ವಾಟ್ಸಾಪ್ ಕಥೆ 15 : ಆಪತ್ತಿಗಾದವರನ್ನು ದೂರಬಾರದು.
ಕಾಡಿನಲ್ಲಿ ಒಮ್ಮೆ ಒಂದು ನರಿಯನ್ನು ಬೇಟೆನಾಯಿಗಳು ಬೆನ್ನಟ್ಟಿ ಓಡಿಸಿಕೊಂಡು ಬರುತ್ತಿದ್ದವು. ನರಿಯು ಪ್ರಾಣಭಯದಿಂದ ಎಲ್ಲಿಯಾದರೂ ತಲೆಮರೆಸಿಕೊಳ್ಳಲು ಆಶ್ರಯ ಸಿಕ್ಕೀತೇ ಎಂದು ತನ್ನ ಕಾಲುಗಳು ಎಷ್ಟು ಜೋರಾಗಿ ಹೋಗಬಲ್ಲವೋ ಅಷ್ಟು ವೇಗವಾಗಿ ಓಡುತ್ತಿತ್ತು. ಕಣ್ಣಿಗೆ ಒಂದು ಕುರುಚಲು ಗಿಡಗಳು ಒತ್ತಾಗಿ ಬೆಳೆದಿದ್ದ ಪೊದೆ ಕಾಣಿಸಿತು. ತಕ್ಷಣ ನರಿಯು ಅದರೊಳಕ್ಕೆ ನುಗ್ಗಿ ಅಡಗಿ ಕುಳಿತಿತು. ಹೊರಗಿನವರಿಗೆ ಅದು ಕಾಣಿಸುತ್ತಿರಲಿಲ್ಲ. ಹೀಗಾಗಿ ಬೇಟೆನಾಯಿಗಳು ಮುಂದಕ್ಕೆ ಹೋಗಿಬಿಟ್ಟವು. ಪ್ರಾಣವಂತೂ ಉಳಿಯಿತು. ಅವಸರದಲ್ಲಿ ಪೊದೆಯೊಳಗೆ ನುಗ್ಗಿ ಬಂದದ್ದರಿಂದ ಸುತ್ತಮುತ್ತವಿದ್ದ ಮುಳ್ಳು ಕಂಟಿಗಳು ಅದರ ಮೈಯಿಗೆ ಚುಚ್ಚಿಕೊಂಡಿದ್ದವು. ಇದರಿಂದಾಗಿ ಕೆಲವು ಕಡೆ ತರಚಿಕೊಂಡು ನೋವಾಗುತ್ತಿತ್ತು.
ನರಿ ”ಛೀ..ನಿಮ್ಮ ಆಶ್ರಯಕ್ಕೆ ಬಂದವರನ್ನು ನೀವು ಹೀಗೇ ಏನು ನೋಯಿಸುವುದು. ನಿಮ್ಮ ಮುಳ್ಳುಗಳು ಚುಚ್ಚಿಕೊಂಡು ನನಗೆಷ್ಟು ನೋವಾಗಿದೆ ಗೊತ್ತೆ’.” ಎಂದು ಕೋಪದಿಂದ ಅಬ್ಬರಿಸಿತು.
ನರಿಯ ಮಾತುಗಳನ್ನು ಕೇಳಿ ಮುಳ್ಳುಕಂಟಿಗಳು ”ಸುಮ್ಮನೆ ತಲೆಹರಟೆ ಮಾಡದಿರು. ನೀನಾಗಿಯೇ ಪ್ರಾಣಭಯದಿಂದ ಓಡಿಬಂದು ಇಲ್ಲಿ ನುಗ್ಗಿದೆ. ನಾವು ನಿನ್ನನ್ನು ಕಾಪಾಡಿದೆವು. ನಾವೇನು ನಿನ್ನನ್ನು ಕರೆದಿದ್ದೆವೇ? ನಿನಗೆ ಉಪಕಾರ ಮಾಡಿದರೂ ನೀನು ನಮ್ಮನ್ನೇ ದೂಷಿಸುತ್ತಿದ್ದೀಯೆ. ನಾವಿಲ್ಲದಿದ್ದರೆ ಇಷ್ಟು ಹೊತ್ತಿಗಾಗಲೇ ಬೇಟೆನಾಯಿಗಳು ನಿನ್ನನ್ನು ಕೊಂದು ತಿಂದು ಹಾಕಿಬಿಡುತ್ತಿದ್ದವು. ಆಪತ್ತಿಗಾದ ನಮ್ಮನ್ನು ದೂರುವುದು ನಿನಗೆ ಒಳ್ಳೆಯದಲ್ಲ. ಆಯಿತು. ಈಗಂತೂ ಬಂದಿದ್ದೀಯೆ. ನಿನಗೆ ಅನುಕೂಲವೆಂದು ತೋರಿದ ತಕ್ಷಣ ಬಾಯಿಮುಚ್ಚಿಕೊಂಡು ಜಾಗಖಾಲಿಮಾಡು” ಎಂದು ಹೇಳಿದವು.
ಜಗಳಗಂಟಿ ನರಿಗೆ ತನ್ನ ತಪ್ಪು ಗೊತ್ತಾಯಿತು. ಇನ್ನೇನಾದರೂ ಮಾತನಾಡುವುದು ಅಪಾಯಕ್ಕೆ ಕಾರಣವಾದೀತೆಂದು ತೆಪ್ಪಗೆ ಬಾಲ ಮುದುರಿಕೊಂಡು ಹೊರಟುಹೋಯಿತು.
–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಚೆನ್ನಾಗಿದೆ
ಉಪಕಾರ ಮಾಡಿದವರನ್ನು ನಿಂದಿಸುವುದು ಸಲ್ಲ…ಉತ್ತಮ ನೀತಿಕಥೆಗೆ ಎಂದಿನಂತೆ ನಾಗರತ್ನ ಮೇಡಂ ಅವರ ಚಂದದ ರೇಖಾಚಿತ್ರ..ಧನ್ಯವಾದಗಳು.
ಧನ್ಯವಾದಗಳು ನಯನ ಹಾಗೂ ಶಂಕರಿ ಮೇಡಂ
ಉತ್ತಮ ನೀತಿಯನ್ನೊಳಗೊಂಡ ಸುಂದರ ಕಥೆ.
ಧನ್ಯವಾದಗಳು ಪದ್ಮಾ ಮೇಡಂ