ತ್ರಿಮೂರ್ತಿ ರೂಪ ದತ್ತಾತ್ರೇಯ
ಅಧಿಕಾರ ಮತ್ತು ಸದವಕಾಶಗಳು ಸಿಕ್ಕಿದಾಗ ಹೆಣ್ಣು ಮಕ್ಕಳನ್ನು ಸತ್ವ ಪರೀಕ್ಷೆಗೊಡ್ಡುವುದು, ಪಾತಿವ್ರತ್ಯ ಪರೀಕ್ಷಿಸುವುದು ಮೊದಲಾದ ದೃಷ್ಟಾಂತಗಳು ನಮ್ಮ ಪುರಾಣದಲ್ಲಿ ಸಾಕಷ್ಟು ಸಿಗುತ್ತದೆ. ಈ ನಿಟ್ಟಿನಲ್ಲಿ ಅಗ್ನಿಪರೀಕ್ಷೆಗೊಳಗಾದವರಲ್ಲಿ ಸೀತೆ ಮೊದಲಿನವಳಾದರೆ; ಅತ್ರಿ ಮುನಿಯ ಪತ್ನಿ ಅನಸೂಯಾ, ಹರಿಶ್ಚಂದ್ರನ ಹೆಂಡತಿ ಚಂದ್ರಮತಿ ಮೊದಲಾದವರು ನೆನಪಿಗೆ ಬರುತ್ತಾರೆ. ಕೆಲವೊಮ್ಮೆ ಹೀಗೆ ಪರೀಕ್ಷೆ ಮಾಡುವವರನ್ನೇ ಪೇಚಿಗೆ ಸಿಲುಕಿಸಿ, ತಿರುಗು ಬಾಣವಾಗಿ ಪರಿಗಣಿಸುವುದೂ ಇದೆ. ಇಂತಹ ಒಂದು ಸನ್ನಿವೇಶದಲ್ಲಿ ದತ್ತಾತ್ರೇಯನ ಜನನವಾಗುತ್ತದೆ.
ಅತ್ರಿ ಮಹರ್ಷಿ ಮತ್ತು ಅನಸೂಯಾ ಆದರ್ಶ ದಂಪತಿಗಳು. ಅದರಲ್ಲೂ ಅನಸೂಯಾ ಮಹಾಪತಿವ್ರತೆ. ನಾರಿಲೋಕಕ್ಕೆ ಆದರ್ಶ ಪ್ರಾಯಳು. ಅನಸೂಯ ಅಂದರೆ ಅಸೂಯೆ ಇಲ್ಲದವಳು ಎಂದರ್ಥ. ಈಕೆಯ ಹೆಸರು ಲೋಕ ವಿಖ್ಯಾತವಾಗುತ್ತಿದ್ದಂತೆ ತ್ರಿಮೂರ್ತಿಗಳ ಪತ್ನಿಯರಾದ ಶಾರದೆ, ಲಕ್ಷ್ಮಿಯರಿಗೆ ಅಸೂಯೆಯಾಗುತ್ತದೆ. ತಮ್ಮ ಗಂಡಂದಿರಲ್ಲಿ ಅನಸೂಯಳ ಪಾತಿವ್ರತ್ಯವನ್ನು ಪರೀಕ್ಷಿಸುವಂತೆ ಪೀಡಿಸುತ್ತಾರೆ. ಪರಿಣಾಮವಾಗಿ ತ್ರಿಮೂರ್ತಿಗಳು ಬ್ರಾಹ್ಮಣ ವೇಷದಲ್ಲಿ ಅತ್ರಿಮುನಿ ಆಶ್ರಮಕ್ಕೆ ಬರುತ್ತಾರೆ.
ಇತ್ತ ಅತ್ರಿಮುನಿಯು ,ಸಂತಾನಾಪೇಕ್ಷೆಯಿಂದ ನಾರಾಯಣನನ್ನೇ ಮಗನನ್ನಾಗಿ ಪಡೆಯಬೇಕೆಂಬ ಮಹತ್ವಾಕಾಂಕ್ಷೆಯಿಂದ ತಪಸ್ಸನ್ನಾಚರಿಸುವೆನೆಂದು ಪತ್ನಿಯಲ್ಲಿ ಹೇಳಿ ಆಶ್ರಮದ ಸಂಪೂರ್ಣ ಹೊಣೆಯನ್ನು ಪತ್ನಿಗೊಪ್ಪಿಸಿ ಆಶ್ರಮದ ಹೊರಗೆಲ್ಲೋ ತಪೋ ನಿರತನಾಗುತ್ತಾನೆ.
ಇತ್ತ ಬ್ರಾಹ್ಮಣ ವೇಷಧಾರಿಗಳಾದ ತ್ರಿಮೂರ್ತಿಗಳು ಅತ್ರಿಮುನಿಯ ಆಶ್ರಮಕ್ಕೆ ಮುನಿಯ ಅನುಪಸ್ಥಿತಿಯಲ್ಲಿ ಆಗಮಿಸುತ್ತಾರೆ. ಆಶ್ರಮದ ಧರ್ಮಕ್ಕೆ ಲೋಪಬಾರದಂತೆ; ಬಂದ ಅತಿಥಿಗಳನ್ನು ಅನಸೂಯದೇವಿ ಸತ್ಕರಿಸುತ್ತಾಳೆ. ಮಧ್ಯಾಹ್ನದ ಊಟದ ಸಮಯದಲ್ಲಿ ಬ್ರಾಹ್ಮಣರು ಊಟಮಾಡದೆ ಹೋದರೆ ಒಳ್ಳೆಯದಲ್ಲ ಎಂದು ತನ್ನ ಸದ್ಗೃಹಿಣಿ ಧರ್ಮದಿಂದ ಬೇಡಿಕೊಳ್ಳುತ್ತಾಳೆ. ಆ ಕೃತಕ ಬ್ರಾಹ್ಮಣರಾದರೋ “ತಾವಿಲ್ಲಿ ಭೋಜನಮಾಡಿ ಹೋಗಲಡ್ಡಿಯಿಲ್ಲ.ಆದರೆ ನೀನು ವಿವಸ್ತ್ರಳಾಗಿ ಬಡಿಸಿದರೆ ಮಾತ್ರ ಉಣ್ಣುತ್ತೇವೆ” ಎಂದು ವಿಚಿತ್ರ ಬೇಡಿಕೆಯನ್ನು ಮುಂದಿಡುತ್ತಾರೆ. ಈ ವಿಲಕ್ಷಣ ಕೋರಿಕೆ ಅನಸೂಯಳಿಗೆ ಅತ್ಯಾಶ್ಚರ್ಯವಾಗುತ್ತದೆ. ಈ ಬ್ರಾಹ್ಮಣರೆದುರು ತಾನು ನಗ್ನಳಾದರೆ ತನ್ನ ಪಾತಿವ್ರತ್ಯಕ್ಕೆ ಧಕ್ಕೆಯಾಗುತ್ತದೆ.ಅತಿಥಿ ಸತ್ಕಾರ ಮಾಡದಿದ್ದರೆ ಆಶ್ರಮ ಧರ್ಮಕ್ಕೆ ಚ್ಯುತಿಯಾಗುತ್ತದೆ!.ಇಕ್ಕಟ್ಟಿನಲ್ಲಿ ಸಿಲುಕಿದ ಅನಸೂಯಳಿಗೆ ಏನುಮಾಡಬೇಕೆಂದು ತೋಚದಾಯಿತು.
ಆದರೂ ಒಳಗೆ ಹೋಗಿ ಪತಿಯನ್ನು ಭಕ್ತಿಯಿಂದ ಧ್ಯಾನಿಸುತ್ತಾಳೆ. “ಮೂರು ಜನ ಬ್ರಾಹ್ಮಣ ಶ್ರೇಷ್ಠರು ಹೀಗೆ ಒಂದು ವಿಚಿತ್ರ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಸನ್ನಿವೇಶದಿಂದ ಆಶ್ರಮ ಧರ್ಮಕ್ಕೆ ತೊಂದರೆಯಾಗದಿರಲಿ. ಅತಿಥಿಗಳು ನಿರಾಶರಾಗಿ ಹಿಂದಿರುಗಿ ಹೋಗದಿರಲಿ.ಈ ಮೂಲಕ ತನ್ನ ಪಾತಿವ್ರತ್ಯ ಕೆಡದಿರಲಿ.ಇದೆಲ್ಲವೂ ಸರಿಯಾಗಿ ನಡೆಯಬೇಕೆಂದಾದರೆ ಈ ಮೂವರೂ ಹಾಲುಹಸುಳೆಯರಾಗಿ ಮಲಗಲಿ ಎಂದು ಬೇಡಿಕೊಂಡು ಪ್ರಾರ್ಥಿಸುತ್ತಾ ಒಂದಿಷ್ಟು ಉದಕವನ್ನು ಒಂದು ತಂಬಿಗೆಯಲ್ಲಿ ಹೊರಗೆ ತಂದು ಅತಿಥಿಗಳಿಗೆ ಪ್ರೋಕ್ಷಣೆ ಮಾಡುತ್ತಾಳೆ.
ಪರಮಾಶ್ಚರ್ಯವಾದ ಕ್ರಿಯೆ ಅಲ್ಲಿ ನಡೆದು ಹೋಗುತ್ತದೆ!.ಮೂವರೂ ಪುಟ್ಟ ಪುಟ್ಟ ಶಿಶುಗಳಾಗಿ ಅಂಬೆಗಾಲಿಕ್ಕುತ್ತಾ ಅಳತೊಡಗಿದರು!!. ಅಳುತ್ತಿರುವ ಕಂದಮ್ಮಗಳನ್ನು ಸಮಧಾನ ಪಡಿಸುತ್ತಾ ಮಡಿಲಲ್ಲಿ ಮಲಗಿಸಿ ಲಾಲಿ ಹಾಡುತ್ತಾಳೆ!!.ತಪಸ್ಸಿನಿಂದ ಎಚ್ಚೆತ್ತ ಅತ್ರಿಮುನಿ ಆಶ್ರಮಕ್ಕೆ ಬಂದಾಗ ಮೂವರು ಹಾಲುಹಸುಳೆಗಳು ಅನಸೂಯಳ ಮಡಿಲಲ್ಲಿ ಅಳುವುದನ್ನೂ ಆಕೆ ‘ಜೋ ಜೋ ‘ ಹಾಡುವುದನ್ನೂ ಕಾಣುತ್ತಾನೆ.ಆಶ್ಚರ್ಯಗೊಂಡು ನೋಡಿದ ಪತಿಗೆ ಎಲ್ಲವನ್ನೂ ವಿವರಿಸುತ್ತಾಳೆ.
ದಿವ್ಯ ದೃಷ್ಟಿಯಿಂದ ನೋಡಿದ ಮಹರ್ಷಿಗೆ ತ್ರಿಮೂರ್ತಿಗಳೇ ತನ್ನ ಆಶ್ರಮಕ್ಕೆ ಬಂದಿದ್ದಾರೆಂದು ತಿಳಿಯುತ್ತದೆ. ಅತ್ರಿಮುನಿಗಳು ಭಕ್ತಿಯಿಂದ ತ್ರಿಮೂರ್ತಿಗಳನ್ನು ಪ್ರಾರ್ಥಿಸುತ್ತಾ ನಿಜರೂಪವನ್ನು ಪ್ರಕಟಿಸುವಂತೆ ಮತ್ತೊಮ್ಮೆ ಮಂತ್ರಿಸಿದ ಉದಕವನ್ನು ಅವರ ಮೇಲೆ ಪ್ರೋಕ್ಷಿಸುತ್ತಾರೆ. ಅಷ್ಟರಲ್ಲಿ ತ್ರಿಮೂರ್ತಿಗಳು ತಮ್ಮ ನಿಜರೂಪವನ್ನು ತಾಳುತ್ತಾರೆ. ಆಗ ಶ್ರೀ ಹರಿಯು ಮಹರ್ಷಿಗೆ ‘ನಿಮ್ಮ ತಪಸ್ಸಿನ ಫಲವಾಗಿ ನಾನೇ ನಿಮ್ಮ ಮಗನಾಗಿ ಅವತರಿಸುತ್ತೇನೆ’ ಎಂದಾಗ ಬ್ರಹ್ಮ ಮತ್ತು ಮಹೇಶ್ವರರೂ ‘ನಾವೂ ನಿಮ್ಮ ಮಕ್ಕಳಾಗಿ ಹುಟ್ಟಿ ಶ್ರೀ ಹರಿಯಲ್ಲಿ ಐಕ್ಯರಾಗುತ್ತೇವೆ’ ಎನ್ನುತ್ತಾರೆ. ಬಳಿಕ ಅವರೆಲ್ಲ ಅದೃಶ್ಯರಾಗುತ್ತಾರೆ. ಕೆಲವು ಕಾಲದ ಬಳಿಕ ಅನಸೂಯಾ ಗರ್ಭ ಧರಿಸುತ್ತಾಳೆ. ಸಕಾಲದಲ್ಲಿ ಮೂರು ತಲೆಯುಳ್ಳ ಒಂದೇ ಶಿಶುವನ್ನು ಪ್ರಸವಿಸುತ್ತಾಳೆ. ಹುಟ್ಟುವಾಗಲೇ ಮೂರು ಶಿರಗಳುಳ್ಳ ಬಾಲಕ. ಅಲ್ಲದೆ ಶ್ರೀ ಹರಿಯು ತನ್ನನ್ನೇ ಅತ್ರಿ ದಂಪತಿಗಳಿಗೆ ಕೊಟ್ಟಿದ್ದರಿಂದ (ಅತ್ತ+ ಅತ್ರೇಯ) ‘ದತ್ತಾತ್ರೇಯ’ ಎಂದು ನಾಮಕರಣ ಮಾಡುತ್ತಾರೆ. ಮುಂದೆ ಅನಸೂಯೆಗೆ ಬ್ರಹ್ಮನ ಅಂಶದಿಂದ ಚಂದ್ರನೂ ಶಿವನ ಅಂಶದಿಂದ ದೂರ್ವಾಸನೂ ಜನಿಸುತ್ತಾರೆ.
ಮಗನಿಗೆ ಮಹರ್ಷಿ ಋಷಿ ಸಂಸ್ಕಾರಗಳನ್ನೆಲ್ಲ ಕೊಡುತ್ತಾರೆ. ಮಂತ್ರ-ತಂತ್ರ ವಿದ್ಯೆಗಳನ್ನು ಕಲಿಸುತ್ತಾರೆ. ರಾಕ್ಷಸರ ಹಾವಳಿಯನ್ನು ತಡೆಯಲಾರದೆ ದೇವತೆಗಳು ದತ್ತಾತ್ರೇಯನಿಗೆ ಮೊರೆಯಿಡಲು ಈತನು ತನ್ನ ಮಂತ್ರ ಬಲದಿಂದ ರಾಕ್ಷಸರನ್ನು ತನ್ನಾಶ್ರಮಕ್ಕೆ ಬರಮಾಡಿದಾಗ ಇವನ ತಪೋ ಮಹಿಮೆಯಿಂದ ಅವರೆಲ್ಲಾ ನಾಶವಾಗುತ್ತಾರೆ. ದತ್ತಾತ್ರೇಯನು ಕಾರ್ತಿವೀರ್ಯ,ಪ್ರಹ್ಲಾದ ಮೊದಲಾದವರಿಗೆ ಜ್ಞಾನೋಪದೇಶವನ್ನು ಮಾಡುತ್ತಾನೆ. ತ್ರಿಮೂರ್ತಿ ರೂಪಾ ದತ್ತಾತ್ರೇಯ| ತ್ರಿಗುಣಾತೀತ ದತ್ತಾತ್ರೇಯ||
ಮುಂಬೈ-ಮದರಾಸು ರೈಲ್ವೆ ಮಾರ್ಗದ ಬದಿಯಲ್ಲಿರುವ ಗಾಣಗಾಪುರವು ಸುಪ್ರಸಿದ್ಧ ದತ್ತಕ್ಷೇತ್ರ. ಭೀಮಾನದಿಯ ಪಕ್ಕದಲ್ಲಿರುವ ಈ ಕ್ಷೇತ್ರದಲ್ಲಿ ಸಗುಣ ಪಾದುಕೆಗಳಿವೆಯಂತೆ.ದತ್ತಮಹಾರಾಜರ ಅನೇಕ ಲೀಲೆಗಳು ನಡೆಯುವ ಇಲ್ಲಿ ಪ್ರತಿ ಹುಣ್ಣುಮೆಗೂ ಉತ್ಸವವಿದೆ.
-ವಿಜಯಾಸುಬ್ರಹ್ಮಣ್ಯ ಕುಂಬಳೆ
ಅಡ್ಮಿನರ್ ಹೇಮಮಾಲ ಹಾಗೂ ಓದುಗರಿಗೆ ಧನ್ಯವಾದಗಳು.
Nice
ಪೂರ್ಣ ವಿವರಗಳೊಂದಿಗೆ ದತ್ತಾತ್ರೇಯನ ಜನನ ಮತ್ತು ಮಹಿಮೆಯ ಕಥೆ, ಅನಸೂಯಾಳ ಪಾವಿತ್ರತೆಗೂ ಹಿಡಿದ ಕೈಗನ್ನಡಿಯಾಗಿ ಚೆನ್ನಾಗಿ ಮೂಡಿ ಬಂದಿದೆ.
ನೀವು ಪುರಾಣ ಕಥೆ ಹೇಳುವಾಗ ಅದರ ಹಿನ್ನೆಲೆಯಲ್ಲಿ ವಿವರಿಸಿ ಹೇಳುವ ರೀತಿ ನನಗೆ ಮುದತರುತ್ತದೆ ವಿಜಯಾ ಮೇಡಂ ಧನ್ಯವಾದಗಳು.
ಎಷ್ಟು ವಿಷಯ ತಿಳಿಯಿತು.
ಮರೆತುಹೋಗಿದ್ದ ಪೌರಾಣಿಕ ಕಥೆಯನ್ನು ನೆನಪಿಸಿದಿರಿ. ಸೊಗಸಾದ ನಿರೂಪಣೆ .
ತ್ರಿಮೂರ್ತಿ ರೂಪಾ ದತ್ತಾತ್ರೇಯ… ಪೌರಾಣಿಕ ಕಥೆಯ ನಿರೂಪಣೆ ಇಷ್ಟವಾಯ್ತು..ಧನ್ಯವಾದಗಳು ವಿಜಯಕ್ಕಾ.