ಪುರಿ ಜಗನ್ನಾಥನ ವಿಸ್ಮಯದ ಸುತ್ತ

Share Button


ಜಗತ್ತಿನ ಹಲವಾರು ಕಡೆ ಅನೇಕ ವಿಸ್ಮಯಗಳು, ಪವಾಡಗಳು ನಡೆಯುತ್ತಿರುತ್ತವೆ. ಆದರೆ ವಿಜ್ಞಾನ ಇವುಗಳಿಗೆ ಸೂಕ್ತ ಕಾರಣಗಳನ್ನಾಗಲೀ, ವಿವರಣೆಗಳನ್ನಾಗಲೀ ನೀಡಲು ವಿಫಲವಾಗಿವೆ ಎಂದೇ ಹೇಳಬೇಕು. ಈ ವಿಸ್ಮಯಗಳಿಗೆ ಪುರಿಜಗನ್ನಾಥನ ದೇಗುಲ ಹೊರತಲ್ಲ. ಪುರಿ ನಗರ ಒರಿಸ್ಸದ ಭುವನೇಶ್ವರದಿಂದ 60 ಕಿ.ಮೀ. ದೂರದಲ್ಲಿದೆ. ಇಲ್ಲಿಯ ಜಗನ್ನಾಥನ ದೇವಾಲಯಕ್ಕೆ ಶತಶತಮಾನಗಳ ಇತಿಹಾಸವಿದೆ. ಜಗತ್ತಿನಲ್ಲೇ ಅತ್ಯಂತ ದೊಡ್ಡ ಕೃಷ್ಣನ ದೇವಾಲಯ ಇದು. ಜಗನ್ನಾಥನ ಜೊತೆ ಅವನ ಸಹೋದರ ಬಲರಾಮ ಹಾಗೂ ಸೋದರಿ ಸುಭದ್ರೆಯ ವಿಗ್ರಹಗಳು ಇಲ್ಲಿ ರಾರಾಜಿಸುತ್ತಿವೆ. ಇವಿಷ್ಟು ಈ ದೇವಾಲಯದ ಸ್ಥೂಲ ಪರಿಚಯ. ಈಗ ಇಲ್ಲಿಯ ಕೆಲವು ವಿಸ್ಮಯಗಳ ಅವಲೋಕನಗಳತ್ತ ಗಮನ ಹರಿಸೋಣ.

ಜಗನ್ನಾಥ ದೇಗುಲದ ಗೋಪುರದ ಎತ್ತರ 214 ಅಡಿಗಳು. ಅದರ ಮೇಲೆ ಒಂದು ದೊಡ್ಡ ಧ್ವಜ ರಾರಾಜಿಸುತ್ತಿರುತ್ತದೆ. ಇದು ಪುರಿನಗರದ ಯಾವ ಮೂಲೆಯಲ್ಲಿದ್ದರೂ ಕಾಣುತ್ತದೆ. ಈ ಧ್ವಜದ ವಿಶೇಷ, ಇದು ಹಾರುತ್ತಿರುವುದು ಗಾಳಿಯ ವಿರುದ್ಧ ದಿಕ್ಕಿಗೆ. ಸಾಮಾನ್ಯವಾಗಿ ಎಲ್ಲ ಧ್ವಜಗಳು ಗಾಳಿಯ ದಿಕ್ಕಿಗೆ ಹಾರುತ್ತದೆ. ಆದರೆ ಈ ಧ್ವಜ ಯಾವ ದಿಕ್ಕಿಗೆ ಗಾಳಿ ಬಂದರೂ ಅದಕ್ಕೆ ವಿರುದ್ಧ ದಿಕ್ಕಿಗೆ ಹಾರುತ್ತಿರುತ್ತದೆ. ಇದಕ್ಕೆ ಕಾರಣ ಇವತ್ತಿನವರೆಗೂ ತಿಳಿದಿಲ್ಲ. ಹವಾಮಾನ ತಜ್ಞರಿಗೆ ಸವಾಲಾಗಿದೆ.

