ಪ್ರೇಮಿಗಳ ಸ್ವರ್ಗ ಉದಯಪುರ ಚರಣ-3
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಚಿತ್ತೋಡಿನ ಕೋಟೆ ನೋಡಿಯಾದ ನಂತರ ನಾವು ರಾಜೂವಿನ ಮದುವೆ ಸಮಾರಂಭಕ್ಕೆ ಹಾಜರಾದೆವು. ರಜಪೂತರೆಂದರೆ ನಮ್ಮ ಕಣ್ಣ ಮುಂದೆ ಮೂಡಿ ಬರುವ ಚಿತ್ರ ಯುದ್ಧದ ಪೋಷಾಕು ಧರಿಸಿ ಕೈಲೊಂದು ಕತ್ತಿ ಹಿಡಿದು ಶತ್ರುಗಳ ಜೊತೆ ಹೋರಾಡಲು ಸಿದ್ಧರಾಗಿ ನಿಂತಿರುವ ವೀರ ಯೋಧರ ಚಿತ್ರ ಆಲ್ಲವೇ? ಇನ್ನು ಅವರ ಮದುವೆ ಎಂದಾಕ್ಷ್ಷಣ ಮನದಲ್ಲಿ ತೇಲಿ ಬರುವ ಚಿತ್ರ ಗುಂಗರೂ ಡ್ಯಾನ್ಸ್. ಅವರ ಮದುವೆ ಸಮಾರಂಭದಲ್ಲಿ ಆಚರಿಸುವ ವಿಧಿ ವಿಧಾನಗಳ ಬಗ್ಗೆ ಕಣ್ಣು ಹಾಯಿಸೋಣ ಬನ್ನಿ. ಮದುವೆ ಗಂಡು ಕರ್ನಾಟಕ ರಾಜ್ಯದವನು, ಹೆಣ್ಣು ರಾಜಸ್ಥಾನದವಳು. ಹಾಗಾಗಿ ಭಾಷೆ ಬೇರೆ, ಸಂಪ್ರದಾಯಗಳು ಬೇರೆ, ಉಡುಗೆ ತೊಡುಗೆಗಳು ಬೇರೆ, ಆಹಾರ ಪದ್ಧತಿಯೂ ಬೇರೆಯೇ. ಹಿಂದಿ ರಾಷ್ಟ್ರಭಾಷೆಯಾದುದ್ದರಿಂದ ನಮಗೆಲ್ಲಾ ಸ್ವಲ್ಪ ಹಿಂದಿ ಗೊತ್ತಿತ್ತು, ಓದು ಕಲಿತದ್ದು ಇಂಗ್ಲಿಷ್ ಭಾಷೆಯಲ್ಲಿ ಆಗಿದ್ದುದರಿಂದ ನೆಂಟರ ಮಧ್ಯೆ ಹೆಚ್ಚಿನ ಮಾತುಕತೆ ಇಂಗ್ಲಿಷಿನಲ್ಲಿ ನಡೆಯುತ್ತಿತ್ತು. ಇನ್ನೂರು ವರ್ಷಗಳ ಕಾಲ ನಮ್ಮನ್ನಾಳಿದ ಬ್ರಿಟಿಷರ ಸ್ಮರಣೆ ಮಾಡಲೇಬೇಕಿತ್ತು. ಇಲ್ಲವಾದಲ್ಲಿ ತಮಿಳು, ತೆಲುಗು, ಮಲೆಯಾಳಿ, ಮರಾಠಿ, ಪಂಜಾಬಿ ಹೀಗೆ ಹತ್ತು ಹಲವು ಭಾಷೆಗಳ ಮೂಲಕ ಸಂವಹನ ಮಾಡಲು ತುಸು ಕಷ್ಟವಾಗುತ್ತಿತ್ತು. ನನ್ನ ತಂಗಿ ಸೊಸೆಯೊಡನೆ ಮಾತಾಡಲು ಇಂಗ್ಲಿಷ್ ಭಾಷೆ ಅಭ್ಯಾಸ ಮಾಡಿಕೊಳ್ಳ್ಳುತ್ತಿದ್ದರೆ, ಸೊಸೆ ಅತ್ತೆಯೊಡನೆ ಕನ್ನಡದಲ್ಲಿ ಮಾತಾಡಲು ಹರಸಾಹಸ ಪಡುತ್ತಿದ್ದಳು. ರಾಜೂ ಪದ್ಮಿನಿಗೆ ಪ್ರಿಯವಾದ ದಾಲ್, ರೋಟಿ, ಚುರ್ಮಾವನ್ನು ತಿನ್ನಲು ಅಭ್ಯಾಸ ಮಾಡಿಕೊಳ್ಳುತ್ತಿದ್ದರೆ, ಪದ್ಮಿನಿ ಪತಿಗಿಷ್ಟವಾದ ಪುಳಿಯೋಗರೆ ತಯಾರಿಸಲು ರೆಸಿಪಿ ಬರೆದುಕೊಳ್ಳುತ್ತಿದ್ದಳು.
ನನ್ನ ತಂಗಿ ಮಲ್ಲಿಕಾ ಮತ್ತು ಅವಳ ಪತಿ ಮಂಜುವಿನದು ಮಧುರವಾದ ದಾಂಪತ್ಯ. ಎಂದೂ ಅವರ ಮಧ್ಯೆ ಅಪಸ್ವರದ ಛಾಯೆ ಸುಳಿದಿರಲಿಲ್ಲ. ಮಲ್ಲಿಕಾ ಮಿದು ಹೃದಯಿ, ಮಿತಭಾಷಿ ಹಾಗೂ ಸಂಕೋಚ ಸ್ವಭಾವದವಳು. ಇಂಪಾದ ಕಂಠಸಿರಿ ಅವಳದು, ವಚನಗಳನ್ನು ಭಾವ ತುಂಬಿ ಹಾಡುತ್ತಿದ್ದಳು. ಉದಯಪುರಕ್ಕೆ ಮದುವೆಗೆಂದು ಹೊರಟ ಮಲ್ಲಿಕಾ ಮೊದಲು ಸೂಟ್‌ಕೇಸ್‌ಗೆ ಹಾಕಿದ್ದು ಮಲ್ಲಿಗೆ ಮೊಗ್ಗುಗಳನ್ನು ತುಂಬಿಸಿದ್ದ ಪ್ಲಾಸ್ಟಿಕ್ ಡಬ್ಬವನ್ನು, ಅರ್ಧಮಾರು ಮಲ್ಲಿಗೆಯನ್ನು ಮುಡಿಗೇರಿಸದೆ ಎಂದೂ ಹೊಸಿಲು ದಾಟಿದವಳಲ್ಲ. ಮಲ್ಲಿಕಾ ಇವಳ ಅನ್ವರ್ಥನಾಮವೇ ಸರಿ. ಮಲ್ಲಿಗೆಯಂತೆ ಮನದಲ್ಲಿ ಅರಳಿದ್ದ ದೈವಭಕ್ತಿ ಅವಳನ್ನು ಶರಣರ ಅನುಯಾಯಿಯನ್ನಾಗಿ ಮಾಡಿತ್ತು. ಇನ್ನು ಅವಳ ಪತಿ ಮಂಜು, ತಾನು ಎಂದೂ ಮನೆಯ ಯಜಮಾನನೆಂಬ ದರ್ಪ ತೋರಿದವರಲ್ಲ. ಹೆಂಡತಿ ಮಾತು ಕೇಳುತ್ತಾನೆ ಎಂದು ಯಾರಾದರೂ ಗೇಲಿ ಮಾಡಿದರೆ ಮಲ್ಲಿಕಾ ಹೇಳುವ ಮಾತುಗಳಲ್ಲಿ ಸತ್ಯ ಇದ್ದರೆ, ಕೇಳುವುದರಲ್ಲಿ ತಪ್ಪೇನು, ಎಂದು ಮರುಪ್ರಶ್ನೆ ಹಾಕುವ ಹಸನ್ಮುಖಿ. ಮುತ್ತಿನಂತ ಇಬ್ಬರು ಮಕ್ಕಳು ಮಗಳು ಸ್ವಾತಿ, ಅಳಿಯ ತೇಜು ದೂರದೂರಿನಲ್ಲಿ ನಡೆಯುತ್ತಿದ್ದ ತಮ್ಮನ ಮದುವೆಯ ಎಲ್ಲಾ ಜವಾಬ್ದಾರಿಯನ್ನೂ ಹೊತ್ತು, ತಂದೆ ತಾಯಿಯ ಆತಂಕಗಳನ್ನು ದೂರ ಮಾಡಿದ್ದರು.
ವಿವಾಹ ಮಹೋತ್ಸವದ ಮೊಲನೆಯ ಆಚರಣೆ ತಿಲಕ್. ಗಂಡು ಮತ್ತು ಹೆಣ್ಣಿನ ಕುಟುಂಬದವರಿಗೆ ಪರಸ್ಪರ ಒಪ್ಪಿಗೆಯಾದ ನಂತರ, ಹೆಣ್ಣಿನಕಡೆಯವರು ಗಂಡಿನ ಮನೆಗೆ ತೆರಳಿ ಮದುವೆ ನಿಶ್ಚಿತಾರ್ಥವನ್ನು ಮಾಡಿಕೊಳ್ಳುವರು. ಗಂಡಿನ ಹಣೆಗೆ ತಿಲಕವನ್ನಿಟ್ಟು, ಮಿಠಾಯಿ ಹಂಚಿ, ಹಣ್ಣು ಹೂವು ಹಾಗೂ ಹೊಸ ಬಟ್ಟೆಯನ್ನು ಗಂಡಿಗೆ ಉಡುಗೊರೆಯಾಗಿ ನೀಡುವರು. ಸಂಪ್ರದಾಯದಂತೆ ಗಂಡಿಗೆ ಒಂದು ಕತ್ತಿಯನ್ನೂ ಉಡುಗೊರೆಗಳೊಂದಿಗೆ ನೀಡಲಾಗುವುದು, ತಮ್ಮ ಮಗಳನ್ನು ದುಷ್ಟ ಶಕ್ತಿಗಳಿಂದ ಕಾಪಾಡಲಿ ಎಂಬ ಆಶಯವಿದ್ದೀತು. ಈ ಸಮಾರಂಭಕ್ಕೆ ಆಪ್ತರಾದ ಬಂಧುಬಾಂಧವರಿಗೆ ಮಾತ್ರ ಆಹ್ವಾನ.
ವಿವಾಹದ ಮುನ್ನಾ ದಿನ ಸಂಜೆ ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮಗಳಿದ್ದವು. ಎಲ್ಲರೂ ಕೆಂಪು ಬಣ್ಣದ ಉಡುಪು ಧರಿಸಬೇಕೆಂಬ ಸೂಚನೆಯನ್ನು ತಂಗಿಯ ಮಗಳು ಸ್ವಾತಿ ಮೊದಲೇ ನೀಡಿದ್ದರಿಂದ ಎಲ್ಲರೂ ಕೆಂಪು ಸೀರೆ ಧರಿಸಿ, ಅದಕ್ಕೊಪ್ಪುವ ಆಭರಣಗಳಿಂದ ಅಲಂಕೃತರಾಗಿ ಸಂಭ್ರಮದಿಂದ ಹೊರಟೆವು. ಹೆಣ್ಣಿನ ಕಡೆಯ ಐದು ಮಂದಿ ಸ್ತ್ರೀಯರು ಕೆಂಪು ಉಡುಗೆ ಧರಿಸಿ, ಗಂಗಾ ಪೂಜೆಯನ್ನು ಮಾಡಿ, ಅಲಂಕರಿಸಿದ್ದ ಕೊಡಗಳಲ್ಲಿ ಗಂಗೆಯನ್ನು ಹೊತ್ತು ತಂದರು. ಚಾಕ್ ಎಂದು ಕರೆಯಲ್ಪಡುವ ಈ ಸಂಪ್ರದಾಯದಲ್ಲಿ, ಮಣ್ಣಿನ ಮಡಕೆಗಳು ಸೃಷ್ಟಿ ಮತ್ತು ಸಮೃದ್ಧಿಯ ಸಂಕೇತವಾಗಿ ನಿಲ್ಲುತ್ತವೆ. ಮೊದಲಿಗೆ, ವಿಘ್ನನಾಶಕನಾದ ಗಣಪತಿ ಪೂಜೆಯನ್ನು ಪುರೋಹಿತರು ಮಾಡಿಸಿದರು. ನಂತರದಲ್ಲಿ ಮಹಿರಾ ದಸ್ತೂರ್ ಎಂಬ ಕಾರ್ಯಕ್ರಮ. ವಧುವಿನ ಸೋದರಮಾವನು ತನ್ನ ಸೋದರಸೊಸೆಯ ವಿವಾಹಕ್ಕಾಗಿ ಉದಾರವಾಗಿ ಕಾಣಿಕೆ ನೀಡುವ ಸಮಾರಂಭ. ಹೆಣ್ಣುಮಗಳ ಮದುವೆಯ ಖರ್ಚುವೆಚ್ಚದ ಸಿಂಹಪಾಲನ್ನು, ತಾಯಿಯ ತವರಿನವರು ವಹಿಸಿಕೊಳ್ಳುವರೆಂದು ನೆಂಟರು ಮಾಹಿತಿ ನೀಡಿದರು.
ಮೆಹಂದಿ ಕಾರ್ಯಕ್ರಮವಿಲ್ಲದೆ ಮದುವೆ ಹೇಗೆ ತಾನೆ ನಡೆಯಲು ಸಾಧ್ಯ? ಮದುವೆ ಹೆಣ್ಣಿನ ಕೈ ಕಾಲುಗಳ ಮೇಲೆಲ್ಲಾ ಕಲಾತ್ಮಕವಾಗಿ ಹೂಬಳ್ಳಿಗಳ ಚಿತ್ರ ಬಿಡಿಸಲಾಗಿತ್ತು. ನಾವೆಲ್ಲಾ ಅಂಗೈ ಮೇಲೆ ಮುಂಗೈ ಮೇಲೆ ಚೆಲುವಿನ ಚಿತ್ತಾರಗಳನ್ನು ಬಿಡಿಸಿಕೊಂಡೆವು. ಕಣ್ಣಿನ ಡಾಕ್ಟರ್ ಆಗಿದ್ದ ತಮ್ಮ ಶಿವೂ ಒಂದು ಅಂಗೈ ಮೇಲೆ ಕಣ್ಣಿನ ಚಿತ್ರವನ್ನೂ ಮತ್ತೊಂದು ಅಂಗೈ ಮೇಲೆ ಶಿವನ ಡಮರು ಹಾಗೂ ತ್ರಿಶೂಲವನ್ನು ಹಾಕಿಸಿಕೊಂಡರೆ ತಮ್ಮನ ಮಗ ವಿಭವ್ ತನ್ನ ಹೆಸರನ್ನು ಬರೆಸಿಕೊಂಡ. ಊಟವನ್ನೂ ಮರೆತು ಮೆಹಂದಿ ಹಾಕಿಸಿಕೊಂಡೆವು.
ಮದುವೆಗೆ ಹಾಕಿದ್ದ ಚಪ್ಪರ, ತೋರಣಗಳು, ಪುಷ್ಪಾಲಂಕಾರ ಎಲ್ಲವೂ ಕೆಂಪು ವರ್ಣದವಾಗಿದ್ದವು. ಕೆಂಪು ಲೆಹಂಗಾ ಧರಿಸಿ, ಕೆಂಪು ಕಲ್ಲಿನ ಆಭರಣಗಳನ್ನು ಧರಿಸಿ ಕೆಂಪು ಕೆಂಪಾದ ವಧು, ಕೆಂಪು ವರ್ಣದ ಶೇರ್‌ವಾನಿ ಧರಿಸಿದ್ದ ವರನ ಕೈಹಿಡಿದು ಬಂದಾಗ ಎಲ್ಲರೂ ಜೋರಾಗಿ ಶಿಳ್ಳೆ ಹಾಕಿದರು, ಇಮ್ಮಡಿ ಉತ್ಸಾಹದಿಂದ ವಾದ್ಯ ಸಂಗೀತದ ಲಯಕ್ಕೆ ಹೆಜ್ಜೆ ಹಾಕಿದರು. ಕೊಡಗಿನವರಾದ ಗಿರಿಜಕ್ಕನ ಬಾಳಸಂಗಾತಿ ಧರ್ಮಪ್ಪ ಭಾವನವರು ಕೊಡವ ನೃತ್ಯ ಮಾಡಿದರೆ, ನಿರ್ಮಲಕ್ಕನ ಪತಿ ಡಾ. ಕುಮಾರ್ ಕೊರಳಿಗೆ ಡೋಲಕ್ ಹಾಕಿ, ಹಾಡಿಗೆ ತಕ್ಕಂತೆ ಬಾರಿಸುತ್ತಾ ಉತ್ಸಾಹದಿಂದ ಕುಣ ದಾಡಿದರು. ಫಳಫಳ ಹೊಳೆಯುವ ಹೊಂಬಣ್ಣದ ಕಸೂತಿ ಹಾಕಿದ್ದ ಕೆಂಪು ವರ್ಣದ ಲೆಹಂಗಾ ಧರಿಸಿದ್ದ ಲಲನೆಯರು ಗುಂಗರೂ ನೃತ್ಯ ಮಾಡಿದಾಗ ನನಗೆ ನೆನಪಾದದ್ದು ಗೋಪಿಕಾ ಸ್ತ್ರೀಯರು ಕೃಷ್ಣನ ಕೊಳಲಿನ ಇಂಪಾದ ನಾದಕ್ಕೆ ನೃತ್ಯ ಮಾಡುವ ದೃಶ್ಯ. ಅವರ ನೃತ್ಯವನ್ನು ನೋಡುತ್ತಾ ಮೈಮರೆತ ನಮ್ಮನ್ನೂ ವೇದಿಕೆಗೆ ಎಳೆತಂದರು. ಮೊದಮೊದಲಿಗೆ ಸಂಕೋಚದಿಂದ ಸುಮ್ಮನೆ ನಿಂತ ನಮ್ಮ ಕೈಹಿಡಿದು ಹೆಜ್ಜೆ ಹಾಕಿಸಿದರು. ನಿಧಾನವಾಗಿ ಮೈಛಳಿ ಬಿಟ್ಟ ನಾವೂ ಅವರ ಜೊತೆ ಹೆಜ್ಜೆ ಹಾಕಿದೆವು. ಇನ್ನು ವಧೂವರರನ್ನು ಬಿಡಲಾದೀತೆ? ಅವರನ್ನೂ ವೇದಿಕೆಗೆ ಕರೆತರಲಾಯಿತು. ಎಲ್ಲರ ಉತ್ಸಾಹ ಮೇರೆ ಮೀರಿತ್ತು. ಕುಣಿದರು, ನಕ್ಕು ನಲಿದಾಡಿದರು. ವಧೂವರರ ಸ್ನೇಹಿತರು ಜೊತೆಯಾದರು, ನಂತರ ನಡೆದದ್ದು ನೃತ್ಯದ ಸ್ಪರ್ಧೆ. ರಂಜಿತಾ ಡ್ಯಾನ್ಸ್ ಮಾಡಿದಾಗ ಎಲ್ಲರ ಚಪ್ಪಾಳೆಯ ಸದ್ದು ಮುಗಿಲು ಮುಟ್ಟಿತ್ತು. ಅವರ ಅಮೋಘವಾದ ನೃತ್ಯವನ್ನು ಕಂಡು, ಅವರನ್ನು ಪರಿಚಯಿಸಿಕೊಳ್ಳಲು ಉತ್ಸುಕಳಾದೆ. ಅವರು ಪದ್ಮಿನಿಯ ಡ್ಯಾನ್ಸ್ ಟೀಚರ್ ಎಂದು ತಿಳಿದು ಬಂತು. ಆಗ ಸ್ವಾತಿಯ ನಾದಿನಿ ಸುಮಾಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ಅವಳು ಕೃಷ್ಣಾ ನೀ ಬೇಗನೆ ಬಾರೋ ಗೀತೆಗೆ ಭರತನಾಟ್ಯ ಮಾಡಿದಾಗ, ಸಭಿಕರು ಒನ್ಸ್ ಮೋರ್ ಎಂದು ಒಕ್ಕೊರಲಿನಿಂದ ಕೂಗಿದರು.
ರಾಜಸ್ಥಾನದ ಶ್ರೀಮಂತ ಸಂಸ್ಕೃತಿ, ಸಂಪ್ರದಾಯಗಳು, ರೀತಿರಿವಾಜುಗಳು ಅವರು ಧರಿಸುವ ಪೋಷಾಕುಗಳಲ್ಲಿ, ಅವರ ಸಂಗೀತ ನೃತ್ಯಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಪ್ರತಿಫಲಿಸುತ್ತವೆ. ಅವರು ಹಾಡುವ ಹಾಡುಗಳು ಕೇವಲ ಹಾಡಾಗಿರದೆ, ಎದೆಯಾಳದಿಂದ ಹೊಮ್ಮುವ ನಾದದ ತರಂಗಗಳು. ಅವರ ನೃತ್ಯ ಇಡೀ ದೇಹದಲ್ಲಿ ಉಲ್ಲಾಸದ ಅಲೆಗಳನ್ನು ಹರಡುವುದು. ಯಾವುದೇ ಕೃತ್ರಿಮತೆ ಇಲ್ಲದೆ, ಪ್ರಕೃತಿಯೊಂದಿಗೆ ಸಾಮರಸ್ಯದಿಂದ ನಡೆಸುವ ಬದುಕಿನ ಚಿತ್ರಣ ಇಲ್ಲಿ ಕಾಣಸಿಗುವುದು.
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ.
ಉತ್ತಮ ನಿರೂಪಣೆ ಮೇಡಂ.. ಅಭಿನಂದನಗಳು..
ವಂದನೆಗಳು
Nice article
ಮದುವೆ ಮಹೋತ್ಸವ ಕಣ್ಣಿಗೆ ಕಟ್ಟಿದಂತಿದೆ….ಸೊಗಸಾದ ನಿರೂಪಣೆ…..ಧನ್ಯವಾದಗಳು ಮೇಡಂ.
ಚೆನ್ನಾಗಿದೆ.
ಚೆಂದದ ನಿರೂಪಣೆ