ವಾಟ್ಸಾಪ್ ಕಥೆ 18 : ಜವಾಬ್ದಾರಿ
ಒಬ್ಬ ವಿದ್ಯಾವಂತ ಯುವಕ ಒಂದು ಪ್ರಸಿದ್ಧವಾದ ಕಂಪೆನಿಯ ಕೆಲಸಕ್ಕೆ ಸಂದರ್ಶನಕ್ಕಾಗಿ ಬಂದಿದ್ದ. ಅವನು ತುಂಬ ಬುದ್ಧಿಶಾಲಿ. ಮೇಧಾವಿ. ಆಯ್ಕೆ ಸಮಿತಿಯವರು ಏರ್ಪಡಿಸಿದ್ದ ಎಲ್ಲ ಪರೀಕ್ಷೆಗಳಲ್ಲೂ ಒಳ್ಳೆಯ ರೀತಿಯಲ್ಲಿ ತೇರ್ಗಡೆಯಾದನು. ಇನ್ನು ಅಂತಿಮವಾಗಿ ಮೌಖಿಕ ಪರೀಕ್ಷೆ ಮಾತ್ರ ಬಾಕಿಯಿತ್ತು. ಇದರಲ್ಲಿ ಕಂಪೆನಿಯ ಮುಖ್ಯಸ್ಥರೇ ಅಭ್ಯರ್ಥಿಗೆ ಪ್ರಶ್ನೆಗಳನ್ನು ಕೇಳಿ ನಿರ್ಧರಿಸುತ್ತಿದ್ದರು. ಯುವಕನ ಸರದಿ ಬಂತು. ಮುಖ್ಯಸ್ಥರು ಅಭ್ಯರ್ಥಿಯು ಹಿಂದಿನ ಪರೀಕ್ಷೆಗಳಲ್ಲಿ ಪಡೆದಿದ್ದ ಅಂಕಗಳನ್ನು ನೋಡಿ ತೃಪ್ತರಾದರು. ಯುವಕನನ್ನು ಅಪಾದಮಸ್ತಕ ಅವಲೋಕಿಸಿದರು. ನಂತರ ”ನೋಡಪ್ಪಾ, ಈಗ ನಾನು ಕೇಳುವ ಪ್ರಶ್ನಿಯಿದು. ನಿಮ್ಮ ತಂದೆ ತಾಯಿಗಳು ಏನು ಕೆಲಸ ಮಾಡಿಕೊಂಡಿದ್ದಾರೆ? ನಿನಗೆ ವಿದ್ಯಾಭ್ಯಾಸ ಕಾಲದಲ್ಲಿ ಯಾವುದಾದರೂ ಸ್ಕಾಲರ್‌ಷಿಪ್ ಸಿಕ್ಕಿತ್ತೇ?” ಎಂದು ಕೇಳಿದರು.
”ಇಲ್ಲಾ ಸಾರ್, ಯಾವುದೇ ಸ್ಕಾಲರ್‌ಷಿಪ್ ಅಥವಾ ಧನಸಹಾಯ ನನಗೆ ಸಿಕ್ಕಿರಲಿಲ್ಲ. ಎಲ್ಲ ವೆಚ್ಚಗಳನ್ನೂ ನನ್ನ ತಂದೆಯೇ ನೋಡಿಕೊಂಡಿದ್ದಾರೆ. ತಂದೆತಾಯಿಗಳಿಬ್ಬರೂ ಕಾಡಿನಿಂದ ಕಟ್ಟಿಗೆ ತಂದು ಮಾರಿ ಜೀವನ ನಡೆಸುತ್ತಿದ್ದಾರೆ. ಅವರ ದುಡಿಮೆಯ ಹಣದಿಂದಲೇ ನನ್ನನ್ನು ಈ ಮಟ್ಟಕ್ಕೆ ತಂದಿದ್ದಾರೆ” ಎಂದು ಹೆಮ್ಮೆಯಿಂದ ಹೇಳಿದನು.
”ಹೌದೇ ! ನೀನೇನಾದರೂ ಅವರು ಮಾಡುತ್ತಿದ್ದ ಕೆಲಸದಲ್ಲಿ ಕೈ ಜೋಡಿಸುತ್ತಿದ್ದೆಯಾ? ಹಾಗೇ ನಿನ್ನ ಎರಡು ಹಸ್ತಗಳನ್ನು ತೋರಿಸು” ಎಂದರು. ಅಧಿಕಾರಿಯ ಪೃಶ್ನೆ ಕೇಳಿ ಯುವಕ ಚಕಿತನಾದ. ತನ್ನೆರಡು ಹಸ್ತಗಳನ್ನು ಅವರಿಗೆ ಕಾಣಿಸುವಂತೆ ಚಾಚಿದನು. ಅವುಗಳು ಮೃದುವಾಗಿ, ಸ್ವಚ್ಛವಾಗಿ ಗೆರೆಗಳೆಲ್ಲ ಕಾಣಿಸುವಂತೆ ಇದ್ದವು. ಮುಖ್ಯಸ್ಥರು ”ಈಗ ನೀನು ಮನೆಗೆ ಹಿಂದಿರುಗಿ ಹೋದಾಗ ನಿಮ್ಮ ಹೆತ್ತವರ ಎರಡೂ ಹಸ್ತಗಳನ್ನು ನಾನು ಪರಿಕ್ಷಿಸಿದಂತೆ ಪರೀಕ್ಷಿಸಿ. ಹಿಂದಿರುಗಿ ಬಂದಾಗ ಏನು ಹೇಳುತ್ತೀಯೋ ಅದರ ಮೇಲೆ ನಿನಗೆ ಈ ಕೆಲಸ ಖಾತ್ರಿಯಾಗುತ್ತದೆ ” ಎಂದರು.
ಯುವಕ ”ತಪ್ಪು ತಿಳಿಯಬೇಡಿ ಸರ್, ನೀವೇಕೆ ಹೀಗೆ ಹೇಳುತ್ತಿದ್ದೀರೆಂಬುದು ತಿಳಿಯಲಿಲ್ಲ” ಎಂದ.
”ನಿನ್ನ ಕೈಗಳನ್ನು ನೋಡಿದಾಗ ನೀನು ಎಂದಾದರೂ ತಂದೆತಾಯಿಗಳ ಕೆಲಸದಲ್ಲಿ ಕೈ ಜೋಡಿಸಿಲ್ಲವೆಂಬುದು ಸ್ಪಷ್ಟವಾಯಿತು”.
”ಸಾರ್, ಅವರಿಬ್ಬರೂ ನನ್ನನ್ನು ತಮ್ಮ ಕೆಲಸದಲ್ಲಿ ನೆರವಾಗಲು ಬಿಡುತ್ತಿರಲಿಲ್ಲ. ಬದಲಿಗೆ ನೀನು ಚೆನ್ನಾಗಿ ಓದಿ ದೊಡ್ಡ ಕೆಲಸಕ್ಕೆ ಸೇರು. ಈ ಕೆಲಸ ನಿನಗೆ ಬೇಡ ನಮಗೇ ಕೊನೆಯಾಗಲಿ” ಎಂದು ಹೇಳುತ್ತಿದ್ದರು.
”ಅದಕ್ಕೇ ನಾನು ನಿನಗೆ ಈಗ ಹೋಗಿ ಅವರ ಹಸ್ತಗಳನ್ನು ನೋಡಿದ ಮೇಲೆ ನನ್ನ ಬಳಿಗೆ ಬಾ. ಅನಂತರ ಮುಂದಿನ ನಿರ್ಧಾರ ”ಎಂದರು. ಯುವಕ ಇದರಿಂದ ಗಲಿಬಿಲಿಗೊಂಡರೂ ಮರುಮಾತನಾದೆ ಮನೆಗೆ ಹಿಂದಿರುಗಿದ. ತನ್ನ ತಂದೆ ತಾಯಿಗಳನ್ನು ಕರೆದು ಅವರಿಬ್ಬರ ಅಂಗೈಗಳನ್ನು ತನ್ನ ಕೈಯಲ್ಲಿ ಹಿಡಿದು ಪರೀಕ್ಷಿಸಿದ. ಅವು ಒರಟಾಗಿ ಗಾಯಗಳು ಜಡ್ಡುಗಟ್ಟಿದ್ದವು. ಅವುಗಳನ್ನು ಕಂಡು ಗಳಗಳನೆ ಅತ್ತುಬಿಟ್ಟ. ಅವರಿಬ್ಬರೂ ಅಲ್ಲಿಯವರೆಗೆ ನಿರಂತರವಾಗಿ ಬೆಳಗಿನಿಂದ ಸಂಜೆಯವರೆಗೆ ದುಡಿಯುತ್ತಿದ್ದ ದೃಶ್ಯ ಕಣ್ಮುಂದೆ ಸುಳಿಯಿತು. ಅವರು ಬೇಡವೆಂದರೆಂದು ನಾನು ಅವರಿಗೆ ಸಹಾಯ ಮಾಡಲಿಲ್ಲವಲ್ಲಾ ಎಂದು ಪಶ್ಚಾತ್ತಾಪವಾಯಿತು. ತಕ್ಷಣ ಏನೋ ನಿರ್ಧರಿಸಿದಂತೆ ಬಿರಬಿರನೆ ಕಂಪೆನಿಯ ಮುಖ್ಯಸ್ಥರ ಬಳಿಗೆ ಹೋದ. ಅವರ ಸಮ್ಮುಖದಲ್ಲಿ ನಿಂತು ”ಸರ್, ನಿಮಗೆ ದೊಡ್ಡ ನಮಸ್ಕಾರ. ಈ ದಿನ ನನ್ನ ಕಣ್ಣುಗಳನ್ನು ತೆರೆಸಿದಿರಿ. ನನಗೆ ನೀವು ನೌಕರಿ ಕೊಟ್ಟರೆ ನಾನು ನನ್ನ ಹೆತ್ತವರನ್ನು ಕೊನೆಯತನಕ ಸುಖವಾಗಿರುವಂತೆ ನೋಡಿಕೊಳ್ಳುತ್ತೇನೆ. ಇದು ನನ್ನ ಕರ್ತವ್ಯ. ದಯವಿಟ್ಟು ನಿಮ್ಮ ನಿರ್ಧಾರ ತಿಳಿಸಿ” ಎಂದು ಪ್ರಾರ್ಥಿಸಿದ.
ಮುಖ್ಯಸ್ಥರು ನಗುತ್ತಾ ”ನೀನು ನಾನೊಡ್ಡಿದ ಪರೀಕ್ಷೆಯಲ್ಲಿ ಗೆದ್ದಿದ್ದೀಯೆ. ಕಂಪೆನಿಯಲ್ಲಿ ಮೇಲಧಿಕಾರಿಗಳ ನಿರ್ದೇಶನಗಳನ್ನು, ವ್ಯವಹಾರಗಳಲ್ಲಿ ಆಗುವ ಏರುಪೇರುಗಳನ್ನು ಸಂಯಮದಿಂದ ನಿಭಾಯಿಸಿ ಕಂಪೆನಿಯ ಪ್ರಗತಿಯನ್ನು ಸಾಧಿಸುವ ವ್ಯಕ್ತಿಗಳೇ ಈ ಕೆಲಸಕ್ಕೆ ಅರ್ಹರಾಗಿದ್ದಾರೆ. ನಿನ್ನಲ್ಲಿ ಆ ಎಲ್ಲ ಅರ್ಹತೆಗಳಿದ್ದರೂ ನಿನ್ನ ಶ್ರೇಯಸ್ಸಿಗೆ ಕಾರಣರಾದ ಪೋಷಕರ ಸ್ಥಿತಿಗತಿಯ ಬಗ್ಗೆ ಕಾಳಜಿಯೂ ಇರಬೇಕು. ಇದನ್ನು ಪರೀಕ್ಷಿಸಿದ್ದೇನೆ. ನಿನ್ನನ್ನು ಆ ಹುದ್ದೆಗೆ ಆಯ್ಕೆ ಮಾಡಿದ್ದೇನೆ ಒಳ್ಳೆಯದಾಗಲಿ”ಎಂದು ಹಾರೈಸಿ ಕೆಲಸದ ಆದೇಶವನ್ನು ನೀಡಿದರು.
-ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಉತ್ತಮ ನೀತಿಯನ್ನೊಳಗೊಂಡ ಕಥೆ. ಬಹಳಷ್ಟು ಬಾರಿ ನಾವು ನಮ್ಮ ಹೆತ್ತವರ ಕಷ್ಟವನ್ನು ಗುರುತಿಸಲಾರದಷ್ಟು ಕುರುಡರಾಗಿರುತ್ತೇವೆ.
ಧನ್ಯವಾದಗಳು ನಯನ ಮೇಡಂ..
ಧನ್ಯವಾದಗಳು ನಯನ ಮೇಡಂ.
ಮಾತಾ ಪಿತೃಗಳ ಋಣವನ್ನು ತಿಳಿಸುವ ನೀತಿಯನ್ನು ಹೊಂದಿರುವ ಈ ಕಥೆಗೆ ನನ್ನ ನಮನಗಳು
ಧನ್ಯವಾದಗಳು ಗಾಯತ್ರಿ ಮೇಡಂ
ಇಂದಿನ ಪೀಳಿಗೆಗೆ ಅತ್ಯಂತ ಅಗತ್ಯವೆನಿಸುವ ಸಂದೇಶವನ್ನು ಹೊತ್ತ ಕಥೆ ರೇಖಾಚಿತ್ರದೊಂದಿಗೆ ಎಂದಿನಂತೆ ಚಂದ.
ಧನ್ಯವಾದಗಳು ಶಂಕರಿ ಮೇಡಂ
ಚಂದದ ಸಂದೇಶ ಹೊತ್ತ ಸುಂದರ ಕಥೆ.