ದೇವಸ್ಥಾನದ ದೇವರಿಗೆ ಮಾಡಿದ ನೈವೇದ್ಯ ಎಷ್ಟು ಭಕ್ತಾದಿಗಳು ಬಂದರೂ ಎಲ್ಲರಿಗೂ ಹಂಚುವಷ್ಟು ಇರುತ್ತದೆ. ಪ್ರತಿದಿನ ಜಗನ್ನಾಥನಿಗೆ ಐದು ಬಾರಿ 56 ವಿವಿಧ ಭಕ್ಷ್ಯಗಳಿರುವ ಛಪ್ಪನ್‌ಭೋಗ್ ಎಂದು ಕರೆಯುವ ನೈವೇದ್ಯ ಮಾಡುತ್ತಾರೆ. ಈ ನೈವೇದ್ಯವನ್ನು ದೇವಸ್ಥಾನದ ಅಡುಗೆ ಮನೆಯಲ್ಲಿ ಮಣ್ಣಿನ ಪಾತ್ರೆಗಳಲ್ಲಿ ಸೌದೆ ಉರಿಯಲ್ಲೇ ಮಾಡುವುದು ವಿಶೇಷ.

ಆಷಾಢ ಶುಕ್ಲ ದ್ವಿತೀಯದಂದು ನಡೆಯುವ ರಥಯಾತ್ರೆಯ ನಂತರ ರಥದ ಚಕ್ರವನ್ನು ಬಿಟ್ಟು ಉಳಿದ ಭಾಗವನ್ನು ಒಡೆದು ಪ್ರಸಾದ ತಯಾರಿಕೆಗೆ ಬಳಸುತ್ತಾರೆ. ಕೆಲವು ಭಕ್ತರು ರಥದ ಚಕ್ರದ ಭಾಗಗಳನ್ನು ಖರೀದಿಸಿ ಮನೆಯಲ್ಲಿಟ್ಟು ಪೂಜಿಸುತ್ತಾರೆ. ಎಲ್ಲಿಂದ ನೋಡಿದರೂ ದೇವಸ್ಥಾನದ ಗೋಪುರದ ಸುದರ್ಶನ ಚಕ್ರ ನಮ್ಮ ಕಡೆಗೆ ತಿರುಗುವಂತೆ ಇರುತ್ತದೆ. ಸಾಮಾನ್ಯವಾಗಿ ಎಲ್ಲ ದೇವಸ್ಥಾನ ಗೋಪುರದಲ್ಲಿ ವಿವಿಧ ರೀತಿಯ ಪಕ್ಷಿಗಳು ಹಾರುವುದು, ಕೂರುವುದು, ಗೂಡುಕಟ್ಟುವುದು ಸಾಮಾನ್ಯ. ಆದರೆ ಜಗನ್ನಾಥನ ದೇಗುಲದಲ್ಲಿ ಒಂದೇ ಒಂದು ಪಕ್ಷಿಯೂ ಕೂಡ ಗೋಪುರದ ಸನಿಹ ಇದುವರೆಗೆ ಬಂದಿಲ್ಲ, ಬರುವುದಿಲ್ಲ. ಇದು ಹಲವಾರು ಪಕ್ಷಿ ತಜ್ಞರಿಗೆ ಬಿಡಿಸಲಾರದ ಕಗ್ಗಂಟಾಗಿದೆ. ಶತಮಾನಗಳಿಂದ ಯಾವ ಪಕ್ಷಿಯೂ ಗೋಪುರದ ಸನಿಹ ಬರದಿರುವುದು ಒಂದು ವಿಸ್ಮಯವೇ ಸರಿ.
ದೇವಸ್ಥಾನದ ಗೋಪುರದ ಮೇಲಿಂದ ಯಾವ ವಿಮಾನವೂ ಹಾರುವುದಿಲ್ಲ. ಒಂದು ವೇಳೆ ಬಂದರೂ ವಿಮಾನ ತನ್ನಿಂದ ತಾನೇ ತನ್ನ ಪಥವನ್ನು ಬದಲಾಯಿಸುತ್ತದೆ. ಇದನ್ನು ಹಲವಾರು ಪೈಲಟ್‌ಗಳು ಅನುಭವಿಸಿ ಕಾರಣಕ್ಕಾಗಿ ತಡಕಾಡಿದ್ದಾರೆ. ಯಾವ ವಿಮಾನ ಚಾಲಕನೂ ದೇವಸ್ಥಾನದ ಗೋಪುರದ ಮೇಲೆ ವಿಮಾನವನ್ನು ಕರೆದೊಯ್ಯುವ ಸಾಹಸಕ್ಕೆ ಹೋಗಲಾರ. ಇದುವರೆವಿಗೂ ಯಾವ ವೈಮಾನಿಕ ತಜ್ಞರು ಇದಕ್ಕೆ ಕಾರಣ ನೀಡಲಾಗಿಲ್ಲ ಎಂಬುದು ನಿಜಕ್ಕೂ ಆಶ್ಚರ್ಯಕರ.

ಪುರಿ ಜಗನ್ನಾಥ ದೇಗುಲ


ಗೋಪುರದ ಎತ್ತರ 214 ಅಡಿಗಳು. ದೇವಸ್ಥಾನ ವಿಸ್ತಾರ ಸುಮಾರು ನಾಲ್ಕು ಲಕ್ಷ ಚದರಡಿ. ವಿಶೇಷವೆಂದರೆ ಗೋಪುರದ ನೆರಳು ದಿನದ ಯಾವ ಸಮಯದಲ್ಲೂ ನೆಲದ ಮೇಲೆ ಬೀಳುವುದಿಲ್ಲ. ಅಲ್ಲದೆ ಗೋಪುರದ ಮೇಲೆ ಅಷ್ಟಧಾತುವಿನಿಂದ ತಯಾರಿಸಿದ ಸುದರ್ಶನ ಚಕ್ರ ರಾರಾಜಿಸುತ್ತದೆ. ಇದು ಪುರಿಯ ಯಾವ ಮೂಲೆಯಲ್ಲಿದ್ದರೂ ಚಕ್ರಚಕ್ರವಾಗಿಯೇ ಕಾಣುವುದು ಒಂದು ವಿಸ್ಮಯ. ಪುರಿ ಜಗನ್ನಾಥ ದೇಗುಲದಲ್ಲಿ ದಿನಂಪ್ರತಿ ಲಕ್ಷಾಂತರ ಭಕ್ತರು ದರ್ಶನಕ್ಕೆ ಬರುತ್ತಾರೆ. ಇಲ್ಲಿಯ ಪ್ರಸಾದ ವಿಶೇಷವೆಂದರೆ ಅದನ್ನು ಪುಟ್ಟ ಮಣ್ಣಿನ ಮಡಿಕೆಯಲ್ಲಿ ತಯಾರಿಸುತ್ತಾರೆ. ಏಳು ಮಡಿಕೆಗಳನ್ನು ಒಂದರ ಮೇಲೊಂದು ಇಟ್ಟು ಪ್ರಸಾದವನ್ನು ಬೇಯಿಸುತ್ತಾರೆ. ವಿಸ್ಮಯವಿರುವುದು ಇಲ್ಲೇ. ಮೇಲಿರುವ ಮಡಿಕೆಯಲ್ಲಿರುವ ಪ್ರಸಾದ ಮೊದಲು ಬೆಂದಿರುತ್ತದೆ. ಕೆಳಗಿರುವುದು ಅಗ್ನಿಯ ಸಮೀಪವಿದ್ದರೂ ಕೊನೆಗೆ ಬೇಯುತ್ತದೆ. ಈ ವಿಸ್ಮಯಕ್ಕೆ ಕಾರಣವನ್ನು ಇದುವರೆಗೂ ಯಾವ ಆಹಾರ ತಜ್ಞರೂ ನೀಡಿಲ್ಲ ಎಂಬುದು ಒಂದು ಸೋಜಿಗ.

ಗೋಪುರದ ಗುಂಬಜ್ 214 ಅಡಿ ಎತ್ತರದಲ್ಲಿದೆ. ವಿಶೇಷವೆಂದರೆ ಇದರ ತುದಿಯಲ್ಲಿರುವ ಧ್ವಜವನ್ನು ಪ್ರತಿದಿನ ಬೆಳಿಗ್ಗೆ ಬದಲಾಯಿಸುತ್ತಾರೆ. ವಿಚಿತ್ರವೆಂದರೆ ಈ ಗೋಪುರ ಹತ್ತುವವರು ಹಿಮ್ಮುಖವಾಗಿ ಹತ್ತುತ್ತಾರೆ. ಇದು ಸಾಮಾನ್ಯವಾಗಿ ಮಾನವರಿಂದ ಅಸಾಧ್ಯವಾದ ಕಾರ್ಯ. ಆದರೆ ನೂರಾರು ವರ್ಷಗಳಿಂದ ಈ ಪದ್ಧತಿ ಚಾಲ್ತಿಯಲ್ಲಿದೆ. ಪ್ರತಿದಿನ ಹಿಮ್ಮುಖವಾಗಿ ಗೋಪುರ ಹತ್ತಿ ಧ್ವಜ ಬದಲಾಯಿಸುತ್ತಾರೆ. ಇದಕ್ಕೆಂದೇ ದೇಗುಲದಿಂದ ಪರಿಣಿತರು ನಿಯೋಜಿಸಲ್ಪಟ್ಟಿದ್ದಾರೆ.

ಸಾಮಾನ್ಯವಾಗಿ ಸಮುದ್ರದಲ್ಲಿ ಹಗಲು, ಭೂಮಿಯಿಂದ ಕಡಲಿಗೆ ಮತ್ತು ಸಂಜೆ ಕಡಲಿನಿಂದ ಭೂಮಿಗೆ ಗಾಳಿ ಬೀಸುತ್ತದೆ. ಆದರೆ ಪುರಿ ಸಮುದ್ರ ಕಿನಾರೆಯಲ್ಲಿ ಇದಕ್ಕೆ ಪೂರ ವ್ಯತಿರಿಕ್ತ. ಹಗಲು ಸಮುದ್ರದಿಂದ ಭೂಮಿಗೆ ಗಾಳಿ ಬೀಸುತ್ತದೆ. ಇದಕ್ಕೆ ಕಾರಣ ಹವಾಮಾನ ತಜ್ಞರು ಇದುವರೆವಿಗೂ ನೀಡಲಾಗುತ್ತಿಲ್ಲ. ಇನ್ನೊಂದು ವೈಚಿತ್ರವೆಂದರೆ ದೇವಸ್ಥಾನದ ಹೊರಗೆ ಸಮುದ್ರದ ಅಲೆಗಳ ಭೋರ್ಗರೆತ ಕೇಳುವುದೇ ಇಲ್ಲ. ಒಮ್ಮೆ ನೀವು ದೇವಸ್ಥಾನದ ಬಾಗಿಲ ಮೂಲಕ ಪ್ರವೇಶಿಸಿದೊಡನೇ ಅಲೆಗಳ ಸದ್ದು ಕಿವಿಯಲ್ಲಿ ಭೋರ್ಗರೆಯುತ್ತವೆ. ಈ ವಿಸ್ಮಯಕ್ಕೆ ಕಾರಣ ಈವರೆಗೂ ತಿಳಿದುಬಂದಿಲ್ಲ.

ಜಗನ್ನಾಥನ ರಥಯಾತ್ರೆ ವಿಶ್ವಪ್ರಸಿದ್ಧಿ. ಆಷಾಢಮಾಸದ ಶುಕ್ಲ ದ್ವಿತೀಯ ದಿನ ನಡೆಯುತ್ತದೆ. ಈ ಸಮಯದಲ್ಲಿ ಮಳೆಗಾಲವಲ್ಲದಿದ್ದರೂ ರಥಯಾತ್ರೆಯಂದು ಭರ್ಜರಿ ಮಳೆ ಬರುವ ಪದ್ಧತಿ ಶತಶತಮಾನಗಳಿಂದ ಬಂದಿದೆ. ಇವತ್ತಿನವರೆಗೂ ಮಳೆ ಬರುವ ಯಾವ ಸೂಚನೆಗಳಿಲ್ಲದಿದ್ದರೂ ರಥವೆಳೆಯುವ ಸಮಯಕ್ಕೆ ಸರಿಯಾಗಿ ಧಾರಾಕಾರ ಮಳೆ ಸುರಿಯುತ್ತದೆ. ಇದೊಂದು ನಿಜಕ್ಕೂ ವಿಸ್ಮಯವೇ. ಹವಾಮಾನ ತಜ್ಞರಿಗೆ ಇದೊಂದು ಸವಾಲಾಗಿ ನಿಂತಿದೆ.

ಇವಿಷ್ಟೂ ಹೊರಗಿನ ವಿಸ್ಮಯಗಳಾದವು. ಇನ್ನು ದೇಗುಲದೊಳಗಿನ ಕೆಲ ವಿಶೇಷಗಳನ್ನು ಗಮನಿಸೋಣ. ರಥಯಾತ್ರೆ ಆಷಾಢಮಾಸದ ಶುಕ್ಲಪಕ್ಷದ ದ್ವಿತೀಯದಲ್ಲಿ ಬರುತ್ತದೆ. ಇದಕ್ಕೆ ಹದಿನೈದು ದಿನಕ್ಕೆ ಮೊದಲು ಜ್ಯೇಷ್ಠ ಪೌರ್ಣಮಿಯ ದಿನ ಸ್ನಾನಪೂರ್ಣಿಮೆ ಎಂಬ ಉತ್ಸವದಲ್ಲಿ ಜಗನ್ನಾಥ, ಬಲರಾಮ, ಸುಭದ್ರೆಯರಿಗೆ ಬೇಸಿಗೆ ಬೇಗೆಯನ್ನು ಸಹಿಸಲೆಂದು ತಣ್ಣೀರಿನ ಸ್ನಾನ ಮಾಡಿಸುತ್ತಾರೆ. ಅದೂ 108 ಗಡಿಗೆಗಳಿಂದ. ಇದರಿಂದ ಅವರಿಗೆ ಜ್ವರ ಬರುತ್ತದೆ ಎಂಬ ನಂಬಿಕೆಯಿಂದ ಅವರನ್ನು ಹದಿನೈದು ದಿನ ಗರ್ಭಗುಡಿಯಲ್ಲಿ ಇಟ್ಟು ಪರದೆ ಮುಚ್ಚಿ ಭಕ್ತರಿಗೆ ದರ್ಶನ ಅಲಭ್ಯ. ವಿಶೇಷವೆಂದರೆ ಜ್ವರಕಾಲದಲ್ಲಿ ಈ ಮೂವರ ಶುಶ್ರೂಷೆ ಬೇಡರ ಸಮುದಾಯದ ದೈತರಿಗೆ ಮಾತ್ರ ಲಭ್ಯ. ಈ ಕಾಲದಲ್ಲಿ ಆಯುರ್ವೇದ ಪಂಡಿತರಿಂದ ಔಷಧಿ, ಹಣ್ಣು, ತೋಯಿಸಿದ ಹೆಸರುಕಾಳು, ಚಂದನ ಮಿಶ್ರಿತ ಹಾಲು ಮುಂತಾದ ಲಘು ಆಹಾರಗಳನ್ನು ನೈವೇದ್ಯ ಮಾಡುತ್ತಾರೆ. 15 ದಿನಗಳ ನಂತರ ಜ್ವರ ವಾಸಿಯಾದ ನಂತರ ವಿಗ್ರಹಗಳನ್ನು ಅಲಂಕರಿಸಿ ಭಕ್ತರಿಗೆ ದರ್ಶನಕ್ಕೆ ಅಣಿ ಮಾಡುತ್ತಾರೆ.

ಈ ವಿಗ್ರಹಗಳು ಮರದಿಂದ ಮಾಡಿದ್ದರಿಂದ ಅವುಗಳನ್ನು 12 ವರ್ಷಕ್ಕೊಮ್ಮೆ ಬದಲಾಯಿಸುವ ಪದ್ಧತಿ ಇದೆ. ಇದಂತೂ ಬಹಳ ಕುತೂಹಲಕಾರಿಯಾಗಿದೆ. ಮೊದಲು ಸರಿಯಾದ ಬೇವಿನ ಮರಗಳ ಹುಡುಕಾಟ ಪ್ರಾರಂಭವಾಗುತ್ತದೆ. ಈ ಮರದ ಜಾಗವು ಯಾರಿಗೂ ಗೊತ್ತಿರುವುದಿಲ್ಲ. ದೇವಸ್ಥಾನದಿಂದ ನಿಯೋಜಿತರಾದ ಅರ್ಚಕರು ಪುರಿಯಿಂದ 50 ಕಿ.ಮೀ. ದೂರದ ಕಾಕಟಪುರ ಎಂಬ ಗ್ರಾಮದಲ್ಲಿರುವ ಮಂಗಳಾದೇವಿ ದೇಗುಲಕ್ಕೆ ಬರುತ್ತಾರೆ. ಆ ದೇವಸ್ಥಾನ ಮುಂಭಾಗದಲ್ಲಿ ಅರ್ಚಕರು ಮುಖ ಕೆಳಗೆ ಮಾಡಿ ರಾತ್ರಿ ಇಡೀ ಮಲಗುತ್ತಾರೆ. ಆಗ ಕನಸಿನಲ್ಲಿ ಅವರಿಗೆ ಈ ಮರಗಳ ನಿಖರವಾದ ಜಾಗ ಗೋಚರಿಸುತ್ತದೆ. ತಕ್ಷಣ ಎದ್ದು ಆ ಜಾಗದತ್ತ ಸಾಗುತ್ತಾರೆ. ಈ ವಿಸ್ಮಯಕರ ಪ್ರಕರಣ ಶತಮಾನಗಳಿಂದ ಆಚರಣೆಯಲ್ಲಿದೆ. ಈ ಮೂರು ಮರಗಳು 10 ವಿಶೇಷವಾದ ಪರಿಸರದಲ್ಲಿ ಇರಬೇಕು. ಮರಗಳ ಆಯ್ಕೆಗೆ 5 ಪರಿಸರಗಳು ಕಡ್ಡಾಯ. ಮರ ಗುರುತಿಸಿದ ಮೇಲೆ ಅದನ್ನು ತಂದು ಶಾಸ್ತ್ರೋಕ್ತವಾಗಿ ಪೂಜಿಸಿ ವಿಗ್ರಹಗಳನ್ನು ಕೆತ್ತುತ್ತಾರೆ. ಇವುಗಳನ್ನು ಗರ್ಭಗುಡಿಯಲ್ಲಿ ಹಳೆವಿಗ್ರಹಕ್ಕೆ ಎದುರು ಬದಿರು ಇಟ್ಟು ಪೂಜಿಸಿ ಹಳೇ ವಿಗ್ರಹಗಳನ್ನು ತೆಗೆದು ಅಂದೇ ಹೂಳುತ್ತಾರೆ. ಇಷ್ಟೆಲ್ಲಾ ಕಾರ್ಯಗಳನ್ನು ಅರ್ಚಕರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಮಾಡುವುದು ವಿಶೇಷ. ಅವರಿಗೆ ಆದ ಅವರ್ಣನೀಯವಾದ ಅನುಭವಗಳನ್ನು ಅವರು ಎಲ್ಲರಲ್ಲಿ ಹಂಚಿಕೊಳ್ಳುತ್ತಾರೆ. ಈ ಸಮಯದಲ್ಲಿ ಕೆಲವು ದೈವ ಘಟಿತ ಪ್ರಸಂಗಗಳು ಆಗಿರುವ ದಾಖಲೆಗಳಿವೆ. ಕಾಕಟಪುರದ ದೇವಿಯ ಸನ್ನಿಧಿಯಲ್ಲಿ ಈ ವಿಗ್ರಹಗಳನ್ನು ತಯಾರಿಸಲು ಬೇಕಾದ ಬೇವಿನಮರದ ಸುಳಿವು ಪ್ರತಿಸಲವೂ ಸಿಗುತ್ತಿರುವುದು ಒಂದು ವಿಸ್ಮಯವೇ ಸರಿ.

ಪುರಿ ಜಗನ್ನಾಥ, ಬಲರಾಮ ಹಾಗೂ ಸುಭದ್ರೆಯ ವಿಗ್ರಹಗಳು


ಹೀಗೆ ಪುರಿ ಜಗನ್ನಾಥ ದೇಗುಲವು ಹವಾಮಾನ ತಜ್ಞರಿಗೆ, ವೈಮಾನಿಕ ತಜ್ಞರಿಗೆ, ಪಕ್ಷಿ ತಜ್ಞರಿಗೆ, ಆಹಾರ ತಜ್ಞರಿಗೆ ಹಾಗೂ ಪವಾಡಗಳನ್ನು ನಂಬದ ನಾಸ್ತಿಕರಿಗೆ ಸವಾಲಾಗಿರುವ ಒಂದು ವಿಶಿಷ್ಟಸ್ಥಾನ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಈ ಜಗನ್ನಾಥನ ದೇಗುಲವನ್ನು ನೀವೇಕೆ ಒಮ್ಮೆ ದರ್ಶನ ಮಾಡಿ ವಿಸ್ಮಯದ ಅನುಭವ ಪಡೆದು ಅದರ ನಿಗೂಢತೆಯನ್ನು ಬಿಡಿಸಲು ಪ್ರಯತ್ನಿಸಬಾರದು.

ಕೆ. ರಮೇಶ್

9 Responses

  1. SHARANABASAVEHA K M says:

    ಬಹಳ ಆಶ್ಚರ್ಯಕರ ಮಾಹಿತಿ…….. ನಿಮ್ಮ ಬರಹ ಓದಿದ ಮೇಲೆ ಹೋಗಬೇಕು ಅನಿಸಿದೆ.

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಲೇಖನ

  3. ನಾವು ಪುರಿ ಜಗನ್ನಾಥನನ್ನು ನೋಡಿ ಬಂದಿದ್ದೇನೆ ಆದರೂ ವಿಸ್ಮಯಗಳು ಅಷ್ಟಾಗಿ ಗೊತ್ತಿರಲಿಲ್ಲ… ತಿಳಿಸಿದಕ್ಕೆ ಧನ್ಯವಾದಗಳು ರಮೇಶ್ ಸರ್.

  4. Padma Anand says:

    ಪುರಾತದ ದೇವಾಲಯದ ವಿಸ್ಮಯಗಳ ಸೊಗಸಾದ ಚಿತ್ರಣ ಮನವನ್ನು ಆಶ್ವರ್ಯಚಕಿತವಾಗಿಸುತ್ತದೆ. ಅಪರೂಪದ ಮಾಹಿತಿಗಳನ್ನೊಳಗೊಂಡ ಕೌತುಕಮಯ ಲೇಖನ.

  5. Hema says:

    ವಿಶಿಷ್ಟವಾದ ಮಾಹಿತಿಗಳುಳ್ಳ ಲೇಖನ..ಸೊಗಸಾಗಿದೆ. 2016 ರಲ್ಲಿ ನಾವು ಪುರಿಗೆ ಭೇಟಿ ಕೊಟ್ಟಿದ್ದೆವು. ತಮ್ಮ ಬರಹವನ್ನು ಆಗಲೇ ಓದಿದ್ದರೆ, ಅಲ್ಲಿಯ ವಿಶೇಷತೆಗಳನ್ನು ಗಮನಿಸಲು ಪ್ರಯತ್ನಿಸಬಹುದಾಗಿತ್ತು!

  6. Anonymous says:

    ಎಲ್ಲರಿಗೂ ಅನಂತ ಧನ್ಯವಾದಗಳು

  7. ಇಷ್ಟೊಂದು ವಿಸ್ಮಯಗಳನ್ನು ಹೊಂದಿದ ಪುರಿ ಜಗನ್ನಾಥ ದೇಗುಲವನ್ನು ಸೊಗಸಾಗಿ ಪರಿಚಯಿಸಿದ ಲೇಖಕರಿಗೆ ವಂದನೆಗಳು

  8. ಶಂಕರಿ ಶರ್ಮ says:

    ನಾವು ಕೆಲವು ವರ್ಷಗಳ ಹಿಂದೆ ಪುರಿ ಜಗನ್ನಾಥನನ್ನು ದರ್ಶನ ಮಾಡಿದ ನೆನಪನ್ನು ಮರುಕಳಿಸುವಂತೆ ಮಾಡಿದ ತಮ್ಮ ಲೇಖನವು ಬಹಳ ಚೆನ್ನಾಗಿದೆ ಸರ್. ಆದರೆ ನನಗೆ ತಿಳಿದಂತೆ ದೇಗುಲದ ಧ್ವಜವನ್ನು ಪ್ರತಿ ದಿನ ಸಂಜೆ ಸುಮಾರು 5ಗಂಟೆ ಹೊತ್ತಿಗೆ ಬದಲಾಯಿಸುತ್ತಾರೆ. ಇದನ್ನು ನೋಡುವ ಸೌಭಾಗ್ಯ ನಮಗೆ ಒದಗಿಬಂದಿತ್ತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: