ಅರಿಶಿಣ ಶಾಸ್ತ್ರ
ಅರಿಶಿಣ ಹತ್ತಿದೆ ಜವಾಬ್ದಾರಿಯೆಂಬ ಹಳದಿ ಅಂಟಿದೆ
ಕಾರ್ಯ ಕಟ್ಟಳೆಗಳೆಂದು ಹೊರಗೆ ಇರುತ್ತಿದ್ದ ಬಾಲಕಿಯಿಂದು ಹೊಸಲು ದಾಟಲು ಹಿಂಜರಿಯುತಿದೆ
ಅಲೆಯುವ ಕಾಲುಗಳಿಗೆ ಓಡುವ ಮನಸ್ಸಿಗೆ ಇಂದು
ಹಿರಿಯರ ಒತ್ತಾಸೆ ಬಿಡದೆ ಕಟ್ಟಿ ಹಾಕಿದೆ
ಮೊದಲಿನ ತುಂಟತನ ಮಾಯವಾಗಿ ಪ್ರಬುದ್ಧತೆ ಮೊಗದಲಿ ಮನೆ ಮಾಡಿದೆ
ಪ್ರೀತಿಯೆಂಬ ಹರಿದ್ರಾ ಕೊಂಬು ತೇಯ್ದು ಮಮತೆಯೆಂಬ ಎಣ್ಣೆಯ ಬೆರಸಿ ಹಚ್ಚಿ
ಕಾಳಜಿಯೆಂಬ ಜೋಳದಕಾಳುಗಳ ಶಿರದ ಮೇಲೆ ಸುರಿದು
ಜೋಪಾನವೆಂಬ ಆರತಿಯೆತ್ತಿ ಕಣ್ಣಾಸರೆಯಾಗದಂತೆ ನೆಟಿಕೆ ತೆಗೆದಿದೆ
ಸಕಲವ ಗಮನಿಸುತಾ ಮಾತೃ ಹೃದಯ ಖುಷಿಯಿಂದ ತುಂಬಿದೆ
ಎಂದೂ ಭಾವುಕವಾಗದ ತಂದೆಯೆಂಬ ಗಟ್ಟಿ ಜೀವವಿಂದು
ಯಾರಿಗೂ ಕಾಣದಂತೆ ಇಳಿದ ಕಣ್ಣೀರ ಹನಿಗಳ ಒರೆಸಿದೆ
ಮತ್ತೊಂದು ಮನೆಯ ಬೆಳಗಲು ಹೃನ್ಮಂದಿರದ ದೀಪವಿಂದು ತೆರಳುತಿದೆ
ಖುಷಿಯ ಬಿತ್ತಿ ಖುಷಿಯ ಬೆಳೆ ತೆಗೆಯಲು ಸಜ್ಜಾಗುತ್ತಿದೆ
ಇನ್ನೊಂದು ಸುಖೀ ಕುಟುಂಬ ಕವಲೊಡೆಯುವ ಲಕ್ಷಣ ಕಾಣುತಿದೆ
– ಕೆ.ಎಂ ಶರಣಬಸವೇಶ
ಚೆನ್ನಾದ ಕವಿತೆ..ಸಾರ್.
ಸುಖೀ ಕುಟುಂಬಕ್ಕೆ ಸಜ್ಜಾಗುತ್ತಿರುವ ಕನ್ಯೆಯ ಬಗೆಗಿನ ಸೊಗಸಾದ ಕವನ
ಧನ್ಯವಾದಗಳು ನಾಗರತ್ನ ಮೇಡಂ ಹಾಗೂ ಶಂಕರಿ ಶರ್ಮ ಮೇಡಂ ಗೆ
ಚೆನ್ನಾಗಿದೆ
ಧನ್ಯವಾದಗಳು ನಯನ ಬಜಕೂಡ್ಲು ಮೇಡಂ
ಚೆನ್ನಾಗಿದೆ
ಖುಷಿಯ ಬಿತ್ತಿ ಖುಷಿಯ ಬೆಳೆ ತೆಗೆದ ಅರಿಶಿಣ ವನ್ನು ಇಂದು ಹೊಸದಾಗಿ ನೋಡುವಂತಾಯಿತು
ವಂದನೆಗಳು ಶರಣ್ ಸರ್
ಎಂದಿದ್ದರೂ ಹೆಣ್ಣುಮಕ್ಕಳ ವಿದಾಯ ಮನಸ್ಸನ್ನುಆರ್ದವಾಗಿಸುವ ಸಂಗತಿಯೇ ಹೌದು. ಚೆನ್ನಾಗಿದೆ.