ಪ್ರೇಮಿಗಳ ಸ್ವರ್ಗ ಉದಯಪುರ-ಚರಣ 4
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಮದುವೆಯ ಮುನ್ನಾ ದಿನದ ಸಂಜೆ ನಡೆದ ಸಂಗೀತಾ ಕಾರ್ಯಕ್ರಮ ಎಲ್ಲರ ಮನ ಸೆಳೆಯುವಂತಿತ್ತು. ಇಂದ್ರಲೋಕವನ್ನು ಮೀರಿಸುವಂತಿದ್ದ ವೇದಿಕೆಯ ಅಲಂಕಾರ, ರಾಜಕುವರಿಯಂತೆ ಅಲಂಕರಿಸಿಕೊಂಡಿದ್ದ ಚೆಂದೊಳ್ಳಿ ಚೆಲುವೆ ಪದ್ಮಿನಿ, ಮದುವೆ ಗಂಡಿನ ಉಡುಪಿನಲ್ಲಿ ಜರ್ಬಾಗಿ ಕಾಣುತ್ತಿದ್ದ ಉದಯ್ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳು ಈ ಸಮಾರಂಭಕ್ಕೆ ಶೋಭೆ ತಂದಿದ್ದರು. ಮದುವೆಗೆ ಆಗಮಿಸಿದ್ದ ಬಂಧು ಬಾಂಧವರನ್ನು ಪರಿಚಯಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದರು.
ತಮ್ಮ ಶಿವೂನ ಮಡದಿ ಬನೂವಿನ ನಿರ್ದೇಶನದಲ್ಲಿ ಎಲ್ಲರೂ ಡ್ಯಾನ್ಸ್ ಅಭ್ಯಾಸ ಮಾಡಿದ್ದರು. ಇಂಪಾದ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ವೇದಿಕೆಗೆ ಆಗಮಿಸಿದ ದಂಪತಿಗಳು ಎಲ್ಲರನ್ನೂ ರಂಜಿಸಿದರು. ಆಕಾಶವೇ ಬೀಳಲಿ ಮೇಲೆ, ಒಲವೆ ಜೀವನ ಸಾಕ್ಷಾತ್ಕಾರ, ನೀ ಬಂದು ನಿಂತಾಗ ಮುಂತಾದ ಕನ್ನಡ ಗೀತೆಗಳು ರಾಜಸ್ಥಾನದ ಮದುವೆಯೊಂದರಲ್ಲಿ ಮೊಳಗಿದವು. ನಂತರದಲ್ಲಿ ಹೆಣ್ಣಿನ ಕಡೆಯವರು ಹಿಂದಿ ಹಾಡುಗಳಿಗೆ ನೃತ್ಯ ಮಾಡುತ್ತಾ ವೇದಿಕೆಗೆ ಬಂದು ತಮ್ಮ ಪರಿಚಯ ಮಾಡಿಕೊಂಡರು. ಡಿ.ಜೆ. ಗಳ ಹಾಸ್ಯ ಚಟಾಕಿಗಳು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದವು. ಸಮಯ ಸರಿದದ್ದು ಯಾರಿಗೂ ಗೊತ್ತಾಗಲಿಲ್ಲ. ಮದುವೆಯ ಸವಿ ಭೋಜನ ಚಪ್ಪರಿಸಿದ ಅತಿಥಿಗಳು ಉಸುರಿದರು – ನೋಟ ಚೆನ್ನ, ಊಟ ಚೆನ್ನ ಎಲ್ಲವೂ ಚೆನ್ನ.
ವಧೂ ವರರು ಎರಡು ವರ್ಷಗಳಿಂದ ಚಾತಕಪಕ್ಷಿಯಂತೆ ಕಾಯುತ್ತಿದ್ದ ಮದುವೆಯ ದಿನ ಬಂದೇ ಬಿಟ್ಟಿತು. ಮುಂಜಾನೆ ಹಲ್ದಿ ಅಂದರೆ ಮದುಮಕ್ಕಳಿಗೆ ಅರಿಶಿಣ ಹಚ್ಚುವ ಕಾರ್ಯಕ್ರಮ. ಸಾಮಾನ್ಯವಾಗಿ ಈ ಸಂಪ್ರದಾಯವನ್ನು ವಧೂವರರ ಮನೆಗಳಲ್ಲಿಯೇ ಮಾಡುವ ಪದ್ಧತಿ. ಉದಯ್‌ನ ಮನೆಯಲ್ಲಿ ಚಪ್ಪರದ ಪೂಜೆ, ಹಿರಿಯರ ಹಬ್ಬ, ದೇವರ ಕಾಂiiದ ಜೊತೆಗೇ ಅರಿಶಿಣ ಹಚ್ಚುವ ಕಾರ್ಯಕ್ರಮವನ್ನೂ ಮಾಡಲಾಗಿತ್ತು. ರಜಪೂತರಲ್ಲಿ ಅರಿಶಿಣದ ಜೊತೆಗೇ ಚಂದನವನ್ನೂ ಬೆರೆಸಿ, ಗರಿಕೆ ಹುಲ್ಲಿನ ಕಟ್ಟಿನಿಂದ ಮದುಮಗಳ ಕೆನ್ನೆಗಳಿಗೆ ಹಚ್ಚುವರು. ಮದುಮಗಳ ಅಲಂಕಾರ ವಿಶೇಷವಾಗಿತ್ತು. ಪುಟ್ಟ ಪುಟ್ಟ ಹಳದಿ ಹೂಗಳಿಂದ ಮಾಡಲಾಗಿದ್ದ ಕಿವಿಯೋಲೆ, ಕೊರಳ ಹಾರ, ಬಳೆ, ಬೈತಲೆಬಟ್ಟುಗಳಿಂದ ಅಲಂಕೃತಳಾಗಿದ್ದ ಮದುವೆ ಹೆಣ್ಣು ದುಷ್ಯಂತ ಮೋಹಿಸಿದ ಶಾಕುಂತಲೆಯಂತೆ ಕಂಗೊಳಿಸುತ್ತಿದ್ದಳು. ಎಲ್ಲರಿಗೂ ಸಿಹಿ ಹಂಚಲಾಯಿತು. ಮತ್ತೆ ವಾದ್ಯ ಸಂಗೀತ, ಡೋಲಿನ ಜೊತೆ ಸಡಗರ, ಸಂಭ್ರಮಗಳಿಂದ ಕುಣ ಯುವವರು ಸಿದ್ಧರಾಗಿದ್ದರು. ಹಿರಿಯರು ಕಿರಿಯರ ಜೊತೆಗೂಡಿ ಅವರ ಉತ್ಸಾಹದಲ್ಲಿ ಭಾಗಿಯಾದರು.
ಮದುವೆಗೆ ಮುಂಚೆ ನಡೆಯುವ ನಾಟಕ ಜಾನೆವ್ ಎಂದರೆ ಕಾಶಿಯಾತ್ರೆ, ಕಾವಿ ಬಟ್ಟೆ ಧರಿಸಿ ವರನು ಕಾಶೀಯಾತ್ರೆಗೆ ಹೊರಡುವನು, ಹೆಣ್ಣಿನ ಸೋದರಮಾವನು ಅವನ ಯಾತ್ರೆಗೆ ತಡೆ ಹಾಕಿ, ತಮ್ಮ ಸೋದರ ಸೊಸೆಯ ರೂಪ, ಗುಣ, ವಿದ್ಯೆಯ ಗುಣಗಾನ ಮಾಡುತ್ತಾ ಅವಳನ್ನು ವಿವಾಹವಾಗುವಂತೆ ಅವನ ಮನ ಒಲಿಸುವನು. ನಂತರದಲ್ಲಿ ನಡೆಯುವ ಬಾರಾತ್ ಆ ಊರಿನ ರಾಜಬೀದಿಗಳಲ್ಲಿ ಹೊರಟಿತ್ತು. ಸಾಲಂಕೃತವಾದ ಕುದುರೆ, ಬಿಳಿಯ ಬಣ್ಣದ ಉಡುಗೆಯಲ್ಲಿ ರಾಜಕುವರನಂತೆ ಶೋಭಿಸುತ್ತಿದ್ದ ಮದುವೆ ಗಂಡು ತಲೆಗೊಂದು ಕೆಂಪು ವರ್ಣದ ಪಗ್ಡಿ, ಸೊಂಟಕ್ಕೊಂದು ಜರತಾರೀ ಪಟ್ಟಿ, ಕೊರಳಿಗೆ ಮುತ್ತಿನ ಹಾರ, ಕೈಲ್ಲೊಂದು ಕತ್ತಿ ಹಿಡಿದು ಕುದುರೆಯನ್ನೇರಿ ದೇವರ ಆಶೀರ್ವಾದ ಪಡೆಯಲು ಹೊರಟಿದ್ದ. ಗಂಡಿಗೆ ಯಾರದೃಷ್ಟಿಯೂ ತಾಗದಿರಲೆಂದು, ಹೆಣ್ಣಿನ ಅತ್ತಿಗೆ ತನ್ನ ಕಣ್ಣಂಚಿನ ಕಾಡಿಗೆಯನ್ನು ಗಂಡಿನ ಕೆನ್ನೆಗೆ ಹಚ್ಚಿ, ಕುದುರೆಗೊಂದು ಹೊನ್ನಿನ ಬಣ್ಣದ ಕಂಕಣವನ್ನು ಕಟ್ಟುವಳು. ಗಂಡಿನ ಕಡೆಯವರೆಲ್ಲಾ ಕೇಸರಿ ಬಣ್ಣದ ಪಗಡಿ ಧರಿಸಿ ವಾದ್ಯ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಮೆರವಣ ಗೆಯಲ್ಲಿ ಸಾಗುವರು. ಅವರ ಹಿಂದೆ ಮಹಿಳೆಯರು ಕೋಲಾಟವಾಡುತ್ತಾ ನಕ್ಕು ನಲಿಯುತ್ತಾ ಹೆಜ್ಜೆ ಹಾಕುವರು. ಮದುವೆ ಮನೆ ತಲುಪುತ್ತಿದ್ದಂತೆ, ವರನು ಚಪ್ಪರದ ಮುಂಭಾಗದಲ್ಲಿ ಕಟ್ಟಿದ್ದ ತೋರಣವನ್ನು ಕತ್ತಿಯಿಂದ ಹೊಡೆದು ಉರುಳಿಸುವನು, ಈ ಕ್ರಿಯೆ ದುಷ್ಟಶಕ್ತಿಗಳ ದಮನದ ರೂಪಕವಾಗಿ ನಿಲ್ಲುವುದು. ವಧುವಿನ ಕಡೆಯವರು ವರನ ಕಡೆಯವರಿಗೆ ಹೂಮಾಲೆ ಹಾಕಿ, ತಿಲಕವನ್ನಿಟ್ಟು ಸ್ವಾಗತಿಸುವರು. ವಧುವಿನ ತಾಯಿ ಮದುವೆ ಗಂಡಿಗೆ ವರಮಾಲೆ ಹಾಕಿ, ತಿಲಕವನ್ನಿಟ್ಟು ಆರತಿ ಬೆಳಗಿ ಸಂಭ್ರಮದಿಂದ ಮದುವೆ ಮಂಟಪಕ್ಕೆ ಕರೆತರುವಳು. ಆರತಕ್ಷತೆಗೆ ಆಗಮಿಸಿದ ಅತಿಥಿಗಳು ವಧೂವರರಿಗೆ ಹರಸಿ, ಉಡುಗೊರೆಗಳನ್ನು ನೀಡಿ ಭೋಜನ ಸ್ವೀಕರಿಸಿದರು.
ಇನ್ನು ಮುಹೂರ್ತದ ಸಮಯ ಮೆಹಂದಿ, ಸಂಗೀತ, ಹಲ್ದಿ, ಬಾರಾತ್ ಎಲ್ಲವನ್ನೂ ಅತ್ಯಂತ ವಿಜೃಂಭಣೆಯಿಂದ ಹಗಲಿನಲ್ಲಿ ಮಾಡಿದವರು ಮುಹೂರ್ತದ ವಿಧಿವಿಧಾನಗಳನ್ನು ಆಪ್ತ ಕುಟುಂಬದ ಸದಸ್ಯರ ಸಮ್ಮುಖದಲ್ಲಿ, ರಾತ್ರಿ ಹನ್ನೊಂದರಿಂದ ಬೆಳಗಿನ ಜಾವ ಮೂರರವರೆಗೆ ರೆಸಾರ್‍ಟ್‌ನ ಒಳಗಿನ ಕೋಣೆಯೊಂದರಲ್ಲಿ ಸರಳವಾಗಿ ಆಚರಸಿದರು. ವಧೂವರರ ಮುಂದಿದ್ದ ಪವಿತ್ರವಾದ ಅಗ್ನಿಕುಂಡ, ಪುರೋಹಿತರ ಮಂತ್ರ ಪಠಣ, ತಮ್ಮ ಮುದ್ದಿನ ಮಗಳನ್ನು ಧಾರೆ ಎರೆಯುವಾಗ ತಂದೆ ತಾಯಿಗಳ ಕಣ ರಧಾರೆ ಕಂಡಾಗ ನಮಗೂ ಸಂಕಟವಾಗಿತ್ತು. ವಧುವಿನ ಸಮೀಪದ ಬಂಧುಗಳು ಉಡುಗೊರೆ ನೀಡಿದ ರೀತಿ ವಿಶಿಷ್ಟವಾಗಿತ್ತು. ವಧುವಿನ ಎಡಗಾಲು ಹಾಗೂ ವರನ ಬಲಗಾಲನ್ನು ಒಂದು ತಾಟಿನಲ್ಲಿ ಇರಿಸಿ, ಇವರ ಪಾದಗಳನ್ನು ಕುಂಕುಮ, ಅರಿಶಿಣ, ಗಂಧಾಕ್ಷತೆಗಳಿಂದ ಪೂಜಿಸಿ, ಭಕ್ತಿಯಿಂದ ಕಣ ಗೊತ್ತಿಕೊಂಡು ಇಬ್ಬರಿಗೂ ಉಡುಗೊರೆಗಳನ್ನು ನೀಡುತ್ತಿದ್ದರು. ವಧೂವರರು ಲಕ್ಷ್ಮಿ ನಾರಾಯಣರ ಸ್ವರೂಪವೆಂದು ಪರಿಗಣ ಸಲಾಗಿ ಈ ಸಂಪ್ರದಾಯದ ಪಾಲನೆ ನಡೆದಿತ್ತು.
ನಮ್ಮಲ್ಲಿ ಮಾಂಗಲ್ಯಧಾರಣೆ ಮಾಡಿದಂತೆ, ರಜಪೂತರಲ್ಲಿ ಗಂಡಿನ ಕೈಲಿ ಹೆಣ್ಣಿನ ಬೈತಲೆಗೆ ಮೂರು ಬಾರಿ ಸಿಂಧೂರ ಹಚ್ಚಿಸಿ, ಅವರ ಮೇಲು ಹೊದಿಕೆಗಳಿಂದ ಬ್ರಹ್ಮಗಂಟು ಹಾಕಿ ಅಗ್ನಿಯ ಸುತ್ತ ಏಳುಬಾರಿ ಪ್ರದಕ್ಷಿಣೆ ಹಾಕಿಸುವರು. ಏಳೇಳು ಜನ್ಮದಲ್ಲೂ ವಧೂವರರು ಬದುಕಿನಲ್ಲಿ ಎದುರಾಗುವ ಕಷ್ಟಸುಖಗಳನ್ನು ಹಂಚಿಕೊಂಡು ಸುಖವಾಗಿ ಬಾಳಲಿ ಎನ್ನುವುದರ ಸಂಕೇತ ಈ ಪ್ರದಕ್ಷಿಣೆ. ಹೆಣ್ಣಿನ ಸೆರಗಿನ ತುಂಬಾ ಚಿನ್ನದ ನಾಣ್ಯಗಳನ್ನು ತುಂಬಿಸಿ ಗಂಡನ ಮನೆಗೆ ಕಳುಹಿಸುವ ಪರಿಪಾಠವೂ ಇತ್ತು ಈ ಸಂಪ್ರದಾಯಕ್ಕೆ ಆಂಜಲಾ ಎನ್ನವರು, ಇನ್ನು ಮುಂದೆ ತನ್ನ ಸೆರಗಿನ ತುಂಬಾ ಜವಾಬ್ದಾರಿಗಳನ್ನು ಹೊರಲು ಸಿದ್ಧಳಾಗಿದ್ದೇನೆ ಎನ್ನುವ ಭಾವ ಇಲ್ಲಿದೆ. ಮುಂದಿನ ಆಚರಣೆ ಬಿದಾಯಿ ಎಲ್ಲರ ಕಣ್ಣಲ್ಲೂ ನೀರಾಡಿಸಿತ್ತು. ಬೊಗಸೆ ತುಂಬಾ ಅಕ್ಕಿಯನ್ನು ತುಂಬಿಸಿಕೊಂಡ ಹೆಣ್ಣು, ತನ್ನ ತವರೂರು ಸಮೃದ್ಧವಾಗಿರಲೆಂದು, ಮೂರು ಬಾರಿ ತನ್ನ ಹಿಂದೆ ಎರಚುವಳು. ಅವಳು ಹಿಂದೆ ತಿರುಗಿ ನೋಡುವಂತಿಲ್ಲ್ಲ, ತಂದೆ ತಾಯಿಯ ತೆಕ್ಕೆಗೆ ಬಿದ್ದು ಗೋಳಾಡಿದಳು. ತಮ್ಮ ಮನೆಯಂಗಳದಿ ಬೆಳೆದೊಂದ ಹೂವನ್ನು ಪರರಿಗೆ ಒಪ್ಪಿಸುವ ಕ್ಷಣ ಅದೆಷ್ಟು ನೋವಿನ ಸಂಗತಿಯಲ್ಲವೇ? ಆದರೆ, ಇದು ಲೋಕದಲ್ಲಿ ನಡೆಯವ ಸಂಪ್ರದಾಯ, ಅದನ್ನು ಪಾಲಿಸಿಕೊಂಡು ಬರಬೇಕಾದವರು ನಾವು. ನೋವಿನಿಂದಲೇ ನಲಿವು, ಇದು ನಿತ್ಯಸತ್ಯ.
ಮದುವೆ ಮುಹೂರ್ತ ಇರುಳಿನಲ್ಲಿ ನಡೆಸುವುದಾದರೂ ಏಕೆ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತ್ತು. ಒಂದಾನೊಂದು ಕಾಲದಲ್ಲಿ ರಾಜಸ್ಥಾನದ ಮರಳುಗಾಡಿನಲ್ಲಿ ನೀರಿನ ಸೆಲೆಯನ್ನು ಅರಸುತ್ತಾ ಅಲೆಮಾರಿಗಳಂತೆ ಸಾಗುತ್ತಿದ್ದರು ಇವರು. ಬಿಸಿಲಿನ ಝಳ ಒಂದೆಡೆ, ಮತ್ತೊಂದೆಡೆ ನೆಲೆ ನಿಲ್ಲಲು ತಾಣವಿಲ್ಲ. ಆದರೇನಂತೆ, ಇವರ ಜೀವನೋತ್ಸಾಹ ಬತ್ತಲಿಲ್ಲ. ಚಂದ್ರನ ತಂಪಾದ ಬೆಳದಿಂಗಳಲ್ಲಿ ಇವರ ಸಂಗೀತ ಸುಧೆ ಹೊರಹೊಮ್ಮುತ್ತಿತ್ತು, ಇಂಪಾದ ಹಾಡಿಗೆ ಮೈಮರೆತು ಕುಣ ಯುತ್ತಿದ್ದರು. ಬಹುಶಃ ವಿವಾಹ ಮಹೋತ್ಸವವನ್ನು ತಂಪಾದ ಧರೆಯ ಮೇಲೆ ಮಾಡುವ ಸಂಪ್ರದಾಯ ಬಂದಿರಬಹುದಲ್ಲವೇ? ಇನ್ನೂ ಕೆಲವರು ಹೇಳುವಂತೆ, ಹಲವು ಬಾರಿ ಪರಕೀಯರ ಆಕ್ರಮಣಕ್ಕೆ ತುತ್ತಾದ ರಾಜ್ಯವಿದು. ಶತ್ರುಗಳೊಂದಿಗೆ ಸೆಣಸುವಾಗ ಸೋತರೆ, ಸೆರೆ ಸಿಕ್ಕ ಯೋಧರೆಲ್ಲಾ ಅವರ ಗುಲಾಮರಾಗಬೇಕಿತ್ತು. ಸ್ತ್ರೀಯರು ಅವರ ದಾಸಿಯರಾಗಬೇಕಿತ್ತು. ಅಲ್ಲೊಂದು ಅಲಿಖಿತ ಕಾನೂನು ಆ ಪ್ರದೇಶದಲ್ಲಿ ಬಲಿಷ್ಟ ನಾಯಕನಾದವನು ಮದುವೆ ಮಂಟಪದಿಂದ ವಧುವನ್ನು ಅಪಹರಿಸಿ ಹೊತ್ತೊಯ್ಯಬಹುದಿತ್ತು. ಈ ದುಷ್ಕೃತ್ಯದಿಂದ ಪಾರಾಗಲು ಮದುವೆಯ ಮುಹೂರ್ತವನ್ನು ಕುಟುಂಬದವರ ಸಮ್ಮುಖದಲ್ಲಿ ನಡುರಾತ್ರಿ ಆಯೋಜಿಸಲಾಗುತ್ತಿತ್ತೆಂದು ಹೇಳಲಾಗುತ್ತದೆ.
ಆ ಕ್ಷಣ ನಾನು ನೋಡಿದ್ದ ‘ಬ್ರೇವ್ ಹಾರ್ಟ್’ ಎಂಬ ಇಂಗ್ಲಿಷ್ ಸಿನೆಮಾದ ನೆನಪಾಗಿತ್ತು. ಇಂಗ್ಲೆಂಡ್ ಸ್ಕಾಟ್ಲ್ಯಾಂಡಿನ ಮೇಲೆ ಯುದ್ಧ ಸಾರಿತ್ತು. ಕೆಲವು ಪ್ರದೇಶಗಳನ್ನೂ ಆಕ್ರಮಿಸಿಕೊಂಡಿತ್ತು. ಆದರೂ ಕೆಲವು ಬುಡಕಟ್ಟಿನವರು ಶರಣಾಗದೇ ಬ್ರಿಟಿಷರಿಗೆ ಸವಾಲಾಗಿ ಉಳಿದಿದ್ದರು. ಆಗ ಬ್ರಿಟಿಷ್ ದೊರೆ ಒಂದು ಅನಿಷ್ಟ ಕಾನೂನನ್ನು ಜಾರಿಗೊಳಿಸುತ್ತಾನೆ – ಸ್ಕಾಟಿಷ್ ಎಂಬ ಅವರ ಅಸ್ಮಿತೆಯನ್ನು ಛಿದ್ರಗೊಳಿಸಲು, ನವವಿವಾಹಿತಳಾದ ವಧು ಬ್ರಿಟಿಷ್ ಸೈನ್ಯಾಧಿಕಾರಿಯೊಂದಿಗೆ ಮೊದಲ ರಾತ್ರಿಯನ್ನು ಕಳೆಯಬೇಕೆಂಬ ಷರತ್ತು ಹಾಕುವರು. ಕೆಲವು ಬುಡಕಟ್ಟು ಜನಾಂಗದವರು, ಈ ಕಾನೂನಿಗೆ ಚಳ್ಳೆಹಣ್ಣು ತಿನ್ನಿಸಲು, ಯಾರಿಗೂ ಗೊತ್ತಾಗದ ಹಾಗೆ ನಡುರಾತ್ರಿ ಮದುವೆ ಸಂಪ್ರದಾಯಗಳನ್ನು ಹಮ್ಮಿಕೊಂಡು ಬ್ರಿಟಿಷ್ ಅಧಿಕಾರಿಯಿಂದ ವಧುವನ್ನು ಕಾಪಾಡುತ್ತಿದ್ದರು.
ರಜಪೂತರ ಮದುವೆಯನ್ನು ಆನ್ ಬಾನ್ ಶಾನ್ ಎಂಬ ಮುತ್ತಿನಂತಹ ಮೂರು ಪದಗಳಲ್ಲಿ ಬಣ್ಣಿಸಲಾಗುವುದು. ಈ ಪದಗಳ ಆರ್ಥವನ್ನು ಅಂತರ್ಜಾಲದಲ್ಲಿ ಹುಡುಕಿದಾಗ ದೊರೆತ ಮಾಹಿತಿ ಹೀಗಿತ್ತು ಮೊದಲೆರೆಡು ಪದಗಳು ಉರ್ದುಭಾಷೆಯಲ್ಲಿದ್ದರೆ, ಶಾನ್ ಎಂಬ ಪದವು ಹಿಂದಿಭಾಷೆಯಲ್ಲಿದೆ. ಮೂರು ಪದಗಳೂ ಸಮಾನಾರ್ಥಕ ಪದಗಳಾಗಿದ್ದು, ರಜಪೂತರ ಮದುವೆಯ ಮಹತ್ವವನ್ನು ತಿಳಿಸಲು ಬಳಸಲಾಗುತ್ತಿದೆ. ಈ ಪದಗಳ ಅರ್ಥ ಹೀಗಿದೆ ಘನತೆ, ಗಾಂಭೀರ್ಯ, ಗರಿಮೆ, ಹಿರಿಮೆ, ಔನ್ನತ್ಯ, ಶ್ರೇಷ್ಠತೆ, ಭವ್ಯತೆ, ದಿವ್ಯತೆ, ವೈಭವ ಇತ್ಯಾದಿ. ಸ್ಥಳೀಯರು ಹೇಳುವ ಸಂಗತಿಯೇ ಬೇರೆ ಆನ್ ಎಂದರೆ ಆತ್ಮಗೌರವ, ಬಾನ್ ಎಂದರೆ ಅವರು ಧರಿಸುವ ಉಡುಪಿನ ವೈಶಿಷ್ಟತೆ ಹಾಗೂ ಶಾನ್ ಎಂದರೆ ಹೆಮ್ಮೆ, ಶ್ರೇಷ್ಟತೆ. ರಜಪೂತರ ವಿಶಿಷ್ಟತೆಯನ್ನು ಈ ಪದಗಳು ಪ್ರತಿಫಲಿಸುತ್ತಿವೆ.
ನಾವೆಲ್ಲಾ ಉದಯ್ ಮತ್ತು ಪದ್ಮಿನಿಯರ ಮದುವೆಗಾಗಿ ಬೆಂಗಳೂರಿನಿಂದ ಉದಯಪುರಕ್ಕೆ ಬಂದು ಜೀವನ್ ತಾರಾ ರೆಸಾರ್ಟ್‌ನಲ್ಲಿ ಮೂರು ದಿನಗಳ ಕಾಲ ತಂಗಿದ್ದು, ಒಂದು ಅವಿಸ್ಮರಣ ಯ ಕಾಲ ಎಂದೇ ಹೇಳಬಹುದು. ಅಮೆರಿಕಾದಿಂದ ಬಂದಿಳಿದಿದ್ದ ತಂಗಿ ಉಮಾ, ಯು.ಕೆ.ಯಿಂದ ಬಂದಿದ್ದ ತಮ್ಮ ಶಿವು ಹಾಗೂ ಅವನ ಪತ್ನಿ ಬನೂ, ಲಕ್ಸಮ್‌ಬರ್ಗ್‌ನಿಂದ ದೀರ್ಘ ಕಾಲ ರಜೆ ಹಾಕಿ ಉದಯ್ ಅಕ್ಕ ಸ್ವಾತಿ ಕುಟುಂಬದೊಂದಿಗೆ ಬಂದಿದ್ದು ಎಲ್ಲರಲ್ಲೂ ಲವಲವಿಕೆ ಮೂಡಿಸಿತ್ತು. ಮೂರುದಿನ ಮೂರು ಘಳಿಗೆಯ ಹಾಗೆ ಹಾರಿ ಹೋಗಿತ್ತು.
ನಾವೆಲ್ಲಾ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದೆವು – ಸಂಜೆ ಪಾರ್ಕಿಗೆ ಹೋಗಿ ಮರಕೋತಿ, ಗುಲ್ಟೋರ್ಯ, ಗೋಲಿ, ಕುಂಟಬಿಲ್ಲೆ ಆಡುತ್ತಿದ್ದುದು, ಪ್ರತೀವಾರ ದೊಡ್ಡಪ್ಪಾಜಿಯವರೊಂದಿಗೆ ಚಿತ್ರದುರ್ಗದ ಸುತ್ತ ಇದ್ದ ಬೆಟ್ಟ ಗುಡ್ಡಗಳನ್ನೇರುತ್ತಿದ್ದುದು, ಅಂಕಳೀಮಠದ ಗುಹೆಯೊಳಗೆ ನುಗ್ಗಿ, ಅಲ್ಲಿ ಧ್ಯಾನಸ್ಥರಾಗಿ ಕುಳಿತ ಮುನಿಗಳ ಹಾಗೆ ಕುಳಿತು ನಾಟಕ ಮಾಡುತ್ತಿದ್ದುದು ಇಂತಹ ಸಿಹಿ ಸಿಹಿ ನೆನಪುಗಳಲ್ಲಿ ಮೈಮರೆತಿದ್ದೆವು.
ಉದಯ್ ಮತ್ತು ಪದ್ಮಿನಿಯರು ಇಂದು ಮದುವೆಯ ಪವಿತ್ರ ಬಂಧನದಲ್ಲಿ ಒಂದಾಗಿದ್ದರು. ನಾವೆಲ್ಲಾ ಒಕ್ಕೊರಲಿನಿಂದ ಹಾರೈಸಿದೆವು ”ನಿಮ್ಮ ಬಾಳು ಬಂಗಾರವಾಗಲಿ. ಒಬ್ಬರನ್ನೊಬ್ಬರು ಆದರ, ಗೌರವ, ಪ್ರೀತಿಯಿಂದ ಕಾಣುತ್ತಾ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಜೊತೆಯಾಗಿ ನಿಂತು ಎದುರಿಸಿ. ಒಲವೇ ಜೀವನ ಸಾಕ್ಷಾತ್ಕಾರ ಎಂಬುದನ್ನು ಮರೆಯದಿರಿ, ಒಲವಿನ ಬದುಕಿನ ಅಡಿಪಾಯ ನಂಬಿಕೆ, ವಿಶ್ವಾಸ ಹಾಗೂ ಪ್ರೀತಿ. ನಿಮ್ಮ ಬಾಳು ಹಾಲು ಜೇನಿನಂತಿರಲಿ”
–ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ.
ಮದುವೆಯ ವರ್ಣನೆ ಅಲ್ಲಿನ ಸಂಪ್ರದಾಯ ಅದರಲ್ಲಿ ಭಾಗಿಯಾಗಿ ಸಂತಸಪಟ್ಟಿದ್ದು..ಇತಿಹಾಸ ಎಲ್ಲಾ ಸೊಗಸಾಗಿ ಕಣ್ಣಿಗೆ ಕಟ್ಟುವಂತೆ ಪಡಿಮೂಡಿಸಿರುವ ನಿಮಗೆ ಧನ್ಯವಾದಗಳು ಮೇಡಂ
ತಮ್ಮ ಪ್ರತಿಕ್ರಿಯೆಯನ್ನು ಕೇಳಿ ತುಂಬಾ ಖುಷಿಯಾಯಿತು ಮೇಡಂ
ರಜಪೂತ ಶೈಲಿಯ ಮದುವೆಯ ಆಚಾರ..ವಿಚಾರ ಓದಿ ಖುಷಿಯಾಯಿತು. ಎಂದಿನಂತೆ ಚೆಂದದ ನಿರೂಪಣೆಯ ಬರಹ. ವಧೂವರರಿಗೆ ಶುಭಾಶಯಗಳು..
ನನ್ನ ಲೇಖನ ಪ್ರಕಟಿಸಿ ಧನ್ಯವಾದಗಳನ್ನು ತಿಳಿಸಿರುವ ಸಂಪಾದಕರಿಗೆ ತುಂಬು ಹೃದಯದ ವಂದನೆಗಳು
ನನ್ನ ಲೇಖನವನ್ನು ಪ್ರಕಟಿಸಿ ವಧುವರರಿಗೆ ಆಶೀರ್ವಾದ ಮಾಡಿರುವ ತಮಗೆ ನನ್ನ ತುಂಬು ಹೃದಯದ ವಂದನೆಗಳು
Very nice
ರಜಪೂತ ಶೈಲಿಯ ಮದುವೆಯ ಕುರಿತಾದ ಸಾಕಷ್ಟು ಮಾಹಿತಿಗಳೊಡನೆ, ತಮ್ಮ ಸ್ವಂತ ಅನುಭವಗಳನ್ನು ಸೊಗಸಾಗಿ ನಮಗೂ ಹಂಚಿದಿರಿ…ಧನ್ಯವಾದಗಳು ಮೇಡಂ.
ಸಹೃದಯ ಓದುಗರಿಗೆ ತುಂಬು ಹೃದಯದ ವಂದನೆಗಳು
ಚಂದದ ನಿರೂಪಣೆಯ ಸುಂದರ ಬರಹ.
ಮದುವೆಯ ವರ್ಣನೆ (ಆನ್ ಬಾನ್ ಶಾನ್) ಸೊಗಸಾಗಿದೆ