ಅಂಚೆ ಚೀಟಿಯ ಅಧ್ಬುತ ಪ್ರಪಂಚ

Share Button

ಸಾವಿರಾರು ದೂರದ ಜಾಗವನ್ನು ನಮ್ಮ ಪತ್ರ ತಲುಪಲು ಕೇವಲ ಒಂದು ಅಂಚೆ ಚೀಟಿ ಸಹಾಯ ಮಾಡುತ್ತದೆ ಎಂದರೆ ಇದು ನಿಜಕ್ಕೂ ವಿಸ್ಮಯಕಾರಕವಲ್ಲವೇ? ಇಂಗ್ಲೆಂಡಿನ ಓರ್ವ ಶಾಲಾ ಶಿಕ್ಷಕ ಸರ್ ರೌಲಂಡ್ ಹಿಲ್ (Rowland Hill) ಮೊದಲ ಅಂಚೆ ಚೀಟಿಯನ್ನು ಅಂಟಿಸುವ ಮಾದರಿಯಲ್ಲಿ ಕಂಡು ಹಿಡಿದರು. ಇದು 1837 ನೇ ಇಸವಿಯಲ್ಲಿ. ಇದರಿಂದ ಅವರಿಗೆ ನೈಟ್ (Knight) ಎಂಬ ಬಿರುದು ಸಿಕ್ಕಿತು. ಮೊದಲ ಅಂಚೆ ಚೀಟಿ 1840 ರಲ್ಲಿ ಚಲಾವಣೆಗೆ ಬಂದಿತು. ಇದರ ಬೆಲೆ ಪತ್ರದ ಗಾತ್ರಕ್ಕಿಂತಲೂ ತೂಕಕ್ಕೆ ಸರಿಯಾಗಿ ನಿಗದಿಯಾಗಿತ್ತು. ಎಲ್ಲರಿಗೂ ಉಪಯೋಗವಾಗಲಿ ಎಂಬ ಆಶಯದಿಂದ ಈ ಪದ್ದತಿ ಪ್ರಾರಂಭವಾಯಿತು. 1847 ರಲ್ಲಿ ಅಮೇರಿಕದ ನ್ಯೂಯಾರ್ಕ್‌ನಗರದಲ್ಲಿ ಅಂಚೆ ಚೀಟಿಯ ಚಲಾವಣೆ ಪ್ರಾರಂಭವಾಯಿತು. ಇಂಗ್ಲೆಂಡ್‌ನಲ್ಲಿ 1840 ರಲ್ಲೇ ಅಂಚೆ ಚೀಟಿಯ ವ್ಯವಹಾರ ಪ್ರಾರಂಭವಾಗಿತ್ತು. ಪ್ರತಿವರ್ಷ ಒಂಬತ್ತನೇ ಅಕ್ಟೋಬರ್ ತಾರೀಖನ್ನು ‘ವಿಶ್ವ ಅಂಚೆ’ ದಿನವನ್ನಾಗಿ ಆಚರಿಸಲಾಗುತ್ತದೆ.

ವಾರನ್ ಹೆಸ್ಟಿಂಗ್ಸ್ ಎಂಬ ವೈಸರಾಯ ಕಾಲದಲ್ಲಿ ಭಾರತದಲ್ಲಿ 1774 ರಲ್ಲಿ ಅಂಚೆ ಚೀಟಿ ಪ್ರಾರಂಭವಾಯಿತು. ಆದರೆ ಅಂಚೆ ಚೀಟಿಯ ವ್ಯಾಪಕ ಚಲಾವಣೆ ಡಾಲ್‌ಹೌಸಿ ಎಂಬ ವೈಸರಾಯ ಕಾಲದಲ್ಲಿ ಆರಂಭವಾಯಿತು. ಸ್ವತಂತ್ರ ಭಾರತದ ಮೊದಲ ಅಂಚೆ ಚೀಟಿ 1947 ರಲ್ಲಿ ಭಾರತೀಯ ಧ್ವಜ ಹಾಗೂ ದೇಶಾಭಿಮಾನದ ಗುರುತು ಜೈಹಿಂದ್ ಎಂಬ ಶಬ್ಧದೊಡನೆ ಮುದ್ರಿತವಾಯಿತು. ಹೀಗೆ ಶುರುವಾದ ಭಾರತದ ಅಂಚೆ ಚೀಟಿಯ ವ್ಯಾಪಕ ಚಲಾವಣೆ ಈಗ ವಿಶ್ವದಲ್ಲೇ ಪ್ರಥಮ ಎನಿಸಿದೆ. ಇದರ ಮಾರುಕಟ್ಟೆಗೆ 1,56,721 ಅಂಚೆ ಕಛೇರಿಗಳಿರುವುದು ವಿಶ್ವದಲ್ಲೇ ಅತ್ಯಧಿಕ. ಭಾರತದ ಅತ್ಯಂತ ವಿಶಾಲವಾದ ಅಂಚೆ ಕಛೇರಿ ಮುಂಬೈನಗರದಲ್ಲಿದೆ ಹಾಗೂ ಇದರ ವಿಸ್ತೀರ್ಣ ಒಂದು ಲಕ್ಷ ಚದರಡಿ ಅಲ್ಲದೇ ಕಾಶ್ಮೀರದ ತೆಪ್ಪದಲ್ಲೂ, ವಿಶ್ವದಲ್ಲಿ ಅತೀ ಎತ್ತರದಲ್ಲಿರುವ ಅಂಚೆ ಕಛೇರಿಯೂ ಭಾರತದ ಒಂದು ಸಾಧನೆ.

ಭಾರತದಲ್ಲೂ ಆಗಿಂದಾಗ್ಗೆ ಕೆಲವು ಅಪರೂಪದ, ವಿಖ್ಯಾತ ವ್ಯಕ್ತಿಗಳ, ಸ್ಮಾರಕಗಳ, ವಿಶ್ವವಿದ್ಯಾನಿಲಯಗಳ, ಪಕ್ಷಿಗಳ, ಪ್ರಾಣಿಗಳ, ನೆನಪಿಗಾಗಿ ವಿಶೇಷ ಅಂಚೆ ಚೀಟಿಗಳನ್ನು ಚಲಾವಣೆಗೆ ತರುತ್ತಾರೆ.

ಅಂಚೆ ಚೀಟಿಯ ಮೂಲವನ್ನು ಅವಲೋಕಿಸಿದ ಮೇಲೆ ಪ್ರಪಂಚದಾದ್ಯಂತ ಅಂಚೆ ಚೀಟಿಯು ಬಹಳ ಜನಪ್ರಿಯವಾಗಿ ಈಗ ಎಲ್ಲಾ ದೇಶಗಳಲ್ಲಿ ವಿವಿಧ ರೀತಿಯ ಅಂಚೆ ಚೀಟಿಗಳನ್ನು ತಯಾರಿಸಲು ಮುಂದಾಗಿದ್ದಾರೆ. ಇವುಗಳ ಸೂಕ್ಷ್ಮಪರಿಚಯವೇ ಈ ಲೇಖನದ ಉದ್ದೇಶ. ಇಂಗ್ಲೆಂಡಿನಲ್ಲಿ ಪೆನ್ನಿಬ್ಲಾಕ್ (Penny black)ಎಂಬ ಅಂಚೆ ಚೀಟಿಯು ಚಾಲನೆಗೆ ಬಂದಿತ್ತು. ಇದರಿಂದ ಒಂದು ಪೆನ್ನಿಯ ಅಂಚೆ ಚೀಟಿಯಿಂದ 14 gm ನವರೆಗೆ ಎಲ್ಲಿಗೆ ಬೇಕಾದರೂ ಪತ್ರವನ್ನು ಕಳುಹಿಸಬಹುದಾಗಿತ್ತು. ಇದು ಮೊದಲ ಅಂಚೆ ಚೀಟಿಯಾದ್ದರಿಂದ ದೇಶದ ಹೆಸರು ಇದರಲ್ಲಿ ಮುದ್ರಿತವಾಗಿರಲಿಲ್ಲ. ಇದು ಇಂದಿನವರೆಗೂ ಚಾಲ್ತಿಯಲ್ಲಿದೆ ಎಂದರೆ ಆಶ್ಚರ್ಯವಲ್ಲವೇ?

