ನುಡಿದಂತೆ ನಡೆದ ದೈವ……..
ಕಂಡುಕೊಂಡ ಜ್ಞಾನವ ಹಂಚುವುದೇ ಪರಮ ಧರ್ಮ ಎಂದು ನಂಬಿದ ಯೋಗಿ
ತಾನು ಸ್ವತಃ ಪಾಲಿಸುತ್ತಾ ಉಪದೇಶ ನೀಡಿದ ಆಧ್ಯಾತ್ಮ ಜ್ಯೋತಿ
ಆಡಂಬರದ ಜೀವನ ತೊರೆದು ಸಂಚಾರಿ ಬದುಕ ಅಪ್ಪಿಕೊಂಡ ನಿಜ ವಿರಾಗಿ
ಮೆಲುಧ್ವನಿಯಲ್ಲಿ ಬಾಳಿನ ತತ್ವ ಸಾರಿದ ಸರಳ ಜೀವಿ
ಪದವಿ ಪಟ್ಟ ಬಯಸದೆ ಜನ ಮಾನಸದಲಿ ನೆಲೆಯೂರಿದ ಸ್ವಾಮೀಜಿ
ಬಹು ಎಕರೆಗಳ ಹೊಲ ಹಲವು ಅಂಕಣದ ಮನೆ ಬಿಟ್ಟು ಮಠ ಸೇರಿದ ಮಾನವತಾವಾದಿ
ನಿಸರ್ಗದ ಚೆಲುವನ್ನು ಮನದುಂಬಿಕೊಂಡು ಮಗುವಿನಂತೆ ಸಂಭ್ರಮಪಡುತ್ತಿದ್ದ ಮುಗ್ಧ ಮನಸ್ವಿ
ಬದುಕಿದ ಪ್ರತಿ ಕ್ಷಣವನ್ನು ಸಾರ್ಥಕತೆಗೆ ಮುಡಿಪಾಗಿಟ್ಟ ಸಾತ್ವಿಕ ಶಿರೋಮಣಿ
ಮೌಢ್ಯತೆ ಕಳೆದು ಮೌಲ್ಯಗಳ ಬಿತ್ತಲು ಶ್ರಮಿಸಿದ ಸಂತ
ಉದ್ವೇಗ ಆವೇಗವಿಲ್ಲದ ಸಕಲವ ತ್ಯಜಿಸಿದ ಸನ್ಯಾಸಿ
ದೂರವಾದ ಚೇತನವ ನೆನೆದು ಕಣ್ಣು ತುಂಬಿ ಬರುತಿದೆ
ಭಾರವಾದ ಮನದಲಿ ಅವರದೇ ಅಮೃತವಾಣಿಯು ರಿಂಗಣಿಸಿದೆ
ನಿಧಾನಗತಿಯಲಿ ಹೆಜ್ಜೆ ಹಾಕುತ ಬರುವ ಶ್ವೇತ ವಸ್ತ್ರಧಾರಿ ಇನ್ನಿಲ್ಲ
ಉಪಮೆ ಹೋಲಿಕೆಗಳ ನೀಡುತಾ ಮಂತ್ರ ಮುಗ್ದವಾಗಿಸುವ ಮಾತುಗಾರ ಇನ್ನು ಬರುವುದಿಲ್ಲ
ಸ್ಮಾರಕ ಸ್ಥಾವರಗಳ ಬೇಡವೆಂದ ಜೀವಕೆ ಮನದಲ್ಲೇ ಗುಡಿ ಕಟ್ಟೋಣ
ಯಾರನ್ನು ದೂರದ ದ್ವೇಷಿಸಿಸದ ದೈವ ಮಾನವನ ಸನ್ನಡತೆಯ ಪುಷ್ಪದಿಂದ ಪೂಜಿಸೋಣ
ಜಗದ ಜಂಗಮನ ಆದರ್ಶಗಳನ್ನು ನಮ್ಮ ಉಸಿರಾಗಿಸೋಣ
–ಕೆ.ಎಂ ಶರಣಬಸವೇಶ.
ಇತ್ತೀಚಿಗೆ ಅಗಲಿದ ಸಂತರ ಬಗ್ಗೆ ಬರೆದಿರುವ ಕವನ ಅರ್ಥಪೂರ್ಣ ವಾಗಿದೆ ಸಮಯೋಚಿತ ವಾಗಿದೆ..ಧನ್ಯವಾದಗಳು ಸಾರ್
ಚೆನ್ನಾಗಿದೆ
ಪ್ರಕಟಿಸಿದ ಹೇಮಾ ಮೇಡಂ ಗೆ ಹಾಗೂ ಪ್ರತಿಕ್ರಿಯೆ ನೀಡಿದ ನಾಗರತ್ನ ಮೇಡಂ ಹಾಗೂ ನಯನ ಮೇಡಂ ಅವರಿಗೆ ಧನ್ಯವಾದಗಳು
ಜಗದ ಜಂಗಮನ ಆದರ್ಶಗಳನ್ನು ಬಣ್ಣಿಸಿರುವ ಕವನ ಹೃದಯಸ್ಪರ್ಶಿಯಾಗಿದೆ
ಕವಿತೆ ಭಾವಪೂರ್ಣ ಶ್ರದ್ಧಾಂಜಲಿಯ ದ್ಯೋತಕವಾಗಿದೆ.
ಗಾಯತ್ರಿ ದೇವಿ ಸಜ್ಜನ್ ಮೇಡಂ ಹಾಗೂ ಪದ್ಮಾ ಆನಂದ ಮೇಡಂ ಅವರಿಗೆ ಧನ್ಯವಾದಗಳು
ಪವಿತ್ರಾತ್ಮನಿಗೆ ಅರ್ಥಪೂರ್ಣ ನುಡಿ ನಮನ