ಲಹರಿ

ಮಲೆನಾಡಿನ ಜೀವನಾಡಿಗಳು : ಅಂಕ 1

Share Button


‘ಋಷಿಮೂಲ, ನದಿ ಮೂಲ, ದೇವಮೂಲ ಹುಡುಕಬೇಡಿ’ ಎಂದು ಹಿರಿಯರು ಹೇಳಿದ್ದಾರೆ. ಯಾವುದೋ ಗಿರಿ ಶಿಖರಗಳ ಒಡಲಲ್ಲಿ ಜನಿಸಿ ದಟ್ಟವಾದ ಕಾನನಗಳ ಮಧ್ಯೆ ಹರಿದು ಬರುವಳು ಗಂಗೆ. ಇವಳ ನಾಮಧೇಯ – ತುಂಗೆ, ಭದ್ರೆ, ನೇತ್ರಾವತಿ, ಶರಾವತಿ, ಕಾವೇರಿ ಇತ್ಯಾದಿ. ಬಹುತೇಕ ನದಿಗಳು ಹೆಣ್ಣಾಗಿರುವುದು ಒಂದು ಆಕಸ್ಮಿಕವೇ? ಅಥವಾ ಸೃಷ್ಟಿಯ ರಹಸ್ಯವನ್ನು ಅಡಗಿಸಿಕೊಂಡಿರುವ ನದಿಗಳಿಗೆ ಸೂಕ್ತವಾದ ಹೆಸರೇ? ನಮ್ಮ ಸಂಸ್ಕೃತಿಯಲ್ಲಿ ನದಿಗಳು ಕೇವಲ ನದಿಗಳಲ್ಲ, ಎಲ್ಲರಿಂದ ಪೂಜಿಸಲ್ಪಡುವ ದೇವತೆಯರು, ಎಲ್ಲರ ಹಸಿವನ್ನು ತಣಿಸುವ ಮಾತೆಯರು – ಭದ್ರೆಯ ತೀರದಲ್ಲಿ ನೆಲೆಯಾಗಿರುವ ಅನ್ನಪೂರ್ಣೆ ಶಿವನಿಗೇ ಭಿಕ್ಷೆಯನ್ನು ನೀಡಿದ ಮಹಾಮಾತೆ. ತುಂಗೆಯ ತೀರದಲ್ಲಿರುವ ಶಾರದೆ ಅಜ್ಞಾನವನ್ನು ಕಳೆದು ಜ್ಞಾನವನ್ನು ದಯಪಾಲಿಸುತ್ತಿರುವಳು, ನೇತ್ರಾವತಿ ದಡದಲ್ಲಿ ನೆಲೆಸಿರುವ ಮಂಜುನಾಥನು ಅಧರ್ಮವನ್ನು ತೊಡೆದು ಹಾಕಿ ಧರ್ಮ ಪ್ರಸಾರ ಮಾಡುತ್ತಿರುವನು, ಶರಾವತಿಯ ಮಧ್ಯೆ ನಿಂತಿರುವ ಸಿಗಂಧೂರು ಚೌಡೇಶ್ವರಿ ಅನ್ಯಾಯವನ್ನು ತೊಡೆದು ಹಾಕಿ ನ್ಯಾಯ ಪಸರಿಸುತ್ತಿರುವಳು, ಕಾವೇರಿಯ ಮಡಿಲಲ್ಲಿ ನೆಲೆಯಾಗಿರುವ ಶ್ರೀರಂಗನು ಎಲ್ಲರ ಮನದಲ್ಲಿ ಪ್ರೀತಿಯ ಧಾರೆಯನ್ನು ಹರಿಸುತ್ತಿರುವನು.

ಪ್ರಾಚೀನ ನಾಗರೀಕತೆಗಳೆಲ್ಲ ಅರಳಿರುವುದು ಈ ನದೀ ತೀರಗಳಲ್ಲಿ ಅಲ್ಲವೇ? ಹಿಂದೆ ಊರು ಕೇರಿಗಳೆಲ್ಲ ನದೀ ತೀರದಲ್ಲಿಯೇ ಹುಟ್ಟಿ ಬೆಳೆಯುತ್ತಿದ್ದವು. ಸಿಂಧೂ ನದಿಯ ತೀರದಲ್ಲಿ ವಿಕಾಸ ಹೊಂದಿದ ಹರಪ್ಪ, ಮೊಹೆಂಜೋದಾರೋ ನಮ್ಮ ಅಸ್ಮಿತೆಯಾಗಿ ಉಳಿದಿರುವುವು.. ನೈಲ್ ನದೀ ತೀರದಲ್ಲಿ ಪಸರಿಸಿದ ಇಜಿಪ್ಟ್ ನಾಗರೀಕತೆ, ಟೈಗ್ರಿಸ್ ಮತ್ತು ಯೂಫ್ರೆಟಿಸ್ ನದಿಗಳ ಮಡಿಲಲ್ಲಿ ಬೆಳೆದ ಮೆಸೊಪೊಟೇಮಿಯಾ ನಾಗರೀಕತೆ ಇತ್ಯಾದಿ.

ನದಿಗಳ ಮೂಲ ಕಂಡು ಬೆರಗಾಗದವರು ಯಾರು? ಹನಿ ಹನಿಯಾಗಿ ಒಸರುವ ನೀರು, ಒರತೆಯಾಗಿ, ಝರಿಯಾಗಿ, ಹಳ್ಳಗಳಾಗಿ, ಜಲಪಾತಗಳಾಗಿ ವಿಸ್ತರಿಸುತ್ತಾ ಸಾಗುವ ನದಿಯ ಅದ್ಭ್ಭುತ ಪಯಣ ಎಲ್ಲರಿಗೂ ಅಚ್ಚರಿ ಮೂಡಿಸುವುದು ಸಹಜವೇ. ನದಿಯ ಮೂಲ ಹುಡುಕುತ್ತಾ ಸಾಗಿದರೆ ಕಾಣುವುದು – ಯಾವುದೋ ಬೆಟ್ಟ ಗುಡ್ಡಗಳ ಮಧ್ಯೆ ಜಿನುಗುವ ಪುಟ್ಟದೊಂದು ಝರಿ, ನಿಧಾನವಾಗಿ ಪುಟ್ಟ ಕೊಳವಾಗಿ ಮಾರ್ಪಡುವಳು, ನೋಡ ನೋಡುತ್ತಿದ್ದಂತೆ ತನ್ನ ಪಾತ್ರವನ್ನು ಹಿಗ್ಗಿಸಿಕೊಳ್ಳುತ್ತಾ ಮುಂದೆ ಸಾಗುವಳು, ಇವಳ ಹಾದಿಯಲ್ಲಿ ಕಲ್ಲು ಬಂಡೆಗಳು ಎದುರಾದರೆ, ಮಕ್ಕಳ ಹಾಗೆ ಸಂಭ್ರಮದಿಂದ ಚಿಮ್ಮುತ್ತಾ ನೆಗೆಯುತ್ತಾ ಕೇಕೆ ಹಾಕುತ್ತಾ ಮುನ್ನೆಡೆಯುವಳು. ತಾನು ಸಾಗುವ ಹಾದಿಯಲ್ಲಿ ಎದುರಾಗುವ ಎಲ್ಲಾ ಹಳ್ಳ ಕೊಳ್ಳಗಳನ್ನು ತನ್ನೊಡಲಿನಲ್ಲಿ ವಿಲೀನಗೊಳಿಸಿಕೊಳ್ಳುತ್ತಾ ಹೆಜ್ಜೆ ಹಾಕುವಳು. ಇನ್ನು ಆಳವಾದ ಪ್ರಪಾತಗಳು ಎದುರಾದಾಗ ಅಂಜದೆ ಅಳುಕದೆ ಹದಿಹರೆಯದವರಂತೆ ಹುಚ್ಚು ಹೊಳೆಯಂತೆ ಮುನ್ನುಗುವಳು. ಮುಂದೆ ನದೀಪಾತ್ರ ವಿಸ್ತಾರವಾದಂತೆ ಯಾವುದೋ ಗಂಭೀರವಾದ ಆಲೋಚನೆಗಳನ್ನು ಮಾಡುತ್ತಿರುವ ಮಾಗಿದ ಹಿರಿಯರಂತೆ ಗಾಂಭೀರ್‍ಯದಿಂದ ಚಲಿಸುವಳು. ಒಮ್ಮೆ ನಿಶ್ಚಲವಾಗಿ ನಿಂತೇ ಬಿಟ್ಟಿರುವಳೇನೋ ಎಂಬ ಭ್ರಮೆ ಮೂಡಿಸುವಳು. ಆದರೆ ನದಿ ಎಂದಾದರೂ ನಿಲ್ಲುವುದುಂಟೆ? ಅವಳು ಸದಾ ಚಲನಶೀಲಳು.



ಸಾಗರನ ಮುಂದೆ ನಿಂತಾಗ ಅವಳ ತಳಮಳ, ಆತಂಕ, ಭಯ ಅರಿತವರಾರು? ಇವಳೋ ಸಿಹಿಯಾದ ತಂಪಾದ ನೀರಿನ ಒಡತಿ, ಗಿಡಮರಗಳ ಜೊತೆ ಆಡುತ್ತಾ ನಲಿಯುತ್ತಾ ಬೆಳೆದವಳು. ಬೆಟ್ಟ ಗುಡ್ಡಗಳ ಜೊತೆ ಕಣ್ಣಾಮುಚ್ಚಾಲೆ ಆಡುತ್ತಾ ಸಾಗಿದವಳು. ಇಲ್ಲಿಯಾದರೊ ಬಟಾ ಬಯಲು, ಗಿಡಮರಗಳ ಸುಳಿವಿಲ್ಲ, ಬೆಟ್ಟಗುಡ್ಡಗಳು ಇಲ್ಲವೆ ಇಲ್ಲ. ಈ ವಿಸ್ತಾರವಾದ ಜಲರಾಶಿಯ ರುಚಿಯೋ ಉಪ್ಪು, ಬಾಯಾರಿಕೆಯನ್ನು ತಣಿಸುವ ನದಿಯ ನೀರಲ್ಲ, ಬಾಯಾರಿಕೆಯನ್ನು ದ್ವಿಗುಣಗೊಳಿಸುವ ಸಾಗರದ ನೀರಿದು. ಈ ಲಾವಣ್ಯವತಿ ಬಳುಕುತ್ತಾ ನರ್ತಿಸುತ್ತಾ ಮುಂದೆ ಸಾಗಿದವಳು, ಹಸಿರನ್ನೇ ಉಸಿರಾಗಿಸಿಕೊಂಡವಳು. ಇವಳ ಹಾಗೆ ನಯ ನಾಜೂಕಿನವನಲ್ಲ ಸಮುದ್ರ ರಾಜ. ರಭಸವಾಗಿ ನುಗ್ಗುವ ಅಲೆಗಳು, ಎಲ್ಲವನ್ನು ನುಂಗಿ ಹಾಕಲು ಹವಣಿಸುತ್ತಿರುವ ಅಗಾಧವಾದ ಜಲರಾಶಿ. ಎಲ್ಲಿಯ ಮಲೆನಾಡ ಮಡಿಲು, ಎಲ್ಲಿಯ ಕರಾವಳಿಯ ಕಡಲು. ಆದರೆ ಕಡಲೊಂದಿಗೆ ಸೇರದೆ ಬೇರೆ ಮಾರ್ಗವಾದರೂ ಎಲ್ಲಿತ್ತು ಈ ನದಿಗೆ. ಹಿಂತಿರುಗುವ ಹಾದಿ ಮುಚ್ಚಿ ಹೋಗಿತ್ತು, ಮುಂದೆ ಸಾಗುವುದು ಅನಿವಾರ್ಯವಾಗಿತ್ತು. ಕೂಡಿಕೊಂಡಳು ಸಮುದ್ರ ರಾಜನ ಜೊತೆ, ಅವನೊಂದಿಗೇ ಐಕ್ಯಳಾದಳು ಈ ದೇವತೆ.

ಈ ಕವಿತೆಯ ಸಾಲುಗಳನ್ನು ಒಮ್ಮೆ ಕೇಳೋಣ ಬನ್ನಿ –
ನದಿ ತಾನು ಹರಿದು ಬಂದ ದಾರಿ / ಹಿಂತಿರುಗಿ ನೋಡಿದರೆ / ಗಿರಿಶಿಖರಗಳ ಎತ್ತರ, ಅಡವಿ / ಹಲ್ಳಗಾಡುಗಳು, ತಿರುವುಗಳು? ಈಗ ಅವಳ ಎದುರು / ಧುತ್ತೆಂದು ನಿಂತಿದೆ, ತಾನು ಸೇರುವ /ಅಗಾಧ ವಿಸ್ತಾರದ ಸಾಗರ.
ನದಿಗೆ ಅಲ್ಲಿಯೇ ಅರಿವಾಗುವುದು / ಕಡಲಲ್ಲಿ ತಾನು ಅಡಗುವುದಲ್ಲ / ತಾನೇ ಕಡಲಾಗುವ ಅಚ್ಚರಿ


(ಖಲೀಲ್ ಗಿಬ್ರಾನ್ ವಿರಚಿತ ಕವಿತೆ ‘ಭಯ’ – ಅನುವಾದ :ಅರುಂಧತೀ ರಮೇಶ್)

(ಮುಂದುವರೆಯುವುದು)

-ಡಾ. ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

8 Comments on “ಮಲೆನಾಡಿನ ಜೀವನಾಡಿಗಳು : ಅಂಕ 1

  1. ನಿಮ್ಮ ಮಾಸ್ಟರ್ ಆಫ್ ಮೈಡ್ಗೆ ನನ್ನ ದೊಂದು ಸೆಲ್ಯೂಟ್ ಮೇಡಂ.. ಯಾವುದೇ ವಿಷಯವನ್ನಾಗಲಿ ತೆಗೆದುಕೊಂಡು ಹೋಗುವ ರೀತಿ…ಜೊತೆಗೆ ಸೊಗಸಾದ ನಿರೂಪಣೆ…
    ಮುದಕೊಡುತ್ತದೆ…ಮೇಡಂ.. ಈವತ್ತಿನ ಲೇಖನ ಮಲೆನಾಡಿನ ಜೀವನಾಡಿಗಳು ಹೊರತಾಗಿಲ್ಲ ಮುಂದುವರೆಯುತ್ತದೆ ಎಂಬುದೇ ಕುತೂಹಲ ಹುಟ್ಟಿಸುವಂತಿದೆ..ಧನ್ಯವಾದಗಳು ಗಾಯತ್ರಿ ಮೇಡಂ.

  2. ಮಲೆನಾಡಿನ ಅಪುಾವ೯ ಚಿತ್ರಣ ಕೊಟ್ಟ ನಿಮ್ಮ ಬರಹಕ್ಕೆ ನಮನಗಳು.

  3. ಬಹಳ ಸುಂದರವಾಗಿದೆ. ಪ್ರಕೃತಿಯ ಸೊಬಗಡಗಿದೆ
    ಬರಹದ ತುಂಬಾ.

  4. ಮೂಲದಲ್ಲಿ ಪುಟ್ಟದಾಗಿ ಜಿನುಗುವ ನೀರು, ಮುಂದೆ ಮೈದುಂಬಿ ಹರಿಯುವ ನದಿಯಾಗಿ, ಅಂತ್ಯದಲ್ಲಿ ಸಾಗರದಲ್ಲಿ ಲೀನವಾಗುವ ಸಲಿಲ ನೀರೆಯ ಅದ್ಭುತ ನಡೆಯನ್ನು ಬಹು ಸೊಗಸಾಗಿ ವರ್ಣಿಸಿರುವಿರಿ ಮೇಡಂ.

  5. ನದಿಯ ಉಗಮ, ಸಾಗುವ ಪಥ, ಸೇರುವ ಕಡಲ ಕುರಿತ ಸೊಗಸಾದ ನಿರೂಪಣೆಯ ಸುಂದರ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *