ಗೌತಮ ಋಷಿಯ ಗಣ್ಯ ಗುಣ

Share Button


‘ದಾನ’ ಎಂಬುದು ಜೀವನ ಮೌಲ್ಯಗಳಲ್ಲಿ ಒಂದು. ‘ಇದ್ದಾಗ ದಾನವನು ಮಾಡದವ ಹೊಲೆಯ’ ಎಂದು ಸರ್ವಜ್ಞ ವಚನವಿದೆ. ದಾನಗಳಲ್ಲಿ ಹಲವು ವಿಧ. ಅಶನ,ವಸನ, ವಸತಿ,ಭೂಮಿ,ಧನ, ಕನಕ, ವಿದ್ಯೆ ಹೀಗೆ ಅವರವರ ಶಕ್ತಿ ಭಕ್ತ್ಯಾನುಸಾರ ದಾನ ಮಾಡಬಹುದು. ಆದರೆ ಎಲ್ಲಾ ದಾನಗಳಿಂದಲೂ ಅನ್ನದಾನವೇ ಶ್ರೇಷ್ಠವೂ ಸರಳವೂ ಆಗಿದೆ. ಯಾಕೆಂದರೆ ಹಸಿದು ಬಂದವನಿಗೆ ಧನ-ಕನಕವಾಗಲೀ , ಭೂಮಿ-ಬಂಗಾರವಾಗಲೀ ಕೊಟ್ಟರೆ ಆತನ ಹಸಿವು ಇಂಗಲಾರದು.ಇತರ ಸಂಪತ್ತುಗಳು ಎಷ್ಟೇ ದೊರೆತರೂ ಹಸಿವಾದಾಗ ಅನ್ನ ದೊರೆಯದಿದ್ದರೆ ಏನು ಪ್ರಯೋಜನ?. ಮಧ್ಯಾಹ್ನದ ಹೊತ್ತಿಗೆ ಹಸಿದು ಬಂದು ‘ಒಂದಿಷ್ಟು ಅನ್ನ ಕೊಡಿ’ ಎಂದು ಅಂಗಲಾಚಿ ಬೇಡುವ ಭಿಕ್ಷುಕನನ್ನು ಹಾಗೆಯೇ ಕಳಿಸಬಾರದು. ಅದು ಗೃಹಸ್ಥರ ಧರ್ಮವಲ್ಲ ಎಂದು ಹಿರಿಯರು ಹೇಳುತ್ತಾ ಬಂದಿದ್ದಾರೆ.

ಅನ್ನದಾನವು ಕೇವಲ ಒಂದು ದಿನವಾಗದೆ ನಿರಂತರವಾಗಿ ನಡೆದರೆ..? ಅಂತಹವರನ್ನು ಮೆಚ್ಚಲೇಬೇಕು. ಪೂರ್ವ ಕಾಲದಲ್ಲಿ ಅನ್ನದಾನ ಸಹಿತ ವಿದ್ಯಾದಾನವನ್ನೂ ಮಾಡುತ್ತಿದ್ದರು. ಅದೂ ಒಬ್ಬಿಬ್ಬ ವಿದ್ಯಾರ್ಥಿಗಳಲ್ಲ, ಹತ್ತಲ್ಲ ನೂರಲ್ಲ. ಸಾವಿರವೂ ಅಲ್ಲ. ಹತ್ತು ಸಾವಿರಕ್ಕೂ ಮೇಲ್ಪಟ್ಟ ಸಂಖ್ಯೆಯಲ್ಲಿ ಜನರಿಗೆ ಅಶನ ಮತ್ತು ಶಿಕ್ಷಣ ನೀಡುತ್ತಾ ಸಂರಕ್ಷಣೆಯನ್ನೂ ಮಾಡುತ್ತಾ ಬರುತ್ತಿದ್ದರು. ಅಂತಹ ಮಹರ್ಷಿಗಳನ್ನು ‘ಕುಲಪತಿ’ಗಳು ಎಂದು ಕರೆಯುತ್ತಿದ್ದರು. ಈಗಿನ ವಿಶ್ವವಿದ್ಯಾಲಯದ ಮುಖ್ಯಸ್ಥರಂತೆ ಮಾಸಿಕ ವೇತನದ ಲಾಭಕ್ಕೋ ಹೆಸರು ಪ್ರಸಿದ್ಧಿಯಾಗಬೇಕೆಂಬ ನಿರೀಕ್ಷೆಯಿಂದಲೋ ಇಂತಹ ಸಮಾಜಮುಖಿ ಕೆಲಸವನ್ನವರು ಮಾಡದೆ; ಕೇವಲ ಲೋಕ ಕಲ್ಯಾಣದ ದೃಷ್ಟಿಯಿಂದ ಮಾಡುತ್ತಿದ್ದರು. ಇಂತಹ ಸಮಾಜೋದ್ಧಾರದ ಕೆಲಸವನ್ನು ಮಾಡಿ ಆಚಂದ್ರಾರ್ಕ ಬೆಳಗಿದ ಮಹರ್ಷಿಗಳಲ್ಲಿ ಗೌತಮರು ಪ್ರಮುಖರು.

ಅಷ್ಟು ಮಾತ್ರವಲ್ಲದೆ ಗೌತಮರು ಅನಾವೃಷ್ಟಿ (ಬರಗಾಲ) ಕಾಲದಲ್ಲಿ ಅನ್ನ ಮತ್ತು ವಿದ್ಯೆಯನ್ನು ದಾನಮಾಡುತ್ತಿದ್ದರು ಎಂಬುದು ವಿಶೇಷ. ಇಷ್ಟೂ ಮಾತ್ರವೇ ಅಲ್ಲ, ದಕ್ಷಿಣ ಭಾರತದ ಪ್ರಮುಖವೂ ಪ್ತಸಿದ್ಧವೂ ಆದ ಗೋದಾವರಿ ನದಿಯ ಉಗಮಕ್ಕೆ ಕಾರಣ ಕರ್ತ ಗೌತಮಮುನಿ ಎಂದು ತಿಳಿದು ಬರುತ್ತದೆ. ಇವರ ಕುತೂಹಲದ ಕತೆಯನ್ನು ತಿಳಿಯೋಣ.

ಗೌತಮರು ಬ್ರಹ್ಮರ್ಷಿ. ಗೋತ್ರ ಪ್ರವರ್ತಕನು. ಈತನ ತಂದೆ ‘ಧೀರ್ಘತಮ’ ಎಂಬ ಮುನಿ. ತಾಯಿಯ ಹೆಸರು ಪ್ರದ್ವೇಷಿಣಿ. ಅವರ ಪತ್ನಿ ಅಹಲ್ಯೆ. ಈಕೆ ನಾವು ನಿತ್ಯ ಸ್ಮರಿಸಬೇಕಾದಂತಹ ಮಹಾ ಪಾತಕ ನಾಶಿನಿಯಾದ ಪಂಚ ಮಹಾಪತಿವ್ರತೆಯರಲ್ಲಿ ಮೊದಲಿಗಳು. ಗೌತಮರಿಗೆ ಅನೇಕ ಮಂದಿ ಸಹೋದರರಿದ್ದರು. ಈತನ ಅಳಿಯ ಉದಕಮುನಿ. ಈತನು ಗೌತಮರ ಪ್ರಿಯ ಶಿಷ್ಯನೂ ಆಗಿದ್ದನು. ಗೌತಮನು ಜೀವ ಜಾಲಗಳಿಗೆಲ್ಲ ಒಳ್ಳೆಯದನ್ನೇ ಬಯಸಿ ಎಲ್ಲರನ್ನೂ ಪೋಷಿಸುತ್ತಿದ್ದನು. ಆತನ ಅನ್ನದಾನಕ್ಕೆ ಸಂತೋಷಗೊಂಡ ಬ್ರಹ್ಮದೇವರು, ಚಿಂತಾಮಣಿಗೆ ಸಮನಾಗಿರುವ ಶಾಲಿ ಬೀಜವನ್ನು ಅವನಿಗೆ ಕೊಟ್ಟರು. ಆತನು ಅದನ್ನು ಕೃಷಿ ಮಾಡಿದ.


ಗೋದಾವರಿ ಉಗಮಕ್ಕೆ ಕಾರಣ- ಎಷ್ಟೇ ಉಪಕಾರ ಮಾಡಿದರೂ ಕೆಲವು ಜನರಿಗೆ ಆ ಉಪಕಾರ ಸ್ಮರಣೆಯಿರುವುದಿಲ್ಲ. ಗರ್ವ ಬಂದು ಬಿಡುತ್ತದೆ. ಹಾಗೆಯೇ ಆಯಿತು. ಗೌತಮರ ಅನ್ನವನ್ನು ತಿಂದ ಕೆಲವು ಬ್ರಾಹ್ಮಣರು ಹುಲ್ಲಿನಿಂದ ಗೋವೊಂದನ್ನು ರಚಿಸಿ ಅದಕ್ಕೆ ಪ್ರಾಣತುಂಬಿ ಅವನ ಶಾಲಿವನದಲ್ಲಿ ಬಿಟ್ಟರು. ಸ್ನಾನ ಮುಗಿಸಿ ಬಂದ ಗೌತಮನು ಅದಕ್ಕೆ ನೀರು ಹಾಕಲು ಅದು ಕೆಳಕ್ಕೆ ಬಿದ್ದು ಪ್ರಾಣ ಕಳಕೊಂಡಿತು.ಅರೆ! ತನಗೆ ಗೋ ಹತ್ಯಾದೋಷ ತಗಲಿತಲ್ಲವೇ! ಎಂದು ಚಿಂತಿಸಿದ ಗೌತಮರು ಇದಕ್ಕೆ ಪ್ರಾಯಶ್ಚಿತವೇನೆಂದು ಕೇಳಲಾಗಿ ಅವರು ‘ದೇವಗಂಗೆಯನ್ನು ತಂದು ಇದರ ಮೇಲೆ ಹರಿಯ ಬಿಡು’ ಎಂದರು. ಗೌತಮನು ಕೈಲಾಸಕ್ಕೆ ಹೋಗಿ ಈಶ್ವರನನ್ನು ಒಲಿಸಿ ಗಂಗೆಯನ್ನು ಪಡೆದು ಅದರ ಮೇಲೆ ಚಿಮುಕಿಸಿದನು. ಆಶ್ಚರ್ಯ!. ಗಂಗೆಯು ಅಲ್ಲಿಂದ ನದಿಯಾಗಿ ಹರಿದು ಸಾಗರವನ್ನು ಸೇರಿತು. ಇದುವೇ ಮುಂದೆ ‘ಗೋದಾವರಿ ನದಿ’ ಎಂದು ಪ್ರಖ್ಯಾತವಾಯಿತು. ಹೀಗೆ ಗೌತಮರು ಗೋದಾವರಿ ನದಿಯ ಹುಟ್ಟಿಗೆ ಕಾರಣರಾದರು. ಇದು ಕೃಷ್ಣಾನದಿಯ ಉತ್ತರ ದಿಕ್ಕಿನಲ್ಲಿರುವ ದೊಡ್ಡ ನದಿ. ದಕ್ಷಿಣ ಭಾರತದ ಪಶ್ಚಿಮ ಭಾಗದಲ್ಲಿ ಬ್ರಹ್ಮಪುರಿ ಪರ್ವತವಿದೆ. ಅಲ್ಲಿ ಈ ನದಿಯ ಉಗಮ. ಈ ಸ್ಥಳಕ್ಕೆ ‘ತ್ರ್ಯಂಬಕ’ ಎಂಬ ಹೆಸರಿದೆ. ಇದು ಸುಮಾರು ಒಂಬೈನೂರು ಮೈಲು ಉದ್ದವಿದೆ. ಈ ನದಿಯಲ್ಲಿ ಸಂತಾನಾಪೇಕ್ಷಿಗಳು ಸ್ನಾನಮಾಡಿದರೆ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ಹೀಗೆ ಗೌತಮನು ಪುಣ್ಯ ಬಲದಿಂದ ಅನಾವೃಷ್ಟಿ ಕಾಲದಲ್ಲೂ ಸುಭಿಕ್ಷ ಪ್ರಾಪ್ತಿಯಾಗಿ ಲೋಕಪ್ರಸಿದ್ಧಿಯಾದರು. ಪುಣ್ಯ ಪುರುಷರನ್ನು ಪಾಪಿಗಳು ಹಾಳುಮಾಡುವುದಕ್ಕೆ ಹೊರಟರೂ ಪ್ರಕೃತಿಯು ಅದಕ್ಕೆ ಆಸ್ಪದವೀಯದು ಎಂಬುದನ್ನಿಲ್ಲಿ ತಿಳಿಯಬಹುದು.

-ವಿಜಯಾಸುಬ್ರಹ್ಮಣ್ಯ, ಕುಂಬಳೆ

4 Responses

  1. Vijayasubrahmanya says:

    ಧನ್ಯವಾದಗಳು ಅಡ್ಮಿನ್ ಹೇಮಮಾಲ ಹಾಗೂ ಓದುಗರಿಗೆ.

  2. ಪೌರಾಣಿಕ ಕಥೆಗಳನ್ನು… ನೆನಪಾಗುವಂತೆ ಮಾಡುವ ನಿಮಗೆ ನನ್ನ ನಮನಗಳು…ವಿಜಯಾ ಮೇಡಂ

  3. ತ್ರಯಂಬಕೇಶ್ವರ ಜ್ಯೋತಿರ್ಲಿಂಗದ ಕಥೆಯನ್ನು ಹೇಳಿದ ತಮಗೆ ವಂದನೆಗಳು

  4. ಶಂಕರಿ ಶರ್ಮ says:

    ಗೌತಮಮುನಿಗಳ ವಿಶೇಷವಾದ ದಾನ ಧರ್ಮದ ಗುಣ ಹಾಗೂ ಅವರು ಪುಣ್ಯನದಿ ಗೋದಾವರಿಯ ಉಗಮಕ್ಕೆ ಕಾರಣಕರ್ತರಾದ ಕುರಿತ ಕಥೆ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: