್ಸ್ ಮಾತ್ರ ಕೈಯಲ್ಲಿ ಇರಬಹುದು, ಬ್ಯಾಗ್ ಒಯ್ಯುವಂತಿಲ್ಲ. ಸ್ತ್ರೀಯರು  ಸೀರೆ ಉಡಬೇಕು. ಮೊಬೈಲ್ ಒಯ್ಯುವಂತಿಲ್ಲ, ಫೊಟೊ ಗ್ರಾಫಿ ನಿಷಿದ್ಧ.  ಯಾರೂ  ಸಾಷ್ಟಾಂಗ ನಮಸ್ಕಾರ ಮಾಡುವಂತಿಲ್ಲ. ಅಕಸ್ಮಾತ್ ಯಾರಾದೂ ಸಾಷ್ಟಾಂಗ ನಮಸ್ಕಾರ ಮಾಡಿದರೆ, ಅವರ ಶರೀರದಲ್ಲಿರುವ ಚಿನ್ನದ ಆಭರಣವು ನೆಲಕ್ಕೆ ಸ್ಪರ್ಶಿಸಿದರೆ, ಅದನ್ನು ದೇವಾಲಯದ ಹುಂಡಿಗೆ ಹಾಕಬೇಕೆಂಬ ನಿಯಮವಿದೆಯಂತೆ. 

ನಮ್ಮ ತಂಡದವರೆಲ್ಲರೂ ಹೋಟೆಲ್ ನಲ್ಲಿ  ಬೆಳಗ್ಗಿನ ಉಪಾಹಾರ  ಮುಗಿಸಿ,  ಬಸ್ಸಿನಲ್ಲಿ ಅನಂತಪದ್ಮನಾಭ ಮಂದಿರಕ್ಕೆ ಬಂದೆವು. ಫೊಟೊಗ್ರಾಫಿ ನಿಷಿದ್ಧವಾದ ಕಾರಣ  ಟ್ರಾವೆಲ್ಸ್4ಯುನವರು,  100 ಅಡಿ ಎತ್ತರದ  ಪೂರ್ವ ಗೋಪುರದ ಮುಂದೆ ತೆಗೆದ    ಒಂದು ಗ್ರೂಪ್ ಫೊಟೊ ಮಾತ್ರ ನಮಗೆ ಲಭ್ಯವಾಯಿತು. ಇಲ್ಲಿ ಒಟ್ಟು ಒಂಭತ್ತು ಗೋಪುರಗಳಿವೆಯಂತೆ. ಆಮೇಲೆ ದೇವಾಲಯದ ಪ್ರಾಕಾರದಲ್ಲಿ ಸರದಿ ಸಾಲು ನಿಂತೆವು. ಆಗಾಗ್ಗೆ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದುದರಿಂದ ಸರದಿ ಸಾಲು ನಿಧಾನವಾಗಿ ಸಾಗಿತು. ನಾನು ಪ್ರಾಕಾರಲ್ಲಿದ್ದ ನೂರಾರು ಕಂಭಗಳನ್ನು ಗಮನಿಸಿದೆ. ಅದೆಷ್ಟು ಶಿಲಾಕಂಭಗಳು! ಪ್ರತಿ ಕಂಬದಲ್ಲಿಯೂ ನಾಲ್ಕು ಅಡಿ ಇರಬಹುದಾದ ಸೊಗಸಾದ ‘ದೀಪಕನ್ನಿಕೆಯರ ಮೂರ್ತಿಗಳು!  ಆ ಶಿಲಾಕನ್ನಿಕೆಯರ ಕಿವಿಯಲ್ಲಿದ್ದ ಲೋಲಾಕಿನಲ್ಲಿ ಅದೆಷ್ಟು ವೈವಿಧ್ಯಮಯ ವಿನ್ಯಾಸ! ಕಲ್ಲಿನಲ್ಲಿ ಕುಸುರಿ ಮಾಡಿದ ಆ ಆಜ್ಞಾತ ಶಿಲ್ಪಿಗಳಿಗೆ ಶಿರಬಾಗಿ ನಮಿಸಿದೆ. ಆ ದೀಪಕನ್ನಿಕೆಯರ ಬೊಗಸೆಯಲ್ಲಿದ್ದ ದೀಪಗಳಿಗೆ ಆಗಾಗ ಎಣ್ಣೆ ಹೊಯ್ದು ದೀಪ ಉರಿಸಿದ ಹಾಗಿತ್ತು.  ಕರೆಂಟು ಇದ್ದಿರದ  17 ನೇ ಶತಮಾನದಲ್ಲಿ, ಈ ದೀಪಗಳ ಬೆಳಕಿನಲ್ಲಿ ಕಂಗೊಳಿಸುವ ದೇವಾಲಯದ ಆವರಣದಲ್ಲಿ ರಾಜಾ ಮಾರ್ತಾಂಡವರ್ಮನೂ, ವಂದಿ ಮಾಗದರೂ, ಕೊಂಬು ಕಹಳೆಯವರೂ, ಅಂದಿನ ಪ್ರಜೆಗಳೂ ನಡೆದಾಡಿರಬಹುದಲ್ಲವೇ? ಇಂದು ಅದೇ ಜಾಗದಲ್ಲಿ ಸರದಿಸಾಲಿನಲ್ಲಿ ನಾವು…ಈ ಕಲ್ಪನೆ ಖುಷಿ ಕೊಟ್ಟಿತು. 

ಸುಮಾರು ಎರಡು ಗಂಟೆಯ ಕಾಯುವಿಕೆಯ ನಂತರ  ನಮ್ಮ ಸಾಲು ಗರ್ಭಗುಡಿಯ ಸಮೀಪ  ಬಂದಾಗ, ಮೊದಲು ಅನಂತಪದ್ಮನಾಭನ ಪಾದದ ಭಾಗ ನೋಡಿದೆವು. ಪಕ್ಕದಲ್ಲಿದ್ದ ಇನ್ನೊಂದು  ಬಾಗಿಲಿನ ಮೂಲಕ , ವಿಷ್ಣುವಿನ ನಾಭಿ ಕಮಲದಲ್ಲಿರುವ ಬ್ರಹ್ಮನನ್ನು ನೋಡಿದೆವು. ಆಮೇಲೆ ಮತ್ತೊಂದು ಬಾಗಿಲಿನ ಮೂಲಕ ಪದ್ಮನಾಭನ ಶಿರೋಭಾಗವನ್ನು ನೋಡಿ ನಮಿಸಿ ಹೊರಬಂದೆವು. ದೇವಾಲಯದ ಹೊರಗೆ ಬಂದು, ಇತರ ಗುಡಿಗಳಿಗೂ ಭೇಟಿ ಕೊಟ್ಟೆವು. ‘ಅಗ್ರಸಾಲೆ’ಯಲ್ಲಿದ್ದ ಗಣಪತಿಗೆ ನಮಿಸಿದೆವು. ಸಿಹಿಯಾದ  ‘ಅರವಣ’ ಪ್ರಸಾದವನ್ನು ನಮ್ಮೂರಿಗೆ ಒಯ್ಯಲು ಖರೀದಿಸಿದೆವು.


ಸಾಮಾನ್ಯವಾಗಿ ಶ್ರೀಮಂತ ದೇವಾಲಯಗಳಲ್ಲಿ ಖಾಕಿ ಕಣ್ಗಾವಲು ಇದ್ದೇ ಇರುತ್ತದೆ. ಇಲ್ಲಿ ಖಾಕಿ ಸಮವಸ್ತ್ರದ ಪೋಲೀಸರು  ಕಾಣಿಸಲಿಲ್ಲ…ಇದು ಹೇಗೆ ಸಾಧ್ಯ ಅಂತ ಆಲೋಚಿಸುತ್ತಿದ್ದಾಗ, ಪಂಚೆ ಉಟ್ಟ ವ್ಯಕ್ತಿಯೊಬ್ಬರು ವಾಕಿಟಾಕಿಯಲ್ಲಿ ಮಲಯಾಳಂನಲ್ಲಿ ಮಾತನಾಡುತ್ತಾ ಇರುವುದನ್ನೂ, ಅವರು ಧರಿಸಿದ್ದ ಬೆಲ್ಟ್ ನಲ್ಲಿ ಕೇರಳ ಪೋಲೀಸ್ ಎಂಬ ಬ್ಯಾಡ್ಜ್ ಅನ್ನೂ ನೋಡಿದೆ. ಎಲ್ಲೋ ಓದಿದ್ದು ನೆನಪಾಯಿತು. ಕೇರಳದ ರಾಜರೂ ದೇವಾಲಯಕ್ಕೆ ಬರುವಾಗ ಜನಸಾಮಾನ್ಯರಂತೆ ಪಂಚೆ ಧರಿಸಿ, ಮೇಲ್ವಸ್ತ್ರವಿಲ್ಲದೆಯೇ ಬರುತ್ತಿದ್ದರಂತೆ. 

PC: Internet

ಅನಂತಪದ್ಮನಾಭನ ದರ್ಶನ ಮನಸ್ಸಿಗೆ ಮುದ ಕೊಟ್ಟಿತು. ಇಲ್ಲಿ ಕನಿಷ್ಟ ಒಂದು ದಿನ ನಿಧಾನವಾಗಿ ನೋಡಿ, ಇನ್ನಷ್ಟು ಗೋಪುರಗಳನ್ನು ನೋಡಿ, ಮತ್ತಷ್ಟು ದೀಪಕನ್ನಿಕೆಯರನ್ನು ಮಾತಾಡಿಸಿ, ಪುಷ್ಕರಿಣಿಗೆ ಸುತ್ತು ಹಾಕಿ, ಸಾಧ್ಯವಿದ್ದರೆ ಅನ್ನಪ್ರಸಾದವನ್ನೂ ಸ್ವೀಕರಿಸಿ ಬಂದಿದ್ದರೆ ಇನ್ನಷ್ಟು ಖುಷಿಯಾಗುತ್ತಿತ್ತು. ಆದರೆ ನಮಗೆ ಲಭ್ಯವಿರುವಷ್ಟು ಮಾತ್ರ ಮ್ಮ ಬೊಗಸೆಗೆ ದಕ್ಕುತ್ತದೆ ಅಲ್ಲವೇ? 


ಈ ಬರಹದ ಹಿಂದಿನ ಕಂತು ಇಲ್ಲಿದೆ: https://www.surahonne.com/?p=39117

(ಮುಂದುವರಿಯುವುದು)
-ಹೇಮಮಾಲಾ.ಬಿ.  ಮೈಸೂರು

7 Responses

  1. ಪ್ರವಾಸ ಕಥನ ಓದಿಸಿಕೊಂಡು ಹೋಯಿತು.. ಲೇಖಕರು ಹೇಳಿ ದಂತೆ ಕೆಲವು ಸ್ಥಳಗಳನ್ನು ನೋಡುವಾಗ ಸಮಯ ಸಾಲದೆನಿಸುತ್ತದೆ…ಈ ಅನುಭವ ನನಗೂ ಎಷ್ಟೇ ಸಾರಿ ಅನ್ನಿಸಿದುಂಟು..ಅವರೇ ಹೇಳಿ ದಂತೆ ಲಬ್ಯವಿದಷ್ಟೇ ಸಿಕ್ಕುವುದು..ವಿವರಣೆ ಚೆನ್ನಾಗಿ ಬಂದಿದೆ..ಮೇಡಂ

  2. ನಯನ ಬಜಕೂಡ್ಲು says:

    ಬಹಳ ಸುಂದರ ಬರಹ

  3. Padma Anand says:

    ತಿರುವನಂತಪುರಂನ ಸಂಕ್ಷಿಪ್ತ ಸ್ಥಳ ಪುರಾಣದೊಂದಿಗೆ ದೇವಾಲಯದ ವರ್ಣನೆ, ಅನುಭವ ಚಂದದ ನಿರೂಪಣೆಯೊಂದಿಗೆ ಹೊರಹೊಮ್ಮಿದೆ.

  4. ಪ್ರವಾಸ ಕಥನ ಸರಾಗವಾಗಿ ಓದಿಸಿಕೊಂಡುಹೋಯಿತು..ಹಾಗೇ ನಾವು ಹೋದ ಸ್ಥಳದಲ್ಲಿ ಇನ್ನೂ ಇರಬೇಕು ಎಂಬ ಹಂಬಲ. ..ಮೂಡುವುದು ಸಹಜ …ಸಮಯ ಸಾಲದಾಯಿತೆಂಬ ಗೊಣಗಾಟ…ಎಲ್ಲಾ ನನಗೂ ಅನ್ನಿಸುದುಂಟು..ಹಾಗೇ ಈ ಲೇಖನದ ಕತೃ ಲಭ್ಯ ವಿದ್ದಷ್ಟು ದಕ್ಕುವುದೆಂಬ ಅನಿಸಿಕೆ ನನ್ನದು ಒಟ್ಟಾರೆ ಸುಂದರ ಬರಹ..
    ಧನ್ಯವಾದಗಳು ಮೇಡಂ

  5. ಶಂಕರಿ ಶರ್ಮ says:

    ಹಲವಾರು ವರ್ಷಗಳ ಹಿಂದೆ ಪದ್ಮನಾಭ ದೇವರ ದರ್ಶನ ಭಾಗ್ಯ ಲಭಿಸಿದ್ದ ನೆನಪು ಮರುಕಳಿಸಿತು. ಅಲ್ಲಿಯ ಅರ್ಚಕರೊಬ್ಬರು ನನ್ನ ಗೆಳತಿಯ ಬಂಧುಗಳಾದ್ದರಿಂದ, ಅಲ್ಲಿದ್ದ ನಾಲ್ಕು ದಿನಗಳೂ ಮನ:ಪೂರ್ತಿ ದರ್ಶನ ಭಾಗ್ಯ ಪಡೆದಿದ್ದೆವು. ಚಂದದ ಲೇಖನ…ಧನ್ಯವಾದಗಳು ಮಾಲಾ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: