ವಾಟ್ಸಾಪ್ ಕಥೆ 7: ತನ್ನಂತೆ ಪರರ ಬಗೆದೊಡೆ.
ಒಬ್ಬ ಹತ್ತು ವರ್ಷದ ಪುಟ್ಟ ಬಾಲಕನಿಗೆ ತಾನೊಂದು ನಾಯಿಮರಿಯನ್ನು ಸಾಕಬೇಕೆಂಬ ಆಸೆಯುಂಟಾಯಿತು. ತನ್ನ ತಂದೆಯನ್ನು ತನಗೊಂದು ನಾಯಿಮರಿ ತಂದುಕೊಡಿರೆಂದು ಕೇಳಿಕೊಂಡ. ತಂದೆಗೆ ಮಗನ ಮೇಲೆ ತುಂಬ ಪ್ರೀತಿ. ಮಗನ ಬಯಕೆಯನ್ನು ತಿರಸ್ಕರಿಸಲಾಗದೆ ಆತನನ್ನು ಪೇಟೆಗೆ ಕರೆದುಕೊಂಡು ಹೋದರು. ಅಲ್ಲಿ ನಾಯಿಮರಿಗಳನ್ನು ಮಾರುವ ಅಂಗಡಿಯೊಂದಿತ್ತು. ಅನೇಕ ಜಾತಿಯ ನಾಯಿಮರಿಗಳು ಅಲ್ಲಿದ್ದವು. ಆ ಹುಡುಗ ಎಲ್ಲವನ್ನೂ ಕುತೂಹಲದಿಂದ ನೋಡುತ್ತಾ ಹೋದ. ಅವನಿಗೆ ಇಷ್ಟವಾದ ಒಂದು ನಾಯಿಮರಿಯತ್ತ ಕೈ ತೋರಿಸಿ ”ಅದನ್ನು ಕೊಡಿಸಿರಿ” ಎಂದ.
ಅಂಗಡಿಯಾತ ”ಅದು ಬೇಡ ಮಗೂ, ಅದಕ್ಕೆ ಒಂದು ಕಾಲು ಊನವಾಗಿದೆ. ಹುಟ್ಟುವಾಗಲೇ ಕಾಲಿಲ್ಲ. ಅದನ್ನು ಹೊರಕ್ಕೆ ಯಾರಿಗೂ ಕಳಿಸಲಾಗದೇ ನಾನೇ ಕನಿಕರದಿಂದ ಸಾಕುತ್ತಿದ್ದೇನೆ” ಎಂದು ಹೇಳಿದ. ”ನೀನು ಅದನ್ನು ಬಿಟ್ಟು ಬೇರೆ ಯಾವುದಾದರೂ ನಾಯಿಮರಿಯನ್ನು ಆಯ್ಕೆಮಾಡಿಕೋ” ಎಂದು ಸಲಹೆ ಮಾಡಿದ.
ಆ ಹುಡುಗ ”ಬೇರೆ ನಾಯಿ ಬೇಡ ಅಂಕಲ್, ನನಗೆ ಅದನ್ನೇ ಕೊಡಿ” ಎಂದು ಹಠಮಾಡಿದ. ತಂದೆ ಕೂಡ ಮಗನಿಗೆ ಅನೇಕ ವಿಧವಾಗಿ ಅದು ಬೇಡವೆಂದು ತಿಳಿಸಿದರೂ ಮಗ ಒಪ್ಪಲಿಲ್ಲ. ಅಂಗಡಿಯವನು ”ಮಗೂ ಅದ್ಯಾಕೆ ಅಷ್ಟು ಮೊಂಡುತನ ಮಾಡುತ್ತಿದ್ದೀಯಾ?” ಎಂದು ಕೇಳಿದ.
ಆ ಹುಡುಗ ”ನೋಡಿ ಅಂಕಲ್ ” ಎಂದು ಪ್ಯಾಂಟನ್ನು ಮೇಲಕ್ಕೆ ಸರಿಸಿ ತನ್ನ ಕಾಲೊಂದನ್ನು ತೋರಿಸಿದ. ಅದು ಪೋಲಿಯೋ ರೋಗಕ್ಕೆ ತುತ್ತಾಗಿ ಅಶಕ್ತವಾಗಿತ್ತು. ”ಇದರಿಂದಾಗಿ ನಾನು ಎಲ್ಲರಂತೆ ಆಟಪಾಟಗಳನ್ನು ಆಡಲಾಗದು. ಕಷ್ಟಪಟ್ಟು ನಡೆದಾಡುತ್ತೇನಷ್ಟೇ. ಎಲ್ಲರಂತಿಲ್ಲವಲ್ಲ ಎಂಬ ಸಂಕಟ ನನ್ನನ್ನು ಬಾಧಿಸುತ್ತಲೇ ಇದೆ. ಈ ನಾಯಿಮರಿಗೂ ಅಷ್ಟೇ. ನಾನು ಅದನ್ನೇ ಸಾಕುತ್ತಾ ಅದರ ಕೊರತೆ ಕಾಡದಂತೆ ಅದಕ್ಕೆ ಹೆಚ್ಚು ಪ್ರೀತಿ ತೋರಿಸುತ್ತೇನೆ” ಎಂದುತ್ತರಿಸಿದ.
ತಂದೆ ಮತ್ತು ಅಂಗಡಿಯವನು ಮೂಕರಾದರು ಮಗುವಿನ ಆಸೆಯಂತೆ ಅಂಗ ಊನವಾಗಿದ್ದ ನಾಯಿಮರಿಯನ್ನೇ ಮಗುವಿಗೆ ಕೊಟ್ಟರು. ಸಂತಸದಿಂದ ಅದನ್ನೆತ್ತಿಕೊಂಡು ತಂದೆಯೊಡನೆ ಮನೆಗೆ ಹೊರಟ. ತಂದೆಗೆ ಮಗನ ಬಗ್ಗೆ ತುಂಬ ಹೆಮ್ಮೆಯಾಯಿತು.
–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಹೃದಯಸ್ಪರ್ಶಿಯಾಗಿದೆ ಕಥೆ.
ಮಕ್ಕಳೂ ಪ್ರಬುದ್ಧವಾಗಿ ಯೋಚಿಸಬಲ್ಲರು ಎಂಬ ಸಂದೇಶವನ್ನು ಸಾರುವ ಸುಂದರ ಕಥೆ.
ಧನ್ಯವಾದಗಳು ನಯನ ಮೇಡಂ
ಧನ್ಯವಾದಗಳು ಪದ್ಮಾ ಮೇಡಂ