ಇಂಗ್ಲೆಂಡಿನ ಪೆನ್ನಿಬ್ಲಾಕ್ ಅಂಚೆ ಚೀಟಿ

ಬ್ರಿಟಿಷ್ ಗಯಾನ ಒಂದು ಸೆಂಟ್ ಕಿಮ್ಮತ್ತಿನ ಅಂಚೆ ಚೀಟಿಯನ್ನು ಪ್ರಖರವಾದ ನೀಲಿ ಮಿಶ್ರಿತ ಕೆಂಪು (Megenta) ಕಾಗದದಲ್ಲಿ ಕಪ್ಪು ಬಣ್ಣದಲ್ಲಿ ಒಂದು ಹಡಗು ತೇಲುವ ರೀತಿಯಲ್ಲಿ ಮುದ್ರಿಸಲಾಗಿತ್ತು. ಜೂನ್ 2021 ರಲ್ಲಿ ಈ ಅಂಚೆ ಚೀಟಿ ಎಂಬತ್ತ ಮೂರು ಲಕ್ಷದ ಏಳು ಸಾವಿರ ಡಾಲರ್‌ಗೆ ಹರಾಜಾಯಿತು. ಅದನ್ನು ಈಗ ನಿರ್ವಾತವಾದ ಒಂದು ಚೌಕಟ್ಟಿನಲ್ಲಿಟ್ಟು ಪ್ರದರ್ಶನಕ್ಕಿಟ್ಟಿದ್ದಾರೆ. ವಿಶ್ವದಲ್ಲಿ ಒಂದೇ ಒಂದು ಈ ತರಹದ ಅಂಚೆ ಚೀಟಿ ಇರುವುದೇ ಇದಕ್ಕೆ ಕಾರಣ.

ಅಮೇರಿಕದಲ್ಲಿ 2000 ನೇ ಇಸವಿಯಲ್ಲಿ ಒಂದು ವೃತ್ತಾಕಾರದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಇದರ ವೈಶಿಷ್ಟ್ಯತೆ ಏನೆಂದರೆ, ಇದರಲ್ಲಿ ಹಾಲೋಗ್ರಾಮ್ (Hologram) ಅಳವಿಡಿಸುವುದರಿಂದ ಇದಕ್ಕೆ ವಿಶೇಷವಾದ ಗುಣ ಇದೆ. ಇದು ಮೊದಲ ಬಾರಿಗೆ ಮಾಡಿದ ಪ್ರಯತ್ನ ಇದರಲ್ಲಿ ಉತ್ತರ ಅಮೇರಿಕ ಹಾಗೂ ನೀಲಾಕಾಶದ ನಕ್ಷೆ ಇದೆ.

ಟೊಂಗ (Tonga) ದೇಶದಲ್ಲಿ ಮೊದಲ ಸ್ವಯಂ ಅಂಟುವ (Self Adhesive) ಅಂಚೆ ಚೀಟಿಯನ್ನು ಚಲಾವಣೆಗೆ ಬಿಟ್ಟರು/ ಇಲ್ಲಿಯ ಜನರು ಮುಖ್ಯ ಘಟಕ ವಸ್ತು (staple) ಬಾಳೆಹಣ್ಣು ಅದರಿಂದ ಈ ಜನವರಿ ಕಾಣಿಕೆಯಾಗಿ ಬಾಳೆಹಣ್ಣಿನ ಆಕಾರದಲ್ಲೇ ಅಂಚೆ ಚೀಟಿ ಮಾಡಿದ್ದಾರೆ. ಯಾವ ದೇಶವೂ ಈ ತರನಾದ ಅಂಚೆ ಚೀಟಿ ಇದುವರೆಗೆ ಮಾಡಿಲ್ಲ.

PC: Interner, Postage stamp of Tonga

ಬೆಲ್ಜಿಯಂ ಚಾಕೋಲೇಟ್‌ಗಳಿಗೆ ಪ್ರಸಿದ್ಧ. ಅಲ್ಲಿಯ ಅಂಚೆ ಇಲಾಖೆ ಒಂದು ಅಂಚೆ ಚೀಟಿ ಬಿಡುಗಡೆ ಮಾಡಿತ್ತು. ಇದನ್ನು ಕೆರೆದರೆ ಚಾಕೋಲೇಟ್‌ನ ಪರಿಮಳ ಬರುತ್ತದೆ. ಸ್ವಯಂ ಅಂಟಿಸುವ ಗೋಂದು ಕೂಡ ಚಾಕೋಲೇಟ್‌ನ ಪರಿಮಳ ಇದೆ. ಈ ಅಂಚೆ ಚೀಟಿಯಲ್ಲಿ ವಿಧವಿಧವಾದ ಚಾಕೋಲೇಟ್‌ನ ಚಿತ್ರಗಳಿರುವುದು ವಿಶೇಷ.

1972 ನೇ ಇಸವಿಯಲ್ಲಿ ಭೂತಾನ್ ದೇಶವು ಒಂದು ಅದ್ಬುತವಾದ 7 ಅಂಚೆ ಚೀಟಿಗಳನ್ನು ವಿತರಿಸಿತು. ಇವು ಸಣ್ಣ ಅಡಕು ತಟ್ಟೆಯ (Compact Disc) ಆಕಾರದಲ್ಲಿದ್ದವು. ಇವುಗಳನ್ನು ರೆಕಾರ್ಡ್ ಪ್ಲೇಯರ್‌ನಲ್ಲಿ ಹಾಕಬಹುದು. ಇವುಗಳಲ್ಲಿ ಜಾನಪದ ಗೀತೆ ಹಾಗು ರಾಷ್ಟ್ರಗೀತೆಗಳು ಮುದ್ರಿತವಾಗಿರುತ್ತಿದ್ದವು. ಇವುಗಳ ಹಿಂದಿನ ತೆಳು ಪದರವನ್ನು ಕಿತ್ತರೆ ಅದನ್ನು ಅಂಟಿಸಿ ಅಂಚೆ ಚೀಟಿಯನ್ನಾಗಿ ಬಳಸಬಹುದು. ಇದು ಜಗತ್ತಿನಲ್ಲೇ ಪ್ರಥಮ ಯಶಸ್ವಿ ಪ್ರಯತ್ನ.

ಬ್ರಿಟನ್ ದೇಶದಲ್ಲಿ ವಿಕ್ಟೋರಿಯಾ ರಾಣಿಯ ಆಡಳಿತದಲ್ಲಿ ಎಲ್ಲಾ ಅಂಚೆ ಚೀಟಿಗಳೂ ಕೇವಲ ರಾಣಿಯರದ್ದೂ ಹಾಗೂ ರಾಜವಂಶದ ಬಗ್ಗೆ ಮಾತ್ರ ಇರುತ್ತಿದ್ದವು. ಇದಕ್ಕೆ ಅಪವಾದ ಎಂಬಂತೆ 1964 ರಲ್ಲಿ ಷೇಕ್ಸ್‌ಪಿಯರ್ ಎಂಬ ಅಧ್ಬುತ ನಾಟಕಕಾರನ 400 ನೇ ವರ್ಧಂತಿಯ ಸಲುವಾಗಿ ಅವನ ಒಂದು ಪ್ರಥಮ ಅಂಚೆ ಚೀಟಿ ಬಿಡುಗಡೆಯಾಯಿತು. ಇದು ನಿಜಕ್ಕೂ ಅವನಿಗೆ ಸಿಕ್ಕ ಬಹುದೊಡ್ಡ ಮರ್ಯಾದೆಯೆಂದೇ ಹೇಳಬಹುದು. ಷೇಕ್ಸ್‌ಪಿಯರ್ ಹಲವಾರು ವಿವಿಧ ಭಂಗಿಯ ಅಂಚೆ ಚೀಟಿಗಳನ್ನು ಬ್ರಿಟನ್ ಹೊರಡಿಸಿತು.

ಆಸ್ಟ್ರೀಯಾ ದೇಶ ಹೊಸ ಅನ್ವೇಷಣೆಗಳಿಗೆ ಹೆಸರುವಾಸಿ. ಅಂಚೆ ಚೀಟಿ ಸಂಗ್ರಹಕಾರರಿಗೆ ಈ ದೇಶ ಬಹಳ ಇಷ್ಟ. ಈ ದೇಶ ಪಿಂಗಾಣಿಯಲ್ಲಿ ಗುಲಾಬಿ ಚಿತ್ರ ಬಿಡಿಸಿ ಅಂಚೆ ಚೀಟಿ ಮಾಡಿದ್ದಾರೆ. ಅಲ್ಲದೇ ಚರ್ಮದ, ಗಾಜಿನ ಅಂಚೆ ಚೀಟಿ ಮಾಡಿದ್ದಾರೆ. ಬಹು ಬೆಲೆಬಾಳುವ ಸ್ವರೋಕ್ಸಿ (Swarovsky) ಎಂಬ ಸ್ಪಟಿಕ ಹರಳುಗಳನ್ನು ಬಳಸಿ ಅಂಚೆ ಚೀಟಿ ಮಾಡಿದ್ದಾರೆ. ಇದರಲ್ಲಿ ಹೂವುಗಳು ಇತ್ಯಾದಿ ಇರುವುದು ವಿಶೇಷ.

1851 ರಲ್ಲಿ ಕೆನಡಾದಲ್ಲಿ ಒಂದು ಅಂಚೆ ಚೀಟಿಯನ್ನು ವಿತರಿಸಲಾಯಿತು. ಇದು ಖಡ್ಗಮೃಗ ನೀರಲ್ಲಿ ನಿಂತಿರುವಂಥಹ ಒಂದು ಚಿತ್ರ. ವಿಶೇಷವೆಂದರೆ ಇದನ್ನೇ ಭಾರತದಲ್ಲಿ 1962 ಮಾಡಿದ ಅಂಚೆ ಚೀಟಿಯಲ್ಲಿ ಕಾಜಿರಂಗದ ಅರಣ್ಯಧಾಮದಿಂದ ಆರಿಸಿ ವಿತರಿಸಲಾಯಿತು.

ಹೀಗೆ ಅಂಚೆ ಚೀಟಿಗಳು ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಇವುಗಳನ್ನು ಶೇಖರಿಸಲು ಸಂಗ್ರಹಕಾರರು ಲಕ್ಷಾಂತರ ರೂಪಾಯಿಗಳ ಖರ್ಚು ಮಾಡುತ್ತಾರೆ. ಇದೊಂದು ಬಹಳ ದುಬಾರಿಯಾದ ಹವ್ಯಾಸ ಎಂದರೆ ತಪ್ಪಾಗದು. ಅಂಚೆ ಚೀಟಿಗಳ ಸಾಮ್ರಾಜ್ಯ ನಿಜಕ್ಕೂ ಅಗಾಧ ಹಾಗೂ ವಿಸ್ಮಯಕಾರಿ. ನೀವೆನಂತೀರಿ?

ಕೆ.ರಮೇಶ್, ಮೈಸೂರು

3 Responses

  1. ನಾಗರತ್ನ ಬಿ. ಆರ್ says:

    ಅಂಚೆಚೀಟಿ.. ಬಗ್ಗೆ….ಸೊಗಸಾದ ಮಾಹಿತಿ… ಕೊಟ್ಟ… ನಿಮಗೆ..
    ಧನ್ಯವಾದಗಳು.. ಸಾರ್.

  2. ಅಂಚೆ ಚೀಟಿ..ಬಗ್ಗೆ..
    ಸೊಗಸಾದ ಮಾಹಿತಿಯನ್ನು ಕೊಟ್ಟ ನಿಮಗೆ.

    ಧನ್ಯವಾದಗಳು.. ಸಾರ್

  3. ನಯನ ಬಜಕೂಡ್ಲು says:

    Informative

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: