ಪುಸ್ತಕದ ಪರಿಚಯ : ‘ಮನಸ್ಸಿನ ಅಲೆಗಳ ಉಯ್ಯಾಲೆ’ ಲೇಖಕರು: ಎನ್.ವ್ಹಿ. ರಮೇಶ್
ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿಗಳಾದ ಎನ್.ವ್ಹಿ. ರಮೇಶ್ ಅವರು ಏಪ್ರಿಲ್ 1 ರಂದು ಬಿಡುಗಡೆ ಮಾಡಿದ ‘ಮನಸ್ಸಿನ ಅಲೆಗಳ ಉಯ್ಯಾಲೆ’ ಪುಸ್ತಕ ಕೊಂಡು ಓದಿ ಬಹಳ ಖುಷಿಪಟ್ಟೆ. ಈ ಪುಸ್ತಕದಲ್ಲಿ ಅವರ 5 ಕಥೆಗಳು ಹಾಗೂ 9 ಪ್ರಬಂಧಗಳು ಪ್ರಕಟವಾಗಿವೆ. ಇದನ್ನು ಓದಲು ಬಹಳ ಖುಷಿಯಾಯಿತು. ಅದನ್ನು ಓದುಗರೊಂದಿಗೆ ಹಂಚಿಕೊಳ್ಳಲು ಬಯಸಿದ್ದೇನೆ.
ಇದರ ಮುಖಪುಟದಲ್ಲಿ ಸುಂದರ ವ್ಯಕ್ತಿತ್ವದ ದಂಪತಿಗಳು ಆಸ್ಟ್ರೇಲಿಯಾ ಹಾಗೂ ಥೈಲ್ಯಾಂಡಿನ ಬ್ಯಾಂಕಾಕ್‌ಗಳ ಸುಂದರ ಹಿನ್ನೆಲೆ ದೃಶ್ಯದಲ್ಲಿ ಕಾಣುವುದನ್ನು ಕಂಡಾಗ, ನಮ್ಮಂತಹ ಯುವಜನರಿಗೆ ಒಲುಮೆ, ಉತ್ಸಾಹ ಚಿಮ್ಮುತ್ತವೆ. ಇದಕ್ಕೆ ಮುನ್ನುಡಿ ಬರೆದಿರುವ ಡಾ. ಭೇರ್ಯ ರಾಮ್‌ಕುಮಾರ್ ಹೇಳಿರುವಂತೆ ಮನಸ್ಸಿನ ಅಲೆಗಳ ಉಯ್ಯಾಲೆ ಕೃತಿಯಲ್ಲಿ ಐದು ಕಥೆಗಳಿವೆ. ಒಂಭತ್ತು ಅನುಭವ ಕಥನಗಳಿವೆ.
ಮೊದಲ ಕಥೆ ‘ಹುಳಿದ್ರಾಕ್ಷಿ’ ಇದೊಂದು ಮನೋ ವಿಶ್ಲೇಷಣಾತ್ಮಕ ಕಥೆ. ಮಹೇಶನಿಗೆ ಮೊದಲ ಮದುವೆ ಮುರಿದು ಬಿದ್ದು, ಶಾಂತಿ ಎಂಬಾಕೆಯೊಂದಿಗೆ ಮದುವೆ, ಶಾಂತಿ ಚಿಕ್ಕಂದಿನಿದಲೂ ಸ್ವಾವಲಂಬನೆಯ ಬದುಕು ಕಟ್ಟುವ ಪ್ರೀತಿ, ಮದುವೆ ಜೀವನ ಎಂದರೆ ದೂರ. ಜೊತೆಗೆ ಮದುವೆ ಮುರಿದು ಬಿದ್ದ ವಿಷಯ ತಿಳಿಸದೇ, ತನ್ನನ್ನು ಮದುವೆಯಾಗಿ ಮೋಸ ಮಾಡಿದರೆಂಬ ಕೋಪ. ಎಲ್ಲವೂ ಸೇರಿ ಆಕೆಯ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಇದು ಸಂಸಾರದ ಮೇಲೆ ಪರಿಣಾಮ ಬೀರುತ್ತದೆ. ‘ನೀನಿಲ್ಲದ ನಾನು’ ಕಥೆಯಲ್ಲಿ ಸಂಸಾರದ ಜೀವನದಲ್ಲಿ ಹೆಂಡತಿ ಇಲ್ಲದಿದ್ದರೂ ಬದುಕಬಲ್ಲೆ ಎಂದು ಹೇಳುವ ಪುರುಷ. ತನ್ನ ಪತ್ನಿ ನಾಲ್ಕು ದಿನ ತವರು ಮನೆಗೆ ಹೋದಾಗ, ಅನುಭವಿಸಿದ ಮನೆಯ ಸಮಸ್ಯೆಗಳ ಕಥೆಯನ್ನು ಸುಂದರವಾಗಿ ಹೆಣೆದಿದ್ದಾರೆ. ಮೊಬೈಲ್ ಇಂದು ಜೀವನದ ಬಹು ಭಾಗವನ್ನು ಆವರಿಸಿದೆ. ಮೊಬೈಲ್ ಇಲ್ಲದೇ ಹೋದರೆ ಅವರು ಜನಜೀವನದಿಂದ ಕಣ್ಮರೆಯಾದಂತೆ. ಮೊಬೈಲ್‌ನ ಸಿಲುಕಿದ ಮುದುಕಿಯೊಬ್ಬರು ಮೊಬೈಲ್ ಕಳೆದು ಹೋದಾಗ, ಅನುಭವಿಸಿದ ಆತಂಕದ ಬಗ್ಗೆ, ಮತ್ತೆ ಅದು ಸಿಕ್ಕಾಗ ಪಟ್ಟ ಸಂತೋಷದ ಬಗ್ಗೆ ಸುಂದರವಾಗಿ ಚಿತ್ರಿಸಿದ್ದಾರೆ. ‘ಮೊಬೈಲ್ ರಿಂಗಣಿಸದಿದ್ದಾಗ’, ಕಥೆಯಲ್ಲಿ. ಅದೇ ರೀತಿ ‘ರೇಡಿಯೋ ಜಾಕಿಯ ಮನದಳಲು’ ತನ್ನ ಧ್ವನಿಯ ಮೂಲಕ ಕೇಳುಗ ಪ್ರಪಂಚಕ್ಕೆ ದೊರೆಯಾದ ಜಾಕಿಯೊಬ್ಬನ ಮನಸ್ಸಿನ ತುಮುಲಗಳನ್ನು ಸುಂದರವಾಗಿ ಲೇಖಕರು ಚಿತ್ರಿಸಿದ್ದಾರೆ. ಲೇಖಕ ಎನ್.ವ್ಹಿ.ರಮೇಶ್ ಅವರಿಗೆ ಸರಳವಾಗಿ, ಸುಂದರವಾಗಿ, ಓದುಗರ ಮನ ಮುಟ್ಟುವಂತೆ ಬರೆಯುವ ಕಲೆ ಸಿದ್ದಿಸಿದೆ. ಜೊತೆಗೆ ಆಕಾಶವಾಣಿಯ ಕಾರ್ಯಕ್ರಮ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವುದರಿಂದ ಅವರಿಗೆ ಗ್ರಾಮೀಣ ಜನ ಜೀವನವನ್ನು ಅತ್ಯಂತ ಹತ್ತಿರದಿಂದ ನೋಡುವ ವಿಪುಲ ಅವಕಾಶಗಳು ದೊರೆತಿವೆ.
ಹೀಗಾಗಿ ‘ನನ್ನ ಆರೋಗ್ಯ ಫಸ್ಟ್‌ಕ್ಲಾಸ್’, ‘ಅರವತ್ತರ ನಂತರ ಸುಮ್ನೇ ಕೂತಿರಬೇಕಾ’, ‘ಹರಡದಿರಿ ಸುಳ್ಳು ಸುದ್ದಿ’ ‘ಬದಲಾಗುತ್ತಿರುವ ಮೌಲ್ಯಗಳ ಹಿನ್ನೆಲೆಯಲ್ಲಿ ಜೀವನ’, ‘ಈ ದಿನ ಜನುಮದಿನ‘ದಂತಹ ಸುಂದರ ಅನುಭವ ಕಥನಗಳನ್ನು ಅವರು ಅನುಪಮವಾಗಿ ಚಿತ್ರಿಸಿದ್ದಾರೆ.
ಎನ್.ವ್ಹಿ.ರಮೇಶ್ ಕನ್ನಡ ನಾಡು-ನುಡಿಗಾಗಿ ತಮ್ಮ ಇಡೀ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ. ನೂರಾರು ಸಂಘ-ಸಂಸ್ಥೆಗಳೊಡನೆ ನಿರಂತರ ಸಂಪರ್ಕ ಹೊಂದಿದ್ದಾರೆ. ಇದರಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಡು ಉಜ್ವಲ ಕೃತಿಗಳು ದೊರಕಲಿ ಎಂಬುದೇ ನಮ್ಮ ಹಾರೈಕೆ.
ಆಸಕ್ತರು ಪುಸ್ತಕ ಕೊಳ್ಳಲು ‘ಆಸಕ್ತಿ ಪ್ರಕಾಶನ’ ಮೊ. 9845565238 ನ್ನು ಸಂಪರ್ಕಿಸಬಹುದು.
-ಉಮೇಶ
Nice
ಅರ್ಥಪೂರ್ಣ ವಿಮರ್ಶೆ. ಧನ್ಯವಾದಗಳು
ಕಥಾ ಪರಿಚಯದೊಂದಿಗೆ ಪುಸ್ತಕ ವಿಮರ್ಶೆಯು ಸೊಗಸಾಗಿ ಮೂಡಿಬಂದಿದೆ.
ಪುಸ್ತಕ ಪರಿಚಯ ಚೆನ್ನಾಗಿ ಮೂಡಿಬಂದಿದೆ ಸಾರ್..ಧನ್ಯವಾದಗಳು
ಒಂದು ಒಳ್ಳೆಯ ಪುಸ್ತಕದ ವಿಮರ್ಶಾತ್ಮಕ ಪರಿಚಯ.
ಪುಸ್ತಕ ಪರಿಚಯ ಚೆನ್ನಾಗಿದೆ