ಸೈಕಲ್ ಮತ್ತು ಕಾರು – ಒಂದು ಆರ್ಥಿಕ ವಿಶ್ಲೇಷಣೆ

Share Button


ಜಗತ್ತಿನ ಎಲ್ಲ ಕಡೆ ವಾಯುಮಾಲಿನ್ಯ, ಶಬ್ದಮಾಲಿನ್ಯ, ಹಣದುಬ್ಬರ, ರಸ್ತೆಯಲ್ಲಿ ವಾಹನ ಸಾಂದ್ರತೆ, ಪೆಟ್ರೋಲ್ ಹಾಗೂ ಇನ್ನಿತರ ವಸ್ತುಗಳ ಬೆಲೆ ಏರಿಕೆಗಳನ್ನೆಲ್ಲಾ ಗಮನಿಸಿ ಕಾರಿನ ಬದಲು ಸೈಕಲ್‌ನ ಬಳಕೆಗೆ ಬಹಳ ಪ್ರಾಧಾನ್ಯ ಕೊಡುತ್ತಿದ್ದಾರೆ. ಸೈಕಲ್ ಸವಾರಿಯಿಂದ ಜನರ ಆರೋಗ್ಯ ಸುಧಾರಿಸಿ ದೇಶದ ಪ್ರಗತಿ ಹಾಗೂ ಆರ್ಥಿಕ ಸ್ಥಿತಿಗೆ ಪ್ರಗತಿ ಕಾಣಬಹುದು ಎಂಬ ಒಂದು ಭಾವನೆ ಜನರಲ್ಲಿ ಹಾಗೂ ಕೆಲವು ಅರ್ಥಶಾಸ್ತ್ರಜ್ಞರ ಒಂದು ನಂಬಿಕೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಜಿಸ್ಸಿಕ ಮಾರಿಯ ಡ್ವಾಯರ ಎಂಬುವವರು ಒಂದು ವಾದ ಮಂಡಿಸಿದ್ದಾರೆ. ಅವರ ಪ್ರಕಾರ ಸೈಕಲ್‌ನ ಬಳಕೆಯಿಂದ ಜಗತ್ತಿನ ಆರ್ಥಿಕ ಪರಿಸ್ಥಿತಿ ನಿಧಾನವಾಗಿ ಅಧೋಗತಿಗೆ ಹೋಗಲು ಸೈಕಲ್ ಕಾರಣವಾಗಬಹುದು ಎಂಬ ಒಂದು ಭಯ ಆವರಿಸಿದೆ.

ಓರ್ವ ತನ್ನ ಕಾರಿನ ಬದಲು ಒಂದು ಸೈಕಲ್ ಖರೀದಿಸುತ್ತಾನೆ ಎಂದಿಟ್ಟುಕೊಳ್ಳಿ. ಇದರಿಂದ ಆಗುವ ಸರಪಳಿ ಕ್ರಿಯೆ (Chain reaction) ನ್ನು ನೋಡೋಣ. ಅವನು ಕಾರು ಖರೀದಿಸಲು ಸಾಲ ಮಾಡುವುದಿಲ್ಲ. ಪೆಟ್ರೋಲ್ ಅಥವ ಡೀಸೆಲ್ ಖರೀದಿಸುವ ಪ್ರಮೇಯವಿಲ್ಲ. ಕಾರಿನ ನಿರ್ವಹಣೆಗೆ, ರಿಪೇರಿಗೆ ಗ್ಯಾರೆಜ್‌ನ ಅವಶ್ಯಕತೆಯಿಲ್ಲ, ಬಿಡಿಭಾಗಗಳ ಖರೀದಿ ಇಲ್ಲ. ಕಾರನ್ನು ಆಗಾಗ್ಗೆ ಒರೆಸಿ ಶುದ್ಧಗೊಳಿಸುವವರ ಅಗತ್ಯವಿಲ್ಲ. ಪಾರ್ಕಿಂಗ್ ವ್ಯವಸ್ಥೆಯಲ್ಲಿ ಹಣ, ಸಮಯ ವ್ಯರ್ಥವಿಲ್ಲ. ಕಾರು ಅಪಘಾತಗೊಳ್ಳುತ್ತದೆ ಎಂಬ ಭಯವಿಲ್ಲ, ಆದ್ದರಿಂದ ವಿಮೆಯ ಅಗತ್ಯವಿಲ್ಲ, ಟೋಲ್‌ನಲ್ಲಿ ಖರ್ಚಿಲ್ಲ. ಸೈಕಲ್ ಸವಾರಿಯಿಂದ ಆರೋಗ್ಯ ಸುಧಾರಿಸಿ ಅವನು ಆಗಾಗ ಆಸ್ಪತ್ರೆಗೆ ಹೋಗುವ ಸನ್ನಿವೇಶವಿಲ್ಲ. ಹೀಗಾಗಿ ಮಾತ್ರೆ, ಔಷಧಗಳ ಖರೀದಿಯಿಲ್ಲ. ವೈದ್ಯರನ್ನು ಆಗಾಗ ನೋಡಿ ಹಣ ಖರ್ಚು ಮಾಡಬೇಕಾದ ಪ್ರಮೇಯವೇ ಇಲ್ಲ. ಡ್ರೈವಿಂಗ್ ಲೈಸೆನ್ಸ್ ಹಾಗೂ ರಸ್ತೆ ಕರಗಳ (Road Tax)) ತಲೆ ಬಿಸಿ ಇಲ್ಲ. ಇದೆಲ್ಲದರ ಬದಲು ಒಂದು ಕಾರು ಖರೀದಿಸಿದರೆ ಶೋರೂಂ, ಡ್ರೈವಿಂಗ್ ಲೈಸೆನ್ಸ್, ರಸ್ತೆ ಕರ, ಸರ್ವೀಸ್, ರಿಪೇರಿ, ಪೆಟ್ರೋಲ್ ಬಂಕ್, ಟೋಲ್, ಅಪಘಾತ, ಆಸ್ಪತ್ರೆ, ಔಷಧಿಗಳು ಇವುಗಳ ಸೇವೆ ಸಿಗುತ್ತದೆ. ಅಂದರೆ ಒಂದು ಕಾರು ಖರೀದಿಯಿಂದ ಕನಿಷ್ಠ 30 ರಿಂದ 40 ಸಂಸ್ಥೆಗಳು ಹಾಗೂ ಸಾವಿರಾರು ಉದ್ಯೋಗ ಹಾಗೂ ಸರಕಾರದ ಬೊಕ್ಕಸಕ್ಕೆ ಕರದ ರೂಪದಲ್ಲಿ ಹಣ ಸೇರುತ್ತದೆ. ಇನ್ನು ಕಾರ್ ಮಾಲೀಕರು ಐಷಾರಾಮಿ ಫೀಟ್ಜಾ, ಮೆಕ್ ಡೊನಾಲ್ಡ್, ಕೆ‌ಎಫ್‌ಸಿ ಗಳಲ್ಲಿ ಉಪಹಾರ ಮಾಡುವುದರಿಂದ ಕನಿಷ್ಠ 50 ನೌಕರಿಗಳು ಸೃಷ್ಟಿಯಾಗಲಿವೆ. ಈ ಜಂಕ್‌ಫುಡ್ ಸೇವನೆಯಿಂದ ಕನಿಷ್ಠ 10-15 ದಂತವೈದ್ಯರು, ಮೂವತ್ತರಿಂದ ನಲವತ್ತು ಹೃದ್ರೋಗ ತಜ್ಞರು, ಹತ್ತರಿಂದ ಹದಿನೈದು ಡಯೆಟಿಷಿನ್ ಹಾಗೂ 2-4 ನ್ಯೂಟ್ರಿಷಿಯನ್‌ಗಳ ಅವಶ್ಯಕತೆ ಇದೆ. ಇವರಿಗೆ ಕಟ್ಟಡ, ನೌಕರರು ಎಲ್ಲ ಸೇರಿ ಸಾವಿರಾರು ಜನರಿಗೆ ಉದ್ಯೋಗ ಲಭಿಸಲಿದೆ. ಸೈಕಲ್ ಸವಾರರಿಂದ ಈ ಎಲ್ಲಾ ಉದ್ಯೋಗಗಳಿಗೆ ಕತ್ತರಿ ಬೀಳುವ ಸಂಭವ ಹೆಚ್ಚು. ನಿರುದ್ಯೋಗ ಸಮಸ್ಯೆ ಭುಗಿಲೇಳುವ ಸಂಭವ ಅಧಿಕ.

ಇನ್ನೂ ವಾಕಿಂಗ್ ಮಾಡುತ್ತಾರಲ್ಲ ಅವರೂ ಇನ್ನೂ ಮಾರಕ. ಸೈಕಲ್ ಸವಾರರಾದರೆ ಕನಿಷ್ಠ ಟೈರ್, ಟ್ಯೂಬ್‌ಗಳನ್ನಾದರೂ ಖರೀದಿಸುತ್ತಾರೆ. ಪಂಕ್ಚರ್ ಹಾಕಿಸುವ ಕೆಲವರಿಗಾದರೂ ಕೆಲಸ ಸಿಗುತ್ತದೆ. ವಾಕಿಂಗ್ ಮಾಡುವವರಿಂದ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ ಎಂಬುದು ಲೇಖಕರ ಅಭಿಪ್ರಾಯ. ಆದರೆ ವಾಸ್ತವಕ್ಕೆ ಬಂದರೆ ಉತ್ತಮ ಆರೋಗ್ಯ ಹೊಂದಿದ ಪ್ರಜೆಗಳು ದೇಶದ ಆಸ್ತಿ ಎನ್ನುವುದನ್ನು ಒಪ್ಪಲು ಯಾವ ಆರ್ಥಿಕ ತಜ್ಞರನ್ನಾಗಲೀ, ನೊಬೆಲ್ ಪುರಸ್ಕೃತ ಎಕನಾಮಿಸ್ಟ್‌ಗಳನ್ನಾಗಲೀ ಕೇಳಬೇಕಿಲ್ಲ. ಆದರೆ ಅದರ ಅವಶ್ಯಕತೆ ಇರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಆರೋಗ್ಯವಂತ ಪ್ರಜೆ ಮಾತ್ರ ದೇಶಕಟ್ಟಬಲ್ಲನು. ಇಲ್ಲವಾದರೆ ಅಸ್ವಸ್ಥ ಪ್ರಜೆ ಬರೇ ಆಸ್ಪತ್ರೆ ಸುತ್ತುತ್ತಲೇ ಇರುವನು ಅಲ್ಲವೇ? ಇದು ಒಂದು ತರಹ ಬೀಜವೃಕ್ಷ ನ್ಯಾಯದಂತೆ ಅಲ್ಲವೇ? ದೇಶದ ಜಿ.ಡಿ.ಪಿ. ಯ ಮೇಲೆ ಸೈಕಲ್‌ನ ಪ್ರಭಾವವಂತೂ ಇದ್ದೇ ಇರುತ್ತದೆ ಎಂಬುದು ಒಂದು ವಾದ. ಲೇಖಕರ ಈ ವಾದವನ್ನು ಸಮಯವೇ ನಿರ್ಧರಿಸಬಹುದು. ಜಗತ್ತಿನ ಆರ್ಥಿಕ ಸ್ಥಿತಿ ಅಲ್ಲೋಲಕಲ್ಲೋಲವಾದಾಗ ಈ ಒಂದು ಕಾರಣವೂ ಇರಬಹುದು ಎಂಬ ನಿರ್ಧಾರಕ್ಕಂತೂ ಬರಲೇಬೇಕು. ಆದ್ದರಿಂದ ದೇಶದ ಆರ್ಥಿಕತೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇದ್ದರೆ ಕಾರೂ ಖರೀದಿಸಿರಿ. ನೀವೇನಂತೀರಿ?

ಕೆ. ರಮೇಶ್

8 Responses

  1. ನಯನ ಬಜಕೂಡ್ಲು says:

    ಚಂದದ ಬರಹ. ಎಷ್ಟೊಂದು ಸೂಕ್ಷ್ಮ ಅವಲೋಕನ, ವಿಚಾರಗಳು ಒಂದರೊಳಗೊಂದು ಹೆಣೆಯುತ್ತಾ ಸಾಗುತ್ತವೆ.

  2. ಮಾಹಿತಿಪೂರ್ಣ ಲೇಖನ. ..ಚಿಕ್ಕದಾಗಿ ಚೊಕ್ಕವಾಗಿ ಮೂಡಿಬಂದಿದೆ…ಧನ್ಯವಾದಗಳು ಸಾರ್

  3. Padma Anand says:

    ಮನಸ್ಸು ಮತ್ತು ಬುದ್ಧಿ ಎರಡನ್ನೂ ಚಿಂತನೆಗೆ ಹಚ್ಚುವ ಸೊಗಸಾದ ಲೇಖನ.

  4. ಶಂಕರಿ ಶರ್ಮ says:

    ವಿಡಂಬನಾತ್ಮಕ ಲೇಖನ ಚೆನ್ನಾಗಿದೆ ಸರ್.. ಎಲ್ಲವನ್ನೂ ಹುಟ್ಟು ಹಾಕಲು ಕಾರು ಕೊಳ್ಳುವ ಅವಶ್ಯಕತೆಯನ್ನು ಒತ್ತಿ ಹೇಳಿದ್ದೀರಿ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: