ಈ ಜಗವೇ ನಾಟಕರಂಗ——!

Share Button


(ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ)

‘ಜಗದೀಶನಾಳುವ ಜಗವೇ ನಾಟಕರಂಗ’ ಎಂಬ ಚಿತ್ರಗೀತೆಯನ್ನು ಬಾಲ್ಯದಲ್ಲಿ ಕೇಳಿರುವವರು ಹಾಗೂ ಬಾನುಲಿಯ ಮೂಲಕ ಹಾಗೂ ರಂಗಭೂಮಿಯ ಮೇಲೆ ನಾಟಕಗಳನ್ನು ಆಡಿದವರಿಗೆ, ಸೂತ್ರದ ಬೊಂಬೆಯನ್ನು ಆಡಿಸುವ ಗೊಂಬೆಕಾರರನ್ನು ನೋಡಿದಾಗ ಖಂಡಿತ ಅನಿಸುತ್ತದೆ. ‘ಈ ಪ್ರಪಂಚವೇ ಒಂದು ರಂಗಭೂಮಿ, ಆ ದೇವರೇ ಸೂತ್ರಧಾರ, ಆತನು ಆಡಿಸಿದಂತೆ ಆಡುವ ಪಾತ್ರಧಾರಿಗಳು ನಾವೆಲ್ಲಾ’.

ಇಡೀ ವಿಶ್ವದಲ್ಲಿ ರಂಗಪ್ರಿಯರಿಗೆಲ್ಲ ಒಂದು ಮರೆಯಲಾಗದ ಹಬ್ಬದ ದಿನವೆಂದರೆ, ಪ್ರತಿವರ್ಷ ಮಾರ್ಚ್ 27 ರಂದು ಬರುವ ವಿಶ್ವರಂಗಭೂಮಿ ದಿನಾಚರಣೆ. ನನ್ನ ತಂದೆ ಎನ್.ಎಸ್. ವಾಮನ್ 1933 ನೇ ಇಸವಿಯಿಂದ ಅಂದರೆ ತಮ್ಮ 14 ನೇ ವರ್ಷದಿಂದ ರಂಗಭೂಮಿ ಪ್ರವೇಶ ಮಾಡಿ, 1936 ರಿಂದ ಮೈಸೂರಿನಲ್ಲಿ ಆರಂಭವಾದ ಖಾಸಗಿ ಬಾನುಲಿ ಕೇಂದ್ರ, ನಂತರ ದಿಲ್ಲಿ, ಬೆಂಗಳೂರು, ಧಾರವಾಡ ಬಾನುಲಿ ಕೇಂದ್ರಗಳ ಮೂಲಕ ಹಾಗೂ ರಂಗಭೂಮಿಯ ಮೇಲೆ ಖ್ಯಾತ ನಾಟಕ ಕಲಾವಿದ ಹಾಗೂ ನಿರ್ದೇಶಕರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ನಾನು 1958 ರಿಂದ ನನ್ನ 7 ನೇ ವರ್ಷದಿಂದ ಬಾನುಲಿ ಹಾಗೂ ರಂಗಭೂಮಿ ಕಲಾವಿದನಾಗಿದ್ದೆ. ನನ್ನ 17 ನೇ ವರ್ಷದಲ್ಲಿ ಧಾರವಾಡ ಆಕಾಶವಾಣಿಯಿಂದ ಪ್ರಸಾರವಾದ, ಶಾಂತ ಕವಿ ಎಂಬ ಕಾವ್ಯನಾಮದ ಸಕ್ಕರಿ ಬಾಳಾಚಾರ್ಯ ಅವರ ‘ವತ್ಸಲಾಹರಣ’ ನಾಟಕದ ಅಭಿಮನ್ಯು ಪಾತ್ರವನ್ನು, ವರಕವಿ ಅಂಬಿಕಾತನಯದತ್ತ (ದ.ರಾ.ಬೇಂದ್ರೆ) ಅವರ ನಿರ್ದೇಶನದಲ್ಲಿ ಅಭಿನಯಿಸಿದ್ದೆ. ಮುಂದೆ ಗರುಡ ಸದಾಶಿವರಾಯರ ‘ಶ್ರೀ ಪಾದುಕಾ ಪಟ್ಟಾಭೀಷೇಕ‘ ನಾಟಕದಲ್ಲಿ, ನಾನು ರಂಗಭೂಮಿಯ ಮೇಲೆ ಹಾಗೂ ರೇಡಿಯೋ ಮೂಲಕ ಭರತನ ಪಾತ್ರ ಅಭಿನಯಿಸಿ ಜನಪ್ರಿಯತೆ ಗಳಿಸಿದ್ದೆ. ಹೀಗಾಗಿ ನನ್ನ 7ನೇ ವರ್ಷದಿಂದ ೭೨ನೇ ವರ್ಷದವರೆಗೆ, ವಿಶ್ವರಂಗಭೂಮಿ ದಿನಾಚರಣೆ ಎಂದರೆ ನನ್ನಂತಹ ಕಲಾವಿದರಿಗೆ, ಕಲಾರಸಿಕರಿಗೆ, ಮರೆಯಲಾಗದ ಹಾಗೂ ರೋಮಾಂಚನಕಾರಿ ದಿನ ಮಾರ್ಚ್ 27.

ನನ್ನ ತಂದೆಯ ಮೂಲಕ ನಾನು ಕನ್ನಡ ನಾಡಿನ ವೃತ್ತಿರಂಗಭೂಮಿಯ ಹಾಗೂ ಹವ್ಯಾಸಿ ರಂಗಭೂಮಿಯ ಹಿಂದಿನ ಎಲ್ಲ ಕಲಾವಿದರು, ನಾಟಕಕಾರರು, ನಿರ್ದೇಶಕರು ಇವರನ್ನೆಲ್ಲ ಹತ್ತಿರದಿಂದ ಬಲ್ಲೆ. 1948 ರಿಂದ ನನ್ನ ತಂದೆ ಹಿಂದಿನ ಮೈಸೂರು ಆಕಾಶವಾಣಿಯಲ್ಲಿದ್ದಾಗ, ಡಾ. ರಾಜಕುಮಾರ, ಮಾಸ್ಟರ್ ಹಿರಣ್ಣಯ್ಯ, ಕೆ.ಎಸ್.ಅಶ್ವಥ್ ಇವರನ್ನೊಳಗೊಂಡಂತೆ 1936 ರಿಂದ 1955 ರವರೆಗೆ ಅಂದಿನ ಕಾಲದ ಶೇಕಡ ೯೦ರಷ್ಟು ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರನ್ನು ಆಕಾಶವಾಣಿಯ ಮೈಕ್ ಮುಂದೆ ಕರೆತಂದು, ನಾಟಕದ ನಿರ್ದೇಶನ ಮಾಡಿ, ಅವರನ್ನೆಲ್ಲ ಉತ್ತಮ ಕಲಾಕಾರರನ್ನಾಗಿ ಕಟ್ಟಿದ ಶಿಲ್ಪಿ ನನ್ನ ತಂದೆ ಎಂಬುದು ನನ್ನ ಅಭಿಮಾನದ ಸಂಗತಿ. ರೇಡಿಯೋ ಮೂಲಕ ಹಾಗೂ ರಂಗಭೂಮಿಯ ಮೇಲೆ ಎವರ್ ಗ್ರೀನ್ ಹೀರೋ ಆಗಿದ್ದ ನನ್ನ ತಂದೆ ರೇಡಿಯೋ ಹಾಗೂ ರಂಗಭೂಮಿಗಳ ನಾಟಕದ ಇತಿಹಾಸದಲ್ಲಿ ಒಂದು ಕೈಮರದಂತೆ ಮಾರ್ಗದರ್ಶನ ಮಾಡಿರೋ ಶಕ್ತಿ ಎಂದು ಖ್ಯಾತ ನಟ, ನಾಟಕಕಾರ, ನಿರ್ದೇಶಕ, ಕವಿ, ಚಿತ್ರಸಾಹಿತಿ, ಎಚ್.ಕೆ ಯೋಗಾನರಸಿಂಹ ಒಂದೆಡೆ ಹೇಳಿದ್ದಾರೆ. ಹೀಗಾಗಿ 1958 ರಿಂದ ಗುಬ್ಬಿ ಕಂಪನಿಯ ದಶಾವತಾರ ನಾಟಕದಿಂದ ಇಂದಿನವರೆಗೆ ಕನ್ನಡ ವ್ಥತ್ತಿರಂಗಭೂಮಿಯ ಹಾಗೂ ಹವ್ಯಾಸಿ ರಂಗಭೂಮಿಯ ಎಲ್ಲಾ ನಾಟಕಗಳನ್ನು ಅನೇಕ ಬಾರಿ ನೋಡಿರುವ ಸೌಭಾಗ್ಯ ನನ್ನದು. ಸಾವಿರಾರು ಕಿರಿಯ-ಹಿರಿಯ ಕಲಾವಿದರು, ನಾಟಕಕಾರರು, ವೃತ್ತಿ ರಂಗಭೂಮಿ ಕಂಪನಿ ಮಾಲೀಕರು 1958 ರಿಂದ ನಮ್ಮ ಮನೆಗೆ ಬರುತ್ತಿದ್ದರು. ಎಷ್ಟೋ ರಂಗನಾಟಕಗಳ ರೇಡಿಯೋ ರೂಪ ಸಿದ್ಧ ಮಾಡುವ ಪ್ರಕ್ರಿಯೆಯಲ್ಲಿ, ನಾನೂ ಬಾಲ್ಯದಿಂದ ನನ್ನ ತಂದೆಯವರೊಂದಿಗೆ ಕೈಕೂಡಿಸಿದ್ದೇನೆ. ಮುಂದೆ ನಾನು ಬೆಳೆದಂತೆ ಕನ್ನಡ ನಾಟಕಗಳಷ್ಟೇ ಅಲ್ಲ, ತಮಿಳು, ತೆಲುಗು, ಹಿಂದಿ. ಒರಿಯಾ, ಮರಾಠಿ, ಇಂಗ್ಲೀಷು ನಾಟಕಗಳನ್ನೂ, ಆ ಭಾಷೆಗಳ ಚಲನಚಿತ್ರಗಳನ್ನು ಸತತವಾಗಿ ನೋಡಿರುವ ಪುಣ್ಯ ನನ್ನದು. ವಿಶ್ವದಾದ್ಯಂತ ಅಂತರ್‌ರಾಷ್ಟ್ರೀಯ ರಂಗ ಸಮಾಜ ರಂಗ ಕಲೆಗಳ ಮಹತ್ವ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸಲು ಜನರ ಜೀವನದಲ್ಲಿ ಉತ್ತಮ ಪ್ರಭಾವ ಬೀರಲು ಈ ದಿನಾಚರಣೆ ಆಚರಿಸುತ್ತಾರೆ. ಬಹು ಹಿಂದೆ ಪ್ರಾಚೀನ ಗ್ರೀಕ್ ಸಮಾಜದಲ್ಲಿ ಜನರ ಸಂತಸಕ್ಕಾಗಿ, ಪ್ರೇಕ್ಷಕರೆದುರು ನೇರವಾಗಿ ಕಲಾವಿದರು, ಸಂಗೀತಗಾರರು ಎಲ್ಲ ಕಲೆಗಳ ಸಮ್ಮಿಶ್ರಣವಾದ ನಾಟಕವನ್ನು ಆಡುತ್ತಿದ್ದರು. 1961 ರಿಂದ ವಿಶ್ವರಂಗಭೂಮಿ ದಿನಾಚರಣೆ ಆರಂಭವಾಗಿದೆ. 1961 ರ ಜೂನ್ ತಿಂಗಳಲ್ಲಿ ಹೆಲಸಿಂಕಿಯಲ್ಲಿ ನಡೆದ 9 ನೇ ವಿಶ್ವ ಸಮ್ಮೇಳನದಲ್ಲಿ ಹಾಗೂ 1961 ರ ಜೂನ್ ತಿಂಗಳಲ್ಲಿ ವಿಯೆನ್ನಾದಲ್ಲಿ ನಡೆದ ಸಮ್ಮೇಳನದಲ್ಲಿ ಈ ದಿನವನ್ನು ನಿಗದಿ ಪಡಿಸಲಾಗಿದೆ. ಈ ವರ್ಷದ ವಿಶ್ವರಂಗಭೂಮಿಯ ದಿನಾಚರಣೆಯ ಘೋಷಣೆ ”ರಂಗಭೂಮಿ ಹಾಗೂ ಶಾಂತಿಯ ಸಂಸ್ಕೃತಿ”.

ಈ ಹಿನ್ನೆಲೆಯಲ್ಲಿ ವೃತ್ತಿರಂಗಭೂಮಿಯ ಕೆಲವು ಪುಟಗಳನ್ನು ಈಗ ನಿಮ್ಮ ಮುಂದೆ ತೆರೆಯುತ್ತಿದ್ದೇನೆ.

ಶತಮಾನೋತ್ಸವ ಆಚರಿಸಿದ ಗುಬ್ಬಿ ಕಂಪನಿಯ ಚರಿತ್ರೆ ಕನ್ನಡ ರಂಗಭೂಮಿಯ ಚರಿತ್ರೆಯೋ ಎಂಬಂತೆ, ಅದನ್ನು ಮುನ್ನಡೆಸಿದವರು, ಪ್ರಯೋಗಶೀಲ ಮಾಲೀಕರೂ ವಿಖ್ಯಾತ ಹಾಸ್ಯಕಲಾವಿದರೂ ಆಗಿದ್ದ, ಗುಬ್ಬಿ ವೀರಣ್ಣನವರು. ಇವರು ರಂಗಭೂಮಿಯಲ್ಲಿ ನಾಟಕಗಳನ್ನು ಆಡುತ್ತಲೇ, ಕನ್ನಡ ಚಲನಚಿತ್ರರಂಗದಲ್ಲಿ ಕೆಲವು ಮೂಕಿ ಹಾಗೂ ಟಾಕಿ ಚಲನಚಿತ್ರಗಳನ್ನು ನಿರ್ಮಿಸಿ ಅಭಿನಯಿಸಿದರು. ಸದಾರಮೆ ನಾಟಕದಲ್ಲಿ ಸದಾರಮೆಯಾಗಿ ಬಿ. ಜಯಮ್ಮನವರು, ಕಳ್ಳನ ಪಾತ್ರದ ವೀರಣ್ಣನವರೊಂದಿಗೆ ಹಾಡುತ್ತಿದ್ದ ಗೀತೆ —– ಸರಸಿಜಾತನಯನ ಗುಣಸದನ, ಸರಸರೂಪಮದನ ತ್ರಿಭುವದನ (ವೀರಣ್ಣ) ಸರಸಿಜಾತನಯನೆ ಗುಣಸದನೆ, ಕಮಲಜಾತವದನೆ ಜಯಭವನೆ. ಇದೇ ನಾಟಕದಲ್ಲಿ ಮುಂದೆ ಆಡುತ್ತಿದ್ದ ಮಾತು ಬಹುಭಾಷೆಯ ಹಾಡು ಅವರ್ಣನೀಯ.
ನೀ ಬಂದೆ ನಾ ಕರಕೊಂಡು ಬಂದೆ. ಕೇಸ್ ಡಿಸ್‌ಮಿಸ್ (ನಗು)
ನಿನ್ನ ಕಂಡು ನಾ ಬಂದೆ ನಿಂತು ಮಾತಾಡೆಲೆ ನೀಲವೇಣೀ
ಕೋಪವೇಕೆನ್ನೊಳು ಕೋಮಲಾಂಗಿ ನೀ ಪೇಳು ಅಡಗಿತೇ ಕೋಪಮು ನ್ಯಾಯಮೇ ನಿಂತು ಮಾತಾಡೆಲೇ ನೀಲವೇಣಿ


ಗುಬ್ಬಿ ಕಂಪನಿ ವಾಲ್ ಪೋಸ್ಟರ್ ಅಂಟಿಸೋ ಕೆಲಸ ಮಾಡಿದ್ರು ಜಿ.ವಿ.ಅಯ್ಯರ್. ಆಗ ಅಯ್ಯರ್ ವಯಸ್ಸು 14-15. ಗುಬ್ಬಿ ಕಂಪನಿಯ ನಾಟಕದ ಮೊದಲ ಮಾತು ಧೌಮ್ಯನದು. ಮಾತು ಸರಿಯಾಗಿ ಬರದಿದ್ರೆ ನಾಟಕ ಕೆಟ್ಟುಹೋಯ್ತು ಅಂತ ಪ್ರತೀತಿ. ಹಾಗಾದ್ರೆ ಹಾರ್ಮೋನಿಯಂನವನು ತಕಣ ಬಾರಿಸುತ್ತಿದ್ದ – ‘ಏನ ಪೇಳಿದೆ ಎಲೆ ಸಚಿವ‘. ಗ್ರೀನ್ ರೂಂಲಿದ್ದವರೆಲ್ಲ ಬಂದು, ಸೈಡ್‌ವಿಂಗ್ಸ್‌ನಲ್ಲಿ ನಿಂತು, ಕೆಕ್ಕರಿಸಿಕೊಂಡು, ”ಇಷ್ಟಿಷ್ಟು ಅನ್ನ ಊಟ ಮಾಡಲು ಮಾತ್ರ ಈತ ಲಾಯಕ್ಕು” ಅಂತ ಅಭಿನಯಿಸ್ತಿದ್ರು. 72-73 ರಲ್ಲಿ ಅಯ್ಯರ್‌ಗೆ ಬೆಳೆದಿದ್ದ ನಿಜವಾದ ಗಡ್ಡದರೀತಿ, 14-15 ವರ್ಷದ ಬಾಲ‌ಅಯ್ಯರ್, ಅಂದು ಕೃತಕ ಗಡ್ಡ ಅಂಟಿಸಿಕೊಂಡಿದ್ರು ಕಲಾತ್ಮಕವಾಗಿ (ಪೇಂಟರ್ ಆಗಿದ್ರಿಂದ) ಒಂದೊಂದಾಗಿ ಬಿಡಿಯಾಗಿ, ಕುರಿ ತುಪ್ಪಳ ಅಂಟಿಸಿಕೊಂಡ್ರು. ಸೊಗಸಾದ ಮೇಕಪ್. ಮೊದಲು ಗುಂಪುಗೀತೆ. ನಂತರ ಧೌಮ್ಯನ ಸರದಿ. ಬಹಳ ನಿರೀಕೆಯಿಂದ ಹೋಗಿ ನಿಂತ್ರೆ, Footlight ಸೆಕೆ, ಕಣ್ಣಿಗೆ ಹೊಡೀತಿತ್ತು. ಬೆಳ್ಳಾವೆ ನರಹರಿಶಾಸ್ರಿಗಳು ಬರೆದ ದೊಡ್ಡ ಮಾತು. 3 ಪುಟದ ಡೈಲಾಗ್. ಅಯ್ಯರ್‌ಗೆ ಧೈರ್ಯ ಹೋಯ್ತು. ಬೆವತಿದ್ದ ಅಯ್ಯರ್ ಮೊದಲ ವಾಕ್ಯ ಹೇಳಿದೊಡನೆ, ಅಂಟಿಸಿದ್ದ ಮೀಸೆ ಬಾಯಲ್ಲಿ ಬಂತು. ಮೀಸೆ ಹೋದ ಭರದಲ್ಲಿ, ಬೆನ್ನು ತಿರುಗಿಸಿದಾಗ, ಎಲ್ಲ ಮರೆತೇ ಹೋಯ್ತು. ಕೊನೆ ವಾಕ್ಯ ಹೇಳ್ಬಿಟ್ರು. ಈ ಸಂಧರ್ಭದಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇನೆ.ಹಾರ್ಮೋನಿಯಂನವನು ‘ಏನ ಪೇಳುವೆ ಎಲೆ ಸಚಿವ‘ ಬಾರಿಸಿಯೇಬಿಟ್ಟ. ಕಲಾವಿದರು ಹಂಗಿಸಿದ್ರು, ಅಪಹಾಸ್ಯ ಮಾಡಿದ್ರು. ಆಗ ನಾರದ ವಿಡಂಬನೆ ಮಾಡಿದ ”ಪೂಜ್ಯರಾದ ಧೌಮ್ಯರು ಬಹಳ ಪ್ರಯಾಸಪಟ್ಟು, ಧರ್ಮನಂದನ ನಿನ್ನನ್ನು ಆಶೀರ್ವದಿಸಿದರು.” ಅಂದ್ರು. ಅಂದು ಪಾರ್ಟು ತಪ್ಪಿದ್ದು, ಮತ್ತೆ 6 ತಿಂಗಳು ರಂಗದ ಹೊಸಿಲು ಹತ್ತಲು ಅವಕಾಶ ಸಿಗಲಿಲ್ಲ. ನಂತರ ಒಂದೇ ಮಾತು. ಆ ಪಾತ್ರದ ಮಾತು ‘ಸುಭದ್ರಾ ಪರಿಣಯದಲ್ಲಿ’. ”ಸುಭದ್ರೆ ಹತ್ತಿರ ಅರ್ಜುನ ಹೋಗಬಾರದು” ಅಂತ ಕೃಷ್ಣನ ಬಳಿ ಮೊರೆಯಿಡುವ ಸೇವಕನ ಪಾತ್ರ. Action ಮಾಡಿ Timing ಮಾಡಿ ಹೇಳಿದ ಡೈಲಾಗ್ ಕೇಳಿ ಗುಬ್ಬಿ ವೀರಣ್ಣ ಅವರ ಗಮನ ಸೆಳೆದ್ರು. ಇದು ಕಂಪನಿ ಸೇರಿದ 5ವರ್ಷದ ನಂತರ ನಡೆದದ್ದು. ಒಳಗಡೆ ಬಂದು ಬೆನ್ನು ತಟ್ಟಿ ”ಚೆನ್ನಾಗಿ ಮಾಡಿದೆ ಪಾರ್ಟು” ಅಂದ್ರು ವೀರಣ್ಣನವರು. ಅವತ್ನಿಂದ 5 ರೂ ಸಂಬಳ ತಿಂಗಳಿಗೆ.

ಶ್ರೀ ಗುಬ್ಬಿ ವೀರಣ್ಣ

ಟಿ.ಎನ್.ಬಾಲಕೃಷ್ಣ 2 ವರ್ಷದ ಮಗುವಾಗಿದ್ದಾಗ ಇವರ ಅಮ್ಮ, ಹಾಲು ಮಾರುವವಳಿಗೆ 8 ರೂಗೆ ಮಾರಿದ್ರು. 12 ನೇ ವಯಸ್ಸಿಗೆ ನಾಟಕರಂಗ. ಲೋಯರ್ ಸೆಕಂಡರೀಲಿ ಎರಡು ಬಾರಿ ಡುಮ್ಕಿ. 12 ವರ್ಷದಲ್ಲಿ ಇದ್ದಕ್ಕಿದ್ದಂತೆ ಕಿವಿ ಕೇಳಿಸದ ಹಾಗಾಯ್ತು. ಅರಸೀಕೆರೆಗೆ ಬಂದ ಕಂಪನಿ ನಾಟಕಗಳನ್ನು ಚಾಪೆ ಸಂದೀಲಿ ನುಸಿದು, ನಾಟಕ ನೋಡಿ ಪಾತ್ರ ಕಲಿತರು. ಅರಸೀಕೆರೇಲಿ ನಾಟಕ ಕಂಪನಿಯ ಬೋರ್ಡು ಬರೀತಾ ಬೀದಿ ಬೀದೀಲಿ ಬೋರ್ಡ್ ಕಟ್ತಿದ್ರು. ಪಾರ್ಟು ನೋಡಿ ನೋಡಿ, ತುಟಿಚಲನೆ ಮೇಲೆ ಮಾತಾಡೋದು, ಪಾರ್ಟು ಮಾಡೋದು ಕಲಿತರು. 16 ವರ್ಷ ರಂಗಭೂಮೀಲೆ ಸೇವೆ ಮಾಡಿದ್ರು ಸ್ವಲ್ಪ ಹುಷಾರಾಗಿದ್ರೆ, ಕಿವಿ ಕೇಳಿಸದಿದ್ರೂ, ಕಿವಿ ಕೇಳಿಸುವರಿಗಿಂತ ಚೆನ್ನಾಗಿ ಅಭಿನಯಿಸಬಹುದು. ಸ್ವಯಂಗುರು. ಇವರ ಅಚ್ಚು ಮೆಚ್ಚಿನ ಪಾತ್ರ. ಅಕ್ಕಮಹಾದೇವಿ ನಾಟಕದಲ್ಲಿ ಮುದುಕಿ ಪಾತ್ರ, ಕುರುಕ್ಷೇತ್ರದಲ್ಲಿ ಶಕುನಿ ಪಾತ್ರ,

1965-70 ರ ದಶಕದಲ್ಲಿ ಸುಳ್ಯದ ದೇಸಾಯಿ ಕಂಪನಿಯವರು, ಕಿತ್ತೂರು ಚೆನ್ನಮ್ಮ ನಾಟಕಕ್ಕಾಗಿ ಆನೆ, ಕುದುರೆ, ಯುದ್ದದ ದೃಶ್ಯ ರಂಗದ ಮೇಲೆ ವೈಭವಯುತವಾಗಿ ತಂದರು.

ಕನ್ನಡ ಥಿಯೇಟರ್ಸ್ ನಾಟಕ ಕಂಪನಿಯಲ್ಲಿ, ರಾಜಾವಿಕ್ರಮ ನಾಟಕದಲ್ಲಿ ಶ್ರೀಕಂಠಮೂರ್ತಿ ಅವರ ವಿಕ್ರಮನ ಪಾತ್ರದ ಮಾತುಗಾರಿಕೆ ಹಾಡುಗಾರಿಕೆ, ಜನಪ್ರಿಯವಾಗಿತ್ತು. ಹಂಸ ರತ್ನದ ಸರ ನುಂಗುವುದು, ಕೈ ಕಾಲು ಕಡಿಯಲ್ಪಟ್ಟಿ ವಿಕ್ರಮನ ಕೈ ಕಾಲು ಬರುವುದು, ಗಾಣದ ಮೇಲೆ ಕೂತು ಹಾಡಿದಾಗ ಸಾವಿರಾರು ದೀಪ ಹತ್ತುವುದು, ಮುಂತಾದ ಟ್ರಿಕ್ ಶಾಟ್ಸ್, ಜನರಿಗೆ ಹುಚ್ಚು ಹಿಡಿಸುತ್ತಿತ್ತು.

1954 ರಲ್ಲಿ ಆರಂಭವಾಗಿದ್ದ ಕನ್ನಡ ಕಲಾವಿದರ ಸಂಘದ ಮೂಲಕ, 1958 ರಲ್ಲಿ ಪ್ರವಾಹ ಪರಿಹಾರ ನಿಧಿಗಾಗಿ, ನಾಡಿನಾದ್ಯಂತ ಸಾಹುಕಾರ, ಬೇಡರ ಕಣ್ಣಪ್ಪ, ಎಚ್ಚಮನಾಯಕ ನಾಟಕಗಳು ಜನರ ಮನಸೊರೆಗೊಂಡವು. ಖ್ಯಾತ ಚಲನಚಿತ್ರ ನಿರ್ದೇಶಕ ಜೋಡಿ ದೊರೆ ಭಗವಾನ್ ಇವರಲ್ಲಿ ಎಸ್. ಕೆ ಭಗವಾನ್ ಸ್ಮರಿಸಿರುವಂತೆ ಈ ನಾಟಕಗಳ ರಂಗ ಪ್ರದರ್ಶನಕ್ಕೆ ನನ್ನ ತಂದೆ ಎನ್.ಎಸ್ ವಾಮನ್ ಮಾರ್ಗದರ್ಶನ ನೀಡಿದ್ದರು.ಸಾಹುಕಾರ ನಾಟಕದಲ್ಲಿ ನಾಯಕನಾಗಿ ರಾಜ್‌ಕುಮಾರ್, ಜಿಪುಣ ಸಾಹುಕಾರನಾಗಿ ಉ.ಗಿ ಅಯ್ಯರ್, ಕರಣಿಕರಾಗಿ ಬಾಲಕೃಷ್ಣ ನರಸಿಂಹರಾಜು ಅಭಿನಯಿಸುತ್ತಿದ್ದರು. ಒಂದು ದೃಶ್ಯದಲ್ಲಿ ಊಟ – ಶಬ್ದ ಕೇಳಿದೋಡನೆ, ಮೈ ಮೇಲಿದ್ದ 5-6 ಪ್ರತಿ ಬಟ್ಟೆ ಸರಸರನೆ ಕಳಚಿ ಓಡುತ್ತಿದ್ದ ನರಸಿಂಹರಾಜು ಅಭಿನಯ, ನಗೆ ಚೆಲ್ಲಿಸುತ್ತಿತ್ತು. ಬೇಡರ ಕಣ್ಣಪ್ಪ ನಾಟಕದಲ್ಲಿ ಕಣ್ಣಪ್ಪನಾಗಿ ರಾಜ್, ಕಳ್ಳಪೂಜಾರಿಯಾಗಿ ಉ.ಗಿ ಅಯ್ಯರ್, ಅವರ ಮಗ ಕಾಶಿಯಾಗಿ ನರಸಿಂಹರಾಜು, ಈಶ್ವರನಾಗಿ ಏ.S ಅಶ್ವಥ್ ಅವರ ಅಭಿನಯ ಮನೆಮಾತಾಯಿತು. ಎಚ್ಚಮನಾಯಕ ಹಿರಣ್ಣಯ್ಯ ಅವರ ದೇಶ ಪ್ರೇಮದ ಹಿನ್ನಲೆಯ ಐತಿಹಾಸಿಕ ನಾಟಿಕ. ಎಚ್ಚಮನಾಯಕನಾಗಿ ರಾಜ್, ಚಾಂದ್ ಖಾನ್ ಆಗಿ ಅಯ್ಯರ್, ಬಾದಶಹನಾಗಿ ವೀರಭದ್ರಯ್ಯ, ಉಸ್ಮಾನ್ ಆಗಿ K.S ಅಶ್ವಥ್, ಸಿದ್ದಾಂತಿಯಾಗಿ ಬಾಲಕೃಷ್ಣ, ಶಾಸ್ತ್ರಿಯಾಗಿ ನರಸಿಂಹರಾಜು, ಮೋಹಿನಿಯಾಗಿ ನಾಗರತ್ನಮ್ಮ ಮಿಂಚುತ್ತಿದ್ದರು. ವಿಜಯನಗರದ ಗತವೈಭವದ ಬಗೆಗಿನ 5 ಪುಟಗಳ, ”ಆಯಿತು. ಕನ್ನಡಿಗರು ಕೈ ಮುರಿದು ಕುಳಿತರು” ಎಂಬ ಡೈಲಾಗ್, ರಾಜ್ ಅವರ ಬಾಯಿಯಲ್ಲೇ ಕೇಳಬೇಕಿತ್ತು. ಈ ಸಂಭಾಷಣೆಯ ಒಂದು ಭಾಗ ಭಲೇ ಜೋಡಿ ಚಲನಚಿತ್ರದಲ್ಲಿದೆ.

ಕನ್ನಡ ಚಿತ್ರರಂಗದ ಪೋಷಕ ಪಾತ್ರದ ಸಾರ್ವಭೌಮ ಕೆ.ಎಸ್ ಅಶ್ವಥ್ವಾಮನ್ ರಾಯರೇ ನನಗೆ ಕಲೆ ಅನ್ನೋದೇ ಎನು ಅಂತ ಗೊತ್ತಿಲ್ಲ. ಆಸಕ್ತಿಯಿಲ್ಲ. ನನಗೆ ಪಾತ್ರ ಮಾಡೋಕೆ ಬರೊಲ್ಲ. ಬಿಟ್ಟುಬಿಡಿ ಅಂದ್ರು ಬಿಡದೇ ನಾನು ನಿಮಗೆ ಕಲಿಸ್ತೀನಿ ಖಿಡಿಚಿiಟಿiಟಿg ಕೊಡ್ತೀನಿ ಅಂತ ಹಿಡಕೊಂಡ್ರು ವಾಮನ್. ಒತ್ತಾಯದ ಮೇಲೆ ಬಣ್ಣ ಹಾಕಲು ಆರಂಭ. ಅಲ್ಲಲ್ಲಿ ಸ್ಕೂಲು ಕಾಲೇಜುಗಳಲ್ಲಿ ನಾಟಕ ಆಡಿಸಿದ್ರು ವಾಮನ್. ಅವರು ಹೇಳಿಕೊಟ್ಟಂತೆ ಹೇಳಿಕೊಟ್ಟಷ್ಟೇ ಕಲಿತು ಅಭಿನಯಿಸಿದರು ಅಶ್ಥಥ್. ಮುಂದೆ ಇವರು ರೇಡಿಯೋ ನಾಟಕಗಳಲ್ಲಿ ಹೀರೋ ಆಗಿ ಚಿತ್ರರಂಗದಲ್ಲಿ ಗಾಳಿಗೋಪುರ ಚಿತ್ರದಿಂದ ಅಶ್ವಥ್ ಅತ್ಯುತ್ತಮ ಪೋಷಕ ಪಾತ್ರಗಳ ಚಕ್ರವರ್ತಿಯಾದರು.

ಒಂದು ಕಾಲದಲ್ಲಿ ರಂಗಭೂಮಿಗೆ ಸ್ತ್ರೀಯರು ಬರುತ್ತಿದ್ದಿಲ್ಲ ಪುರುಷರೇ ಸ್ತ್ರೀ ಪಾತ್ರಗಳನ್ನು ಮಾಡ್ತಿದ್ರು. ಇದಕ್ಕೆ ವ್ಯತಿರಿಕ್ತವಾಗಿ ಪುರುಷ ಪಾತ್ರಗಳನ್ನೂ, ಸ್ತ್ರೀಯರು ಮಾಡ್ತಿದ್ದ ಉದಾಹರಣೆ, ಸ್ತ್ರೀ ನಾಟಕ ಮಂಡಳಿ ಕಟ್ಟ್ಟಿ, ಅದರಲ್ಲಿ ಎಲ್ಲ ಪಾತ್ರಗಳನ್ನು ಮಹಿಳೆಯರಿಂದಲೇ ಮಾಡಿಸುತ್ತಿದ್ದ ಖ ನಾಗರತ್ನಮ್ಮ. ಅವರು ರಂಗದ ಮೇಲೆ ಶ್ರೀ ಕೃಷ್ಣ ಗಾರುಡಿಯಲ್ಲಿ ಭೀಮನಾಗಿ, ಕೃಷ್ಣಲೀಲೆಯ ಕಂಸನಾಗಿ, ಅಮೋಘವಾಗಿ ಅಭಿನಯಿಸುತ್ತಿದ್ದರು.ಖ. ನಾಗರತ್ನಮ್ಮ ಇವರ ಕಂಚಿನ ಕಂಠ, ಹಾವಭಾವ, ನಿಲ್ಲುವ ಭಂಗಿ, ಮೀಸೆ ಹುರಿಮಾಡುವ ರೀತಿ, ಗದೆ ಎತ್ತಿ ಆಡಿಸುವ ಶೈಲಿ, ಇವುಗಳಿಂದ ಶ್ರೀ ಕೃಷ್ಣ ಗಾರುಡಿ ನಾಟಕದ ಭೀಮ, ಕೃಷ್ಣಲೀಲೆಯ ಕಂಸ, ರಾಮಾಯಣದ ರಾವಣ ಪಾತ್ರಗಳು ಅಜರಾಮರವಾದವು.

ಇಂತಹ ಸಾವಿರಾರು ಕಲಾವಿದರು ಸ್ವಾತಂತ್ರ ಪೂರ್ವಕಾಲದಿಂದ ಇಂದಿನವರೆಗೆ ಮನರಂಜನೆ ನೀಡುತ್ತಾ, ರಾಷ್ಟ್ರೀಯ- ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತಾ ಬಂದು, ನಮ್ಮ ರಂಗಭೂಮಿ ಉಜ್ವಲ ಪರಂಪರೆ ಹೊಂದಿದೆ. ಆದರೆ ಕಾಲಬದಲಾದಂತೆ ಸಾಮಾಜಿಕ ಜಾಲತಾಣಗಳು, ಮೊಬೈಲ್ ಜನರನ್ನು ಜೀವಂತ ರಂಗಭೂಮಿಯಿಂದ ಅವರವರ ಮನೆಯ ಕೋಣೆಗೆ ಸೀಮಿತಗೊಳಿಸಿದ್ದು, ಒಂದು ಕಲಾಸಂಸ್ಕೃತಿ ಮಸುಕಾಗಿರುವುದಕ್ಕೆ ಕಾರಣವಾಗಿದೆ. ಪ್ರೇಕ್ಷಕರು ಇವುಗಳನ್ನ ಬಿಟ್ಟು, ರಂಗಭೂಮಿಗೆ ಪ್ರೋತ್ಸಾಹ ಬೆಂಬಲ ಕೊಟ್ಟರೆ, ಮತ್ತೊಮ್ಮೆ ಕನ್ನಡ ರಂಗಭೂಮಿ ಉಜ್ವಲ ಸ್ಥಾನಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.

-ಎನ್.ವ್ಹಿ.ರಮೇಶ್ , ಮೈಸೂರು

5 Responses

  1. ಉತ್ತಮ ಮಾಹಿತಿ ಪೂರ್ಣ ಲೇಖನ ಧನ್ಯವಾದಗಳು ಸಾರ್..

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

  3. ಶಂಕರಿ ಶರ್ಮ says:

    ಸ್ವಾತಂತ್ರ್ಯ ಪೂರ್ವದ ರಂಗಭೂಮಿ, ಆಗಿನ ಘಟಾನುಘಟಿ ಕಲಾವಿದರ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ಒಳಗೊಂಡ ಸೊಗಸಾದ ಲೇಖನ.

  4. Padmini Hegde says:

    ವಿವರಗಳೆಲ್ಲ ಚೆನ್ನಾಗಿದೆ

  5. Padma Anand says:

    ರಂಗಭೂಮಿಯ ಕುರಿತ ಸವಿವರ ಲೇಖನ ಹಲವಾರು ಅಪರೂಪದ ಮಾಹಿತಿಗಳನ್ನು ನೀಡಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: