‘ಮಯೂರವರ್ಮ ಮೈದಳೆದಿದ್ದಾನೆ.’
ಹೌದು..! ಲೇಖಕ ಸಂತೋಷಕುಮಾರ ಮೆಹಂದಳೆಯವರ ವೈಜಯಂತಿಪುರ ಕನ್ನಡ ಭಾಷೆಯನ್ನು ಎತ್ತಿ ಹಿಡಿದ ಸಾಮ್ರಾಜ್ಯವಾದ ಕದಂಬ ರಾಜ ಮನೆತನದ ಸ್ಥಾಪಕ ಮಯೂರವರ್ಮನ ಸಾಹಸಗಾಥೆ.. ಈ ಕೃತಿಯನ್ನು ಓದುತ್ತಿದ್ದರೆ ಮಯೂರನ ಜೀವನದ ನಿಜ ಘಟನೆಗಳು ಕಣ್ಣ ಮುಂದೆ ಕಟ್ಟಿದಂತೆ, ಮಯೂರನೇ ಮೈದಳೆದು ಕಣ್ಣ ಮುಂದೆ ಬಂದು ತನ್ನ ಕಥೆಯನ್ನು ತಾನೇ ಪ್ರಸ್ತುತಪಡಿಸುತ್ತಿರುವಂತೆ/ಅಭಿನಯಿಸಿ ತೋರಿಸುತ್ತಿರುವಂತೆ ಭಾಸವಾಗುತ್ತದೆ!! ಅಂತಹ ಮನೋಜ್ಞ ಮೋಹಕ ಶಕ್ತಿಯನ್ನು ಲೇಖಕರು ಪಾತ್ರಗಳಿಗೆ ತುಂಬಿ ಜೀವಂತವಾಗಿಸಿದ್ದಾರೆ. ಮಯೂರನ ಹೋರಾಟ, ತಯಾರಿ, ರಣತಂತ್ರ, ಧೀಶಕ್ತಿ, ಚಾಣಾಕ್ಷತೆ, ಅವನ ಖಡ್ಗ .. ಹೀಗೆ ಎಲ್ಲವೂ ಅದ್ಭುತ!! ವೀರಶರ್ಮರ ರಾಜಕೀಯ ಮುತ್ಸದ್ದಿತನ, ಬಂಧುಸೇನನ ದೂರದೃಷ್ಟಿ, ನಾಡಿಗಾಗಿ ಪ್ರಾಣ ನೀಡಬಲ್ಲ ಮಯೂರನ ‘ಸ್ನೇಹಿತ ಸೈನಿಕರ’ ಬಳಗ, ಅವರೆಲ್ಲರ ಕೊಡುಗೆಗಳು ಈ ಕೃತಿಯಲ್ಲಿ ಚೆನ್ನಾಗಿ ವರ್ಣಿಸಲ್ಪಟ್ಟಿವೆ.
ಮನೋಸಂಕಲ್ಪ ಅಚಲವಾಗಿದ್ದರೆ ಗುರಿ ಸಾಧನೆ ಅಸಾಧ್ಯವಲ್ಲ ಎಂಬುದಕ್ಕೆ ಮಯೂರ ಮತ್ತೊಮ್ಮೆ ಸಾಕ್ಷಿ.. ಲೇಖಕರ ಭಾಷೆ ಸರಳ, ಸುಂದರ, ಅರ್ಥಗರ್ಭಿತ, ಹಾಗೆಯೇ ವರ್ಣನೆಗಳೂ ಸಹ ಅದ್ಭುತ..ಆದರೂ ಎಲ್ಲಿಯೂ ಕುಂತಳೇಶ್ವರನ ಬಗ್ಗೆ, ವೈಜಯಂತಿಪುರದ ಬಗ್ಗೆ ಹೆಚ್ಚಾಯಿತೆಂದೆನಿಸದು..
ಕಂಚಿಯಲ್ಲಿನ ವಿದ್ಯಾಭ್ಯಾಸ ಪದ್ಧತಿ:
“ಕ್ರಮೇಣ, ಹುಡುಗರ ಗ್ರಹಿಕೆ, ಆಸಕ್ತಿ, ಪರಿಣತಿಯ ಮೇರೆಗೆ ಪ್ರಶಿಕ್ಷಣದ ಮಜಲುಗಳು ನಿರ್ಧಾರವಾಗುತ್ತಿದ್ದವು.” ಎಂಬ ನುಡಿ ವೇದಕಾಲದಲ್ಲಿ ರೂಢಿಯಲ್ಲಿದ್ದ , ವೃತ್ತಿಗನುಗುಣವಾಗಿ ವಿಭಾಗಿತವಾಗಿದ್ದ ವರ್ಣಾಶ್ರಮ ಪದ್ಧತಿಯನ್ನು ನೆನಪಿಸಿ ಪುಷ್ಠಿ ನೀಡುವಂತಿದೆ. ಪುಟ ಸಂಖ್ಯೆ 30 ರಲ್ಲಿ ಎರಡನೇ ಕಂಡಿಕೆಯಲ್ಲೂ ಇದು ಉಲ್ಲೇಖಗೊಂಡಿದೆ. ಹೊನ್ನಪುರ, ಮಂಗಳಾಪುರ, ಗೋಪುಪಟ್ಟಣ, ಕವಲಪುರ, ಶಿವಮುಖ.. ಇತ್ಯಾದಿ ಊರುಗಳ ಹಳೆಯ ಹೆಸರುಗಳು ಕಣ್ಣು – ಕಿವಿಗಳಿಗೆ ಜೇನಿನ ತಂಪನೆರೆದವು..!! ಮಯೂರನ ಖಡ್ಗ ವಿನ್ಯಾಸ ಅದ್ಭುತ!! ಈ ಖಡ್ಗ ನಿಜವೋ, ಅಥವಾ ಲೇಖಕರ ಕಲ್ಪನೆಯೋ…!? ತಿಳಿಯದು.
‘ವೈಜಯಂತಿಪುರ‘ ಮಯೂರವರ್ಮನ ಖಡ್ಗದ ರಕ್ತಸಿಕ್ತ ವೀರಗಾಥೆ! ಹಾಗಾಗಿಯೇ ಅದರ ಸೂಚನೆಯೆಂಬಂತೆ ಲೇಖಕರು ಕೃತಿಯ ಮುಖಪುಟದಲ್ಲಿ ಕೃತಿಯ ಹೆಸರನ್ನು ಹೊಳೆಹೊಳೆಯುವ ಕೆಂಪು ಶಾಯಿಯಲ್ಲಿ ಮುದ್ರಿಸಿರಬಹುದೇನೋ!?? ಎಂದುಕೊಂಡೆ… ಆರಂಭದಲ್ಲಿ ಮಯೂರನ ನಿಷ್ಠ ಬಲಗೈ ಬಂಟನಾಗಿದ್ದ ಕೆಂಗೆರೆಗಳ ನಾಯಕ ದಾರುನಾಯ್ಕ ಅನಿರೀಕ್ಷಿತವಾಗಿ ಯುದ್ಧವೊಂದರಲ್ಲಿ ರುಂಡ ಮುಂಡ ಬೇರೆಯಾಗಿ ಬಿದ್ದರೂ ಮಯೂರನೇಕೋ ಸ್ವಲ್ಪವೂ ವಿಚಲಿತನಾದಂತೆ ತೋರಲಿಲ್ಲ..! ಬಹುಶಃ ‘ಸೈನ್ಯದೆದುರು ಭಾವುಕತೆ ಸಲ್ಲದು’ ಎಂದಿರಬಹುದೇ? ಇದೂ ಒಂದು ರಾಜಕೀಯ ಸೂಕ್ಷ್ಮವೋ, ರಣತಂತ್ರ ವೋ ಆಗಿದ್ದಿರಬಹುದೇ?? ಈ ಘಟನೆಯ ನಂತರ ಮಯೂರ ಮತ್ತೆ ಯಾವ ನಂಬಿಕಸ್ಥ, ಆತ್ಮೀಯರ್ಯಾರನ್ನೂ ಯುದ್ಧದಲ್ಲಿ ಕಳೆದುಕೊಂಡಂತೆ ಕಾಣಲಿಲ್ಲ..!!
ಇದೊಂದು ಐತಿಹಾಸಿಕ ಕಾದಂಬರಿ. ಕಾದಂಬರಿಗೆ ಕಲ್ಪನೆಯ ಸ್ವಾತಂತ್ರ್ಯವಿದೆ. ಆದರೆ ಇಲ್ಲಿ ಲೇಖಕರು ನೈಜತೆಗೆ ಹತ್ತಿರವಾಗುವಂತೆ ಪುಟಪುಟಗಳಲ್ಲಿ ನೀಡಿದ ಅಡಿಟಿಪ್ಪಣಿಗಳು, ಸಾಕ್ಷೀಕರಿಸಿದ ರೀತಿಗಳು ಈ ಕೃತಿಯನ್ನು ಕಾದಂಬರಿಯಿಂದ ಭಿನ್ನವಾಗಿ ನಿಲ್ಲಿಸುತ್ತವೆ. ಪ್ರಾಯೋಗಿಕವಾಗಿ ಮಯೂರನ ಸಾಮ್ರಾಜ್ಯದಲ್ಲಿ ತಿರುಗಾಡಿ ಸಂಶೋಧಿಸಿ, ಇತಿಹಾಸದ ಪುಟಗಳನ್ನು ತಿರುವಿ, ಅನೇಕ ಇತಿಹಾಸಕಾರರ ಕೃತಿಗಳ ಆಧಾರದ ಉಲ್ಲೇಖ ನೀಡಿ ಅವುಗಳ ಪ್ರಮಾಣದಿಂದ ‘ಹೀಗೆಲ್ಲ ನಡೆದಿರಬಹುದು’ ಎಂದು ಬರೆದ ರೀತಿಗಳು ಸತ್ಯಕ್ಕೆ ತೀರ ಹತ್ತಿರ ಹತ್ತಿರ.. ಹಾಗಾಗಿ ಮುಂದಿನ ದಿನಮಾನಗಳಲ್ಲಿ ಈ ಪುಸ್ತಕವು ಅನೇಕ ಶಾಲಾ- ಕಾಲೇಜುಗಳ ಗ್ರಂಥಾಲಯಗಳಲ್ಲಿ ಮಯೂರನ ಇತಿಹಾಸಕ್ಕೆ ಆಧಾರಗ್ರಂಥ ಎಂದು ಕಾಣಿಸಿಕೊಂಡರೆ ಅಚ್ಚರಿಯೇನಲ್ಲ ಎಂಬುದು ನನ್ನ ಭಾವನೆ..
ಲೇಖಕರ ಮಾತಿನಂತೆ ಮಯೂರನ ಬಗ್ಗೆ ಸಿಗುವ ಮೂರು ಮತ್ತೊಂದು ಪುಟಗಳ ಮಾಹಿತಿ ಅನೇಕ ಸಾಕ್ಷ್ಯಗಳ ಆಧಾರದ ಮೇಲೆ ಇಷ್ಟು ದೊಡ್ಡದಾಗಿ ಬೆಳೆದು ನಿಂತಿದೆ. ಹಿನ್ನೆಲೆ – ಮುನ್ನೆಲೆಗಳಿರದ ಒಬ್ಬ ತನ್ನ ಚಾಣಾಕ್ಷತನ, ವೀರತ್ವದಿಂದ ವನವಾಸಿಗಳನ್ನು ವಿಶ್ವಾಸದಿಂದ ಒಗ್ಗೂಡಿಸಿಕೊಂಡು ಸ್ವತಂತ್ರ ರಾಜ್ಯ ಸ್ಥಾಪಿಸಿ ಕನ್ನಡ ಭಾಷೆಗೆ, ಜನತೆಗೆ ಅಸ್ಮಿತೆಯನ್ನು ಒದಗಿಸಿದ ಕನ್ನಡ ಕುಲ ತಿಲಕ, ವೈಜಯಂತಿಪುರವರಾಧೀಶ, ಕುಂತಳೇಶ್ವರ ಮಯೂರವರ್ಮನ ಬಗ್ಗೆ ಒಂದಿಷ್ಟು ಮಾಹಿತಿಗಳ ಕೊರತೆ ಎಂದರೆ ಸೋಜಿಗವಲ್ಲದೆ ಇನ್ನೇನು!!?? ಇತಿಹಾಸದಲ್ಲಿ ಕೆಲವು ಪುಂಡರ ಮಾಹಿತಿಗಳು ಸರಾಗವಾಗಿ, ಧಾರಾಳವಾಗಿ ದೊರೆತಷ್ಟು ಮಯೂರನ ಬಗ್ಗೆ ದೊರೆಯದಿರುವುದು ವಿಪರ್ಯಾಸ! ಮಯೂರ ಏಕಿಷ್ಟು ಕಡೆಗಣಿತನಾದ ಎಂಬುದು ಅರಿಯದ ಅಚ್ಚರಿಯ ವಿಷಯ..!
ಕನ್ನಡಿಗರಿಗೆ ತಮ್ಮದೆಂದು ಹೇಳಿಕೊಳ್ಳಲು ಸ್ವಂತ ಅಸ್ತಿತ್ವವನ್ನು, ಸೇರಿಕೊಳ್ಳಲು ಸಾಮ್ರಾಜ್ಯವನ್ನು ಕಟ್ಟಿಕೊಟ್ಟ ಕೀರ್ತಿ ಕದಂಬರದು.. ಮುಂದೆ ಕನ್ನಡ ನಾಡನ್ನು ಆಳಿದ ಎಲ್ಲ ಕನ್ನಡ ಸಾಮ್ರಾಜ್ಯಗಳಿಗೆ ಸ್ಫೂರ್ತಿ, ಅಡಿಪಾಯ ಕದಂಬರು ಎಂದು ಹೇಳಲು ಮಧುಕೇಶ್ವರನೇ ಸಾಕ್ಷಿ ಎಂಬುದು ನನ್ನ ಅಭಿಪ್ರಾಯ. ಕನ್ನಡ ಪರಂಪರೆಗೆ ಕದಂಬರ ಕೊಡುಗೆ ಅಪಾರ. ಈ ಕೃತಿಯನ್ನು ಮೆಹಂದಳೆಯವರು ಕನ್ನಡಿಗರ ಕೈಗಿತ್ತು ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಕನ್ನಡಿಗರೆಲ್ಲರೂ ಇದನ್ನು ಓದಿ ನಮ್ಮ ಹೆಮ್ಮೆ, ಸ್ಫೂರ್ತಿ, ಅಭಿಮಾನಗಳನ್ನು ಹೆಚ್ಚಿಸಿಕೊಳ್ಳೋಣ.
ಲೇಖಕರ ಬಗ್ಗೆ…..
ಹೇಳದಿದ್ದರೆ ಶ್ರಮಕ್ಕೆ ಬೆಲೆ ನೀಡದಂತಾದೀತು.. ಮಯೂರನ ಬಗ್ಗೆ ಬರೆಯಬೇಕೆಂಬ ಆಸೆ ಮನದಲ್ಲಿ ನಿಚ್ಚಳ. ಲೇಖನಿ ಹಿಡಿದು ದಾಖಲೆಗಾಗಿ ಇತಿಹಾಸದ ಪುಟಗಳನ್ನು ತಡವಿದರೆ ಸಿಕ್ಕಿದ್ದು ಮೂರು ಮತ್ತೊಂದು ಪುಟ. ಆದರೂ ಛಲ, ಸಂಕಲ್ಪ ಬಿಡದೆ ಮಯೂರನ ವೈಜಯಂತಿಪುರ, ದಂಡಯಾತ್ರೆಯ ದಾರಿಗಳನ್ನೆಲ್ಲ ತಿರುಗಾಡಿ, ಅನೇಕ ಇತಿಹಾಸಕಾರರ ಈ ಕುರಿತ ದಾಖಲೆಗಳನ್ನು ಹುಡುಕಿ ಸತ್ಯಕ್ಕೆ ಹತ್ತಿರವಾದ ದ್ದನ್ನು ಹೆಕ್ಕಿ ತೆಗೆದು, ಅವುಗಳ ಆಧಾರದ ಮೇಲೆ ಬೃಹತ್ ಕೃತಿ ರಚಿಸಿ ಕನ್ನಡಿಗರ ಕೈಗಿತ್ತದ್ದು ಸಾಮಾನ್ಯ ಮಾತೇ? ಶ್ಲಾಘನೀಯ.. ಅದ್ಭುತ.. ಎಂದಷ್ಟೇ ಪದ ಬಳಕೆಯಲ್ಲಿ ಮುಗಿಸಿದರೆ ಸಾಕೇ??!!
ಲೇಖಕರ ಸ್ಟೈಲಿನಂತೆ ‘ಜೂಲೆ……’ ಎಂದುಬಿಡೋಣವೇ?
ಜೂಲೆ…….
#ಜೈವೈಜಯಂತಿಪುರ
#ಜೈಕದಂಬ
#ಜೈಮಯೂರವರ್ಮ
– ಶ್ವೇತಾ ಸದಾಶಿವ
ಸೊಗಸಾದ ಪುಸ್ತಕ ಪರಿಚಯಮಾಡಿಕೊಟ್ಟ..ಶ್ವೇತಾ ಸದಾಶಿವ ಅವರಿಗೆ ಧನ್ಯವಾದಗಳು.
ಸೊಗಸಾದ ಪುಸ್ತಕ ಪರಿಚಯ
ಅಪರೂಪದ ಐತಿಹಾಸಿಕ
ಕಾದಂಬರಿಯೊಂದರ ವಿಮರ್ಶಾತ್ಮಕ ಪರಿಚಯವು ಬಹಳ
ಕುತೂಹಲಕಾರಿಯಾಗಿದೆ..ಧನ್ಯವಾದಗಳು ಮೇಡಂ.
ಕಾದಂಬರಿಯ ಪರಿಚಯ ಅಚ್ಚುಕಟ್ಟಾಗಿ ಮೂಡಿ ಬಂದಿದೆ.
ಕಾದಂಬರಿಯ ಬಗ್ಗೆ ಕುತೂಹಲ ಹುಟ್ಟಿಸುವ ಬರಹ. ಅಭಿನಂದನೆಗಳು.
ಪರಿಚಯ ಸೊಗಸಾಗಿದೆ