ರಾಮನ ನೆನಪಿನಲಿ
ನಾರುಮಡಿಯುಟ್ಟು ಅಡವಿಗೆ ನಡೆದವ
ಎಂಜಲು ಹಣ್ಣಲೇ ತಾಯ ಮಮತೆಯುಂಡವ
ಮಡದಿಯ ಹುಡುಕಿ ದೆಸೆಗೆಟ್ಟು ಅಲೆದಾಡಿದವ
ನೆಚ್ಚಿನ ಹನುಮನ ಸ್ನೇಹಕೆ ಸೋತು ಗೆದ್ದವ
ಕಪಿಗುಂಪನೇ ನೆಚ್ಚಿ ಸಮುದ್ರಕೆ ಸೇತುವಾದವ
ದಶಾನನ ಸಂಹರಿಸಿ ದುಂದುಭಿ ಮೊಳಗಿಸಿದವ
ರಾಮರಾಜ್ಯದ ನಿಯಮಕಾಗಿ ಮತ್ತೆ ಒಂಟಿಯಾದವ
ಮಕ್ಕಳೆದುರಿಗೆ ನಿಂತು ಶರಣಾಗಿ ಕೈ ಮುಗಿದವ
ಒಳಗಿನೆಲ್ಲ ತುಮುಲಗಳ ತಡೆದಿಟ್ಟು ಮೌನವಾದವ
ಸಂಕಟಗಳ ಸಂತಸವಾಗಿಸಿ ಲೀಲೆಗೆ ಕೈಗೊಂಬೆಯಾದವ
ನೀನೆಂದರೆ ಮೌಲ್ಯಗಳ ಮಾತು ; ಮಾನವ ದೇವನಾದ ಮಹತು
ನಿನ್ನಿಂದ ಕಲಿತದ್ದು ಒಂದೇ : ಏನಾಗಲಿ, ಸುಮ್ಮನಿರು ತಂದೆ !
ಮಂದಿ ಸಾವಿರ ಮಾತಾಡಲಿ, ಕಾಲಧರ್ಮವೇ ಉತ್ತರಿಸಲಿ !!
-ಡಾ.ಹೆಚ್ ಎನ್ ಮಂಜುರಾಜ್, ಮೈಸೂರು
ರಾಮನ ನೆನಪಿನಲಿ ಕವನ ಸರಳ ಸುಂದರ ಹಾಗೂ ಅರ್ಥಪೂರ್ಣ ವಾಗಿದೆ…ಧನ್ಯವಾದಗಳು ಸಾರ್
ಧನ್ಯವಾದಗಳು ಮೇಡಂ. ನೀವಂತೂ ತುಂಬ ಶ್ರದ್ಧೆ ಮತ್ತು ನಿಷ್ಠೆಯಿಂದ ಸುರಹೊನ್ನೆಯ ಎಲ್ಲವನೂ ಓದಿಯೇ ಅಭಿಪ್ರಾಯಿಸುವಿರಿ. ನಿಮ್ಮ ಆಸಕ್ತಿ ಮತ್ತು ಆ ಶಕ್ತಿಗೆ ನನ್ನ ನಮನಗಳು.
ಸುಂದರವಾದ ಕವನ
ಕೊನೆಯ ಸಾಲುಗಳು ಬಹಳ ಚಂದ
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ
ರಾಮನೆಂದರೆ ಮೌಲ್ಯಗಳ ಮಾತು. ಎಂಥ ಸೊಗಸಾದ ವ್ಯಾಖ್ಯಾನ. ಓದುಗರಿಗೆ ರಾಮನವಮಿಗೆ ಚಂದದ ಕವನದ ಸುಂದರ ಉಡುಗೊರೆ. ಅಭಿನಂದನೆಗಳು.
ರಾಮನ ಕಾರ್ಯಗಳನ್ನು ನೆನಪಿಸುತ್ತಾ ಅವನಂತೆ ನಾವಾಗಬೇಕಾದ ಅಗತ್ಯತೆಯನ್ನು ಎತ್ತಿ ಹಿಡಿದ ಸೊಗಸಾದ ಕವನ.
ಧನ್ಯವಾದಗಳು
ರಾಮನ ಕತೆ…ಎಂದಿಗೂ..ಚಿರ ನೂತನ..ಪುಟ್ಟ ದಾಗಿ..ರಾಮನ ವ್ಯಕ್ತಿತ್ವವನ್ನು ಸೆರೆ ಹಿಡಿದಿದೆ ಕವಿತೆ….ಮೌಲ್ಯ ಗಳು..ಬದುಕಿನ ಬೇರಾಗಬೇಕು…ಮಾತು ಮೌನದ ಹಿಂದೆಯೆ ಇರಬೇಕು…ಒಳ್ಳೆಯ ಕವನ ..ಧನ್ಯವಾದ ಗಳು.. ಸರ್..
ಮೆಚ್ಚಿದ್ದಕ್ಕೆ ಮತ್ತು ಪ್ರತಿಕ್ರಿಯಿಸುವುದರ ಮೂಲಕ ಕವಿತೆಯನ್ನು ಗುಣಗ್ರಾಹೀ ವಿಮರ್ಶೆ ಮಾಡಿದ್ದಕ್ಕೆ ಧನ್ಯವಾದಗಳು. ಪ್ರಕಟಿಸಿದ ಸುರಹೊನ್ನೆಯಿಂದಾಗಿ ಇದು ಸಾಧ್ಯವಾಗಿದೆ. ಈ ವೇದಿಕೆಯಿಂದಾಗಿ ಇಂಥ ಸ್ಪಂದನ ಮತ್ತು ಸಂವಾದನ ! ಹಾಗಾಗಿ ಸುರಹೊನ್ನೆಯ ಬಳಗಕ್ಕೆ ಅನಂತಾನಂತ ವಂದನೆಗಳು.