ವಾಟ್ಸಾಪ್ ಕಥೆ 16 : ಪ್ರತ್ಯುಪಕಾರ
ಸುಮಾರು ಎಪ್ಪತ್ತು ವರ್ಷ ವಯಸ್ಸಿನ ಮುದುಕಿಯೊಬ್ಬಳು ತನ್ನ ತಲೆಯ ಮೇಲೆ ದೊಡ್ಡ ಚೀಲವನ್ನು ಹೊತ್ತು ತಾಲೂಕು ಕಛೇರಿಯ ಬಳಿಗೆ ಬಂದಳು. ಅವಳಿಗೆ ವಿಧವಾ ಮಾಸಾಷನ ಪಿಂಚನಿ ಮಂಜೂರು ಮಾಡಿಸಿಕೊಳ್ಳಲು ಅರ್ಜಿ ಕೊಡುವ ಸಲುವಾಗಿ ಅಲ್ಲಿಗೆ ಬಂದಿದ್ದಳು. ಸಂಬಂಧಪಟ್ಟ ಅಧಿಕಾರಿಗಳ ಕೊಠಡಿಯ ಬಾಗಿಲ ಬಳಿ ತನ್ನ ಚೀಲವನ್ನು ಒರಗಿಸಿಟ್ಟು ಒಳಬಂದಳು. ಕೊಡಬೇಕಾದ ಅರ್ಜಿಯನ್ನು ಅಧಿಕಾರಿಯ ಮೇಜಿನ ಮೇಲೆ ಇರಿಸಿ ಅದರ ಮೇಲೆ ತನ್ನ ಎಲೆಅಡಿಕೆ ಸಂಚಿಯಿಂದ ಎಷ್ಟೋ ಇಪ್ಪತ್ತು, ಹತ್ತರ ನೋಟುಗಳನ್ನು ಎಣಿಸಿ ಇಟ್ಟಳು. ಅಧಿಕಾರಿಯು ಅವನ್ನು ಎಣಿಸಿಕೊಂಡು ತನ್ನ ಜೇಬಿನಲ್ಲಿಟ್ಟಿಕೊಂಡು ಅರ್ಜಿಯನ್ನು ಕಡತದೊಳಕ್ಕೆ ಸೇರಿಸಿದ.
ಅಷ್ಟರಲ್ಲಿ ಬಾಗಿಲ ಬಳಿ ಆಕೆ ಇರಿಸಿದ್ದ ಚೀಲದಿಂದ ಹಲಸಿನ ಹಣ್ಣಿನ ಹಿತವಾದ ವಾಸನೆ ಇಡೀ ಕೊಠಡಿಯನ್ನು ಆವರಿಸಿತ್ತು. ಆಕೆಯನ್ನು ತಮಾಷೆ ಮಾಡಬೇಕೆಂದು ಅಧಿಕಾರಿಯು ”ಏನಜ್ಜೀ ನೀನು ತಂದಿರುವ ಹಲಸಿನ ಹಣ್ಣಿನ ಘಮಲು ನಮ್ಮ ಕಚೇರಿಯಲ್ಲೆಲ್ಲ ಹರಡಿಕೊಂಡುಬಿಟ್ಟಿತು. ಮಾರುವುದಕ್ಕಾಗಿ ತಂದಿದ್ದೀಯಾ?” ಎಂದು ಪ್ರಶ್ನಿಸಿದರು.
”ಇಲ್ಲಪ್ಪಾ, ಅದು ನಮ್ಮ ತೋಟದಲ್ಲಿ ಬಿಟ್ಟ ಹಣ್ಣು. ಅದನ್ನು ನನ್ನ ಮೊಮ್ಮಗನ ಶಾಲೆಯಲ್ಲಿರುವ ಪಿ.ಟಿ. ಮಾಸ್ಟರಿಗೆ ಕೊಡಲು ತಂದಿದ್ದೇನೆ. ನನ್ನ ಮೊಮ್ಮಗನಿಗೆ ಶಾಲೆಯಲ್ಲಿ ಎಂಥದ್ದೋ ಎತ್ತರಕ್ಕೆ ಜಿಗಿಯುವ ಸ್ಪರ್ಧೆಯಿತ್ತು. ಪಿ.ಟಿ. ಮಾಸ್ಟರರು. ನೀನು ಎಷ್ಟೋ ಎತ್ತರಕ್ಕೆ ಜಿಗಿದರೆ ನಿನಗೊಂದು ಜೊತೆ ಬೂಟುಗಳನ್ನು ಕೊಡಿಸುತ್ತೇನೆ ಎಂದಿದ್ದರು. ನನ್ನ ಮೊಮ್ಮಗ ಅಷ್ಟು ಎತ್ತರಕ್ಕೆ ಜಿಗಿದದ್ದಲ್ಲದೆ ಜಿಲ್ಲಾಮಟ್ಟದ ಸ್ಪರ್ಧೆಗೂ ಆಯ್ಕೆಯಾದನಂತೆ. ಪಿ.ಟಿ. ಮಾಸ್ಟರರು ಖುಷಿಯಾಗಿ ಅವರು ಹೇಳಿದಂತೆ ನಮ್ಮ ಹುಡುಗನಿಗೆ ಚಂದದ ಒಂದು ಜೊತೆ ಬೂಟುಗಳನ್ನು ತೆಗೆಸಿಕೊಟ್ಟಿದ್ದಾರೆ, ಅವರ ಋಣ ನಾನೆಂಗೆ ತೀರಿಸಕ್ಕಾಗ್ತದೆ. ಅದಕ್ಕೇ ಈ ಹಣ್ಣು ಕೊಟ್ಟು ನಮಸ್ಕಾರ ಹೇಳಿ ಬರುವಾ ಅಂತ ಹೊತ್ತುಕೊಂಡು ಬಂದಿದ್ದೀನಿ” ಎಂದುತ್ತರಿಸಿದಳು.
ಅಧಿಕಾರಿಯು ಮತ್ತೆ ಅಜ್ಜಿಯನ್ನು ಕೆಣಕುತ್ತಾ ”ಅಲ್ಲಜ್ಜೀ, ಅಷ್ಟು ದೊಡ್ಡ ಗಾತ್ರದ ಹಲಸಿನಹಣ್ಣು ಅವರಿಗೆ ಹೊತ್ತುಹೋಗಲು ಹಿಂಸೆ ಆಗುವುದಿಲ್ಲವೇ” ಎಂದರು.
ಆ ಮುದುಕಿ ”ಅದೆಂಗಾಯ್ತದಪ್ಪಾ ನಾನು ಪ್ರೀತಿಯಿಂದ ಕೊಡ್ತಾ ಇರೋದು ಇದು. ನಾನು ಈವಾಗ ತಾನೇ ನಿಮಗೆ ನೋಟುಗಳನ್ನು ಎಣಿಸಿಕೊಟ್ಟೆನಲ್ಲಾ, ಅವನ್ನು ನೀವು ಸಲೀಸಾಗಿ ತೆಗೆದುಕೊಳ್ಲಲಿಲ್ಲವೇ? ಅವುಗಳ ತೂಕಕ್ಕೆ ಹೋಲಿಸಿದರೆ ಹಲಸಿನ ಹಣ್ಣಿನ ತೂಕ ಗುಲಗಂಜಿಯಂತೆ ಹಗುರ. ನಾನು ಬತ್ತೀನಪ್ಪಾ ಹೊತ್ತಾಯಿತು” ಎಂದು ಚೀಲವನ್ನೆತ್ತಿ ತಲೆಯ ಮೇಲಿಟ್ಟು ಮೆಟ್ಟಿಲುಗಳನ್ನಿಳಿದು ಹೊರಟಳು. ವಸೂಲಿಗೂ ಪ್ರತ್ಯುಪಕಾರಕ್ಕೂ ಇರುವ ವ್ಯತ್ಯಾಸವನ್ನು ಹಳ್ಳಿಯ ಮುದುಕಿ ಸೂಕ್ಷ್ಮವಾಗಿ ತಿಳಿಸಿದ್ದಳು.
-ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
Simple super
ಹೌದು ಪ್ರೀತಿ-ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು… ಚಿಕ್ಕ ಕಥೆ ಆದರೂ ನೀತಿ ಬಹಳ ದೊಡ್ಡದು
ಧನ್ಯವಾದಗಳು ಶೋಬಿತಾ…ಹಾಗೂ ವೀಣಾ
ಪ್ರೀತಿಯುಂದ, ಕೃತಜ್ಞತೆಯಿಂದ ನೀಡಿದ ಹಲಸಿನ ಹಣ್ಣಿನ ರುಚಿ, ಸೊಗಡು ಲಂಚ, ರುಷುವತ್ತುಗಳಿಗೆಲ್ಲಿ ಬರಬೇಕು. ಎಂದಿನಂತೆ ಸುಂದರ ನೀತಿಪಾಠದ ಕಥೆ. ಅಭಿನಂದನೆಗಳು.
ತುಂಬಾ ಚೆನ್ನಾಗಿದೆ. ಉತ್ತಮ ಸಂದೇಶವಿದೆ
ಸೊಗಸಾದ ಕಥೆ, ಸೂಕ್ತವಾದ ರೇಖಾಚಿತ್ರ..
ಲಂಚಕೋರರಿಗೆ ಪ್ರೀತಿ, ಕೃತಜ್ಞತೆಗಳ ಬೆಲೆ ತಿಳಿಸಲು ಹಳ್ಳಿಯ ಮುಗ್ಧೆಯೇ ಬೇಕಾಗಿತ್ತು. ಎಂದಿನಂತೆ, ಪೂರಕ ಚಿತ್ರದೊಂದಿಗೆ ಪುಟ್ಟ ಕಥೆಯು ಮನಮುಟ್ಟಿತು.
ಕಥೆಯ ಸಂದೇಶ ಚೆನ್ನಾಗಿದೆ.
ಧನ್ಯವಾದಗಳು ಪದ್ಮಾ ,ಶಂಕರಿ, ಹೇಮಾ,ನಯನ ರವರಿಗೆ..
ಧನ್ಯವಾದಗಳು ಪದ್ಮಿನಿ ಮೇಡಂ