ಜೂನ್ ನಲ್ಲಿ ಜೂಲೇ : ಹನಿ 7
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಲೇಹ್ ನಲ್ಲಿ ವಿಹಾರ 1-ಹಾಲ್ ಆಫ್ ಫ಼ೇಮ್’
25 ಜೂನ್ 2018 ರಂದು ನಮಗೆ ಲೇಹ್ ನ ಸ್ಥಳೀಯ ಪ್ರೇಕ್ಷಣೀಯ ಜಾಗಗಳಿಗೆ ಭೇಟಿಯ ಕಾರ್ಯಕ್ರಮವಿತ್ತು. ಓಯೋ ಟ್ರಾವೆಲ್ಸ್ ನವರು ನೇಮಿಸಿದ ಸ್ಥಳೀಯ ಏಜೆಂಟ್ ಜಿಮ್ ತಿಳಿಯಪಡಿಸಿದಂತೆ, ನಾವು ಅಂದು ಬೆಳಗ್ಗೆ 0930 ಗಂಟೆಗೆ ತಿಂಡಿ ತಿಂದು ಸಿದ್ಧರಾಗಬೇಕಿತ್ತು. ಸಂಜೆ ಪುನ: ಅದೇ ಹೋಟೆಲ್ ಗೆ ಬರಲಿರುವುದರಿಂದ ಲಗೇಜಿನ ಚಿಂತೆಯಿರಲಿಲ್ಲ. ನಾಳೆ ತಡವಾಗಿ ಎದ್ದರಾಯಿತೆಂದು, ತಂಪಾದ ಹವೆಗೆ ದಪ್ಪ ರಜಾಯಿ ಹೊದ್ದು ಮಲಗಿದ್ದ ನಮಗೆ ಸುಖನಿದ್ದೆ. ಮುಂಜಾನೆ 0430 ಗಂಟೆಗೆ ಹಕ್ಕಿಗಳ ಇಂಚರ ಕೇಳಿ ಎಚ್ಚರವಾದಾಗ ಆಗಲೇ ಚೆನ್ನಾಗಿ ಬೆಳಕಾಗಿತ್ತು!
ಸ್ವಲ್ಪ ಸಮಯದ ನಂತರ ಹೊರಗೆ ಬಂದಾಗ, ಗಿರಿ ಮತ್ತು ಝೋರಾ ದಂಪತಿಗಳು, ನಿದ್ದೆ ಚೆನ್ನಾಗಿ ಬಂತೇ, ಆರಾಮ ಇದ್ದೀರಾ ಇತ್ಯಾದಿ ವಿಚಾರಿಸಿಕೊಂಡರು. ಝೋರಾ ಅವರ ಬಳಿ ಕುಶಲೋಪರಿ ಮಾತಿಗಿಳಿದೆ. ಅವರ ವೈಯುಕ್ತಿಕ ಅಡುಗೆಮನೆಗೂ ಹೋದೆ. ಅಡುಗೆಕೋಣೆ ಅಚ್ಚುಕಟ್ಟಾಗಿತ್ತು. ಅವರಿಗೆ ಇಬ್ಬರು ಮಕ್ಕಳು. ಮಗ ಲೇಹ್ ನಲ್ಲಿ ಪೋಲೀಸ್ ಅಧಿಕಾರಿ. ಸೊಸೆ ಅಡಿಟರ್. ಮಗಳು ಅಧ್ಯಾಪಿಕೆ, ಮದುವೆಯಾಗಿ ಕಾರ್ಗಿಲ್ ನಲ್ಲಿದ್ದಾರೆ. ಮೊಮ್ಮಕ್ಕಳು ಡಿಲ್ಲಿಯಲ್ಲಿ ಬೋರ್ಡಿಂಗ್ ಸ್ಕೂಲ್ ನಲ್ಲಿ ಓದುತ್ತಿದ್ದಾರೆ. ಬೇಸಿಗೆಯಲ್ಲಿ ಲೇಹ್ ನಲ್ಲಿ ಹೋಟೆಲ್ ನಡೆಸುವ ಇವರು, ಚಳಿಗಾಲದಲ್ಲಿ ಜಮ್ಮುವಿನಲ್ಲಿರುವ ತಮ್ಮ ಮನೆಗೆ ಹೋಗುತ್ತಾರೆ. ಅಲ್ಲಿ ಅವರಿಗೆ ಅಂಜೂರ, ಆಪ್ರಿಕೋಟ್, ಸೇಬು ಇತ್ಯಾದಿ ಹಣ್ಣುಗಳ ತೋಟವಿದೆ. ಅನುಕೂಲಸ್ಥ , ವಿದ್ಯಾವಂತ ಕುಟುಂಬದ ಮಂದಿಯಿವರು ಎಂದು ಅರ್ಥವಾಯಿತು.
ತಮಾಷೆಗೆಂದು , ನಾವು ಇಲ್ಲಿ ನಿವೇಶನ ಕೊಳ್ಳುವುದಾದರೆ ದರ ಹೇಗಿರುತ್ತದೆ ಎಂದೆ. ಗಂಡ ಹೆಂಡಿರಿಬ್ಬರೂ ಗಲಗಲನೇ ನಗುತ್ತಾ ‘ ಆಪ್ ಕೊ ಇಧರ್ ನಹೀ ಸೈಟ್ ನ ಮಿಲೆಗಾ.. .ಆಪ್ ಕಾಶ್ಮೀರ್ ಕಾ ನಿವಾಸಿ ಹೋನಾ ಹೈ…ಬಾಹರೋಂಕೊ ಇಧರ್ ಘರ್ ಮನಾ ಹೈ…ಸೈಟ್ ಬಹುತ್ ಮಹಂಗಾ ಹೈ… “ ಅಂದರು. ಬಹುಶ ಇದು ಕೂಡ ಭಯೋತ್ಪಾದಕರ ನಿಗ್ರಹಕ್ಕಾಗಿ ಮಾಡಿರುವ ಕಾನೂನು ಇರಬಹುದು. ಅಲ್ಲಿಗೆ ಲೇಹ್ ನಲ್ಲಿ ‘ಸೈಟ್’ ತೆಗೆಯುವ ನಮ್ಮ್ ‘ಕನಸಿಗೂ’ ಗೇಟ್ ಪಾಸ್ ಕೊಡಬೇಕೆಂದಾಯಿತು! ಅಲ್ಲಿ ಇಂಟರ್ನೆಟ್ , ವೈ-ಫ಼ೈ ಇದೆಯಾದರೂ ಯಾವಾಗ ಕನೆಕ್ಷನ್ ಸಿಗುವುದೆಂದು ಹೇಳಲಾಗದು. ವಿದ್ಯುತ್ ಕೂಡ ಕಣ್ಣಾಮುಚ್ಚಾಲೆ ಆಡುತ್ತಿರುತ್ತದೆ. ರಾತ್ರಿ ಸಣ್ಣಗೆ ಮಳೆ ಬಂದಿತ್ತಂತೆ…ಹೀಗೆಲ್ಲ ಹರಟಿದೆವು.
ಬೆಳಗಿನ ತಿಂಡಿಗೆ ಪೂರಿ-ಪಲ್ಯ, ಬ್ರೆಡ್ ಜಾಮ್ ಕಾಫಿ/ಚಹಾ ಇದ್ದುವು. ತಿಂಡಿ ಮುಗಿಸಿ ಕಾಯುತ್ತಿರುವಾಗ ಈವತ್ತೂ ರಸ್ತೆ ರಿಪೇರಿಯಲ್ಲಿದೆ, ಜೆ.ಸಿ.ಬಿ.ಯಂತ್ರವನ್ನು ತೆರವು ಮಾಡಿಲ್ಲ , ಮುಖ್ಯರಸ್ತೆಯ ವರೆಗೆ ನಡೆಯಬೇಕು ಎಂದು ತಿಳಿಸಿದರು. ನಮಗಾಗಿ ಕಾಯ್ದಿರಿಸಿದ ವ್ಯಾನ್ ಪಕ್ಕ ಹೋದೆವು. ತಂಡದ 10 ಮಂದಿ ಒಟ್ಟಾಗಿ ವ್ಯಾನ್ ನಲ್ಲಿ ಲೇಹ್ ಸಂಚಾರಕ್ಕೆ ಹೊರಟೆವು. ಮಧ್ಯವಯಸ್ಸಿನ ನಮ್ಮನ್ನು ಬಿಟ್ಟರೆ, ಅಲ್ಲಿದ್ದವರು ದೆಹಲಿ, ಪೂನಾ ಮತ್ತು ಆಗ್ರಾದಿಂದ ಬಂದಿದ್ದ ಮೂರು ಎಳೆಯ ಜೋಡಿಗಳು. ಆರೂ ಮಂದಿ ಇಂಜಿನಿಯರ್ ಗಳು. ನಮ್ಮ ಪ್ರವಾಸದ ಎಲ್ಲ ದಿನಗಳಲ್ಲಿಯೂ ಅವರ ಒಡನಾಟ ನಮಗೆ ಖುಶಿ ಕೊಟ್ಟಿತು. ಆ ವ್ಯಾನ್, ಡ್ರೈವರ್ ನ ಹೆಸರು ‘ನೊಬ್ರು‘. ಮಿತಭಾಷಿ ಬೌದ್ದ ಧರ್ಮೀಯ ಯುವಕ. ಲಡಾಕ್ ನ ದುರ್ಗಮವಾದ ರಸ್ತೆಗಳಲ್ಲಿಯೂ, ಮಂಜು ಮುಸುಕಿರುವಾಗಲೂ, ಹಿಮ ಸುರಿಯುತ್ತಿದ್ದರೂ ಲೀಲಾಜಾಲವಾಗಿ ವ್ಯಾನ್ ಚಲಾಯಿಸುತ್ತಿದ್ದ.
ಎಲ್ಲರೂ ವ್ಯಾನ್ ಗೆ ಬಂದ ಮೇಲೆ ಡ್ರೈವರ್ ‘ನೊಬ್ರು’ ನಾವು ‘ಹಾಲ್ ಓಫ್ ಫ಼ೇಮ್’ ಗೆ ಹೋಗಲಿದ್ದೇವೆ ಎಂದು ಗಾಡಿ ಚಾಲನೆ ಮಾಡಿದ : ನಾವು ಉಳಕೊಂಡಿದ್ದ ಹೋಟೆಲ್ ನಿಂದ 5-6 ಕಿ.ಮಿ ದೂರದಲ್ಲಿ ‘ ಹಾಲ್ ಆಫ್ ಫ಼ೇಮ್’ ಎಂಬ ಹೆಸರಿನ ಸೇನೆಯ ವಸ್ತು ಸಂಗ್ರಹಾಲಯ ಇದೆ. ಪ್ರವೇಶೆಕ್ಕೆ ರೂ.25/- ಕೊಟ್ಟು ಟಿಕೆಟ್ ಪಡೆದುಕೊಳ್ಳಬೇಕು. ಕಾರ್ಗಿಲ್ ನಲ್ಲಿ ನಡೆದ ಭಾರತ-ಪಾಕಿಸ್ಥಾನ ಯುದ್ದದಲ್ಲಿ ಹುತಾತ್ಮರಾದ ಯೋಧರ ಬಗ್ಗೆ ವಿವರಣೆಗಳು ಇಲ್ಲಿವೆ. ಯುದ್ಧಕ್ಕೆ ಸಂಬಂಧಿಸಿದ ಪರಿಕರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಹುತಾತ್ಮರಾದ ಎಳೆ ವಯಸ್ಸಿನ ಪ್ರತಿ ಯೋಧರ ಭಾವಚಿತ್ರದ ಮುಂದೆ ನಿಂತು, ಅವರ ಸಾಧನೆ ಮತ್ತು ತ್ಯಾಗದ ವಿವರಗಳನ್ನು ಓದುವಾಗ ಗೌರವ, ಹೆಮ್ಮೆ ಹಾಗೂ ದು:ಖ ಏಕಕಾಲಕ್ಕೆ ಉಂಟಾಗುತ್ತದೆ. ಇಲ್ಲಿ ಲೇಹ್- ಲಡಾಖ್ ನ ಸಂಸ್ಕೃತಿ ಮತ್ತು ಚರಿತ್ರೆಯನ್ನು ಬಿಂಬಿಸುವ ಹಲವಾರು ಪೋಸ್ಟರ್ ಗಳನ್ನು ಓದುತ್ತಾ ಹೋಗಬಹುದು. ಮ್ಯೂಸಿಯಂನ ಒಂದು ಭಾಗದಲ್ಲಿ ಸೈನಿಕರೇ ನಿರ್ವಹಿಸುವ ಸಣ್ಣ ಅಂಗಡಿಯೂ ಇದೆ. ಸ್ಥಳೀಯ ಮೊಹರುಳ್ಳ ಟೋಪಿ, ಟಿ-ಶರ್ಟ್ , ಪುಸ್ತಕಗಳು ಇತ್ಯಾದಿಗಳನ್ನು ಸ್ಮರಣಿಕೆಯಾಗಿ ಕೊಳ್ಳಬಹುದು. ಇದನ್ನು ಸಂಪೂರ್ಣವಾಗಿ ನೋಡಿ, ಇಲ್ಲಿರುವ ಬರಹಗಳನ್ನು ಓದಬೇಕಾದರೆ ಅರ್ಧ ದಿನವಾದರೂ ಬೇಕು.
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=37017
ಮುಂದುವರಿಯುವುದು..
-ಹೇಮಮಾಲಾ, ಮೈಸೂರು
ಪ್ರವಾಸ ಕಥನ ಓದುತ್ತಾ ಅಯ್ಯೋ ಈ ಕಂತು ಇಷ್ಟು ಬೇಗ ಮುಗಿದು ಹೋಯಿತೇ ಅನ್ನಿಸಿತು..ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ..ಗೆಳತಿ.. ಧನ್ಯವಾದಗಳು.
ಮೆಚ್ಚುಗೆಗೆ ಧನ್ಯವಾದಗಳು.
ಚಂದದ ನಿರೂಪಣೆ
ನಾವು ಲೆಹ್ ನಗರವನ್ನು ನಿಮ್ಮ ಜೊತೆ ಸುತ್ತಿ ಬಂದ ಹಾಗೆ ಆಯಿತು
ಮೆಚ್ಚುಗೆಗೆ ಧನ್ಯವಾದಗಳು.
ಪ್ರವಾಸದಲ್ಲಿ ಬೇರೆಯರೊಡನೆ ನೀವು ಬೆರೆಯುವ, ವ್ಯವಹರಿಸುವ ರೀತಿ, ಅವರಿಗೂ ನೀಡುವ ಮಹತ್ವ ಬಹಳ ಚಂದ.
ಮೆಚ್ಚುಗೆಗೆ ಧನ್ಯವಾದಗಳು.
ಲೇಹ್ ನಲ್ಲಿ ಜಾಗ ಖರೀದಿ ಮಾಡುವ ಆಸೆಗೆ ತಣ್ಣೀರೆರಚಿದ ಅಲ್ಲಿಯ ಕಾನೂನು, ಹಾಲ್ ಆಫ್ ಫೇಮ್, ವಿಹಾರ…ಎಲ್ಲಾ ವಿವರಣೆಗಳೂ ಚಂದ…