ಗಜಲ್
ಮನದಾಳದ ಭಾವಗಳೆಲ್ಲ ಒಣಗಿ ಬತ್ತಿ ಹೋಗಿರಲು
ಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ
ಜೀವನದ ಜವಾಬ್ದಾರಿಯ ಭಾರ ಹೆಗಲೇರಿ ಕುಳಿತಿರಲು
ಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ.
ಬದುಕಿನುದ್ದಕ್ಕೂ ಕಲಿತ ಅನುಭವ ಪಾಠ ಮರೆತಿರಲು
ಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ
ಕಂಡ ಕನಸುಗಳೆಲ್ಲ ನುಚ್ಚು ನೂರಾಗಿರಲು
ಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ.
ಕೈಗೆ ಬಂದ ತುತ್ತು ಬಾಯಿಗೆ ಬರದೇ ನೆಲದ ಪಾಲಾಗಿರಲು
ಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ
ಬಹಳ ನಂಬಿದವರೆಲ್ಲ ಬೆನ್ನಿಗೆ ಚೂರಿ ಹಾಕಿರಲು
ಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ.
ದೃಢ ಚಿತ್ತದಿ ಕುಳಿತಿರುವಾಗಲು ಎಡವಿ ಬಿದ್ದೆದ್ದು ನಿಂತಿರಲು
ಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ
ಜೀವಕ್ಕೆ ಜೀವವೆಂದವರೇ ಜೀವ ಹಿಂಡಿ ಹಿಪ್ಪೆ ಮಾಡಿರಲು
ಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ.
ಕಟ್ಟಿದ ಕನಸಿನ ಮನೆಯಿಂದು ನನಸಲ್ಲಿ ಸೆರೆಮನೆಯಾಗಿರಲು
ಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ
ಯಾರಿಗೂ ಕೇಡು ಬಯಸದ ಶಿವನ ಬದುಕೇ ಬಯಲಾಗಿರಲು
ಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ.
-ಶಿವಮೂರ್ತಿ.ಹೆಚ್.ದಾವಣಗೆರೆ.
ಬದುಕೆಂದ ಮೇಲೆ ಈ ತರ ಪರಿಸ್ಥಿತಿ ಸಹಜ. ಚೆನ್ನಾಗಿದೆ ಗಝಲ್
ಧನ್ಯವಾದಗಳು ಮೇಡಂ
ಬದುಕಿನ ಅವಘಡಗಳ ಅನಾವರಣಗೊಂಡ ಗಝಲ್ ಚೆನ್ನಾಗಿದೆ ಸರ್
ಧನ್ಯವಾದಗಳು ಮೇಡಂ
ಗೀಚಿ ಬರೆಯಲು ಪದಗಳೇ ಸಿಗುತ್ತಿಲ್ಲವೆನ್ನುತ್ಯಲೇ ಜೀವನದ ಸಾರವನ್ನೆಲ್ಲ ತುಂಬಿಕೊಂಡ ಕವಿತೆ ಮನದುಂಬಿದೆ.
ಧನ್ಯವಾದಗಳು ಮೇಡಂ
ಅರ್ಥವತ್ತಾದ ಕವನ. ಚೆನ್ನಾಗಿದೆ.
ನಿಮ್ಮ ಪ್ರೋತ್ಸಾಹವೂ ಸದಾ ಇರಲಿ ಮೇಡಂ
ಅರ್ಥಪೂರ್ಣವಾದ ಕವನ ವಂದನೆಗಳು
ಬದುಕು ಬಯಲಾಗುವುದು…..ಒಳ್ಳೆಯದೇ…..ಯಾಕೋ ಶಿವ ಬಹಳ ಬೇಸರದಲ್ಲಿ ಇದ್ದ ಹಾಗಿದೆ……ಒಮ್ಮೊಮ್ಮೆ ಹೀಗನಿಸುವುದು ಸಹಜ…….ಆ ನೋವೇ ಪದಗಳಾಗಿ ಮೂಡಿ ಬಂದಿದೆ. ಚೆನ್ನಾಗಿದೆ
ನಿಜ ಗುರುಗಳೇ
ಯುವ ಬರಹಗಾರರನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡುತ್ತಿರುವ ಸುರಹೊನ್ನೆ ಬಳಗದ ಸಂಪಾದಕರಿಗೆ ಹಾಗೂ ಬರಹಗಳಿಗೆ ಸದಾ ಧನಾತ್ಮಕ ಪ್ರತಿಕ್ರಿಯೆ ಮೂಲಕ ಪ್ರೋತ್ಸಾಹಿಸುವ ಸಹೃದಯ ವಿಮರ್ಶಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು
ಬಹಳ ಅರ್ಥಪೂರ್ಣ ಗಝಲ್.
ಧನ್ಯವಾದಗಳು ಗುರುಗಳೇ
ಮನದಾಳದ ಭಾವಗಳು ಬತ್ತಿ ಹೋದರೂ
ಅದನೇ ಬರೆವ ಶಕ್ತಿ ಕೊಟ್ಟದ್ದು ಸಾಹಿತ್ಯದ ಯುಕ್ತಿ.
ಈ ಚೋದ್ಯವನೇ ಗಮನಿಸಬೇಕು
ಪ್ರತಿಭೆಗೆ ನಮಿಸಬೇಕು