ಮಲೆನಾಡಿನ ಜೀವನಾಡಿಗಳು ಅಂಕ-3: ‘ತುಂಗಾ ಪಾನಂ ಗಂಗಾ ಸ್ನಾನಂ’
‘ಇಳಿದು ಬಾ ತಾಯೆ ಇಳಿದು ಬಾ’.. ಪಶ್ಚಿಮ ಘಟ್ಟದ ವರಾಹ ಪರ್ವತದಲ್ಲಿರುವ ಗಂಗಾಮೂಲದಿಮದ ಜೊತೆಜೊತೆಯಾಗಿ ಉಕ್ಕಿ ಬರುವ ಮಲೆನಾಡಿನ ಜೀವ ನದಿಗಳು – ತುಂಗಾ, ಭದ್ರಾ, ನೇತ್ರಾವತಿ. ಈ ತ್ರಿವಳಿ ಸಹೋದರಿಯರ ಜನ್ಮರಹಸ್ಯ ತಿಳಿಯೋಣ ಬನ್ನಿ. ವಿಷ್ಣುವಿನ ಮೂರನೆಯ ಅವತಾರವಾದ ವರಾಹನು ಅಸುರನಾದ ಹಿರಣ್ಯಾಕ್ಷನನ್ನು ಸಂಹರಿಸಿ ಈ ಪರ್ವತದ ಗಿರಿಶಿಖರಗಳ ಮೇಲೆ ವಿಶ್ರಮಿಸುವಾಗ, ಅವನ ಹಣೆಯಿಂದ ಹರಿದ ಬೆವರಿನ ಧಾರೆಯಿಂದ ಉದ್ಭವಿಸಿದವರೇ – ತುಂಗೆ, ಭದ್ರೆ ಹಾಗೂ ನೇತ್ರಾವತಿಯರು. ವರಾಹನ ಎಡ ಭಾಗದ ಹಣೆಯಿಂದ ಇಳಿದು ಬಂದವಳು ತುಂಗೆ, ಬಲಬದಿಯಿಂದ ಹರಿದು ಬಂದವಳು ಭದ್ರೆ ಹಾಗೂ ವರಾಹನ ನೇತ್ರಗಳಿಂದ ಧಾರಾಕಾರವಾಗಿ ಹರಿದವಳು ನೇತ್ರಾವತಿ.
ಈ ಸಹೋದರಿಯರಲ್ಲಿ ಮೊದಲನೆಯವಳಾದ ತುಂಗೆಯ ಮತ್ತೊಂದು ನಾಮಧೇಯ ಪಂಪಾ. ಬ್ರಹ್ಮನ ಮಾನಸ ಪುತ್ರಿಯಾದ ಪಂಪ ಶಿವನನ್ನು ವರಿಸಲು ತಪಗೈದ ಪುಣ್ಯಕ್ಷೇತ್ರದಲ್ಲಿ ಜನಿಸಿದ ತುಂಗೆಗೆ ಪಂಪಾ ಎಂಬ ಹೆಸರು ಬಂದಿತು. ತುಂಗೆಯ ನೀರು ಎಳನೀರಿನಂತೆ ಸವಿಯಾಗಿರುವುದರಿಂದ ‘ತುಂಗಾ ಪಾನಂ ಗಂಗಾ ಸ್ನಾನಂ’ ಎಂಬ ನಾಣ್ಣುಡಿಯೂ ಪ್ರಚಲಿತವಾಯಿತು. ಗಂಗಾ ಮೂಲದಲ್ಲಿ ಜನಿಸಿದ ತುಂಗೆಯು ತಾನು ಸಾಗುವ ಹಾದಿಯಲ್ಲಿ ಎದುರಾಗುವ ಎಲ್ಲಾ ಹಳ್ಳಕೊಳ್ಳಗಳನ್ನೂ ತನ್ನ ಉಡಿಯಲ್ಲಿ ತುಂಬಿಕೊಂಡು ಮುಂದೆ ನಡೆಯುವಳು. ಇವಳು ಹರಿದಲ್ಲೆಲ್ಲಾ ದಯೆ, ಕರುಣೆ, ಪ್ರೀತಿಯನ್ನು ಧಾರೆ ಎರೆಯುವಳು. ಒಮ್ಮೆ ಇವಳ ದಡದಲ್ಲಿ ಅಚ್ಚರಿಯನ್ನುಂಟು ಮಾಡುವ ಘಟನೆಯೊಂದು ನಡೆದಿತ್ತು. – ಬಿಸಿಲಿನಲ್ಲಿ ಬಸವಳಿದ ಕಪ್ಪೆಯೊಂದನ್ನು ಕಂಡ ಹಾವು ತನ್ನ ಹೆಡೆಯನ್ನು ಬಿಚ್ಚಿ ಕಪ್ಪೆಗೆ ರಕ್ಷಣೆ ನೀಡಿತ್ತು. ಈ ಅಪರೂಪದ ದೃಶ್ಯವನ್ನು ಕಂಡ ಶಂಕರರು ಆಜನ್ಮವೈರಿಗಳಾದ ಕಪ್ಪೆ ಮತ್ತು ಹಾವಿನ ನಡುವಿನ ಮಧುರ ಬಾಂಧವ್ಯವನ್ನು ನೋಡಿ, ಆ ಸ್ಥಳವು ವಿಶಿಷ್ಟವಾದ ಕ್ಷೇತ್ರವಾಗಿರಬಹುದೆಂದು ಭಾವಿಸಿ, ಅಲ್ಲಿಯೇ ಶಾರದಾ ಪೀಠವನ್ನು ಸ್ಥಾಪಿಸಿದರು. ಮಂಡನಮಿಶ್ರರ ಮಡದಿ ಉಮಾ ಭಾರತಿಯವರ ವಿದ್ವತ್ತನ್ನು ಗುರುತಿಸಿ, ಅವರ ನೆನಪಿಗಾಗಿ ವಿದ್ಯಾದೇವತೆಯಾದ ಶಾರದಾ ಪೀಠವನ್ನು ಸ್ಥಾಪಿಸಿದರೆಂಬ ಮಾಹಿತಿಯೂ ಇದೆ. ಶೃಂಗೇರಿಯಲ್ಲಿರುವ ಮತ್ತೊಂದು ವಿಶಿಷ್ಟವಾದ ದೇಗುಲ ವಿದ್ಯಾಶಂಕರ ದೇವಾಲಯ. ಇಲ್ಲಿ ರಾಶಿ ಸೂಚಕ ಕಂಬಗಳಿವೆ. ಸೂರ್ಯ ಯಾವ ರಾಶಿಯಲ್ಲಿರುತ್ತಾನೋ ಆಯಾ ರಾಶಿಸೂಚಕ ಕಂಬಗಳ ಮೇಲೆ ಪ್ರಥಮ ಉಷಾ ಕಿರಣಗಳು ಬೀಳುವುದು. ಶಾರದೆಯ ಮಡಿಲಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮಂದಿ ಒಂದೆಡೆಯಾದರೆ, ತುಂಗೆಯ ತೀರದಲ್ಲಿ ಕುಳಿತು ಮೀನುಗಳಿಗೆ ಅಕ್ಕಿ, ಮಂಡಕ್ಕಿ ಎರಚುವವರು ಇನ್ನೊಂದೆಡೆ. ಶೃಂಗೇರಿಯ ಸಮೀಪದಲ್ಲಿರುವ ಸಿರಿಮನೆ ಜಲಪಾತ ಪ್ರವಾಸಿಗರ ಕಣ್ಮನ ತಣಿಸುವಳು. ಈ ಉಪನದಿಯೂ ಮುಂದೆ ತುಂಗೆಯ ಒಡಲನ್ನು ಸೇರುವಳು.
ಶೃಂಗೇರಿಯಿಂದ ತೀರ್ಥಹಳ್ಳಿಗೆ ಪಯಣಿಸುವ ಈ ಲಾವಣ್ಯವತಿಯ ಮುಡಿಯನ್ನು ಕಾಫಿ, ಏಲಕ್ಕಿ ಹಾಗೂ ಮೆಣಸು, ಹಾಗೂ ಭತ್ತ, ತೆಂಗು ಕಂಗಿನ ತೋಟಗಳು ಸಿಂಗರಿಸುವುವು. ಇವಳು ಸಾಗಿದೆಡೆಯಲ್ಲೆಲ್ಲಾ ಹಚ್ಚ ಹಸಿರುಡುಗೆಯನ್ನು ಭೂದೇವಿಗೆ ಉಡಿಸುವಳು. ತೀರ್ಥಹಳ್ಳಿಯ ಸ್ಥಳ ಪುರಾಣವು ತುಂಗೆಯ ದಿವ್ಯ ಶಕ್ತಿಯನ್ನು ಸಾರುತ್ತಿವೆ. ಪರಶುರಾಮನು, ತಂದೆ ಜಮದಗ್ನಿಯ ಆದೇಶವನ್ನು ಪಾಲನೆ ಮಾಡಲು, ತಾಯಿ ರೇಣುಕೆಯ ಶಿರವನ್ನು ಕಡಿದು, ರಕ್ತ ಸಿಕ್ತವಾದ ಕೊಡಲಿಯನ್ನು ಹಲವು ನೀರಿನ ಕುಂಡಗಳಲ್ಲಿ ತೊಳೆದನಂತೆ. ಆದರೆ ಆ ಕೊಡಲಿಗಂಟಿದ ರಕ್ತ ಸ್ವಚ್ಛವಾಗಲೇ ಇಲ್ಲ. ಕೊನೆಗೆ ತುಂಗಾ ನದಿಯಲ್ಲಿ ಕೊಡಲಿಯನ್ನು ತೊಳೆದಾಗ, ರಕ್ತದ ಕಲೆಗಳು ಮಾಯವಾದವಂತೆ. ಅಂದಿನಿಂದ ಈ ಸ್ಥಳಕ್ಕೆ ತೀರ್ಥಹಳ್ಳಿ ಎಂಬ ಹೆಸರು ಬಂದಿತಂತೆ. ತೀರ್ಥಹಳ್ಳಿಯಿಂದ ಶಿವಮೊಗ್ಗಾದೆಡೆಗೆ ಸಾಗುವ ತುಂಗೆಯ ತಟದಲ್ಲಿ ಇನ್ನೂ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಇವಳ ಸಿಹಿನೀರಿನ ರುಚಿಗೆ ಮನಸೋತು, ವಿದೇಶಗಳಿಂದ ಹಿಂಡು ಹಿಂಡಾಗಿ ವಲಸೆ ಬರುವ ಹಕ್ಕಿಗಳನ್ನು ಮಂಡಗದ್ದೆ ಪಕ್ಷಿಧಾಮದಲ್ಲಿ ನೋಡಬಹುದು. ಆದರೆ ತುಂಗಾ ಜಲಾಶಯದ ಎತ್ತರವನ್ನು ಹೆಚ್ಚಿಸಿದ ಮೇಲೆ, (Upper Tunga Project) ಈ ಪಕ್ಷಿಧಾಮದ ಆಸರೆಯಾದ ನಡುಗಡ್ಡೆಯಲ್ಲಿ ಮರಗಳೂ ಅರ್ಧ ಮುಳುಗಿ ವಲಸೆ ಬರುವ ಪಕ್ಷಿಗಳ ಸಂಖ್ಯೆ ಕ್ಷೀಣಿಸಿದೆ.
ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಬರುತ್ತಿರುವ ಆನೆಗಳ ಹಿಂಡನ್ನು ನೋಡಿ, ಇವುಗಳ ನೆಲೆವೀಡು ತುಂಗೆಯ ತೀರದಲ್ಲಿರುವ ಸಕ್ರೆ ಬೈಲಿನಲ್ಲಿ. ಮುಂಜಾನೆ ತುಂಗಾನದಿಯಲ್ಲಿ ಜಲಕ್ರೀಡೆಯಾಡಿ, ಮಾವುತರು ನೀಡುವ ಉಪಹಾರ ಸೇವಿಸಿ, ನಂತರ ಭದ್ರಾ ಅಭಯಾರಣ್ಯದಲ್ಲಿ ಮರದ ದಿಮ್ಮಿಗಳನ್ನು ಸಾಗಿಸುವ ಕೆಲಸ ಮಾಡುವುವು. ಮುಂದೆ ಮುಂದೆ ಸಾಗುವ ತುಂಗೆಗೆ ಗಾಜನೂರು ಬಳಿ ಒಂದು ಜಲಾಶಯವನ್ನು ನಿರ್ಮಿಸಲಾಗಿದೆ. ಈ ಜಲಾಶಯದ ನೀರಿನಿಂದ ವರ್ಷವಿಡೀ ಭತ್ತ ಬೆಳೆಯುವ ಶಿವಮೊಗ್ಗಾ ಜಿಲ್ಲೆಗೆ ‘ಭತ್ತದ ಕಣಜ’ ಎಂಬ ಹೆಸರು ಬಂದಿದೆ. ಸಿಹಿಮೊಗೆಯೆಂಬ ನಾಡಿನಲ್ಲಿ ದೇವಭಾಷೆ ಸಂಸ್ಕೃತವನ್ನು ಮಾತಾಡುವ ಪಂಡಿತರೂ ತುಂಗೆಯ ತೀರದಲ್ಲಿರುವ ಮತ್ತೂರಿನಲ್ಲಿರುವರು. ಶಿವಮೊಗ್ಗೆಯಿಂದ ಮುಂದೆ ಚಲಿಸುವ ತುಂಗೆ ತನ್ನ ಒಡಹುಟ್ಟಿದ ಸೋದರಿ ಭದ್ರೆಯ ನೆನಪಾಗಿ ಅವಳನ್ನೇ ಧ್ಯಾನಿಸುತ್ತಾ ಕೂಡಲಿಯೆಡೆ ಧಾವಿಸುವಳು.
ತುಂಗೆ ಸಾಗುವ ಹಾದಿಯನ್ನು ಕಂಡವಳು, ತುಂಗೆಯೊಂದಿಗೆ ಇದ್ದ ನನ್ನ ಒಡನಾಟವನ್ನು ನೆನಪು ಮಾಡಿಕೊಳ್ಳುತ್ತಾ ಮನೆಗೆ ಹಿಂತಿರುಗಿದೆ. ನಾನು ಪ್ರೌಢಶಾಲೆಯಲ್ಲಿ ಓದುತ್ತಿರುವಾಗ, ಅಂದರೆ ಸುಮಾರು ಅರವತ್ತು ವರ್ಷಗಳ ಹಿಂದೆ, ಕುಟುಂಬದವರೊಂದಿಗೆ ಗಂಗಾಮೂಲವನ್ನು ನೋಡಲು ಐದಾರು ಕಿ.ಮೀ. ಚಾರಣದ ಹಾದಿಯಲ್ಲಿ ನಡೆದಾಗ, ಕಂಡಿದ್ದು ದಟ್ಟವಾದ ಅರಣ್ಯ ಪ್ರದೇಶ, ರಕ್ತ ಹೀರುವ ಜಿಗಣೆಗಳು ಹಾಗೂ ಜಿಂಕೆ, ಮೊಲ, ಕಾಡುಕೋಣ ಮುಂತಾದ ಕಾಡುಪ್ರಾಣಿಗಳು. ಆಗ ಅಲ್ಲಿ ರಸ್ತೆ ಮಾಡುತ್ತಿದ್ದ ಕಾರ್ಮಿಕರು, ಹಾದಿ ತಪ್ಪಿದ್ದ ನಮಗೆ ಆಶ್ರಯ ನೀಡಿ, ಆಹಾರವನ್ನೂ ನೀಡಿದ್ದರು, ಸಿಕ್ಕಾಪಟ್ಟೆ ಛಳಿಗೆ ನಡುಗುತ್ತಾ ರಾತ್ರಿಯಿಡೀ ಬೆಂಕಿಯ ಮುಂದೆ ಕುಳಿತವರಿಗೆ ಹುಲಿಯ ಘರ್ಜನೆ ಕೇಳಿ ಭಯಭೀತರಾಗಿ ಯಾವಾಗ ಬೆಳಕು ಹರಿದೀತೋ ಎಂದು ಕಾತರದಿಂದ ಕಾಯುತ್ತಿದ್ದುದು ನೆನಪಾಯಿತು. ಮಾರನೆಯ ದಿನ ಗಂಗಾಮೂಲವನ್ನು ನೋಡಿ ಹಿಂತಿರುಗಿದ್ದೆವು. ಮುಂದೆ ಕೆಲಸದ ನಿಮಿತ್ತ ಶಿವಮೊಗ್ಗಾಕ್ಕೆ ಬಂದಾಗ ಮತ್ತೊಮ್ಮೆ ಗಂಗಾಮೂಲವನ್ನು ಹುಡುಕಿ ಹೋದೆ. ಕುದುರೆಮುಖದ ಬಳಿಯಿದ್ದ ಈ ಪವಿತ್ರ ಕ್ಷೇತ್ರಕ್ಕೆ ಉತ್ತಮವಾದ ರಸ್ತೆ ಮಾರ್ಗವಿತ್ತು. ಅರ್ಧ ಕಿ.ಮೀ ನಡೆದಾಗ, ಬೆಟ್ಟದ ಗುಹೆಯೊಂದರಲ್ಲಿ ಜನಿಸುವ ಈ ತ್ರಿವಳಿ ನದಿಗಳನ್ನು ಕಂಡೆವು. ಗುಹೆಯಿಂದ ಹೊರಬರುವ ಈ ನೀರಿನ ಝರಿಗಳು ಕವಲೊಡೆದು ಬೇರೆಬೇರೆ ಹಾದಿಯಲ್ಲಿ ಹೊರಟಿದ್ದವು. ತುಂಗೆ ಸಾಗುವ ಸ್ಥಳದಲ್ಲಿ ಒಂದು ಪುಟ್ಟದಾದ ಕೊಳ ನಿರ್ಮಾಣವಾಗಿತ್ತ್ತು, ಅಲ್ಲಿದ್ದ ಶಿವಲಿಂಗದ ಮೇಲೆ ಸದಾ ಜಲಾಭಿಷೇಕವನ್ನು ಮಾಡುತ್ತಿದ್ದಳು ತುಂಗೆ. ಹತ್ತಾರು ವರ್ಷಗಳು ಕಳೆದ ಮೇಲೆ ಮತ್ತೊಮ್ಮೆ ಗಂಗಾಮೂಲದ ಹಾದಿಯಲ್ಲಿ ಪಯಣಿಸುವ ಅವಕಾಶ ಸಿಕ್ಕಿತ್ತು. ಈಗ ಇದನ್ನು ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯ ಎಂದು ಘೋಷಿಸಲಾಗಿತ್ತು. ಅರಣ್ಯ ಇಲಾಖೆಯವರ ಅಪ್ಪಣೆ ಪಡೆದೇ ಈ ಪ್ರದೇಶದೊಳಗೆ ಪ್ರವೇಶಿಸಬೇಕಿತ್ತು. ಗಂಗಾಮೂಲ ಎಂಬ ಬೋರ್ಡ್ ಹಾಕಿದ್ದರು, ತಂತಿಬೇಲಿ ಇತ್ತು, ಗೇಟಿಗೆ ಬೀಗ ಹಾಕಿತ್ತು, ಅಲ್ಲಿ ಕಂಡದ್ದು ಬೋಳು ಬೋಳಾದ ಅರಣ್ಯ ಪ್ರದೇಶ, ಸುಡು ಬಿಸಿಲು. ಎಲ್ಲಿ ಮಾಯವಾದವು ಆ ದಟ್ಟ ಅಡವಿ, ಅರಣ್ಯ ಮೃಗಗಳು? ಪ್ರಗತಿಯತ್ತ ಧಾಪುಗಾಲು ಹಾಕುತ್ತಿರುವ ನಾವು ಪ್ರಕೃತಿ ಸಂರಕ್ಷಣೆಯನ್ನು ಮರೆತೇ ಬಿಟ್ಟಿದ್ದೇವೆ ಅಲ್ಲವೇ?
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ಮಲೆನಾಡಿನ ಜೀವನಾಡಿಗಳ ಪರಿಚಯಾತ್ಮಕ ಲೇಖನ..
ಅಂಕ ಮೂರರವರಗೆ ಮುಂದುವರಸಿ ಮುಕ್ತಾಯ ಗೊಳಿಸಿದ್ಧಾರೆ..ಅಂತಿಮವಾಗಿ.. ಮೊದಲು ನೋಡಿದಾಗ ಇದ್ದ ಅರಣ್ಯ ಪ್ರದೇಶ ಈಗ ಆಗಿರುವ ಸ್ಥಿತಿಯ ಬಗ್ಗೆ..ಉಲ್ಲೇಖ ಮಾಡಿದ್ದಾರೆ..ಪ್ರಕೃತಿ ರಕ್ಷಣೆ ಬಗ್ಗೆ ಎತ್ತಿರುವ ಉದ್ಗಾರ ..ಯೋಚಿಸುವಂತಿದೆ..ಧನ್ಯವಾದಗಳು ಮೇಡಂ..
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ನಾಗರತ್ನ ಮೇಡಂ
ಮಲೆನಾಡಿನ ಜೀವ ನಾಡಿಗಳು ಇನ್ನೂ ಮುಕ್ತಾಯವಾಗಿಲ್ಲ ಇನ್ನು ಮೂರು ಅಂಕಗಳು ಇವೆ
ತುಂಗಾ ನದಿಯ ಸಿಹಿ ಸ್ವಾದವನ್ನು ನಿಮ್ಮ ಲೇಖನದಲ್ಲಿ ಸವಿಯುತ್ತಲೇ ಮುಂದೆ ಸಾಗಿ, ಸಾಹಸಮಯ ಅನುಭವದ ಕೌತುಕವನ್ನೂ ಕಂಡು ಮುಂದೆ ಸಾಗಿದಾಗ, ಕೊನೆಯ ಸಾಲುಗಳ ವಿಷಾದಕ್ಕೆ ಮನ ಮೌನವಾಯಿತು. ಅತ್ಯಂತ ಸುಂದರವಾದ ನಿರೂಪಣೆಗಾಗಿ ಅಭಿನಂದನೆಗಳು.
ಬಹಳ ಸುಂದರವಾಗಿತ್ತು ಲೇಖನ ಮಾಲೆ
ಎಂದಿನಂತೆ, ಮಾಹಿತಿಯುಕ್ತವಾದ, ಸೊಗಸಾದ ನಿರೂಪಣೆಯ ಲೇಖನ ಮಾಲಿಕೆ..ಇಷ್ಟವಾಯಿತು..
ಮಲೆನಾಡಿನ ಜೀವನಾಡಿಗಳಾದ ನದಿಗಳ ಲೇಖನಮಾಲೆಯು ಬಹಳ ಆಸಕ್ತಿದಾಯಕವಾಗಿದೆ. ತುಂಗೆಯ ಸಿಹಿನೀರಿನ ಸವಿಯನ್ನು ನಮಗೂ ತಲಪಿಸಿ, ಪ್ರಸ್ತುತ ಅರಣ್ಯಗಳ ನಾಶವನ್ನು ಕಣ್ಮುಂದೆ ತಂದಿರಿಸಿ ಮುಕ್ತಾಯಗೊಂಡ ಲೇಖನವು ಮನತಟ್ಟಿತು!
ಪರಿಚಿತ ವಿಷಯಗಳ ಸ್ವಾರಸ್ಯಕರ ನಿರೂಪಣೆ ಇಷ್ಟವಾಯಿತು.
Thanks for the informative article Dr.sajjan. I too feel bad when I pass through kudremukh.
ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗಳಿಗೆ