ವಾಟ್ಸಾಪ್ ಕಥೆ 5: ಮೋಸಗಾರನಿಗೆ ತಕ್ಕ ಪಾಠ.
ಒಂದು ಹುಲ್ಲುಗಾವಲು. ಅಲ್ಲಿ ಒಂದು ಕುದುರೆ ಮೇಯುತ್ತಿತ್ತು. ಅತ್ತ ಕಡೆಯಿಂದ ಬಂದ ಒಂದು ತೋಳ ದೂರದಿಂದ ಅದನ್ನು ನೋಡಿತು. ತೋಳಕ್ಕೆ ಯಾವಾಗಲೂ ಹಸಿವಂತೆ. ಕುದುರೆಯು ಮೈತುಂಬಿಕೊಂಡು ದಷ್ಟಪುಷ್ಟವಾಗಿತ್ತು. ತೋಳಕ್ಕೆ ಬಾಯಲ್ಲಿ ನೀರೂರಿತು. ಕುದುರೆಯನ್ನು ಹೇಗಾದರೂ ಉಪಾಯ ಮಾಡಿ ಕೊಂದರೆ ತನಗೆ ಒಂದು ವಾರದಮಟ್ಟಿಗೆ ಊಟಕ್ಕೆ ಚಿಂತೆಯಿಲ್ಲ ಎಂದುಕೊಂಡು ಅದರ ಹತ್ತಿರ ಬಂದಿತು.
”ಕುದುರೆಯಣ್ಣಾ ನಾನು ದೇವಲೋಕದಿಂದ ಬಂದಿರುವ ಧನ್ವಂತರಿ. ಎಲ್ಲ ಖಾಯಿಲೆಗಳಿಗೂ ಸೂಕ್ತ ಚಿಕಿತ್ಸೆಯನ್ನು ಮಾಡಬಲ್ಲೆ. ನಿನ್ನನ್ನು ಆವಾಗಿನಿಂದ ಗಮನಿಸಿದೆ. ಏನೋ ತೊಂದರೆ ಇರುವಂತೆ ಅನ್ನಿಸಿತು. ಚಿಕಿತ್ಸೆ ಕೊಡಲೇ” ಎಂದು ಕೇಳಿತು.
ಕುದುರೆಗೆ ತೋಳದ ಮೋಸದ ಸಂಚು ತಿಳಿದುಹೋಯಿತು. ಮನಸ್ಸಿನಲ್ಲಿಯೇ ಇದಕ್ಕೆ ಸರಿಯಾದ ಬುದ್ಧಿ ಕಲಿಸಬೇಕೆಂದು ಆಲೋಚಿಸಿತು. ಏನೂ ಗೊತ್ತಿಲ್ಲದವನಂತೆ ” ಓ ವೈದ್ಯ ಮಹಾಶಯ ತೋಳಣ್ಣಾ ವಂದನೆಗಳು. ನನಗೆ ಹಿಂಗಾಲುಗಳಲ್ಲಿ ಎಂತಹುದೋ ನೋವಿದೆ. ಆಗಾಗ ಸಹಿಸಲು ಅಸಾಧ್ಯವೆನ್ನಿಸುತ್ತದೆ. ನಾನೇ ವೈದ್ಯರಲ್ಲಿ ಹೋಗಿ ತೋರಿಸಿಕೊಳ್ಳೋಣವೆಂದು ಯೋಚಿಸುತ್ತಿದ್ದೆ. ಬಯಸಿದ ಬಳ್ಳಿಯೇ ಕಾಲಿಗೆ ತೊಡರಿದಂತೆ ನೀನೇ ಇಲ್ಲಿಗೆ ಬಂದದ್ದು ನನ್ನ ಅದೃಷ್ಟ. ಸ್ವಲ್ಪ ಪರೀಕ್ಷೆ ಮಾಡಿ ನೋಡುತ್ತೀರಾ ” ಎಂದಿತು.
ತೋಳಕ್ಕೆ ತನ್ನ ಉಪಾಯ ಫಲಿಸಿತೆಂದು ಸಂತೋಷವಾಯಿತು. ಹಿಗ್ಗಿನಿಂದ ಕುದುರೆಯ ಹಿಂಗಾಲಿನ ಹತ್ತಿರ ಬಗ್ಗಿ ನೋಡುತ್ತಿತ್ತು. ಅಷ್ಟರಲ್ಲಿ ಕುದುರೆಯು ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ತೋಳದ ತಲೆಗೆ ಜಾಡಿಸಿ ಒದೆಯಿತು. ತೋಳವು ಇದರಿಂದ ಬಹು ದೂರಕ್ಕೆ ಹೋಗಿ ಬಿದ್ದಿತು. ಅದರ ತಲೆಯೊಡೆಯಿತು. ರಕ್ತ ಹರಿದು ಅದು ಸತ್ತುಹೋಯಿತು. ಮೋಸ ಮಾಡಲು ಹೋಗಿ ತೋಳವು ತಾನಾಗಿಯೇ ಆಪತ್ತು ತಂದುಕೊಂಡು ಸಾವನ್ನಪ್ಪಿತು. ಮೋಸಕ್ಕೆ ತಕ್ಕ ಪಾಠವನ್ನು ಕುದುರೆ ಕಲಿಸಿತು.
–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಮೋಸಗಾರನಿಗೆ ತಕ್ಕ ಶಿಕ್ಷೆ ಚಂದದ ಕಥೆ
ಚೆನ್ನಾಗಿದೆ
ಧನ್ಯವಾದಗಳು ಗಾಯತ್ರಿ ಹಾಗೂ ನಯನ ಮೇಡಂ ಅವರಿಗೆ.
ಚಂದದ ಕಥೆಗೆ ತಕ್ಕಂತೆ ಅಂದದ ಚಿತ್ರ….
ಧನ್ಯವಾದಗಳು ಶಂಕರಿ ಮೇಡಂ
ಚಂದದ ಕಥೆ