ಪಾದರಕ್ಷೆಗಳ ಸುತ್ತ

Share Button

ಈ ಲೇಖನದ ಪ್ರಾರಂಭವನ್ನು ಪುರಾಣದ ಎರಡು ಘಟನೆಗಳ ಮೂಲಕ ಪ್ರಸ್ತಾವನೆ ಮಾಡುವುದು ಸೂಕ್ತವೆನಿಸುತ್ತದೆ.
ಮೊದಲನೆಯದಾಗಿ ರಾಮಾಯಣದಲ್ಲಿ ದಶರಥನ ಅಣತಿಯಂತೆ ರಾಮ ವನವಾಸ ಪ್ರಾರಂಭ ಮಾಡಿದ್ದಾನೆ. ಇತ್ತ ದಶರಥ ಪುತ್ರ ಶೋಕದಿಂದ ನಿಧನನಾಗುತ್ತಾನೆ. ಅವನಿಗಿದ್ದ ಶಾಪದ ಪರಿಣಾಮವಾಗಿ ಪುತ್ರರಾರೂ ಸಮೀಪ ಇರಲಿಲ್ಲ. ಸುದ್ದಿ ಕೇಳಿ ಭರತ ಬಂದು ಇಲ್ಲಿನ ವಿದ್ಯಾಮಾನವನ್ನು ನೋಡಿ ರೋಸಿ ಹೋಗಿ ತಾಯಿ ಕೈಕೇಯಿಯನ್ನು ಬೈದು ರಾಮನನ್ನ ಭೇಟೆಯಾಗಲು ಅರಣ್ಯಕ್ಕೆ ಹೋಗುತ್ತಾನೆ. ರಾಮನ ಭೇಟಿ ವೇಳೆ ಅವನ ಖಡಕ್ ನಿರ್ಧಾರದಿಂದ ವ್ಯಾಕಲಗೊಂಡು ಅವನ ಪಾದುಕೆಯನ್ನಾದರೂ ನೀಡುವಂತೆ ರಾಮನನ್ನು ಪ್ರಾರ್ಥಿಸಿ ಪಾದುಕೆಯೊಂದಿಗೆ ಅಯೋಧ್ಯೆಯ ಸಮೀಪದ ನಂದಿ ಗ್ರಾಮದಲ್ಲಿ ಪಾದುಕೆಗಳನ್ನಿಟ್ಟು ರಾಮನ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಾನೆ. ಇವತ್ತಿಗೂ ಈ ನಂದಿಗ್ರಾಮ ಭರತನ ಕುರಹಾಗಿ ಅಲ್ಲಿ ವಿರಾಜಿಸುತ್ತಿದೆ. ಸುಂದರ ತಾಣ.

ಇನ್ನೊಂದು ಪ್ರಸಂಗ ಮಹಾಭಾರತದ್ದು, ದ್ರೌಪದಿ ಪಂಚಪಾಂಡವರನ್ನು ವರಿಸಿದ ಮೇಲೆ ಅವರಲ್ಲಿ ಒಂದು ಅಲಿಖಿತ ಒಪ್ಪಂದವಾಗಿರುತ್ತದೆ. ಅದೇನೆಂದರೆ ದ್ರೌಪದಿಯ ಜೊತೆ ಯಾರೇ ಪಾಂಡವರಿದ್ದರೂ ಏಕಾಂತದಲ್ಲಿ ಮತ್ತೊಬ್ಬರು ಅಲ್ಲಿಗೆ ಪ್ರವೇಶಿಸುವಂತಿರಲಿಲ್ಲ. ಇದಕ್ಕೆ ಅಂತಃಪುರದ ಹೊರಗಿನ ಪಾದುಕೆಗಳೇ ಗುರುತಾಗಿತ್ತು. ಒಮ್ಮೆ ಧರ್ಮರಾಯನು ದ್ರೌಪದಿಯೊಡನೆ ಏಕಾಂತದಲ್ಲಿದ್ದಾಗ ಪಾದುಕೆಗಳನ್ನು ನೋಡಿಯೋ ನೋಡಿದೆಯೋ ಅರ್ಜುನನ ಒಳನುಗ್ಗುತ್ತಾನೆ. ತಕ್ಷಣ ತನ್ನ ತಪ್ಪಿನ ಅರಿವಾಗಿ ಒಂದು ವರ್ಷಕಾಲ ಏಕಾಂಗಿಯಾಗಿ ತೀರ್ಥಯಾತ್ರೆಗೆ ಹೋಗಿದ್ದು ಇತಿಹಾಸ. ಹೀಗೆ ಪಾದುಕೆಗಳ ಪ್ರಭಾವ ಅಪಿರಮಿತ.

ಪಾದರಕ್ಷೆಗಳ ಇತಿಹಾಸ ಬಹಳ ಪುರಾತನದ್ದು, ಮಾನವ ಚಪ್ಪಲಿ ಧರಿಸಲು ಪ್ರಾರಂಭಮಾಡಿ ಸುಮಾರು ನಲವತ್ತು ಸಾವಿರ ವರ್ಷಗಳಾಯಿತೆಂಬ ಅಂದಾಜಿದೆ. ಉತ್ಖನನದಲ್ಲಿ ಮೊದಲು ಸಿಕ್ಕ ಚಪ್ಪಲಿ ಅಷ್ಟು ಹಳೆಯದು ಮೊದಲ ಚಪ್ಪಲಿಯೆಂದರೆ ಭೇಟೆಯಾಡಿದ ಪ್ರಾಣಿಯ ಚರ್ಮ. ಅದನ್ನು ಕಾಲಿಗೆ ಸುತ್ತಿಕೊಳ್ಳುವ ಪದ್ಧತಿ ಶಿಲಾಯುಗದ ಕಾಲಕ್ಕಿಂತ ಬಹಳ ಮುಂಚೆ ಇತ್ತು. ಅಮೇರಿಕದ ಶಿಕಾಗೋ ನಗರದ ಫೀಲ್ಡ್ ಮ್ಯೂಸಿಯಂನಲ್ಲಿ ಸುಮಾರು ನಾಲ್ಕುಸಾವಿರ ವರ್ಷ ಹಳೆಯ ನಾರಿನ ಚಪ್ಪಲಿಯನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

ಇತಿಹಾಸದುದ್ದಕ್ಕೂ ಪಾದರಕ್ಷೆ ಒಂದು ಅವಶ್ಯಕತೆಯಾಗಿ ಪರಿಣಮಿಸಿದೆ. ಮೊದಲು ಕೇವಲ ಬೇಟೆಗಾರ ಪುರುಷರು ಮಾತ್ರ ಪಾದರಕ್ಷೆ ಧರಿಸಿ ಹೋಗುವ ಪದ್ಧತಿ ಇತ್ತು. ಕ್ರಮೇಣ ಇದು ಯುದ್ಧ ಪೋಷಾಕಿನ ಜತೆ ಸೇರಿತು. ಇದನ್ನು ಒಂದು ಕೌಶಲ್ಯ ಎಂದು ಗುರುತಿಸಿ ಬಹುತೇಕ ರಾಜಾಸ್ಥಾನಗಳಲ್ಲಿ ಚಮ್ಮಾರರಿಗೆ ವಿಶೇಷ ಮರ್ಯಾದೆ ಇತ್ತು. ಶಸ್ತ್ರಾಸ್ತ್ರಗಳ ತಯಾರಿಕಾ ಪಟ್ಟಿಯಲ್ಲಿ ಪಾದರಕ್ಷೆ ಕೂಡ ಸೇರ್ಪಡೆಯಾದವು. ಹದಿನಾಲ್ಕನೇ ಶತಮಾನದಿಂದಾಚೆಗೆ ಪಾದರಕ್ಷೆಗಳು ಅವಶ್ಯಕ ವಸ್ತು ಅಲ್ಲದೇ ಶೋಕಿಯ ಸ್ಥಾನ ಪಡೆಯಿತು. ಹಲವಾರು ದೇಶಗಳಲ್ಲಿ ಚಪ್ಪಲಿಗಳಿಗೆ ಸುಂಕವಿಲ್ಲ. ಫ್ಯಾಷನ್ ಪ್ರಜ್ಞೆಯಿಂದ ಹಲವಾರು ತರಹದ ಪಾದರಕ್ಷೆಗಳು ಮಾರಾಟಕ್ಕೆ ಬಂದವು. ಹದಿನೈದನೇ ಶತಮಾನದಿಂದ ಹತ್ತೊಂಬತ್ತನೇ ಶತಮಾನದವರೆಗೆ ಯುರೋಪಿನ ರಾಜರುಗಳು ಹೈ ಹೀಲ್ಡ್ ಚಪ್ಪಲಿ ಧರಿಸುತ್ತಿದ್ದರು. ಇದೊಂದು ರೀತಿಯ ಶಕ್ತಿ, ಪ್ರಾಬಲ್ಯ ಮತ್ತು ತಾವೇ ಮೇಲು ಎಂಬ ದ್ಯೋತಕವಾಗಿತ್ತು. ಇದು ಪ್ರತಿಷ್ಠೆಯ ಗತ್ತಾಗಿತ್ತು ಇವರಲ್ಲದೆ ಬೇರೆ ಯಾರು ಸಾಮಾನ್ಯರು ಹೈ ಹೀಲ್ಡ್ ಚಪ್ಪಲಿಯನ್ನು ಧರಿಸುವಂತಿರಲಿಲ್ಲ. ಕ್ರಮೇಣ ಫ್ರಾನ್ಸ್‌ನ ಲೂಯಿಸ್‌ಗೆ ಚಪ್ಪಲಿಯ ಗೀಳು ಎಷ್ಟಿತೆಂದರೆ ಗಂಡಸು ಚಪ್ಪಲಿ ಧರಿಸಬೇಕೆಂಬ ವಿಚಿತ್ರ ಕಾನೂನನ್ನೇ ಜಾರಿಗೊಳಿಸಿದ. ಪ್ರಾಯಶಃ ಆಗಲೇ ಪಾದರಕ್ಷೆಗೆ ಕೈಗಾರಿಕಾ ಸ್ಥಾನಮಾನ ಸಿಕ್ಕಿರಬೇಕು.

ಚೀನಾದಲ್ಲಿ ಒಂದು ವಿಚಿತ್ರ ಪದ್ಧತಿ ಪ್ರಾರಂಭವಾಗಿತ್ತು. ಅಲ್ಲಿ ಪಾದಗಳು ಸಣ್ಣದಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಇದಕ್ಕೆ ಲೋಟಸ್‌ಫುಟ್ ಎಂದು ನಾಮಕರಣ ಮಾಡಿದ್ದರು. ಕೈಗಾರಿಕಾ ಕ್ರಾಂತಿಯಿಂದ ಮನುಷ್ಯರೆಲ್ಲ ಚಪ್ಪಲಿ ಧರಿಸುವ ಸಾಧ್ಯತೆ ಸೃಷ್ಟಿಸಿದರೂ ಇಂದಿಗೂ ಚಪ್ಪಲಿ ಜಗತ್ತಿನ ಎಲ್ಲರಿಗೂ ಲಭ್ಯವಿಲ್ಲದ ವಸ್ತು. ಚಪ್ಪಲಿಯೇ ಧರಿಸಿದ ಅದೆಷ್ಟೂ ಕೋಟಿ ಜನರು ಇಂದಿಗೂ ಇದ್ದಾರೆ. ಇಂದು ಪಾದರಕ್ಷೆಯು ಒಂದು ಹಲವಾರು ಬಿಲಿಯನ್ ಡಾಲರ್‌ಗಳ ಉದ್ದಿಮೆ. ಇದರಲ್ಲಿ ಪ್ರಖ್ಯಾತವಾದ ನೈಕಿ, ಅಡಿದಾಸ್, ಫೂಮ ಅಲ್ಲದೆ ಸಾವಿರಾರು ಕಂಪೆನಿಗಳು ಪಾದರಕ್ಷೆಗಳ ತಯಾರಿಕೆಯಲ್ಲಿ ತೊಡಗಿವೆ. ಬಹಳ ಬೆಲೆಬಾಳುವ ಚಪ್ಪಲಿ ಅಥವಾ ಶೂ ಧರಿಸುವವರು ಒಂದು ಪ್ರತಿಷ್ಟೆಯ ಕುರುಹಾಗಿದೆ. ಅಲ್ಲದೆ ಅವರ ಉಪಯೋಗಕ್ಕನುಗುಣವಾಗಿ ನೂರೆಂಟು ರೀತಿಯ ಚಪ್ಪಲಿಗಳು, ಷೂಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಶೂ, ಸ್ಯಾಂಡಲ್, ಸ್ಲಿಪ್ಪರ್, ಸ್ನೀಕಲ್, ಬುಲೆಟ್ ಶೂ, ಬೋಟ್ ಶೂ, ಗುಡ್ಡ ಹತ್ತಲು ಶೂ, ವಾಲಿಬಾಲ್, ಕಬಡ್ಡಿ, ಗಾಲ್ಫ್, ರನ್ನಿಂಗ್, ಕ್ರಿಕೆಟ್, ಹೈಜಂಪ್, ಐಸ್ ಸ್ಕೇಟಿಂಗ್ ಹೀಗೆ ಹತ್ತು ಹಲವಾರು ವಿಭಿನ್ನ ಪ್ರಕಾರಗಳಿಗೆ ಷೂ ಹಾಗೂ ಚಪ್ಪಲಿಗಳು ಲಭ್ಯ. ಅಲ್ಲದೆ ಮಳೆಗಾಲಕ್ಕೆ, ಬೇಸಿಗೆಗೆ, ಕೃಷಿಗೆ, ವಾಯುವಿಹಾರಕ್ಕೆ, ಕಛೇರಿಗೆ ವಿಧವಿಧವಾದ ಪಾದರಕ್ಷೆಗಳು ಲಭ್ಯ. ಇದರ ವ್ಯಾಪಕತೆಯ ಅರಿವಾಗಲು ಯುರೋಪಿನಲ್ಲಿ ಸುಮಾರು 28,000 ಚಪ್ಪಲಿ, ಶೂ ತಯಾರಿಕಾ ಕಾರ್ಖಾನೆಗಳಿವೆ ಎಂದರೆ ಆಶ್ಚರ್‍ಯವಲ್ಲವೇ ? ಇವುಗಳ ವಹಿವಾಟು ನೂರು ಬಿಲಿಯನ್ ಡಾಲರ್‌ಗಳಿಗೂ ಅಧಿಕ. ಅಮೇರಿಕೆಯಲ್ಲಿ 80,000 ಕ್ಕೂ ಮಿಕ್ಕಿ ಚಪ್ಪಲಿ ಅಂಗಡಿಗಳಿವೆ. ಸುಮಾರು, ಮೂರು ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಿದೆ. ಭಾರತದಲ್ಲೇನೂ ಕಡಿಮೆಯಿಲ್ಲ. ಇಲ್ಲೂ ಲಕ್ಷಾಂತರ ಅಂಗಡಿಗಳು ಹಾಗೂ ಕಾರ್ಖಾನೆಳು ಇವೆ. ಬಾಟಾ ಕಂಪೆನಿ ಜಗತ್ಪ್ರಸಿದ್ದ. ಈ ಉದ್ದಿಮೆ ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿದೆ. ಚಪ್ಪಲಿಗಳ ಪ್ರಖ್ಯಾತಿ ಎಷ್ಟಿದೆಯೆಂದರೆ ಇವುಗಳ ಬಗೆಗೇ ಪ್ರಕಟವಾಗುವ ನಲವತ್ತಕ್ಕೂ ಮಿಕ್ಕಿ ವಾರ ಪತ್ರಿಕೆಗಳಿವೆ.

ಇವಿಷ್ಟು ಪಾದರಕ್ಷೆಗಳ ಬಗ್ಗೆ ವಿವರಗಳಾದರೆ, ಈ ಪಾದರಕ್ಷೆಗಳ ಬಗ್ಗೆ ಕೆಲ ಜನರಿಗೆ ಇರುವ ಮೋಹ ಅತೀವವಾದದ್ದು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾರವರ ಮನೆಗೆ ಅಕ್ರಮ ಆಸ್ತಿ ಬಗ್ಗೆ ದಾಳಿ ಮಾಡಿದಾಗ ಪೋಲಿಸರಿಗೆ ಸಿಕ್ಕಿದ್ದು ಮೊದಲು ಸುಮಾರು 750 ಜೊತೆ ಬಹಳ ದುಬಾರಿ ಬೆಲೆಯ ವಿವಿಧ ಪಾದರಕ್ಷೆಗಳು. ಇನ್ನೊಂದು ಉದಾಹರಣೆ ಫಿಲಿಫೈನ್ಸ್‌ನ ಮಾಜಿ ಪ್ರಧಾನಿ ಇಮೆಲ್ಡಾ ಮಾರ್ಕೋಸ್ ಇವರ ಬಗ್ಗೆಯೂ ಅಧಿಕಾರ ದುರ್ಬಳಕೆಯ, ಆಸ್ತಿಯ ಬಗ್ಗೆ ದಾಳಿ ನಡೆದಾಗ 2500 ಕ್ಕೂ ಮಿಕ್ಕಿ ಜೊತೆ ಪಾದರಕ್ಷೆಗಳು ಸಿಕ್ಕಿದ್ದವು. ಇವುಗಳನ್ನ ಇವರಿಬ್ಬರೂ ಯಾವಾಗ ಎಷ್ಟು ಬಾರಿ ಬಳಸಿದ್ದರೋ ಆ ದೇವನೊ ಬಲ್ಲ. ಒಟ್ಟಿನಲ್ಲಿ ಈ ಪಾದರಕ್ಷೆಗಳು ಮಾನವರಲ್ಲಿ ಆದಷ್ಟು ಮೋಹವನ್ನು ತರಿಸುತ್ತದೆಯೋ ಅದಕ್ಕೆ ಕಾರಣವಂತೂ ನಿಜಕ್ಕೂ ನಿಗೂಢ!

ಇಷ್ಟು ಆದಮೇಲೆ ಪಾದರಕ್ಷೆಗಳ ಬಗ್ಗೆ ಕೆಲ ನಂಬಿಕೆಯ ಬಗ್ಗೆ ಬರೆಯದಿದ್ದರೆ ಹೇಗೆ ? ಹಿಂದೂಗಳಲ್ಲಿ ಯಾರೂ ದೇವಸ್ಥಾನಗಳಲ್ಲಿ ಚಪ್ಪಲಿ ಧರಿಸಿ ಒಳಗೆ ಪ್ರವೇಶ ಮಾಡುವುದಿಲ್ಲ. ಆದರೆ ಕ್ರಿಷ್ಟಿಯನ್ ಸಮುದಾಯದಲ್ಲಿ ಚರ್ಚ್‌ನ ಒಳಗೆ ಚಪ್ಪಲಿಯನ್ನು ಧರಿಸಿ ಪ್ರವೇಶಿಸಬಹುದು ಮೂಢನಂಬಿಕೆಗಳು ನೂರಾರು ಇವೆ. ಇಂಗ್ಲೆಂಡಿನಲ್ಲಿ ಯಾರಾದರೂ ಒಳ್ಳೆ ಕೆಲಸಕ್ಕೆ ಅಥವಾ ದೂರದ ಪ್ರಯಾಣಕ್ಕೆ ಹೊರಟರೆ ಅವರತ್ತ, ಅವರು ಹೋದ ದಿಕ್ಕಿನಲ್ಲಿ ಶೂ ಎಸೆಯುವುದು ಶುಭ ಹಾರೈಕೆ ಎನ್ನುವ ಪದ್ಧತಿ ಇದೆ. ಓಮನ್‌ನಲ್ಲಿ ಚಪ್ಪಲಿಯನ್ನು ಪೀಠೋಪಕರಣಗಳ ಮೇಲೆ ಇಟ್ಟರೆ ದೊಡ್ಡ ಅಪಶಕುನ, ಮಕ್ಕಳು ಅಪ್ಪಿತಪ್ಪಿ ಈ ಕೆಲಸ ಮಾಡಿದರೆ ಪ್ರಳಯ ಸದೃಶ ಸ್ಥಿತಿ ನಿರ್ಮಾಣವಾಗುತ್ತದೆ. ಇನ್ನೊಬ್ಬರ ಕಣ್ಣು ಅಥವಾ ದೃಷ್ಟಿ ಬೀಳದಿರಲಿ ಎಂದು ಮನೆ ಮೇಲೆ ಹಳೇ ಚಪ್ಪಲಿ ಕಟ್ಟುವುದು ನಮ್ಮಲ್ಲಿ ಸಾಮಾನ್ಯ. ಉತ್ತರ ಭಾರತದಲ್ಲೂ ಈ ಒಂಟಿ ಚಪ್ಪಲಿ ಕಟ್ಟುವುದು ಕಾಣಬಹುದು. ಇದು ಶುಭಸಂಕೇತ ಎಂಬ ನಂಬಿಕೆ. ಯಾರಾದರೂ ಚಪ್ಪಲಿ ತೋರಿಸಿದರೆ ಅವರ ಬಗ್ಗೆ ಕೋಪವನ್ನು ತೋರಿಸುತ್ತದೆ.

ಈ ಪಾದರಕ್ಷೆಗಳನ್ನು ಬಹಳ ಪರಿಣಾಮಕಾರಿಯಾಗಿ ಬಳಸಿರುವವರು ಪ್ರಾಯಶಃ ಸಿನಿಮಾ ರಂಗದವರು. ಹಲವಾರು ಸಿನಿಮಾಗಳಲ್ಲಿ ನಾಯಕನನ್ನು ಪರಿಚಯ ಮಾಡಿಸಲು ಪ್ರಾರಂಭದಲ್ಲಿ ಒಳ್ಳೆಯ ಪಾದರಕ್ಷೆ ಧರಿಸಿರುವ ಪಾದದಿಂದ ಪ್ರಾರಂಭಿಸಿ ನಿಧಾನವಾಗಿ ಮೇಲೆ ಬಂದು ಮುಖ ದರ್ಶನ ಮಾಡಿಸುತ್ತಾರೆ. ಆಗ ಸಿನಿಮಾ ಮಂದಿರದಲ್ಲಿ ಕಿವಿಗಡಚಿಕ್ಕುವಂತೆ ಸೀಟಿ ಸಾಮಾನ್ಯ. ಪಾದರಕ್ಷೆಗೆ ಅಂಥಹ ಪ್ರಭಾವವಿದೆ. ಇನ್ನೂ ಸಭೆ ಸಮಾರಂಭಗಳಲ್ಲಿ ಅವಹೇಳನಕರವಾದ ಮಾತು ಕೇಳಿಬಂದಲ್ಲಿ ಪ್ರೇಕ್ಷಕರಿಂದ ಆಕ್ರೋಶದ ಪಾದರಕ್ಷಾ ಪ್ರಹಾರ ವೇದಿಕೆಗೆ ಬಹಳ ಸಾಮಾನ್ಯ. ಪ್ರಖ್ಯಾತ ಋಷಿಮುನಿಗಳ ಪಾದುಕೆಗಳನ್ನು ವಂದಿಸಲು, ದರ್ಶನಕ್ಕಾಗಿ ಮಠ ಹಾಗೂ ಆಶ್ರಮಗಳಲ್ಲಿ ಇಡುವುದು ಸರ್ವೇ ಸಮಾನ್ಯ.

ಬಿಳಿಗಿರಿರಂಗನ ಬೆಟ್ಟದಲ್ಲಿ ಚಮ್ಮಾರರಿಗೆ ವಿಶೇಷ ಮರ್‍ಯಾದೆ. ಒಂದು ಐತಿಹ್ಯದ ಪ್ರಕಾರ ಸ್ವಾಮಿಯು ಬೇಟೆಗೆ ಹೋದಾಗ ಅವನ ಪಾದದ ಗುರುತನ್ನು ನೋಡಿದ ಗ್ರಾಮಸ್ಥರು ಅಂದಿನಿಂದ ಎರಡು ಗ್ರಾಮದ ಚಮ್ಮಾರರು ಎರಡು ಬೃಹದಾಕಾರದ ಪಾದರಕ್ಷೆಯನ್ನು ತಯಾರಿಸುತ್ತಾರೆ. ಪ್ರತಿ ವರ್ಷ ಒಂದು ಗ್ರಾಮದವರು ಎಡಗಾಲಿನ ಹಾಗೂ ಇನ್ನೊಂದು ಗ್ರಾಮದವರು ಬಲಗಾಲಿನ ಪಾದರಕ್ಷೆ ತಯಾರಿಸುತ್ತಾರೆ. ವಿಶೇಷವೆಂದರೆ ಇವರಿಬ್ಬರೂ ಒಬ್ಬರನ್ನೊಬ್ಬರು ಭೇಟಿ ಮಾಡದೇ ತಯಾರಿಸಿದ ಪಾದರಕ್ಷೆಗಳು ಒಂದೇ ಅಳತೆಯದಾಗಿರುತ್ತದೆ. ಇವುಗಳನ್ನು ಸ್ವಾಭಾವಿಕವಾಗಿ ಮರಣ ಹೊಂದಿದ ಹಸುವಿನ ಚರ್ಮದಿಂದಲೇ ತಯಾರಿಸುತ್ತಾರೆ. ಪ್ರತಿವರ್ಷ ಹೀಗೆ ತಯಾರಿಸಿದ ಪಾದರಕ್ಷೆಯನ್ನು ಮೊದಲು ಸ್ವಾಮಿಗೆ ಅರ್ಪಿಸಿ ನಂತರ ಭಕ್ತರ ದರ್ಶನಕ್ಕೆ ಇಡುತ್ತಾರೆ. ಈ ಪಾದರಕ್ಷೆಗಳಿಂದ ನಮ್ಮ ಶಿರ ತಾಗಿಸಿದರೆ ನಮ್ಮ ಎಲ್ಲಾ ಕಷ್ಟ ಕಾರ್ಪಣ್ಯಗಳು ನೀಗಿ ನಮ್ಮ ಇಷ್ಟಾರ್ಥ ನೆರವೇರುದೆಂಬ ನಂಬಿಕೆ ಬಲವಾಗಿದೆ. ಇದು ಶತಮಾನಗಳಿಂದ ಆಚರಿಸುತ್ತಿರುವ ಪದ್ಧತಿ.

ಹೀಗೆ ಪಾದರಕ್ಷೆಗಳು ಅನಾದಿ ಕಾಲದಿಂದಲೂ ಬಳಕೆಗೆ ಬಂದಿದ್ದು, ದಿನೇ ದಿನೇ ಇದರ ಜನಪ್ರಿಯತೆ ಅಧಿಕವಾಗುತ್ತಿದೆ. ಕರ್ನಾಟಕದಲ್ಲಿ ಇದರ ಬೆಳವಣಿಗೆಗೆ ಅನುಕೂಲವಾಗುವಂತೆ ಅಡಕ ಎಂಬ ಭಾರಿ ಸಂಸ್ಥೆ ಕೆಲಸ ಮಾಡುತ್ತಿದ್ದು, ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸುತ್ತಿರುವುದಲ್ಲದೆ ಅವರ ಸರಕುಗಳನ್ನು ಮಾರಾಟ ಮಾಡುತ್ತಿವೆ. ಇದು ಬಹಳ ಜನಪ್ರಿಯವಾದ ಒಂದು ಸಂಸ್ಥೆ ಎನಿಸಿದೆ. ದೇವಸ್ಥಾನಗಳಲ್ಲಿ ಚಪ್ಪಲಿ ಕಳುವಾದರೆ ಯಾರೂ ಬೇಸರಿಸುವುದಿಲ್ಲ. ಒಂದು ಪೀಡೆ ಅಥವಾ ಕಂಟಕ ಕಳೆಯಿತು ಎಂದು ನಿಟ್ಟುಸಿರು ಬಿಡುತ್ತಾರೆ. ಪಾದರಕ್ಷೆಗಳ ಬಗೆಗೆ ಬೇಸರ ಬೇಡ ನೀವೇನಂತೀರಿ ?

-ಕೆ. ರಮೇಶ್

9 Responses

  1. ಉತ್ತಮ ಮಾಹಿತಿಯನ್ನು ಒಳಗೊಂಡಲೇಖನ…ಪಡಿಮೂಡಿಸಿರುವ ರೀತಿ ಸೊಗಸಾಗಿದೆ..ಧನ್ಯವಾದಗಳು ರಮೇಶ್ ಸಾರ್.

  2. Padma Anand says:

    ಪಾದುಕಾ ಪುರಾಣ ಎಲ್ಲಾ ವಿವರಗಳನ್ನೂ ಒಳಗೊಂಡು ಸೊಗಸಾದ ನಿರೂಪಣೆಯಲ್ಲಿ ಸಾಗಿ ಬಂದಿದೆ. ಅಭಿನಂದನೆಗಳು.

  3. Krishnaprabha M says:

    ಒಳ್ಳೆಯ ಮಾಹಿತಿಪೂರ್ಣ ಬರಹ

  4. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಬರಹ

  5. Hema says:

    ಎಂದಿನಂತೆ, ಚೆಂದದ, ಸೊಗಸಾದ ನಿರೂಪಣೆಯ ಬರಹ.

  6. Anonymous says:

    ಎಲ್ಲರಿಗೂ ಅಭಿನಂದನೆಗಳು. ಯು

  7. ಶಂಕರಿ ಶರ್ಮ says:

    ಚಪ್ಪಲಿ ಪುರಾಣ ಸೊಗಸಾಗಿದೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಚಮ್ಮಾರರು ತಯಾರಿಸಿ ಸ್ವಾಮಿಗೆ ನೀಡುವ ವಿಶೇಷ ಚಪ್ಪಲಿಯ ಕುರಿತ ಮಾಹಿತಿ ವಿಶೇಷವೆನಿಸಿತು!

  8. Padmini Hegade says:

    ಚಪ್ಪಲಿ ಪುರಾಣ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: